
Union Budget-2026 | ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಯೋಜನೆಗಳ ಮರು ಜಾರಿಗೆ ಹೆಚ್ಚಿದ ಒತ್ತಡ
ಉತ್ತರ ಭಾರತದಲ್ಲಿ ಸಣ್ಣ ಕೈಗಾರಿಕೆಗಳಿಗೆ ಉತ್ತಮವಾದ ಮೂಲ ಸೌಕರ್ಯ ವ್ಯವಸ್ಥೆ ಒದಗಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಅಂತಹ ವಾತಾವರಣ ಇಲ್ಲ. ಗ್ಯಾರೆಂಟಿ ಯೋಜನೆಗಳಿಗೆ ಹಣ ಒದಗಿಸುವುದಕ್ಕಷ್ಟೇ ಸರ್ಕಾರ ಗಮನ ಹರಿಸುತ್ತಿದೆ.
ರಾಜ್ಯದಲ್ಲಿ ಬಂಡವಾಳ, ಮೂಲ ಸೌಕರ್ಯ ಕೊರತೆ ಹಾಗೂ ಕಚ್ಚಾವಸ್ತುಗಳ ಅಲಭ್ಯತೆ ಹಾಗೂ ದುಬಾರಿ ಬೆಲೆಯಿಂದಾಗಿ ಬಹುತೇಕ ಸಣ್ಣ ಕೈಗಾರಿಕೆಗಳು ಅಸ್ತಿತ್ವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿವೆ.
ಉತ್ಪಾದನಾ ವಲಯದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಆರಂಭಿಸಿದ್ದ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಯೋಜನೆ ಹಾಗೂ ಕೈಗಾರಿಕಾ ಮೂಲಸೌಕರ್ಯ ಉನ್ನತೀಕರಣ ಯೋಜನೆಗಳ ಸ್ಥಗಿತವೂ ಸಣ್ಣ ಕೈಗಾರಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಸಣ್ಣ ಕೈಗಾರಿಕೆಗಳಿಗೆ ಮೂಲಸೌಕರ್ಯ ಹಾಗೂ ಬಂಡವಾಳ ಒದಗಿಸುತ್ತಿದ್ದ ಈ ಯೋಜನೆಗಳನ್ನು ಮರು ಆರಂಭಿಸಬೇಕೆಂಬ ಕೂಗು ಉದ್ಯಮ ವಲಯದಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಈಗಾಗಲೇ ಕೈಗಾರಿಕಾ ಒಕ್ಕೂಟ ಈ ಬೇಡಿಕೆಯನ್ನು ಕೇಂದ್ರದ ಮುಂದಿರಿಸಿದ್ದು, ಫೆ.1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ಕೇಂದ್ರ ಬಜೆಟ್ನಲ್ಲಿ ಯೋಜನೆಗಳ ಮರು ಜಾರಿ ಆಗಲಿದೆಯೇ ಎಂಬ ಕುತೂಹಲವಿದೆ.
ಕೇಂದ್ರ ಸರ್ಕಾರದ ಉದ್ಯಮ ಪೋರ್ಟಲ್ನಲ್ಲಿ ದೇಶಾದ್ಯಂತ 2024-25ನೇ ಸಾಲಿನಲ್ಲಿ 35,567 ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನೋಂದಣಿ ರದ್ದಾಗಿದೆ. 2023-24ರಲ್ಲಿ 19,828 ಎಂಎಸ್ಎಂಇಗಳ ನೋಂದಣಿ ರದ್ದಾಗಿದೆ. ಮಹಾರಾಷ್ಟ್ರದಲ್ಲಿ 8,472, ತಮಿಳುನಾಡಿನಲ್ಲಿ 4,412, ಗುಜರಾತ್ನಲ್ಲಿ 3,148, ರಾಜಸ್ಥಾನದಲ್ಲಿ 2,989 ಹಾಗೂ ಕರ್ನಾಟಕದಲ್ಲಿ 2,010 ಎಂಎಸ್ಎಂಇಗಳ ನೋಂದಣಿ ರದ್ದಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ರಾಜ್ಯಸಭೆಗೆ ಮಾಹಿತಿ ನೀಡಿದ್ದರು. ಇದು ಸಣ್ಣ ಕೈಗಾರಿಕೆಗಳ ದುಸ್ಥಿತಿಗೆ ಕನ್ನಡಿ ಹಿಡಿದಂತಿತ್ತು.
ಮೂಲಸೌಕರ್ಯ, ಬಂಡವಾಳ ಕೊರತೆ
“ಕೈಗಾರಿಕಾ ಮೂಲಸೌಕರ್ಯ ಉನ್ನತೀಕರಣ ಯೋಜನೆಯಲ್ಲಿ ಕೈಗಾರಿಕೆ ಸ್ಥಾಪಿಸುವ ಖಾಸಗಿಯವರಿಗೆ ಅನುದಾನ ಒದಗಿಸಲಾಗುತ್ತಿತ್ತು. ಅದರಂತೆ ಹೆಚ್ಚಿನ ಜಿಎಸ್ಟಿ ಕೂಡ ಪಾವತಿಸುತ್ತಿದ್ದೆವು. ಈಗ ಯೋಜನೆ ಸ್ಥಗಿತಗೊಳಿಸಿರುವ ಹಿನ್ನೆಲೆ ಸಣ್ಣ ಕೈಗಾರಿಕೆಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ” ಎಂದು ಎಫ್ಕೆಸಿಸಿಐ ಮಾಜಿ ಅಧ್ಯಕ್ಷ ಜನಾರ್ದನ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಉತ್ತರ ಭಾರತದಲ್ಲಿ ಸಣ್ಣ ಕೈಗಾರಿಕೆಗಳಿಗೆ ಉತ್ತಮವಾದ ಮೂಲ ಸೌಕರ್ಯ ವ್ಯವಸ್ಥೆ ಒದಗಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಅಂತಹ ವಾತಾವರಣ ಇಲ್ಲ. ಗ್ಯಾರೆಂಟಿ ಯೋಜನೆಗಳಿಗೆ ಹಣ ಒದಗಿಸುವುದಕ್ಕಷ್ಟೇ ಸರ್ಕಾರ ಗಮನ ಹರಿಸುತ್ತಿದೆ. ಕೈಗಾರಿಕಾ ವಲಯಗಳಲ್ಲಿ ಸರಿಯಾದ ಮೂಲಸೌಕರ್ಯ ಇಲ್ಲ. ಹಾಗಾಗಿ, ಕೇಂದ್ರ ಸರ್ಕಾರವು ಕೈಗಾರಿಕಾ ಮೂಲಸೌಕರ್ಯ ಉನ್ನತೀಕರಣ ಯೋಜನೆಯನ್ನು ಮರು ಆರಂಭಿಸಬೇಕು ಎಂದು ಒತ್ತಾಯಿಸಿದರು.
ಯೋಜನೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ 20-30 ಕೋಟಿ ನೆರವು ಸಿಗುತ್ತಿತ್ತು. ಉದ್ಯೋಗ ಸೃಷ್ಟಿಯಲ್ಲದೇ, ಅಭಿವೃದ್ಧಿಗೆ ಹೆಚ್ಚಿನ ಪಾಲು ನೀಡುತ್ತಿತ್ತು. ಈಗ ಯೋಜನೆ ಸ್ಥಗಿತಗೊಂಡಿರುವುದರಿಂದ ಸಣ್ಣ ಕೈಗಾರಿಕೆಗಳು ಸಮಸ್ಯೆಗಳಲ್ಲೇ ಮುಳುಗಿವೆ. ಕೇಂದ್ರ ವಿತ್ತ ಸಚಿವರು ಸಣ್ಣ ಕೈಗಾರಿಕೆಗಳ ಪರಿಸ್ಥಿತಿ ಅರ್ಥ ಮಾಡಿಕೊಂಡು ಯೋಜನೆಯ ಮರು ಆರಂಭದ ಬಗ್ಗೆ ಬಜೆಟ್ನಲ್ಲಿ ಘೋಷಿಸಬೇಕು ಎಂದು ಜನಾರ್ದನ ಹೇಳಿದರು.
ಇನ್ನು ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಯೋಜನೆಯಲ್ಲಿ ಶೇ 15 ರಷ್ಟು ಅನುದಾನ ಸಿಗುತ್ತಿತ್ತು. ಬಂಡವಾಳ ಆಧರಿತ ಸರಕುಗಳ ಉತ್ಪಾದನೆಗೆ ಹೆಚ್ಚು ನೆರವಾಗುತ್ತಿತ್ತು. ಕಸ್ಟಮ್ಸ್ ಸುಂಕ ಪಾವತಿಯಿಂದ ಸರ್ಕಾರಕ್ಕೂ ಆದಾಯ ಹರಿದು ಬರುತ್ತಿತ್ತು. ಈಗ ಯೋಜನೆ ಸ್ಥಗಿತಗೊಳಿಸುವುದರಿಂದ ಸಣ್ಣ ಕೈಗಾರಿಕೆಗಳಿಗೆ ಅನಾನುಕೂಲವಾಗಿದೆ.
ಉದ್ಯಮಗಳಿಗೆ ಉತ್ತೇಜನ ನೀಡಲು ಸರ್ಕಾರ 50 ಕೋಟಿ ಬಂಡವಾಳ ಒದಗಿಸಿದರೆ ಸಣ್ಣ ಕೈಗಾರಿಕೆಗಳೇ ಪ್ರತಿ ವರ್ಷ ಬೇಕಾದರೆ 50 ಕೋಟಿಯನ್ನು ಸರ್ಕಾರಕ್ಕೆ ನೀಡಲಿವೆ. ಹೆಚ್ಚಿನ ಯುವ ಪೀಳಿಗೆಯು ಭಾರತದ ಪಾಲಿಗೆ ಸುವರ್ಣಯುಗದಂತಿದೆ. ಇಂತಹ ಯುವ ಜನರಿಗೆ ಹೆಚ್ಚಿನ ಉದ್ಯೋಗ ಒದಗಿಸಬಹುದಾಗಿದೆ ಎಂದು ಜನಾರ್ದನ ಹೇಳಿದರು.
ಏನಿದು ಸಿಎಲ್ಸಿಎಸ್ಎಎಸ್ ಯೋಜನೆ?
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (ಎಂಎಸ್ಎಂಇ) ಸಚಿವಾಲಯದಡಿ ಬರುವ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಯೋಜನೆಯು (ಸಿಎಲ್ಸಿಎಸ್ಎಸ್) ಅತ್ಯಾಧುನಿಕ ಯಂತ್ರೋಪಕರಣಗಳೊಂದಿಗೆ ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಲು ಸಣ್ಣ ಕೈಗಾರಿಕೆಗಳಿಗೆ ಸಹಾಯಧನ ಒದಗಿಸಲಿದೆ.
ಹಳೆಯ ಯಂತ್ರೋಪಕರಣ ಬದಲಿಸಿ, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ನೀಡುವ ಸಾಲದ ಮೇಲೆ ಶೇ 15 ರಷ್ಟು ಸಬ್ಸಿಡಿ (ಗರಿಷ್ಠ 15 ಲಕ್ಷ) ಒದಗಿಸಲಿದೆ. ಒಟ್ಟು 51 ನಿರ್ದಿಷ್ಟ ವಲಯಗಳಲ್ಲಿ ಉದ್ಯಮ ಸ್ಥಾಪನೆಗೆ ಗರಿಷ್ಠ 1 ಕೋಟಿ ರೂ. ಸಾಲ ಒದಗಿಸಲಿದೆ.
ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲೆಂದೇ 2000 ನೇ ಸಾಲಿನಲ್ಲಿ ಆರಂಭಿಸಿದ ಯೋಜನೆಯು 2020 ಮಾರ್ಚ್ವರೆಗೆ ಅಸ್ತಿತ್ವದಲ್ಲಿತ್ತು. ಇದೀಗ ಯೋಜನೆ ಸ್ಥಗಿತಗೊಂಡಿದ್ದು ಸಾಕಷ್ಟು ಕೈಗಾರಿಕೆಗಳಿಗೆ ಆರ್ಥಿಕ ಸಮಸ್ಯೆ ತಂದೊಡ್ಡಿದೆ.
ಇನ್ನು 2017 ರಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಉದ್ಯಮಿಗಳಿಗೆ ಉತ್ತೇಜನ ನೀಡಲು ʼವಿಶೇಷ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಯೋಜನೆ (SCLCSS) ಜಾರಿಗೆ ತರಲಾಯಿತು. ಉತ್ಪಾದನಾ ಮತ್ತು ಸೇವಾ ವಲಯಗಳಲ್ಲಿ ಪರಿಶಿಷ್ಟರ ಮಾಲೀಕತ್ವದ ಉದ್ಯಮಗಳಿಗೆ ಈ ಯೋಜನೆಯಡಿ ಶೇ 25 (25ಲಕ್ಷದ ಮಿತಿ) ರಷ್ಟು ಸಬ್ಸಿಡಿ ಸಿಗುತ್ತಿದೆ. ಪ್ರಸ್ತುತ, ಈ ಯೋಜನೆ ಮುಂದುವರಿದಿದೆ. ಆದರೆ, ಉದ್ಯಮದಲ್ಲಿ ಮೀಸಲಾತಿ ನೀಡುವ ಪರಿಪಾಠ ನಿಲ್ಲಿಸಬೇಕು. ಈ ಮೊದಲಿನಂತೆ ಎಲ್ಲ ವರ್ಗದವರಿಗೂ ನೆರವಾಗುವ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಯೋಜನೆಯನ್ನೇ ಮರು ಆರಂಭಿಸಬೇಕು ಎಂದು ಉದ್ಯಮ ಮೂಲಗಳು ಒತ್ತಾಯಿಸಿವೆ.
ಐಐಯುಎಸ್ ಎಂದರೇನು?
ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಮೂಲ ಸೌಕರ್ಯ ಒದಗಿಸುವ ಸಲುವಾಗಿ 2003 ರಲ್ಲಿ ಕೇಂದ್ರ ಸರ್ಕಾರ ಕೈಗಾರಿಕಾ ಮೂಲಸೌಕರ್ಯ ಉನ್ನತೀಕರಣ ಯೋಜನೆ (IIUS) ಜಾರಿಗೆ ತಂದಿತ್ತು. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಡಿ ಆರಂಭಿಸಲಾಗಿದ್ದ ಈ ಯೋಜನೆಯನ್ನು 2017ರಲ್ಲಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಸಾಕಷ್ಟ ಕೈಗಾರಿಕೆಗಳು ಮೂಲ ಸೌಕರ್ಯ ಸಮಸ್ಯೆಯಿಂದ ಬಳಸುತ್ತಿವೆ ಎಂಬುದು ಸಣ್ಣ ಕೈಗಾರಿಕೆಗಳ ಮಾಲೀಕರ ಆರೋಪವಾಗಿದೆ.
12 ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಹೊಸ ಯೋಜನೆಗಳನ್ನು ಬೆಂಬಲಿಸಲು 2013 ರಲ್ಲಿ ಮಾರ್ಪಡಿಸಿದ ಕೈಗಾರಿಕಾ ಮೂಲಸೌಕರ್ಯ ಉನ್ನತೀಕರಣ ಯೋಜನೆಯನ್ನು (MIIUS) ಪರಿಚಯಿಸಲಾಯಿತು. ಮಾರ್ಪಡಿಸಿದ ಕೈಗಾರಿಕಾ ಮೂಲಸೌಕರ್ಯ ಉನ್ನತೀಕರಣ ಯೋಜನೆಯು (MIIUS) ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಉಪಕ್ರಮವಾಗಿದ್ದು, ಅಸ್ತಿತ್ವದಲ್ಲಿರುವ ಕೈಗಾರಿಕಾ ಪಾರ್ಕ್ಗಳು ಮತ್ತು ಕ್ಲಸ್ಟರ್ಗಳಿಗೆ ರಸ್ತೆ ಸಂಪರ್ಕ, ವಿದ್ಯುತ್ ಮತ್ತು ನೀರು ಸರಬರಾಜಿನಂತಹ ಗುಣಮಟ್ಟದ ಮೂಲಸೌಕರ್ಯ ಒದಗಿಸುವ ಮೂಲಕ ಕೈಗಾರಿಕಾ ಸ್ಪರ್ಧಾತ್ಮಕತೆ ಹೆಚ್ಚಿಸುವ ಗುರಿ ಹೊಂದಿತ್ತು. ಯೋಜನಾ ವೆಚ್ಚದ ಶೇ 50ರ ವರೆಗೆ ಕೇಂದ್ರದಿಂದ ಅನುದಾನ ಸಹ ಸಿಗುತ್ತಿತ್ತು. 2017 ರಲ್ಲಿ ಯೋಜನೆಯನ್ನು ನಿಲ್ಲಿಸಲಾಗಿದೆ.

