
ಮಟನ್ ಗುಡ್ಡೆ ಮಾಂಸ ಮಾರಾಟ
ಯುಗಾದಿ ಹೊಸತೊಡಕು; ಮಾಂಸಕ್ಕಾಗಿ ಚೀಟಿ, ಗುಡ್ಡೆ ಬಾಡಿಗೆ ಡಿಮ್ಯಾಂಡ್
ಯುಗಾದಿ ಹಬ್ಬದ ಮರುದಿನದ ಹೊಸತೊಡಕು ಆಚರಣೆಯ ಮಹತ್ವವೇನು?, ಗುಡ್ಡೆ ಮಾಂಸದ ವಿಶಿಷ್ಟ ಸಂಪ್ರದಾಯ ಮತ್ತು ಬಡವರಿಗೆ ಆಸರೆಯಾಗುವ ಮಾಂಸದ ಚೀಟಿ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ರೈತಾಪಿ ವರ್ಗಕ್ಕೆ ಯುಗಾದಿಯೇ ಹೊಸ ವರ್ಷ. ಪರಾಭವ ಸಂವತ್ಸರದ ಮೊದಲ ದಿನ ಬೇವು-ಬೆಲ್ಲ ಸವಿದು, ಭಕ್ತಿಭಾವದಿಂದ ಪೂಜೆಯಲ್ಲಿ ತೊಡಗಿಸಿಕೊಳ್ಳುವ ಜನರಿಗೆ ಮರುದಿನದ ಹೊಸತೊಡಕು ವಿಶಿಷ್ಟ ಸಂಭ್ರಮದೊಂದಿಗೆ ಥಳಕು ಹಾಕಿಕೊಂಡಿದೆ. ಬಂಧುಗಳು, ಸ್ನೇಹಿತರೊಂದಿಗೆ ಕೂಡಿ ಮಾಂಸದೂಟ ಸವಿಯುವ ಆ ಕ್ಷಣಗಳು ಹಳೆಯ ಕಹಿಯನ್ನು ಮರೆಸಿ ಹೊಸ ವರುಷಕ್ಕೆ ಮುನ್ನುಡಿ ಬರೆಯಲಿದೆ. ಜಾನಪದ ಕಟ್ಟುಪಾಡು ಮತ್ತು ಖಾದ್ಯ ವೈವಿಧ್ಯದ ಅಪರೂಪದ ಸಂಗಮವೇ ಹೊಸ ತೊಡಕು.
ಶ್ರಮಿಕರು, ರೈತಾಪಿ ವರ್ಗದವರಲ್ಲಿ ಹೊಸತೊಡಕಿಗೆ ಹೆಚ್ಚು ಮಹತ್ವವಿದೆ. ವರ್ಷವಿಡೀ ಹೊಲಗದ್ದೆಗಳಲ್ಲಿ ಬೆವರು ಹರಿಸುವ ರೈತರು ಯುಗಾದಿಯಂದು ಬೇವು-ಬೆಲ್ಲವನ್ನು ಸವಿದು, ಹೊಸತೊಡಕಿನಲ್ಲಿ ಮಾಂಸದ ಖಾದ್ಯಗಳನ್ನು ಸವಿಯುತ್ತಾರೆ. ಬಂಧುಗಳು, ಸ್ನೇಹಿತರೊಂದಿಗೆ ಸೇರಿ ಮಾಂಸದೂಟ ಸವಿಯುವ ಮೂಲಕ ಸಂಭ್ರಮಿಸುತ್ತಾರೆ.
ಮಾಂಸದಂಗಡಿ ಮುಂದೆ ಜನಜಾತ್ರೆ
ಹೊಸತೊಡಕಿನ ದಿನ ಕಾಣುವ ದೃಶ್ಯಗಳೇ ರೋಚಕ. ಚಿಕನ್, ಮಟನ್ ಅಂಗಡಿಗಳ ಮುಂದೆ ಮುಂಜಾನೆಯಿಂದಲೇ ಜಾತ್ರೆಯಂತಹ ವಾತಾವರಣ ಕಾಣಲಿದೆ. ಮುಂಜಾನೆಯಿಂದಲೇ ಮನೆಗಳಲ್ಲಿ ಮಾಂಸದೂಟದ ತಯಾರಿ ಆರಂಭವಾಗಲಿದೆ. ಹಬ್ಬದ ಹಿನ್ನೆಲೆ ಬೆಲೆ ಕೊಂಚ ದುಬಾರಿಯಾದರೂ ಹೊಸತೊಡಕಿನ ಸಂಭ್ರಮದ ಮುಂದೆ ಅದು ನಗಣ್ಯ ಎನಿಸಲಿದೆ. ಕೆಲ ಮಟನ್, ಚಿಕನ್ ಅಂಗಡಿಗಳ ಮುಂದೆ ಹಬ್ಬಕ್ಕಾಗಿ ಟೆಂಟ್ ನಿರ್ಮಿಸಿ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ.
ಕೆಲ ಮಾಂಸದಂಗಡಿಗಳು ಮುಂಗಡವಾಗಿಯೇ ಆರ್ಡರ್ ತೆಗೆದುಕೊಂಡಿರುತ್ತವೆ. ಹಾಗಾಗಿ, ಮಧ್ಯರಾತ್ರಿಯಿಂದಲೇ ಆಡು, ಕುರಿಗಳನ್ನು ಕಡಿದು ಹಸನು ಮಾಡುವ ಕೆಲಸ ಆರಂಭವಾಗಿರಲಿದೆ. ಬೆಳಿಗ್ಗೆ ಹತ್ತು ಗಂಟೆಯೊಳಗೆ ಎಲ್ಲ ಅಂಗಡಿಗಳಲ್ಲೂ ಮಾಂಸ ಖಾಲಿಯಾಗುವ ಮಟ್ಟಿಗೆ ಹೊಸತೊಡಕಿಗೆ ವ್ಯಾಪಾರ ಇರಲಿದೆ.
ಏನಿದು ಗುಡ್ಡೆ ಮಾಂಸ?
ಹಳ್ಳಿಗಳಲ್ಲಿ ಇಂದಿಗೂ 'ಗುಡ್ಡೆ' ಮಾಂಸದ ಪರಿಕಲ್ಪನೆ ಜನಜನಿತವಾಗಿದೆ. ಹೊಸತೊಡಕಿಗಾಗಿ ಕುರಿ ಅಥವಾ ಮೇಕೆ ತಂದು ಕಡಿದು ಮಾಂಸ ಗುಡ್ಡೆ ಹಾಕುತ್ತಾರೆ. ಕಾಲು, ತಲೆ, ಬೋಟಿ ಸೇರಿದಂತೆ ಪ್ರತಿಯೊಂದು ಭಾಗವು ಸಮನಾಗಿ ಹಂಚಿಕೆಯಾಗುವುದರಿಂದ ಮಾಂಸದೂಟ ಸ್ವಾದಿಷ್ಟವಾಗಿರುತ್ತದೆ ಎಂಬುದು ಮಾಂಸಪ್ರಿಯರ ಅಭಿಪ್ರಾಯವಾಗಿದೆ.
ಗುಡ್ಡೆ ಮಾಂಸವು ನಗರಗಳಲ್ಲಿ ಇರುವಂತೆ ಹೆಚ್ಚು ಬೆಲೆಯೂ ಇರುವುದಿಲ್ಲ, ತೂಕದಲ್ಲಿ ಸಣ್ಣ ಪುಟ್ಟ ವ್ಯತ್ಯಾಸವಿರಲಿದೆ. ಹೀಗಿದ್ದರೂ ಗುಡ್ಡೆ ಬಾಡಿನ ರುಚಿಗೆ ಮಾರು ಹೋಗುವ ಜನರು ಖರೀದಿಗಾಗಿ ತುದಿಗಾಲಲ್ಲಿ ನಿಂತಿರುತ್ತಾರೆ.
ಅಂಗಡಿಯಲ್ಲಿ ಕೆ.ಜಿ. ಲೆಕ್ಕದಲ್ಲಿ ತೆಗೆದುಕೊಳ್ಳುವ ಬದಲು ಗುಡ್ಡೆ ಮಾಂಸವೇ ಸೂಕ್ತ ಹಾಗೂ ತಾಜಾತನ ಇರಲಿದೆ. ಹಳೆ ಮೈಸೂರು ಭಾಗದಲ್ಲಿ ಅಂದರೆ ಮಂಡ್ಯ, ಮೈಸೂರು, ತುಮಕೂರು, ರಾಮನಗರದಲ್ಲಿ ʼಗುಡ್ಡೆ ಬಾಡುʼ ಹೆಚ್ಚು ಪ್ರಸಿದ್ಧಿ ಪಡೆದಿದೆ. .
ಹೊಸ ತೊಡಕಿಗಾಗಿಯೇ ಚೀಟಿ ಹಣ
ಹೊಸ ತೊಡಕು ಆಚರಣೆಯಲ್ಲಿ ಅದ್ದೂರಿಯಾಗಿ ಮಾಂಸದೂಟ ಮಾಡುವುದು ವಾಡಿಕೆ. ಆದರೆ, ಹಬ್ಬದ ಹಿನ್ನೆಲೆ ಬೆಲೆ ಗಗನಕ್ಕೇರಿರುತ್ತದೆ. ಒಮ್ಮೆಲೇ ದೊಡ್ಡ ಮೊತ್ತದ ಹಣ ಖರ್ಚು ಮಾಡುವುದು ಬಡ ಹಾಗೂ ಮಧ್ಯಮ ವರ್ಗದವರಿಗೆ ಕಷ್ಟವಾಗಬಹುದು. ಹೀಗಾಗಿ ಗ್ರಾಮದವರೇ ಒಂದುಗೂಡಿ ಪ್ರತಿ ತಿಂಗಳು ಚೀಟಿ ಹಾಕುತ್ತಾರೆ. ಸುಮಾರು ಒಂದು ವರ್ಷದವರೆಗೆ ಚೀಟಿ ಕಟ್ಟಲಾಗುತ್ತದೆ. ಚೀಟಿ ನಡೆಸುವವರು ಹೊಸ ತೊಡಕಿನ ದಿನದಂದು ಕುರಿ, ಕೋಳಿ ಮಾಂಸವನ್ನು ನೀಡುತ್ತಾರೆ.
ವಾರಕ್ಕೆ ನೂರು ರೂಪಾಯಿ ಉಳಿಸುವುದು ಸುಲಭ, ಇದರಿಂದ ಹಬ್ಬದ ದಿನ ಸಾವಿರಾರು ರೂಪಾಯಿ ಖರ್ಚು ಮಾಡುವುದು ತಪ್ಪಲಿದೆ. ಹಬ್ಬದ ಖರ್ಚಿಗೆ ಬೇರೆಯವರ ಬಳಿ ಸಾಲ ಕೇಳುವ ಅವಶ್ಯಕತೆ ಬರುವುದಿಲ್ಲ. ಕೆಲವೊಮ್ಮೆ ಸಂಘಟಕರು ಚೀಟಿ ಹಾಕಿದವರಿಗೆ ಹಬ್ಬದ ಉಡುಗೊರೆಯಾಗಿ ಎಣ್ಣೆ, ಸಕ್ಕರೆ ಅಥವಾ ಮಸಾಲೆ ಪದಾರ್ಥಗಳನ್ನೂ ನೀಡುತ್ತಾರೆ.
ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಬೆಂಗಳೂರಿನ ಗೃಹಿಣಿ ಪಾರ್ವತಿ ಎಂ ಅವರು, ನಾವು ವರ್ಷಕ್ಕೆ 4.5ಸಾವಿರ ಚೀಟಿ ಕಟ್ಟಿದ್ದೇವೆ. ಈ ಹಣಕ್ಕೆ ಪರ್ಯಾಯವಾಗಿ ನಮಗೆ ಎರಡು ಕೆ.ಜಿ ಮಟನ್ ಸೇರಿದಂತೆ, ಅಡುಗೆಗೆ ಬೇಕಾಗುವ ಎಲ್ಲಾ ಅಗತ್ಯ ವಸ್ತುಗಳು, 25 ಕೆ.ಜಿ ಅಕ್ಕಿ, 10ಲೀ. ಎಣ್ಣೆ, ಬೇಳೆ ಕಾಳುಗಳು, ಅರಿಶಿಣ, ಕುಂಕುಮ ಸೇರಿದಂತೆ ಒಟ್ಟು 38 ವಸ್ತುಗಳನ್ನು ನೀಡುತ್ತಾರೆ ಎಂದರು.
ಮತ್ತೊಬ್ಬ ಬೆಂಗಳೂರು ನಿವಾಸಿ ವೆಂಕಟೇಶ್ `ದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ,ʻʻನಮ್ಮ ತಂಡದಲ್ಲಿ ಒಟ್ಟು 20 ಜನ ಇದ್ದೇವೆ. ನಾನು ತಿಂಗಳಿಗೆ 600 ರೂ. ಹೊಸತೊಡಕು ಚೀಟಿ ಕಟ್ಟಿದ್ದೇನೆ. ಒಂದು ವರ್ಷದವರೆಗೆ ಚೀಟಿ ಹಣ ಕಟ್ಟಿದ್ದು, ಹೊಸತೊಡಕಿನ ದಿನ 2ಕೆ.ಜಿ ಮಟನ್, 2 ಕೆ.ಜಿ ಚಿಕನ್, 25ಕೆ.ಜಿ ಅಕ್ಕಿ ಮತ್ತು ಅಗತ್ಯವಿರುವ ಸಾಮಗ್ರಿಗಳು ಸಿಗಲಿವೆ. ಇದರಿಂದ ಹಬ್ಬದ ದಿನ ಹಣಕಾಸಿನ ಹೊರೆ ತಪ್ಪಲಿದೆ" ಎಂದು ಹೇಳಿದರು.
ಚೌಕಾಬಾರದಿಂದ ಇಸ್ಪೀಟಿನವರೆಗಿನ ಆಟ....
ಕೇವಲ ಮಾಂಸಾಹಾರ ಅಷ್ಟೇ ಅಲ್ಲದೆ ಚೌಕಾಬಾರ, ಅಳಿಗುಳಿಮನೆಯಂತಹ ಹಳೆಯ ಕಾಲದ ಆಟಗಳು, ಇಸ್ಪೀಟ್ ಆಟ ಮನರಂಜನೆಯ ಭಾಗವಾಗಿರುತ್ತವೆ. ಸಂಬಂಧಿಕರು, ಸ್ನೇಹಿತರು ಎಲ್ಲರೂ ಒಂದೆಡೆ ಸೇರಿ ಹರಟೆ ಹೊಡೆಯುತ್ತಾ ಜೀವನದ ಜಂಜಾಟ ಮರೆತು ನಗುವಿನ ಅಲೆ ಎಬ್ಬಿಸುತ್ತಾರೆ. ಸಸ್ಯಾಹಾರಿಗಳ ಮನೆಯಲ್ಲಿ ಸಿಹಿ ಪಾಯಸದ ಘಮವಿದ್ದರೆ, ಮಾಂಸಾಹಾರಿಗಳಿಗೆ ಮಾತ್ರ ಇದು ಖಾರದ ಹಬ್ಬ.
ಒಟ್ಟಿನಲ್ಲಿ ಹೊಸ ತೊಡಕು ಎನ್ನುವುದು ಕೇವಲ ಆಹಾರದ ಆಚರಣೆಯಲ್ಲ. ಅದು ದುಡಿಮೆಯ ನಡುವಿನ ಒಂದು ಸಣ್ಣ ವಿರಾಮ. ಸಂಬಂಧಗಳ ಬೆಸುಗೆ ಮತ್ತು ಹೊಸ ವರ್ಷವನ್ನು ಅತ್ಯಂತ ಉತ್ಸಾಹದಿಂದ ಬರಮಾಡಿಕೊಡುವ ದಿನ. ಮುಂಬರುವ ವರ್ಷದಲ್ಲಿ ಯಾವುದೇ 'ತೊಡಕು' ಬಾರದಿರಲಿ ಎಂದು ಹಾರೈಸುತ್ತಾ, ಹೊಟ್ಟೆ ತುಂಬಾ ಉಂಡು ಸಂಭ್ರಮಿಸುವುದೇ ಈ ಹೊಸತೊಡಕು ಹಬ್ಬದ ವಿಶೇಷ.

