ಆನೆ ದಾಳಿಗೆ ಬ್ರೇಕ್ ಹಾಕಿದ ಬ್ಯಾರಿಕೇಡ್: ಕಾಡನ್ನೇ ಇಬ್ಭಾಗಿಸಿತಾ ಅರಣ್ಯ ಇಲಾಖೆ?
x
ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ರೈಲ್ವೆ ಬ್ಯಾರಿಕೇಡ್‌ ದಾಟುವ ಪ್ರಯತ್ನದಲ್ಲಿ ಗಾಯಗೊಂಡ ಆನೆಯನ್ನು ಹೊರತೆಗೆಯುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ (ಸಂಗ್ರಹ ಚಿತ್ರ)

ಆನೆ ದಾಳಿಗೆ ಬ್ರೇಕ್ ಹಾಕಿದ 'ಬ್ಯಾರಿಕೇಡ್': ಕಾಡನ್ನೇ ಇಬ್ಭಾಗಿಸಿತಾ ಅರಣ್ಯ ಇಲಾಖೆ?

ಕಾಡಾನೆಗಳು ನಾಡಿಗೆ ಬರದಂತೆ ತಡೆಯಲು ನಿರ್ಮಿಸುತ್ತಿರುವ 'ರೈಲ್ವೆ ಬ್ಯಾರಿಕೇಡ್'ಗಳು ಆನೆ-ಮಾನವ ಸಂಘರ್ಷ ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ. ಆದರೆ, ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಒಂದೇ ಅರಣ್ಯವನ್ನು ಇಲಾಖೆಯೇ ಇಬ್ಭಾಗ ಮಾಡುತ್ತಿದೆ.


Click the Play button to hear this message in audio format

ರಾಜ್ಯದಲ್ಲಿ ಕಾಡಾನೆ ಹಾವಳಿ ತಡೆಗಾಗಿ ಅರಣ್ಯ ಇಲಾಖೆ ಕಂಡುಕೊಂಡ ಪರಿಹಾರವೇ ಇದೀಗ ಅರಣ್ಯಕ್ಕೆ ಮುಳುವಾಗುತ್ತಿದೆ. ನಾಡಿನತ್ತ ಆನೆಗಳ ವಲಸೆ ತಪ್ಪಿಸುವ ಸಲುವಾಗಿ ಕೈಗೊಂಡ ಕಂದಕ ಹಾಗೂ ಸೋಲಾರ್ ಬೇಲಿಯಂತಹ ಪ್ರಯತ್ನಗಳೆಲ್ಲವೂ ವಿಫಲವಾದ ಕಾರಣ ಅರಣ್ಯ ಇಲಾಖೆಯು ʼರೈಲ್ವೆ ಬ್ಯಾರಿಕೇಡ್‌ʼ ಉಪಾಯ ಅನುಷ್ಠಾನಗೊಳಿಸಿತು. ಈ ಪ್ರಯತ್ನ ಫಲ ಕೊಟ್ಟರೂ ಇಲಾಖೆಯ ಅವೈಜ್ಞಾನಿಕ ನಿರ್ವಹಣೆಯಿಂದ ಟೀಕೆಗೆ ಗುರಿಯಾಗಿದೆ.

ರೈಲ್ವೆ ಬ್ಯಾರಿಕೇಡ್‌ ನಿರ್ಮಾಣದಿಂದ ಆನೆಗಳನ್ನು ಕಾಡಿನಲ್ಲಿಯೇ ಉಳಿಸುವ ಕೆಲಸ ನಡೆಯುತ್ತಿದೆ. ಆದರೆ, ರೈಲ್ವೆ ಬ್ಯಾರಿಕೇಡ್‌ ನಿರ್ಮಾಣ ವಿಚಾರದಲ್ಲಿ ಪೈಪೋಟಿಗೆ ಬಿದ್ದಂತೆ ಇಡೀ ಅರಣ್ಯವನ್ನೆ ಇಬ್ಬಾಗಿಸುವ ಕೆಲಸಗಳು ನಡೆಯುತ್ತಿದೆ ಎಂಬುದು ವನ್ಯಜೀವಿ ತಜ್ಞರ ಆರೋಪವಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸುತ್ತಲೂ ಒಂದು ಕಡೆಯಿಂದ ಬ್ಯಾರಿಕೇಡ್‌ ನಿರ್ಮಿಸುವ ಬದಲು ಸಮಸ್ಯಾತ್ಮಕ ಜಾಗದಲ್ಲಿ ಮಾತ್ರ ಅಳವಡಿಸುತ್ತಿದೆ. ಇದರಿಂದ ಆನೆ ದಾಳಿಗೆ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಜತೆಗೆ ಆನೆಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ ಎಂಬುದು ವನ್ಯಜೀವಿ ತಜ್ಞರ ವಾದ.

ಉದಾಹರಣೆಗೆ ಕಾವೇರಿ ವನ್ಯಜೀವಿ ಧಾಮವು ಮೂರು ಜಿಲ್ಲೆ, ಎರಡು ರಾಜ್ಯಗಳ ನಡುವೆ ಹಂಚಿ ಹೋಗಿದೆ. ರೈಲ್ವೆ ಬ್ಯಾರಿಕೇಡ್‌ ಅಳವಡಿಕೆಗೆ ಧಾಮದ ಮೂರೂ ಜಿಲ್ಲೆಗಳಿಗೂ ಅರಣ್ಯ ಇಲಾಖೆ ಅನುದಾನ ನೀಡುತ್ತದೆ. ಈ ಹಣ ಖರ್ಚು ಮಾಡಲು ವಲಯವಾರು ಅಧಿಕಾರಿಗಳು ಪೈಫೋಟಿಗೆ ಬಿದ್ದವರಂತೆ ಅವೈಜ್ಞಾನಿಕವಾಗಿ ಬ್ಯಾರಿಕೇಡ್‌ ಅಳವಡಿಸುತ್ತಿದ್ದಾರೆ. ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದೇ ಮಾದರಿ ರಾಜ್ಯದ ಎಲ್ಲ ಅರಣ್ಯ ಪ್ರದೇಶಗಳಲ್ಲಿ ಬ್ಯಾರಿಕೇಡ್‌ ನಿರ್ಮಾಣವಾಗುತ್ತಿದೆ. ಇದರಿಂದ ಆನೆಗಳ ನಿಯಂತ್ರಣ ಸಾಧ್ಯವಾಗದೇ ಕೇವಲ ಹಣದ ಹೊಳೆ ಹರಿಸಲಾಗುತ್ತಿದೆ ಎಂಬ ದೂರಲಾಗಿದೆ. ಆದಾಗ್ಯೂ, ಕಾಡಂಚಿನ ಗ್ರಾಮಗಳಲ್ಲಿ ರೈಲ್ವೆ ಬ್ಯಾರಿಕೇಡ್‌ನಿಂದಾಗಿ ಶೇ.80 ರಷ್ಟು ಕಾಡಾನೆ ಹಾವಳಿ ತಹಬದಿಗೆ ಬಂದಿದೆ ಎನ್ನಲಾಗಿದೆ.

ಏನಿದು ರೈಲ್ವೆ ಬ್ಯಾರಿಕೇಡ್‌?

ಸಾಮಾನ್ಯವಾಗಿ ಆನೆಗಳು ಬುದ್ಧಿವಂತ ಹಾಗೂ ಬಲಶಾಲಿ ಪ್ರಾಣಿಗಳು. ಅರಣ್ಯದಂಚಿನಲ್ಲಿ ತೋಡಿದ್ದ ಕಂದಕಗಳಿಗೆ ಮಣ್ಣು, ಮರದ ಕೊಂಬೆ ಹಾಕಿ, ಕಂದಕಗಳನ್ನೇ ಮುಚ್ಚಿ ನಾಡಿಗೆ ಬರುತ್ತಿದ್ದವು. ಸೋಲಾರ್ ಬೇಲಿಗೆ ಒಣಗಿದ ಮರಗಳನ್ನು ಕೆಡವಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿ ರಾಜಾರೋಷವಾಗಿ ಜಮೀನುಗಳಿಗೆ ನುಗ್ಗುತ್ತಿದ್ದವು. ಇದರಿಂದ ರೈತರು ಹೈರಾಣಾಗಿದ್ದರು. ಆನೆ ಹಾವಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರೈಲ್ವೆ ಇಲಾಖೆಯಿಂದ ಗುಜರಿಗೆ ಹಾಕುವ ಹಳೆಯ ರೈಲು ಕಂಬಿಗಳನ್ನು ತಂದು ಬ್ಯಾರಿಕೇಡ್ ನಿರ್ಮಿಸುವ ಕಾರ್ಯ ಆರಂಭಿಸಲಾಯಿತು.

ರಾಜ್ಯದಲ್ಲಿ 2014-2015ರ ಸುಮಾರಿಗೆ ಮೊದಲ ಬಾರಿಗೆ ರೈಲ್ವೆ ಬ್ಯಾರಿಕೇಡ್‌ ಅಳವಡಿಕೆ ಕಾರ್ಯವು ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಿಂದ (ವೀರನಹೊಸಹಳ್ಳಿ ಮತ್ತು ಡಿ.ಬಿ. ಕುಪ್ಪೆ ವಲಯದಲ್ಲಿ) ಪ್ರಾಯೋಗಿಕವಾಗಿ ಪ್ರಾರಂಭವಾಯಿತು. ಈ ಪ್ರಯೋಗ ಯಶಸ್ವಿಯಾದ ನಂತರ 2017-18ರ ವೇಳೆಗೆ ರಾಜ್ಯ ಸರ್ಕಾರವು ಈ ಯೋಜನೆಗೆ ಅಧಿಕೃತವಾಗಿ ದೊಡ್ಡ ಮಟ್ಟದ ಅನುದಾನ ನೀಡಿ ರಾಜ್ಯಾದ್ಯಂತ ವಿಸ್ತರಿಸಲು ಆರಂಭಿಸಿತು. ಈವರೆಗೂ ರಾಜ್ಯದಲ್ಲಿ ಬರೊಬ್ಬರಿ 427 ಕಿ.ಮೀ.ಉದ್ದದ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಂಡಿದೆ. ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಚಿಕ್ಕಮಗಳೂರು, ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಕಾವೇರಿ ವನ್ಯಜೀವಿ ಧಾಮ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಗಡಿ ಪ್ರದೇಶಗಳಲ್ಲಿ ಈ ಕಾಮಗಾರಿಗಳು ವ್ಯಾಪಕವಾಗಿ ನಡೆದಿವೆ. ಕಳೆದ ಎರಡು ವರ್ಷಗಳಲ್ಲೇ ಸುಮಾರು 115 ಕಿಲೋ ಮೀಟರ್‌ಗೂ ಅಧಿಕ ಬ್ಯಾರಿಕೇಡ್ ನಿರ್ಮಿಸಲಾಗಿದೆ.

ಗುರುವಾರವಷ್ಟೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ರಾಜ್ಯದಲ್ಲಿ ಈ ವರ್ಷ 116 ಕಿ.ಮೀ., ರೈಲ್ವೆ ಬ್ಯಾರಿಕೇಡ್ ಮಂಜೂರು ಮಾಡಿದ್ದು, 201 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ನಡೆಯಲಿದೆ. ಇದರ ಜೊತೆಯಲ್ಲಿ ಟೆಂಟಕಲ್ ಫೆನ್ಸಿಂಗ್, ಕಂದಕ ನಿರ್ಮಾಣವಾಗಲಿದೆ. ಹೀಗಾಗಿ ಆನೆ-ಮಾನವ ಸಂಘರ್ಷ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎನ್ನಲಾಗಿದೆ.


ಬ್ಯಾರಿಕೇಡ್ ನಿರ್ಮಿಸುವುದು ಹೇಗೆ?

ಸುಮಾರು ಹತ್ತು ಅಡಿ ಉದ್ದದ ರೈಲ್ವೆ ಕಂಬಿಗಳನ್ನು ತಂದು ಅದರಲ್ಲಿ ಮೂರ್ನಾಲ್ಕು ಅಡಿಗಳನ್ನು ಕಾಂಕ್ರೀಟ್ ತಳಪಾಯದೊಂದಿಗೆ ಭೂಮಿಯೊಳಗೆ ಭದ್ರವಾಗಿ ಹೂಳಲಾಗುತ್ತದೆ. ಬಳಿಕ ಕಂಬಿಗಳಿಗೆ ಅಡ್ಡಲಾಗಿ ಮತ್ತಷ್ಟು ರೈಲ್ವೆ ಕಂಬಿಗಳನ್ನು ವೆಲ್ಡಿಂಗ್‌ ಹಾಕಲಾಗುತ್ತದೆ. ಆನೆಗಳು ಅಥವಾ ಮರಿ ಆನೆಗಳು ನುಸುಳದಂತೆ ಅಡ್ಡ ಕಂಬಿಗಳನ್ನು ಹಾಕಲಾಗುತ್ತದೆ. ಒಂದು ಆನೆ ತನ್ನ ಸಂಪೂರ್ಣ ಶಕ್ತಿ ಉಪಯೋಗಿಸಿ ತಳ್ಳಿದರೂ ಈ ಬ್ಯಾರಿಕೇಡ್‌ಗಳು ಬಾಗುವುದಿಲ್ಲ, ಮುರಿಯುವುದಿಲ್ಲ. ಭೌಗೋಳಿಕ ಸವಾಲು ಆಧರಿಸಿ ಒಂದು ಕಿ.ಮೀ. ನಿರ್ಮಾಣಕ್ಕೆ ಅಂದಾಜು 1.5 ಕೋಟಿ ರೂ.ಗಳಿಂದ 2 ಕೋಟಿ ರೂ. ವೆಚ್ಚವಾಗಲಿದೆ.

ಕರ್ನಾಟಕದ ಈ ಯಶಸ್ವಿ ಮಾದರಿಯನ್ನೇ ಅನ್ಯ ರಾಜ್ಯಗಳು ನಕಲು ಮಾಡುತ್ತಿವೆ. ನೆರೆಯ ಕೇರಳ, ತಮಿಳುನಾಡು, ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿಗಳು ರಾಜ್ಯಕ್ಕೆ ಭೇಟಿ ನೀಡಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣದ ತಂತ್ರಜ್ಞಾನವನ್ನು ಅಧ್ಯಯನ ಮಾಡಿದ್ದಾರೆ. ಆ ರಾಜ್ಯಗಳಲ್ಲೂ ಇದೀಗ ಆನೆ-ಮಾನವ ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಹಳೆಯ ರೈಲ್ವೆ ಕಂಬಿಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಿಸುವ ಕಾರ್ಯ ನಡೆಯುತ್ತಿದೆ.

ಈ ಬಗ್ಗೆ ವನ್ಯಜೀವಿ ತಜ್ಞ ಜೋಸೆಫ್‌ ಹೂವರ್‌ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿ, ರೈಲ್ವೆ ಬ್ಯಾರಿಕೇಡ್‌ಗಳ ಮೂಲಕ ಆನೆಗಳು ನಾಡನತ್ತ ಬರುವುದನ್ನು ಬಹುತೇಕ ನಿಯಂತ್ರಿಸಬಹುದು. ಶೇ.80 ರಷ್ಟು ಈ ಬ್ಯಾರಿಕೇಡ್‌ಗಳಿಂದ ಅನುಕೂಲವಾಗಲಿದೆ. ಆದರೆ, ಭೂ ಕುಸಿತ ಉಂಟಾಗುವ ಪ್ರದೇಶಗಳು, ಅತಿ ತೇವಾಂಶದ ಪ್ರದೇಶಗಳಲ್ಲಿ ಈ ಬ್ಯಾರಿಕೇಡ್‌ಗಳು ಮುರಿದು ಬೀಳುವ ಸಾಧ್ಯತೆಗಳಿವೆ. ಕೆಲ ಬುದ್ದಿವಂತ ಆನೆಗಳು ಈ ಬ್ಯಾರಿಕೇಡ್‌ಗಳನ್ನು ದಾಟಲಿವೆ. ಕೇವಲ ಬ್ಯಾರಿಕೇಡ್‌ ಅಳವಡಿಸಿದರೆ ಸಾಲದು. ಅದರ ನಿರ್ವಹಣೆ ಮಾಡಬೇಕಿದೆ. ಇನ್ನುಳಿದ ಶೇ.20 ರಷ್ಟು ಬ್ಯಾರಿಕೇಡ್‌ಗಳು ನಿರ್ವಹಣೆ ಇಲ್ಲದೆ ಸೊರಗಿವೆ ಎಂದರು.

ಅರಣ್ಯವೇ ಇಬ್ಬಾಗ?

ರೈಲ್ವೆ ಬ್ಯಾರಿಕೇಡ್‌ ಅಳವಡಿಸುವ ನೆಪದಲ್ಲಿ ಇಡೀ ಅರಣ್ಯವನ್ನೆ ಇಬ್ಬಾಗಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಒಂದೇ ಅರಣ್ಯ ಪ್ರದೇಶದಲ್ಲಿ ಎರಡು ಅರಣ್ಯ ವಲಯಗಳಿವೆ. ಕೆಲವೆಡೆ ಅವೈಜ್ಞಾನಿಕವಾಗಿ ಅರಣ್ಯದ ಮಧ್ಯೆ ಬ್ಯಾರಿಕೇಡ್‌ಗಳನ್ನು ಅಳವಡಿಸಿರುವ ಉದಾಹರಣೆಗಳು ರಾಜ್ಯದಲ್ಲಿವೆ. ಗಜರಾಜನಿಗೆ ಅರಣ್ಯ ವಲಯಗಳ ಗಡಿಯ ಅರಿವಿರುವುದಿಲ್ಲ. ಹೀಗಿರುವಾಗ, ಮಡಿಕೇರಿ- ನಾಗರಹೊಳೆ, ಭದ್ರಹುಲಿ ಸಂರಕ್ಷಿತ ಪ್ರದೇಶ ಹಾಗೂ ಭದ್ರಾವತಿ ಅರಣ್ಯ ಪ್ರದೇಶದಲ್ಲಿ ಅರಣ್ಯವನ್ನು ಇಬ್ಭಾಗಿಸುವಂತೆ ಬ್ಯಾರಿಕೇಡ್‌ ನಿರ್ಮಿಸಲಾಗಿದೆ ಎಂದು ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಅವರು ʼದ ಫೆಡರಲ್‌ ಕರ್ನಾಟಕʼ ದೂರಿದರು.

ಕಾಡುಗಳಲ್ಲಿ ಹೆಚ್ಚಿನ ನೀರು ಸಂಗ್ರಹಿಸುವ ದೃಷ್ಟಿಯಿಂದ ಹಳ್ಳ-ಕೊಳ್ಳ ತೆಗೆಯುವುದನ್ನು ನಿಲ್ಲಿಸಬೇಕು. ಅನೈಸರ್ಗಿಕ ಕಾಮಗಾರಿಗಳನ್ನು ಸ್ಥಗಿತಗೊಳಿಸಿದರೆ, ಆನೆಗಳ ಸಂತತಿ ಸರಿದೂಗಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮಸ್ಥರ ವಾದವೇನು?

ಯಾವ ಪ್ರದೇಶಗಳಲ್ಲಿ ಕಬ್ಬಿಣದ ತಡೆಗೋಡೆ ನಿರ್ಮಾಣವಾಗಿದೆಯೋ, ಅಲ್ಲಿ ಕಾಡಾನೆಗಳು ನಾಡಿಗೆ ಬರುವ ಪ್ರಮಾಣ ನಿಂತೇ ಹೋಗಿದೆ. ಆನೆಗಳು ಬ್ಯಾರಿಕೇಡ್ ಬಳಿ ಬಂದು, ದಾಟಲಾಗದೇ, ಮುರಿಯಲೂ ಆಗದೇ ಮರಳಿ ಕಾಡಿನತ್ತ ಹೆಜ್ಜೆ ಹಾಕುತ್ತಿವೆ. ಇದು ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಬೆಟ್ಟ-ಗುಡ್ಡಗಳು ಮತ್ತು ಅತ್ಯಂತ ಕಡಿದಾದ ಪ್ರದೇಶಗಳಲ್ಲಿ ಕ್ರೇನ್ ಬಳಸಿ ಕಂಬಿಗಳನ್ನು ಸಾಗಿಸಲು ಕಷ್ಟವಾಗುವುದರಿಂದ ಅಲ್ಲಿ ಇದನ್ನು ನಿರ್ಮಿಸಲು ಅಸಾಧ್ಯವಾದರೂ ಸಮತಟ್ಟಾದ ಪ್ರದೇಶಗಳಲ್ಲಿ ಆನೆಗಳನ್ನು ತಡೆಯುವ ಅತ್ಯಂತ ವಿಶ್ವಾಸಾರ್ಹ ವಿಧಾನವಾಗಿದೆ ಎನ್ನುತ್ತಿದ್ದಾರೆ ಕಾಡಂಚಿನ ಗ್ರಾಮಸ್ಥರು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರೈಲ್ವೆ ಬ್ಯಾರಿಕೇಡ್‌ ಸಮೀಪದ ಹಾದು ಹೋಗುತ್ತಿರುವ ಆನೆ ಹಿಂಡು ಚಿತ್ರ: ಎ.ರೋಚಾ ಇಂಡಿಯಾ

ಎಲ್ಲೆಲ್ಲಿ, ಬ್ಯಾರಿಕೇಡ್ ನಿರ್ಮಾಣ?

ನಾಗರಹೊಳೆಯಲ್ಲಿ 20 ಕಿ.ಮೀ, ಮಡಿಕೇರಿ 7 ಕಿ.ಮೀ, ಚಿಕ್ಕಮಗಳೂರಿನ ಭದ್ರಾ ಹಿನ್ನೀರು ಮತ್ತು ಕುದುರೆಮುಖ ಭಾಗದಲ್ಲಿ 7.7 ಕಿ.ಮೀ ಹಾಗೂ ಮಳವಳ್ಳಿ ಬಳಿ 5.5 ಕಿ.ಮೀ ಕಾಮಗಾರಿಗೆ ಮಂಜೂರಾತಿ ನೀಡಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಬ್ಯಾರಿಕೇಡ್ ಸೇರಿದಂತೆ ವಿವಿಧ ರಕ್ಷಣಾ ಕ್ರಮಗಳಿಗಾಗಿ 1,500 ಕೋಟಿ ಮೀಸಲಿಡಲಾಗಿದ್ದು, ಈ ವರ್ಷ 269 ಕೋಟಿ ರೂ. ಬಿಡುಗಡೆಯಾಗಿದೆ.

ಬ್ಯಾರಿಕೇಡ್‌ ದಾಟಿರುವ ಆನೆಗಳು

ಕೆಲವು ಕಡೆಗಳಲ್ಲಿ ದೈತ್ಯ ಗಂಡಾನೆಗಳು ತಮ್ಮ ಸಂಪೂರ್ಣ ಶಕ್ತಿ ಉಪಯೋಗಿಸಿ ಕಂಬಿಗಳನ್ನು ಬಗ್ಗಿಸಿರುವ ಉದಾಹರಣೆಗಳಿವೆ. ಇನ್ನು ಕೆಲವು ಕಡೆ, ಭಾರೀ ಮಳೆಯಿಂದಾಗಿ ಕಾಂಕ್ರೀಟ್ ತಳಪಾಯ ಸಡಿಲಗೊಂಡಾಗ ಆನೆಗಳು ಗುಂಪಾಗಿ ತಳ್ಳಿದ ಪರಿಣಾಮ ಬ್ಯಾರಿಕೇಡ್‌ಗಳು ಕುಸಿದು ಬಿದ್ದ ಘಟನೆಗಳು ಬಂಡೀಪುರ ಮತ್ತು ಮೈಸೂರು ಭಾಗದಲ್ಲಿ ವರದಿಯಾಗಿವೆ.

ಕೆಲವೊಮ್ಮೆ ಬುದ್ಧಿವಂತ ಆನೆಗಳು ಕಂಬಿಗಳ ಕೆಳಗಡೆಯೇ ಮಣ್ಣು ತೋಡಿ, ಕಂದಕ ನಿರ್ಮಿಸಿ ಅದರೊಳಗಿಂದ ನುಸುಳಿಕೊಂಡು ಬರುವ ತಂತ್ರವನ್ನೂ ಮಾಡಿವೆ.

ಆನೆಗಳ ಸಾವು

ನಾಗರಹೊಳೆಯ ವೀರನಹೊಸಹಳ್ಳಿ ವಲಯದಲ್ಲಿ 2018ರಲ್ಲಿ ಸುಮಾರು 35 ವರ್ಷದ ಗಂಡಾನೆಯೊಂದು ಜಮೀನಿಗೆ ನುಗ್ಗಿದ್ದಾಗ ಗ್ರಾಮಸ್ಥರು ಓಡಿಸಿದ್ದರು. ಗಾಬರಿಯಿಂದ ಕಾಡಿನತ್ತ ಓಡಿದ ಆನೆ, ಬ್ಯಾರಿಕೇಡ್ ಮೇಲಿಂದ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿತ್ತು. ಆದರೆ, ಅದರ ಹಿಂಗಾಲುಗಳು ಕಂಬಿಗೆ ಸಿಲುಕಿಕೊಂಡವು. ತನ್ನದೇ ದೇಹದ ಭಾರ ಎದೆಯ ಭಾಗಕ್ಕೆ ಬಿದ್ದು, ಉಸಿರುಗಟ್ಟಿ ಆನೆ ಮೃತಪಟ್ಟಿತ್ತು.

2020ರಲ್ಲಿ ಬಂಡೀಪುರದ ಮೂಲೆಹೊಳೆ ವಲಯದಲ್ಲೂ ಇದೇ ರೀತಿಯ ಘಟನೆ ಮರುಕಳಿಸಿತು. ಮಳೆಯಿಂದಾಗಿ ಮಣ್ಣು ಜಾರುತ್ತಿದ್ದ ಕಾರಣ, ಕಂಬಿ ದಾಟಲು ಯತ್ನಿಸಿದ 15 ವರ್ಷದ ಗಂಡಾನೆಯೊಂದು ಜಾರಿಬಿದ್ದು, ಕಂಬಿಗಳ ಮಧ್ಯೆ ಸಿಲುಕಿಕೊಂಡಿತು. ಎದೆಗೆ ಬಲವಾದ ಪೆಟ್ಟು ಬಿದ್ದು ಆನೆಯೂ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿತು.

ಈ ಘಟನೆಗಳ ನಂತರ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಕಂಬಿಗಳ ವಿನ್ಯಾಸ ಮತ್ತು ಎತ್ತರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. 2024 ಹಾಗೂ 2025ರಲ್ಲಿ ಬ್ಯಾರಿಕೇಡ್‌ಗಳ ಮಧ್ಯೆ ಆನೆಗಳು ಸಿಲುಕಿಕೊಂಡಾಗ, ಅರಣ್ಯ ಸಿಬ್ಬಂದಿ ತಕ್ಷಣವೇ ಕಾರ್ಯಾಚರಣೆ ನಡೆಸಿ, ಜೆಸಿಬಿ ಮೂಲಕ ಕಂಬಿಗಳನ್ನು ಬಿಚ್ಚಿ ಆನೆಗಳನ್ನು ಜೀವಂತವಾಗಿ ರಕ್ಷಿಸಿದ ಅನೇಕ ಯಶಸ್ವಿ ಉದಾಹರಣೆಗಳೂ ಇವೆ.

Read More
Next Story