
ಗಂಗಾಮತಸ್ಥರಿಗೆ ಎಸ್‌ಟಿ ಸ್ಥಾನ ಇನ್ನೂ ದೂರ... ಮರು ಕುಲಶಾಸ್ತ್ರೀಯ ಅಧ್ಯಯನಕ್ಕೆ ಸರ್ಕಾರ ನಿರ್ಧಾರ
ಕೇಂದ್ರ ಸರ್ಕಾರ ಕೆಲವು ಆಕ್ಷೇಪಗಳನ್ನು ವ್ಯಕ್ತಪಡಿಸಿದೆ, ಈ ಹಿನ್ನೆಲೆಯಲ್ಲಿಹಂಪಿಯ ಕನ್ನಡ ವಿಶ್ವವಿದ್ಯಾಲಯ ಮರು ಕುಲಶಾಸ್ತ್ರೀಯ ವಿಶ್ಲೇಷಣೆ ನಡೆಸಿ ವರದಿ ನೀಡಬೇಕಾಗಿದೆ.
ರಾಜ್ಯದಲ್ಲಿ ಗಂಗಾಮತ ಮತ್ತು ಅದರ ಉಪಜಾತಿಗಳಾದ ಕೋಲಿ, ಕಬ್ಬಲಿಗ, ಅಂಬಿಗ, ಬಾರಿಕ, ಬೆಸ್ತ ಸಮುದಾಯಗಳನ್ನು ಪರಿಶಿಷ್ಟ ಪಂಗಡದ (ಎಸ್‌ಟಿ) ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಗೆ ಮಾನ್ಯತೆ ಸಿಗುವುದು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ಕಳೆದ ನಾಲ್ಕೈದು ದಶಕಗಳಿಂದ ಈ ಬೇಡಿಕೆ ನಿರಂತರವಾಗಿ ಕೇಳಿಬಂದಿದೆ. ಆದರೂ ಈ ಸಮುದಾಯಕ್ಕೆ ಎಸ್‌ಟಿ ಸ್ಥಾನ ಮಾನ ಲಭಿಸುವ ಭರವಸೆ ಮತ್ತೆ ಮುಂದಕ್ಕೆ ಹೋದಂತಾಗಿದೆ. ಕೇಂದ್ರ ಸರ್ಕಾರವು ಕೆಲವೊಂದು ಆಕ್ಷೇಪಗಳನ್ನು ಕೇಳಿದ್ದು, ರಾಜ್ಯ ಸರ್ಕಾರ ಇದೀಗ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊರೆ ಹೋಗಿದೆ.
ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕನ್ನಡ ವಿಶ್ವವಿದ್ಯಾಯಲವು ಕುಲಶಾಸ್ತ್ರೀಯ ವಿಶ್ಲೇಷಣೆ ನಡೆಸಿ ವೈಜ್ಞಾನಿಕ ದಾಖಲೆಗಳೊಂದಿಗೆ ವರದಿ ನೀಡಬೇಕಾಗಿದೆ. ಹೀಗಾಗಿ ಎಸ್‌ಟಿ ಸ್ಥಾನ ಸಿಗುವ ಅಶ್ವಾಸನೆ ಕನಸಾಗಿಯೇ ಉಳಿಯುವಂತಾಗಿದೆ.
ರಾಜ್ಯದಲ್ಲಿ ಗಂಗಾಮತಸ್ಥರು ಮತ್ತು ಅವರ ಉಪಜಾತಿಗಳು ಹಿಂದುಳಿದ ವರ್ಗಗಳ ಪಟ್ಟಿಯ 'ಪ್ರವರ್ಗ-1' ರಲ್ಲಿದ್ದಾರೆ. ಗಂಗಾಮತಸ್ಥರನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಸಲುವಾಗಿ 2010ರಲ್ಲಿಯೇ ರಾಜ್ಯ ಸರ್ಕಾರವು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೂಲಕ 'ಕುಲಶಾಸ್ತ್ರೀಯ ಅಧ್ಯಯನ' ನಡೆಸಲು ಆದೇಶಿಸಿತ್ತು. ಈ ಅಧ್ಯಯನದ ವರದಿಯನ್ನು ಆಧರಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಅಂದಿನ ಸರ್ಕಾರ 2014ರ ಮಾರ್ಚ್‌ನಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಅಧಿಕೃತ ಶಿಫಾರಸ್ಸು ಕಳುಹಿಸಿತ್ತು. ರಾಜ್ಯದ ಪ್ರಸ್ತಾವನೆಯನ್ನು ಪರಿಶೀಲಿಸಿದ ಕೇಂದ್ರ ಸರ್ಕಾರದ ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ (ಆರ್‌ಜಿಐ), ಈ ಸಮುದಾಯಗಳಿಗೆ 'ಬುಡಕಟ್ಟು ಲಕ್ಷಣಗಳು' ಇವೆಯೇ ಎಂಬ ಬಗ್ಗೆ ಹೆಚ್ಚಿನ ಸಾಕ್ಷ್ಯಾಧಾರಗಳನ್ನು ಕೋರಿತ್ತು.
ಲೋಕೂರು ಸಮಿತಿಯ ಮಾನದಂಡಗಳಾದ ವಿಶಿಷ್ಟ ಸಂಸ್ಕೃತಿ, ಭೌಗೋಳಿಕ ಪ್ರತ್ಯೇಕತೆ ಈ ಸಮುದಾಯಗಳು ಹೇಗೆ ಹೊಂದಿವೆ ಎಂಬುದಕ್ಕೆ ವೈಜ್ಞಾನಿಕ ಸ್ಪಷ್ಟೀಕರಣ ನೀಡುವಂತೆ ಕೇಂದ್ರ ಸೂಚಿಸಿತ್ತು. ಇದು ಎಸ್‌ಟಿ ಸ್ಥಾನ ಮಾನ ಸದ್ಯಕ್ಕಂತೂ ಸಿಗುವ ಲಕ್ಷಣಗಳಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಗಂಗಾಮತಸ್ಥರಿಗೆ ವಿವಿಧ ಹೆಸರುಗಳು
ಗಂಗಾಮತಸ್ಥರು ಮೂಲತಃ ಜಲಮೂಲಗಳನ್ನು ಅವಲಂಬಿಸಿ ಬದುಕುವ ಸಮುದಾಯ. ಇವರನ್ನು ಅಂಬಿಗ, ಬೆಸ್ತ, ಗಂಗಾಪುತ್ರ, ಕಬ್ಬಲಿಗ, ಕೋಲಿ, ಮೊಗವೀರ, ಸುಣ್ಣಗಾರ, ತಳವಾರ ಮತ್ತು ಬಾರಿಕ ಎಂಬ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಇವರು 'ಕೋಲಿ' ಅಥವಾ 'ಕಬ್ಬಲಿಗ' ಎಂದು ಗುರುತಿಸಿಕೊಂಡರೆ, ಹಳೆ ಮೈಸೂರು ಭಾಗದಲ್ಲಿ 'ಬೆಸ್ತ' ಎಂದು, ಕರಾವಳಿ ಭಾಗದಲ್ಲಿ 'ಮೊಗವೀರ' ಎಂದು ಕರೆಯಲ್ಪಡುತ್ತಾರೆ. ಪರಂಪರಾಗತವಾಗಿ ಮೀನುಗಾರಿಕೆ, ದೋಣಿ ನಡೆಸುವಿಕೆ ಮತ್ತು ನೀರಾವರಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಈ ಸಮುದಾಯಗಳು ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಇಂದಿಗೂ ಹಿಂದುಳಿದಿವೆ. ನಗರೀಕರಣ ಮತ್ತು ತಾಂತ್ರಿಕ ಬೆಳವಣಿಗೆಯಿಂದಾಗಿ ಇವರ ಸಾಂಪ್ರದಾಯಿಕ ಉದ್ಯೋಗಗಳು ನಶಿಸುತ್ತಿವೆ. ಈ ಹಿನ್ನೆಲೆಯಲ್ಲಿ ಇವರಿಗೆ ಸಾಂವಿಧಾನಿಕ ರಕ್ಷಣೆ ಮತ್ತು ಮೀಸಲಾತಿಯ ಅಗತ್ಯವಿದೆ ಎಂಬುದು ಸಮುದಾಯದ ಪ್ರಬಲ ವಾದವಾಗಿದೆ.
ಎಸ್‌ಟಿ ಮೀಸಲಾತಿ ಹೋರಾಟದ ಹಾದಿ
ಗಂಗಾಮತಸ್ಥರ ಎಸ್‌ಟಿ ಸೇರ್ಪಡೆ ಹೋರಾಟವು ಕೇವಲ ಇತ್ತೀಚಿನದಲ್ಲ. ಇದು 1980ರ ದಶಕದಿಂದಲೂ ನಡೆಯುತ್ತಿದೆ. 1990ರ ದಶಕದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸಲು ಹಲವು ಬಾರಿ ಶಿಫಾರಸ್ಸು ಮಾಡಲಾಗಿತ್ತು. ಆದರೆ ಸಮಗ್ರ ಕರ್ನಾಟಕಕ್ಕೆ ಅನ್ವಯವಾಗುವಂತೆ ಅಧಿಕೃತ ಮುದ್ರೆ ಬಿದ್ದಿರಲಿಲ್ಲ. 2010ರ ನಿರ್ಣಾಯಕ ಹೆಜ್ಜೆ ಇಟ್ಟಿದ್ದು, ಅಂದಿನ ರಾಜ್ಯ ಸರ್ಕಾರವು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಈ ಸಮುದಾಯಗಳ ಬಗ್ಗೆ 'ಕುಲಶಾಸ್ತ್ರೀಯ ಅಧ್ಯಯನ' ನಡೆಸಲು ಸೂಚಿಸಿತು. 2014ರಲ್ಲಿ ಹಂಪಿ ವಿಶ್ವವಿದ್ಯಾಲಯದ ವರದಿಯ ಆಧಾರದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಗಂಗಾಮತಸ್ಥರನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿತು.
ಕೇಂದ್ರ ಸರ್ಕಾರದ ಆಕ್ಷೇಪಣೆ
ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ 'ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ' (ಆರ್‌ಜಿಐ) ತಿರಸ್ಕರಿಸಲು ಕೆಲವು ಪ್ರಮುಖ ತಾಂತ್ರಿಕ ಕಾರಣಗಳನ್ನು ನೀಡಿದೆ. ಕೇಂದ್ರ ಸರ್ಕಾರವು ಯಾವುದೇ ಸಮುದಾಯವನ್ನು ಎಸ್‌ಟಿಗೆ ಸೇರಿಸಲು 1965ರ ಲೋಕೂರು ಸಮಿತಿ ನಿಗದಿಪಡಿಸಿದ ಐದು ಮಾನದಂಡಗಳನ್ನು ಪರಿಗಣಿಸುತ್ತದೆ. ಆದಿಮ ಲಕ್ಷಣಗಳಾದ ಸಮುದಾಯವು ಇಂದಿಗೂ ಪ್ರಾಚೀನ ಜೀವನ ಪದ್ಧತಿಯನ್ನು ಹೊಂದಿದೆಯೇ? ಎಂಬುದರ ಬಗ್ಗೆ ವಿವರಣೆ ಕೇಳಿದೆ. ಅಲ್ಲದೇ, ಇತರ ಸಮುದಾಯಗಳಿಗಿಂತ ಭಿನ್ನವಾದ ವಿವಾಹ, ಹಬ್ಬ ಮತ್ತು ಧಾರ್ಮಿಕ ಆಚರಣೆಗಳಾದ ವಿಶಿಷ್ಟ ಸಂಸ್ಕೃತಿಗಳಿವೆಯೇ? ಈ ಸಮುದಾಯವು ದಟ್ಟ ಅರಣ್ಯ ಅಥವಾ ಬೆಟ್ಟಗುಡ್ಡಗಳಂತಹ ಪ್ರತ್ಯೇಕ ಪ್ರದೇಶಗಳಲ್ಲಿ ವಾಸಿಸುತ್ತಿದೆಯೇ? ಹೊರಗಿನ ಸಮುದಾಯಗಳೊಂದಿಗೆ ಬೆರೆಯಲು ಇಂದಿಗೂ ಹಿಂಜರಿಕೆ ಇದೆಯೇ? ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಕೆಳಮಟ್ಟದಲ್ಲಿದೆಯೇ? ಎಂಬುದರ ಮಾಹಿತಿಯನ್ನು ಕೋರಿದೆ.
ಗಂಗಾಮತಸ್ಥರು ಕರ್ನಾಟಕದಾದ್ಯಂತ ಹರಡಿಕೊಂಡಿದ್ದಾರೆ ಮತ್ತು ಅವರು ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತಿದ್ದಾರೆ. ಹೀಗಾಗಿ ಅವರಿಗೆ ಭೌಗೋಳಿಕ ಪ್ರತ್ಯೇಕತೆ ಮತ್ತು ಆದಿಮ ಲಕ್ಷಣಗಳು ಅನ್ವಯಿಸುವುದಿಲ್ಲ ಎಂಬುದು ಆರ್‌ಜಿಐನ ಆಕ್ಷೇಪಣೆಯಾಗಿವೆ.
ಹಂಪಿ ವಿಶ್ವವಿದ್ಯಾಲಯಕ್ಕೆ ಮರುಜವಾಬ್ದಾರಿ
ಕೇಂದ್ರದ ಆಕ್ಷೇಪಣೆಗಳಿಗೆ ವೈಜ್ಞಾನಿಕವಾಗಿ ಉತ್ತರಿಸಲು ರಾಜ್ಯ ಸರ್ಕಾರವು ಈಗ ಮತ್ತೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮೊರೆ ಹೋಗಿದೆ. ಕೇವಲ ಮೇಲ್ನೋಟದ ವರದಿಯ ಬದಲು, ಗಂಗಾಮತಸ್ಥರ ಪ್ರತಿಯೊಂದು ಉಪಜಾತಿಯ ಸಾಂಸ್ಕೃತಿಕ ಬೇರುಗಳನ್ನು ಹುಡುಕಲು ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿದೆ.
ಹಳೆ ಮೈಸೂರು, ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗಗಳಲ್ಲಿರುವ ಗಂಗಾಮತಸ್ಥರ ಆಚಾರ-ವಿಚಾರಗಳಲ್ಲಿರುವ 'ಬುಡಕಟ್ಟು' ಅಂಶಗಳನ್ನು ಸಾಕ್ಷ್ಯ ಸಮೇತ ನೀಡಬೇಕಿದೆ. ಕೇಂದ್ರ ಕೇಳಿರುವ ನಿರ್ದಿಷ್ಟ ಪ್ರಶ್ನೆಗಳಿಗೆ ವಿಶ್ವವಿದ್ಯಾಲಯವು ಉತ್ತರಗಳನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುತ್ತದೆ. ಕರ್ನಾಟಕದಲ್ಲಿ ಈಗಾಗಲೇ ಎಸ್‌ಟಿ ಪಟ್ಟಿಯಲ್ಲಿರುವ ನಾಯಕ ಅಥವಾ ವಾಲ್ಮೀಕಿ ಸಮುದಾಯದೊಂದಿಗೆ ಗಂಗಾಮತಸ್ಥರನ್ನು ಹೋಲಿಸಿ ನೋಡಿದಾಗ, ಅನೇಕ ಸಾಮ್ಯತೆಗಳು ಕಂಡುಬರುತ್ತವೆ. ತಳವಾರ ಮತ್ತು ಪರಿವಾರ ಸಮುದಾಯಗಳನ್ನು ಈಗಾಗಲೇ ಎಸ್‌ಟಿಗೆ ಸೇರಿಸಲಾಗಿದೆ. ಗಂಗಾಮತಸ್ಥರ ವಾದವೇನೆಂದರೆ, ನಮ್ಮದೇ ಉಪಜಾತಿಗಳಾದ ತಳವಾರರನ್ನು ಸೇರಿಸಿರುವಾಗ, ಮೂಲ ಗಂಗಾಮತಸ್ಥರನ್ನು ಏಕೆ ಹೊರಗಿಡಲಾಗಿದೆ? ಎಂಬುದಾಗಿದೆ. ಈ ತಾರತಮ್ಯವನ್ನು ಹೋಗಲಾಡಿಸಲು ಹಂಪಿ ವಿಶ್ವವಿದ್ಯಾಲಯದ ವರದಿಯು ತಾಂತ್ರಿಕ ಸೇತುವೆಯಾಗಬೇಕಿದೆ.
ರಾಜಕೀಯ ಮತಬ್ಯಾಂಕ್ ಪ್ರಭಾವ
ಗಂಗಾಮತಸ್ಥರು ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು 50 ರಿಂದ 60 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ ಎನ್ನಲಾಗಿದೆ. ಕನಿಷ್ಠ 30 ರಿಂದ 40 ವಿಧಾನಸಭಾ ಕ್ಷೇತ್ರಗಳಲ್ಲಿ ಇವರು ನಿರ್ಣಾಯಕ ಮತದಾರರಾಗಿದ್ದಾರೆ. ಹೀಗಾಗಿ, ಈ ಸಮುದಾಯದ ಬೇಡಿಕೆಯನ್ನು ಈಡೇರಿಸುವುದು ಯಾವುದೇ ಆಡಳಿತಾರೂಢ ಪಕ್ಷಕ್ಕೆ ಅನಿವಾರ್ಯವಾಗಿದೆ. ಆದರೆ, ಇದು ಕೇವಲ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿಲ್ಲದ ಕಾರಣ, ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರುವ ಏಕೈಕ ದಾರಿಯೆಂದರೆ ಅದು 'ವೈಜ್ಞಾನಿಕ ವರದಿ'ಯಾಗಿದೆ.
ಸಮುದಾಯಕ್ಕೆ ನಿರಂತರ ಅನ್ಯಾಯ
ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಕಾರ್ಯದರ್ಶಿ ಉಮೇಶ್.ಕೆ ಮುದ್ನಾಳ್, "ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರಿಸಬೇಕು ಎಂಬ ದಶಕಗಳ ಬೇಡಿಕೆಯು ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇನ್ನೂ ತೂಗಾಡುತ್ತಿದೆ ಎಸ್‌ಟಿ ಪಟ್ಟಿಗೆ ಸೇರಿಸಬೇಕೆಂದು ನಾವು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಆದರೆ ದುರಂತವೆಂದರೆ, ಚುನಾವಣೆಗಳು ಬಂದಾಗ ಮಾತ್ರ ರಾಜಕಾರಣಿಗಳಿಗೆ ನಮ್ಮ ಸಮುದಾಯದ ನೆನಪಾಗುತ್ತದೆ. ಮತ ಬ್ಯಾಂಕ್‌ಗಾಗಿ ಸಮುದಾಯದ ಮನೆ ಬಾಗಿಲಿಗೆ ಬರುವ ನಾಯಕರು, ಎಸ್‌ಟಿ ಮೀಸಲಾತಿ ಕೊಡಿಸುವುದಾಗಿ ದೊಡ್ಡ ದೊಡ್ಡ ಭರವಸೆಗಳನ್ನು ನೀಡುತ್ತಾರೆ. ಚುನಾವಣೆ ಮುಗಿದು ಅಧಿಕಾರಕ್ಕೆ ಬಂದ ನಂತರ ಆ ಭರವಸೆಗಳನ್ನು ಗಾಳಿಗೆ ತೂರಿ ಸಮುದಾಯವನ್ನು ಸಂಪೂರ್ಣವಾಗಿ ಮರೆತುಬಿಡುತ್ತಾರೆ," ಎಂದು ಕಿಡಿಕಾರಿದರು.
ಸಮುದಾಯಕ್ಕೆ ಆಗುತ್ತಿರುವ ಅನ್ಯಾಯಕ್ಕೆ ಕೇವಲ ರಾಜಕಾರಣಿಗಳಲ್ಲದೆ, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣವಾಗಿದೆ. ಅಧಿಕಾರಿಗಳ ಮೊಂಡುತನದ ಧೋರಣೆಯಿಂದಾಗಿ ಸಮುದಾಯಕ್ಕೆ ನ್ಯಾಯ ಸಿಗುತ್ತಿಲ್ಲ. ಕೇಂದ್ರ ಸರ್ಕಾರವು ಸಮುದಾಯದ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಕೇಳಿದಾಗ, ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾದ ಹಾಗೂ ನಿಖರವಾದ ಮಾಹಿತಿಯನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಇದೇ ಕಾರಣಕ್ಕೆ ಕೇಂದ್ರವು ಮತ್ತೆ ಅಧ್ಯಯನಕ್ಕೆ ಸೂಚಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮುದಾಯದ ಮುಂದಿರುವ ಸವಾಲುಗಳು
ಗಂಗಾಮತಸ್ಥರ ಎಸ್‌ಟಿ ಸೇರ್ಪಡೆ ಹಾದಿಯಲ್ಲಿ ಮೂರು ಮುಖ್ಯ ಸವಾಲುಗಳಿವೆ. ಆಧುನಿಕ ಕಾಲದಲ್ಲಿ 'ಭೌಗೋಳಿಕ ಪ್ರತ್ಯೇಕತೆ'ಯನ್ನು ಸಾಬೀತುಪಡಿಸುವುದು ಕಷ್ಟ. ಇದನ್ನು ಹಂಪಿ ವಿಶ್ವವಿದ್ಯಾಲಯ ಹೇಗೆ ವ್ಯಾಖ್ಯಾನಿಸುತ್ತದೆ ಎಂಬುದು ಮುಖ್ಯವಾಗಿದೆ. ಆರ್‌ಜಿಐ ಹಂತದಲ್ಲಿ ವರದಿ ಪಾಸ್ ಆಗುವುದು ಅತ್ಯಂತ ಕಠಿಣ ಪ್ರಕ್ರಿಯೆಯಾಗಿದೆ. ಈಗಾಗಲೇ ಎಸ್‌ಟಿ ಪಟ್ಟಿಯಲ್ಲಿರುವ ಸಮುದಾಯಗಳು ತಮ್ಮ ಮೀಸಲಾತಿ ಹಂಚಿಕೆಯಾಗುತ್ತದೆ ಎಂಬ ಆತಂಕದಿಂದ ಹೊಸ ಸೇರ್ಪಡೆಯನ್ನು ವಿರೋಧಿಸುವ ಸಾಧ್ಯತೆಯೂ ಇರುತ್ತದೆ.

