NIA Investigation: ಎನ್‌ಐಎ ಖೆಡ್ಡಾದಲ್ಲಿ ಅಮೆರಿಕದ ʼಧುರಂಧರ್‌ʼ!  ಈಶಾನ್ಯ ಭಾರತಕ್ಕೆ ಮ್ಯಾಥ್ಯೂ ವ್ಯಾನ್ ಡೈಕ್ ಬೆದರಿಕೆ?
x
ಉಕ್ರೇನ್‌ನಲ್ಲಿ ಹೋರಾಟ ನಡೆಸಿದ ಪಾಶ್ಚಿಮಾತ್ಯ ಯುದ್ಧದ ಪಂಟರ್‌ಗಳು ಮ್ಯಾಥ್ಯೂ ವ್ಯಾನ್‌ ಡೈಕ್‌ (ಮೊದಲ ಚಿತ್ರ).. ಮ್ಯಾನ್‌ಮಾರ್‌ ಸಂಘರ್ಷ ಪೀಡಿತ ಪ್ರದೇಶಗಳನ್ನು ತಲುಪಲು ಮೀಜೊರಾಂ ನೆಲವನ್ನು ಬಳಸುತ್ತಿರಬಹುದು ಎಂದು ಶಂಕಿಸಲಾಗಿದೆ. ಅಮೆರಿಕದ ಪ್ರಜೆ ಮ್ಯಾಥ್ಯೂ ವ್ಯಾನ್‌ ಡೈಕ್‌ ಎಂಬಾತನ ಖಾಸಗಿ ಸೈನಿಕ ಸಂಸ್ಥೆ- ʼಸನ್ಸ್ ಆಫ್ ಲಿಬರ್ಟಿ ಇಂಟರ್ನ್ಯಾಷನಲ್ʼನಿಂದ ಉಕ್ರೇನಿನ ಸೈನಿಕರು ಯುದ್ಧ ತಂತ್ರಗಳ ತರಬೇತಿ ಪಡೆಯುತ್ತಿರುವುದನ್ನು ಈ ಹಳೆಯ ಚಿತ್ರದಲ್ಲಿ ಗಮನಿಸಬಹುದಾಗಿದೆ. (ಎರಡನೇ ಚಿತ್ರ)

NIA Investigation: ಎನ್‌ಐಎ ಖೆಡ್ಡಾದಲ್ಲಿ ಅಮೆರಿಕದ ʼಧುರಂಧರ್‌ʼ! ಈಶಾನ್ಯ ಭಾರತಕ್ಕೆ ಮ್ಯಾಥ್ಯೂ ವ್ಯಾನ್ ಡೈಕ್ ಬೆದರಿಕೆ?

ಮ್ಯಾನ್ಮಾರ್‌ನ ಬಂಡುಕೋರರಿಗೆ ಪಾಶ್ಚಿಮಾತ್ಯ ʼಕೂಲಿ ಸೈನಿಕರುʼ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದಾರೆಯೇ? ಇತ್ತೀಚೆಗೆ ಎನ್ಐಎ ಬಂಧಿಸಿದ ಏಳು ಮಂದಿಯ ಜಾತಕ ನೋಡಿದರೆ ಸತ್ಯವೆನಿಸುತ್ತದೆ.


ಫ್ರೆಡ್ರಿಕ್ ಫೋರ್ಸಿತ್ ಅವರ 'ಡಾಗ್ಸ್ ಆಫ್ ವಾರ್' ಕಾದಂಬರಿಯ ಸನ್ನಿವೇಶಗಳು ನಿಮಗೆ ನೆನಪಿರಬಹುದು. ಅದರ ಸನ್ನಿವೇಶಗಳು ಈಗ ಮ್ಯಾನ್ಮಾರ್‌ನೊಂದಿಗೆ ಅಂಟಿಕೊಂಡಿರುವ ಈಶಾನ್ಯ ಭಾರತದ ಸುದೀರ್ಘ ಗಡಿಯಲ್ಲಿ ಮರುಕಳಿಸುತ್ತಿವೆ.

ಬಹುಶಃ ಸಂಶಯಾಸ್ಪದ ಗುಪ್ತಚರ ಸಂಸ್ಥೆಗಳ ಬೆಂಬಲ ಹೊಂದಿರುವ ಪಾಶ್ಚಿಮಾತ್ಯ ʼಕೂಲಿ ಸೈನಿಕರುʼ, ಭಾರತದ ಮೂಲಕ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಮತ್ತು ಗುಟ್ಟಾಗಿ ಒಳನುಸುಳುವ ಕೃತ್ಯದಲ್ಲಿ ತೊಡಗಿದ್ದಾರೆ. ಮ್ಯಾನ್ಮರ್‌ನ ಚೀನಾ ಬೆಂಬಲಿತ ಮಿಲಿಟರಿ ಜುಂಟಾ (ಸೇನಾ ಆಡಳಿತ) ವಿರುದ್ಧ ಹೋರಾಡುತ್ತಿರುವ ಹಲವಾರು ಸ್ಥಳೀಯ ಬಂಡುಕೋರ ಗುಂಪುಗಳಿಗೆ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುವುದು ಇವರ ಉದ್ದೇಶ.

ಕೆಲವರು ಇದನ್ನು ದಕ್ಷಿಣ ಮತ್ತು ಆಗ್ನೇಯ ಏಷ್ಯಾದ ಗಡಿಭಾಗಗಳಲ್ಲಿ ನಡೆಯುತ್ತಿರುವ 'ಗ್ರೇಟ್ ಗೇಮ್'ನ (ಮಹಾ ಸಮರದ) ಇತ್ತೀಚಿನ ಆವೃತ್ತಿ ಎಂದು ವಿಶ್ಲೇಷಣೆ ಮಾಡಬಹುದು. ಅಮೆರಿಕದಂತಹ ಪಾಶ್ಚಿಮಾತ್ಯ ಶಕ್ತಿಗಳು ಮತ್ತು ಉದಯೋನ್ಮುಖ ಚೀನಾ ನಡುವಿನ ದೊಡ್ಡ ಶಕ್ತಿಗಳ ಪೈಪೋಟಿ, ಮ್ಯಾನ್ಮಾರ್ ಸೇನೆ ಮತ್ತು ಅಲ್ಲಿನ ಅನೇಕ ಜನಾಂಗೀಯ ಬಂಡುಕೋರ ಸೈನ್ಯಗಳ ನಡುವಿನ ನಿರಂತರ ಅಂತರ್ಯುದ್ಧ, ಹಾಗೂ ಈ ಸುದೀರ್ಘ ಸಂಘರ್ಷಕ್ಕೆ ಸಿಲುಕಿಕೊಳ್ಳುವುದನ್ನು ತಪ್ಪಿಸಲು ಹರಸಾಹಸ ಪಡುತ್ತಿರುವ ಭಾರತ, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್‌ನಂತಹ ನೆರೆಯ ರಾಷ್ಟ್ರಗಳು - ಇವೆಲ್ಲವೂ ಈ ಸಂಕೀರ್ಣ ಪರಿಸ್ಥಿತಿಯ ಭಾಗವೇ ಆಗಿ ಹೋಗಿವೆ.

ಎನ್ಐಎ ವಶದಲ್ಲಿ 7 ವಿದೇಶಿಯರು

̤ಈ ತಿಂಗಳು ಭಾರತದ ಭಯೋತ್ಪಾದನಾ ನಿಗ್ರಹ ಸಂಸ್ಥೆಯಾದ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ನಾನಾ ಭಾರತೀಯ ನಗರಗಳಿಂದ ಆರು ಉಕ್ರೇನಿಯನ್ನರು ಮತ್ತು ಒಬ್ಬ ಅಮೆರಿಕನ್ ಪ್ರಜೆಯನ್ನು ಬಂಧಿಸುವ ಮೂಲಕ ಒಂದು ಪ್ರಮುಖ ರಹಸ್ಯ ಕಾರ್ಯಾಚರಣೆಯನ್ನು ಹೊರ ಜಗತ್ತಿಗೆ ಎಳೆದು ತಂದಿದೆ. ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಅಂತರ್ಯುದ್ಧದಲ್ಲಿ ಅಲ್ಲಿನ ಸೇನಾ ಆಡಳಿತದ ವಿರುದ್ಧ ಹೋರಾಡುತ್ತಿರುವ ಬಂಡುಕೋರ ಗುಂಪುಗಳಿಗೆ ಸಹಾಯ ಮಾಡಲು, ‘ಪಾಶ್ಚಿಮಾತ್ಯ ಕೂಲಿ ಸೈನಿಕರು’ ಭಾರತದ ಈಶಾನ್ಯ ರಾಜ್ಯಗಳನ್ನು ಸಾರಿಗೆ ಮಾರ್ಗವಾಗಿ ಬಳಸಿಕೊಳ್ಳುತ್ತಿರುವುದು ಈ ಬಂಧನದಿಂದ ಶ್ರುತಪಟ್ಟಿದೆ.

ನವದೆಹಲಿಯ ವಿಶೇಷ ಎನ್ಐಎ ನ್ಯಾಯಾಲಯವು ಈ ಏಳು ವಿದೇಶಿಯರನ್ನು ಮಾರ್ಚ್ 27 ರವರೆಗೆ 11 ದಿನಗಳ ಕಾಲ ಎನ್ಐಎ ಕಸ್ಟಡಿಗೆ ಒಪ್ಪಿಸಿದೆ. ಈ ವಿಚಾರಣೆಯು ಮುಚ್ಚಿದ ಕೋಣೆಯಲ್ಲಿ ನಡೆದಿದ್ದು, ಎನ್ಐಎ ಸದ್ಯಕ್ಕೆ ಈ ವಿಷಯವನ್ನು ಅತ್ಯಂತ ರಹಸ್ಯವಾಗಿಡಲು ಬಯಸಿದೆ.

ದೆಹಲಿಯಲ್ಲಿ ಮೂವರು ಮತ್ತು ಲಕ್ನೋದಲ್ಲಿ ಮೂವರು ಉಕ್ರೇನಿಯನ್ನರನ್ನು ಬಂಧಿಸಲಾಗಿದ್ದು, ಅಮೆರಿಕನ್ ಪ್ರಜೆಯನ್ನು ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ. ಎನ್ಐಎ ಮೂಲಗಳ ಪ್ರಕಾರ, ಈ ಏಳು ಜನರು ಮಾನ್ಯವಾದ ವೀಸಾಗಳೊಂದಿಗೆ ಭಾರತಕ್ಕೆ ಬಂದಿದ್ದರು, ಆದರೆ ಕಡ್ಡಾಯವಾದ 'ನಿರ್ಬಂಧಿತ ಪ್ರದೇಶದ ಪರವಾನಗಿ' ಇಲ್ಲದೆ ಗುಟ್ಟಾಗಿ ಮಿಜೋರಾಂ ಪ್ರವೇಶಿಸಿದ್ದರು.

ಬಂಡುಕೋರರ ಜೊತೆ ನಿಕಟ ಸಂಪರ್ಕ

ಈ ಏಳು ವ್ಯಕ್ತಿಗಳು ಮ್ಯಾನ್ಮಾರ್ನ ಜನಾಂಗೀಯ ಬಂಡುಕೋರ ಗುಂಪುಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಮತ್ತು ಮ್ಯಾನ್ಮಾರ್ಗೆ ಅಕ್ರಮವಾಗಿ ನುಸುಳಲು ಈ ಪರ್ವತ ರಾಜ್ಯವನ್ನು (ಮಿಜೋರಾಂ) ಬಳಸಿಕೊಂಡಿದ್ದರು ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ಇವರು ಮ್ಯಾನ್ಮಾರ್ ಸೇನೆಯಾದ 'ತಾತ್ಮದಾವ್' ವಿರುದ್ಧ ಬಳಸಲು ಬಂಡುಕೋರರಿಗೆ ಹೆಚ್ಚಿನ ಸಂಖ್ಯೆಯ ಪೋರ್ಟಬಲ್ ಕಾಂಬ್ಯಾಟ್ ಡ್ರೋನ್‌ಗಳನ್ನು (ಯುದ್ಧ ಡ್ರೋನ್) ಕಳ್ಳಸಾಗಣೆ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಇದೆ. ಈ ಘಟನೆಯು ಭಾರತದ ಆಂತರಿಕ ಭದ್ರತೆ ಮತ್ತು ನೆರೆಹೊರೆಯ ರಾಜತಾಂತ್ರಿಕ ಸಂಬಂಧಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.

ಬಂಧಿತ ಉಕ್ರೇನಿಯನ್ನರನ್ನು ಹುರ್ಬಾ ಪೆಟ್ರೋ, ಸ್ಲಿವಿಯಾಕ್ ತಾರಸ್, ಇವಾನ್ ಸುಕ್ಮಾನೋವಸ್ಕಿ, ಸ್ಟೆಫಾಂಕಿವ್ ಮರಿಯನ್, ಹೊಂಚಾರುಕ್ ಮಕ್ಸಿಮ್ ಮತ್ತು ಕಾಮಿನ್ಸ್ಕಿ ವಿಕ್ಟರ್ ಎಂದು ಗುರುತಿಸಲಾಗಿದ್ದರೂ, ಅವರ ಹಿನ್ನೆಲೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಆದರೆ, ಕೊಲ್ಕತ್ತಾದಲ್ಲಿ ಬಂಧಿತನಾದ ಅಮೆರಿಕನ್ ಪ್ರಜೆ ಮ್ಯಾಥ್ಯೂ ಆರನ್ ವ್ಯಾನ್‌ ಡೈಕ್‌ ಒಬ್ಬ ವಿಚಿತ್ರ ಮತ್ತು ವರ್ಣರಂಜಿತ ವ್ಯಕ್ತಿತ್ವದವನು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಅಮೆರಿಕದ ಮ್ಯಾಥ್ಯೂ ವ್ಯಾನ್ ಡೈಕ್ ಈಗ ಭಾರತದ ರಾಷ್ಟ್ರೀಯ ತನಿಖಾ ದಳದ ವಶದಲ್ಲಿದ್ದಾನೆ(ಸಂಗ್ರಹ ಚಿತ್ರ).

ಮ್ಯಾಥ್ಯೂ ವ್ಯಾನ್‌ ಡೈಕ್‌ ಎಂಬಾತನ ಕಥೆ

ವ್ಯಾನ್‌ ಡೈಕ್‌ 'ಸನ್ಸ್ ಆಫ್ ಲಿಬರ್ಟಿ ಇಂಟರ್ನ್ಯಾಷನಲ್' (SOLI) ಎಂಬ ಖಾಸಗಿ ಯುದ್ಧ ಕೂಲಿ ಸೈನಿಕರ ಸಂಸ್ಥೆಯ ಸಂಸ್ಥಾಪಕ. ಅಮೆರಿಕ ಉರುಳಿಸಲು ಬಯಸುವ ಸ್ಥಾಪಿತ ಸರ್ಕಾರಗಳ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸುವ ಬಂಡುಕೋರ ಗುಂಪುಗಳಿಗೆ ತರಬೇತಿ ನೀಡುವುದು ಮತ್ತು ಶಸ್ತ್ರಾಸ್ತ್ರ ಒದಗಿಸಲು ಅಮೆರಿಕದ ಗುಪ್ತಚರ ಸಂಸ್ಥೆಗಳು ಈ ಸಂಸ್ಥೆಯನ್ನು ಬಳಸಿಕೊಳ್ಳುತ್ತವೆ ಎಂಬ ಆರೋಪವಿದೆ.

2010-11ರಲ್ಲಿ ಗಡಾಫಿ ವಿರೋಧಿ ಲಿಬಿಯಾ ನ್ಯಾಷನಲ್ ಲಿಬರೇಶನ್ ಆರ್ಮಿ (NLA) ಪರವಾಗಿ ಹೋರಾಟ ನಡೆಸಿದಾಗ ವ್ಯಾನ್‌ ಡೈಕ್‌ ಮೊದಲ ಬಾರಿಗೆ ಸುದ್ದಿಯಾಗಿದ್ದ. ಅಲ್ಲಿ ಆತ ಸರ್ಕಾರಿ ಪಡೆಗಳಿಂದ ಸೆರೆಯಾಗಿದ್ದರೂ, ನಂತರ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಸಿರಿಯಾದಲ್ಲಿ ಅಸ್ಸಾದ್ ಸರ್ಕಾರ ಉರುಳಿಸಿದ ಇಸ್ಲಾಮಿಸ್ಟ್ ಬಂಡುಕೋರರೊಂದಿಗೆ ವ್ಯಾನ್‌ ಡೈಕ್‌ ತರಬೇತಿ ಪಡೆದು ಹೋರಾಡಿದ್ದಾನೆ. ಅಲ್ಲದೆ, ರಷ್ಯಾ ವಿರುದ್ಧದ ಕಾರ್ಯಾಚರಣೆಯಲ್ಲಿ ಉಕ್ರೇನಿಯನ್ ವಿಶೇಷ ಪಡೆಗಳೊಂದಿಗೂ ಕೆಲಸ ಮಾಡಿದ್ದಾನೆ.

ಅವನ ವೆಬ್ಸೈಟ್ ಪ್ರಕಾರ, ವ್ಯಾನ್‌ ಡೈಕ್‌ ಪತ್ರಕರ್ತ, ಲೇಖಕ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕನೂ ಹೌದು. ರಷ್ಯಾ ವಿರುದ್ಧದ ಯುದ್ಧದಲ್ಲಿ ಅನುಭವ ಹೊಂದಿರುವ ಡಜನ್‌ಗಟ್ಟಲೆ ಉಕ್ರೇನಿಯನ್ ಸೈನಿಕರನ್ನು ಮ್ಯಾನ್ಮಾರ್‌ನ ಜನಾಂಗೀಯ ಬಂಡುಕೋರರ ಪರವಾಗಿ ಹೋರಾಡಲು ಮತ್ತು ತರಬೇತಿ ನೀಡಲು ಕರೆತಂದ ಮಾಸ್ಟರ್‌ಮೈಂಡ್‌ ಇವನೇ ಇರಬಹುದು ಎಂದು ಬಲವಾಗಿ ಶಂಕಿಸಲಾಗಿದೆ.

ಭಿನ್ನತೆಯ ಕ್ರಿಸ್ಮಸ್

ಪಾಶ್ಚಿಮಾತ್ಯ ಕೂಲಿ ಸೈನಿಕರು 'ಭಿನ್ನತೆಯೊಂದಿಗೆ ಕ್ರಿಸ್ಮಸ್' ಆಚರಿಸುವ ಪ್ರವಾಸಿಗರಂತೆ ನಟಿಸಿ, ಮಿಜೋರಾಂ ಮೂಲಕ ಮ್ಯಾನ್ಮಾರ್ ಪ್ರವೇಶಿಸುತ್ತಿರುವ ಬಗ್ಗೆ ಈ ಲೇಖಕರು ಎರಡು ವರ್ಷಗಳ ಹಿಂದೆಯೇ ವರದಿ ಮಾಡಿದ್ದರು. ಮ್ಯಾನ್ಮಾರ್ನ 'ಚಿನ್' ಬಂಡುಕೋರ ಗುಂಪುಗಳೊಂದಿಗೆ ಕೆಲವು ತಿಂಗಳುಗಳ ಕಾಲ ಕಳೆದ ನಂತರ ತವರಿಗೆ ಮರಳುತ್ತಿದ್ದ ಬ್ರಿಟಿಷ್ ಕೂಲಿ ಸೈನಿಕನೆನ್ನಲಾದ ಡೇನಿಯಲ್ ನ್ಯೂವಿ ಎಂಬಾತನನ್ನು 2024ರ ಜೂನ್ 19 ರಂದು ಐಜ್ವಾಲ್ ವಿಮಾನ ನಿಲ್ದಾಣದಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಲಾಗಿತ್ತು.

ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮಾ ಪತ್ರಿಕಾಗೋಷ್ಠಿಯಲ್ಲಿ ಈ ಹಿಂದೆ ನಡೆದ ಬಂಧನಗಳ ಬಗ್ಗೆ ಪ್ರಸ್ತಾಪಿಸಿದ್ದರು, ಆದರೆ ಅವರ ವಿರುದ್ಧದ ಕಾನೂನು ಕ್ರಮದ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ಕಳೆದ ಮಾರ್ಚ್‌ನಲ್ಲಿ, ಬೆಲ್ಜಿಯಂ ಪ್ರಜೆ ಸೈಮನ್ ಕ್ಲೆಮೆಂಟೆ ಎಂಬಾತನನ್ನು ಐಜ್ವಾಲ್ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು; ಆತನ ಬಳಿಯೂ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಆತ ಹೇಳಿಕೊಂಡಿದ್ದು ತಾನು ಪತ್ರಿಕಾ ಛಾಯಾಗ್ರಾಹಕ ಎಂದು. ಆದರೆ ತನ್ನ ಬಳಿ ಶಸ್ತ್ರಾಸ್ತ್ರಗಳಿರಲು ಕಾರಣವೇನು ಎಂಬುದನ್ನು ವಿವರಿಸಲು ಆತ ವಿಫಲನಾಗಿದ್ದ. ಅಂತಿಮವಾಗಿ 85 ದಿನಗಳ ಜೈಲು ವಾಸದ ನಂತರ ಆತ ಖುಲಾಸೆಗೊಂಡಿದ್ದ.

ಉಕ್ರೇನ್‌ನಲ್ಲಿ ಹೋರಾಟ ನಡೆಸಿದ ಪಾಶ್ಚಿಮಾತ್ಯ ಯುದ್ಧದ ಪಂಟರ್‌ಗಳು ಮ್ಯಾನ್ಮಾರ್‌ನಲ್ಲಿರುವ ಸಂಘರ್ಷ ಪೀಡಿತ ಪ್ರದೇಶಗಳನ್ನು ತಲುಪಲು ಮೀಜೊರಾಂ ನೆಲವನ್ನು ಬಳಸುತ್ತಿರಬಹುದು ಎಂದು ಶಂಕಿಸಲಾಗಿದೆ. ಅಮೆರಿಕದ ಪ್ರಜೆ ಮ್ಯಾಥ್ಯೂ ವ್ಯಾನ್‌ ಡೈಕ್‌ ಎಂಬಾತನ ಖಾಸಗಿ ಸೈನಿಕ ಸಂಸ್ಥೆ- ʼಸನ್ಸ್ ಆಫ್ ಲಿಬರ್ಟಿ ಇಂಟರ್ನ್ಯಾಷನಲ್ʼನಿಂದ ಉಕ್ರೇನಿನ ಸೈನಿಕರು ಯುದ್ಧ ತಂತ್ರಗಳ ತರಬೇತಿ ಪಡೆಯುತ್ತಿರುವುದನ್ನು ಈ ಹಳೆಯ ಚಿತ್ರದಲ್ಲಿ ಗಮನಿಸಬಹುದಾಗಿದೆ.

ಮುಖ್ಯಮಂತ್ರಿ ಹೇಳಿದ ಮಾತು

ಅದೇ ತಿಂಗಳು, ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮಾ ಅವರು ನೀಡಿದ ಒಂದು ಹೇಳಿಕೆ ಭಾರಿ ಸಂಚಲನ ಮೂಡಿಸಿತ್ತು. ಉಕ್ರೇನ್‌ನಲ್ಲಿ ಹೋರಾಡಿದ ಪಾಶ್ಚಿಮಾತ್ಯ ಯುದ್ಧ ಅನುಭವಿಗಳು ಮ್ಯಾನ್ಮಾರ್‌ನ ಸಂಘರ್ಷ ಪೀಡಿತ ಪ್ರದೇಶಗಳನ್ನು ತಲುಪಲು ತಮ್ಮ ರಾಜ್ಯವನ್ನು (ಮಿಜೋರಾಂ) ಬಳಸುತ್ತಿರಬಹುದು ಎಂದು ಅವರು ಅನುಮಾನದಿಂದ ನುಡಿದಿದ್ದರು.

ಕಳೆದ ವರ್ಷ ಮಾರ್ಚ್ 10 ರಂದು 40 ಸದಸ್ಯರ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಹೇಳಿದ್ದನ್ನು ಗಮನಿಸಿ: "ಉಕ್ರೇನ್ ಯುದ್ಧದ ಅನುಭವಿಗಳು ಮಿಜೋರಾಂ ಮೂಲಕ ಮ್ಯಾನ್ಮಾರ್‌ನ 'ಚಿನ್' ರಾಜ್ಯಕ್ಕೆ ಪ್ರಯಾಣಿಸಿ, ಅಲ್ಲಿನ ಮಿಲಿಟರಿ ಜುಂಟಾ ವಿರುದ್ಧ ಹೋರಾಡುತ್ತಿರುವ ಬಂಡುಕೋರ ಗುಂಪುಗಳಿಗೆ ತರಬೇತಿ ನೀಡುತ್ತಿದ್ದಾರೆ ಎಂಬ ನಿರ್ದಿಷ್ಟ ಗುಪ್ತಚರ ಮಾಹಿತಿ ನಮ್ಮ ಬಳಿ ಇದೆ."

ಈ ಮೂಲಕ ಮ್ಯಾನ್ಮಾರ್‌ನ ಆಂತರಿಕ ಸಂಘರ್ಷವು ಭಾರತದ ಈಶಾನ್ಯ ರಾಜ್ಯಗಳಿಗೂ ಹರಡುತ್ತಿದೆ ಎಂಬುದನ್ನು ಅವರು ಸ್ಪಷ್ಟವಾಗಿ ಸೂಚಿಸಿದ್ದರು.

ಜುಂಟಾ ಸದ್ದಡಗಿಸುವ ಜಿದ್ದು?

ಉಕ್ರೇನ್‌ನೊಂದಿಗೆ ದೀರ್ಘಕಾಲದ ನಂಟು ಹೊಂದಿರುವ ವ್ಯಾನ್‌ ಡೈಕ್‌ ನಂತಹ ವ್ಯಕ್ತಿ ಈ ನೇಮಕಾತಿಗಳ ಹಿಂದೆ ಇರುವ ಸಾಧ್ಯತೆಯಿದೆ. ಆದರೆ, ಉಕ್ರೇನಿಯನ್ನರನ್ನು ಕರೆತಂದು ಮ್ಯಾನ್ಮಾರ್ ಬಂಡುಕೋರರಿಗೆ ಡ್ರೋನ್ ಯುದ್ಧತಂತ್ರದ ತರಬೇತಿ ನೀಡುವುದು ಪಾಶ್ಚಿಮಾತ್ಯ ಗುಪ್ತಚರ ಸಂಸ್ಥೆಗಳ ಪ್ರಜ್ಞಾಪೂರ್ವಕ ತಂತ್ರವೂ ಆಗಿರಬಹುದು ಎಂಬುದನ್ನು ತಳ್ಳಿಹಾಕುವಂತಿಲ್ಲ.

ಇದಕ್ಕೆ ಎರಡು ಪ್ರಮುಖ ಕಾರಣಗಳಿವೆ:

ಮೊದಲನೆಯದಾಗಿ, ಉಕ್ರೇನ್‌ನ ಡ್ರೋನ್ ತಜ್ಞರು ಪ್ರಸ್ತುತ ಜಗತ್ತಿನಲ್ಲೇ ಅತ್ಯುತ್ತಮ ಪ್ರಾಯೋಗಿಕ ಯುದ್ಧ ಅನುಭವ ಹೊಂದಿದವರು ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ.

ಎರಡನೆಯದಾಗಿ, ಒಂದು ವೇಳೆ ಅವರು ಶತ್ರುಗಳ ಕೈಗೆ ಸಿಕ್ಕಿಬಿದ್ದರೂ, ಅವರ ಮೂಲವನ್ನು ಅಮೆರಿಕದಂತಹ ಪಾಶ್ಚಿಮಾತ್ಯ ದೇಶಗಳಿಗೆ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಚೀನಾದ ಹಿಡಿತವನ್ನು ತಪ್ಪಿಸಲು ಮ್ಯಾನ್ಮಾರ್‌ನ ಮಿಲಿಟರಿ ಜುಂಟಾವನ್ನು ಸದೆಬಡಿಯಬೇಕು ಎಂಬ ಬಲವಾದ ಹಂಬಲ ಅಮೆರಿಕಕ್ಕಿದೆ.

ಕಳೆದ ತಿಂಗಳು ಮೈಟ್ಕಿನಾ ವಿಮಾನ ನಿಲ್ದಾಣದ ಮೇಲೆ ಕಾಚಿನ್ ಬಂಡುಕೋರರು ನಡೆಸಿದ ಡ್ರೋನ್ ದಾಳಿಯಲ್ಲಿ ಮ್ಯಾನ್ಮಾರ್ ನ್ಯಾಷನಲ್ ಏರ್‌ವೇಸ್‌ನ ಎಟಿಆರ್ 72 ವಿಮಾನವು ತೀವ್ರ ಹಾನಿಗೆ ಒಳಗಾಗಿತ್ತು. ಇದು ಮ್ಯಾನ್ಮಾರ್ನ ಬಂಡುಕೋರ ಗುಂಪುಗಳು ಯುದ್ಧ ಡ್ರೋನ್‌ಗಳನ್ನು ಬಳಸುವಲ್ಲಿ ಪಡೆಯುತ್ತಿರುವ ಬೆಳೆಯುತ್ತಿರುವ ಕೌಶಲಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ ಅನಿಸುತ್ತದೆ.

ಎನ್ಐಎ ಅಧಿಕಾರಿಗಳ ಆರೋಪದ ಪ್ರಕಾರ, ವ್ಯಾನ್‌ ಡೈಕ್‌ ಸೇರಿದಂತೆ ಈ ಏಳು ಶಂಕಿತ ಕೂಲಿ ಸೈನಿಕರು ಈಶಾನ್ಯ ಭಾರತದ ಗಡಿ ಪ್ರದೇಶಗಳನ್ನು ಬಳಸಿಕೊಂಡು ಮ್ಯಾನ್ಮಾರ್‌ಗೆ ಭಾರಿ ಪ್ರಮಾಣದಲ್ಲಿ ಡ್ರೋನ್‌ಗಳನ್ನು ಅಕ್ರಮವಾಗಿ ಸಾಗಿಸುವಲ್ಲಿ ತೊಡಗಿದ್ದರು. ಸಿಕ್ಕಿಬೀಳುವುದನ್ನು ತಪ್ಪಿಸಲು ಈ ಡ್ರೋನ್‌ಗಳನ್ನು ಬಿಡಿಭಾಗಗಳಾಗಿ ವಿಂಗಡಿಸಿ ಸಾಗಿಸಲಾಗುತ್ತದೆ ಮತ್ತು ನಂತರ ಯುದ್ಧ ವಲಯಗಳಲ್ಲಿ ಅವುಗಳನ್ನು ಮತ್ತೆ ಜೋಡಿಸಲಾಗುತ್ತದೆ. ವ್ಯಾನ್‌ ಡೈಕ್‌ ಮತ್ತು ಉಕ್ರೇನ್ ಪಂಟರ್ರಿಂದ ಪಡೆದ ತರಬೇತಿಯಿಂದಾಗಿ ಬಂಡುಕೋರರು ಈ ತಾಂತ್ರಿಕ ಕೌಶಲವನ್ನು ಹೊಂದಿರಬಹುದು ಎಂದು ಶಂಕಿಸಲಾಗಿದೆ.

ಭಾರತಕ್ಕೇನು ತೊಂದರೆ?

ಪಾಶ್ಚಿಮಾತ್ಯ ಕೂಲಿ ಸೈನಿಕರ ವಿರುದ್ಧ ಭಾರತ ನಡೆಸುತ್ತಿರುವ ಈ ಕಠಿಣ ಕ್ರಮದ ಹಿಂದೆ ಪ್ರಮುಖವಾಗಿ ಎರಡು ಆತಂಕಗಳಿವೆ:

ಮೊದಲನೆಯದಾಗಿ, ಈ ಕೂಲಿ ಸೈನಿಕರಿಂದ ತರಬೇತಿ ಪಡೆಯುತ್ತಿರುವ ಮ್ಯಾನ್ಮಾರ್‌ನ ಕೆಲವು ಬಂಡುಕೋರ ಗುಂಪುಗಳು ಈಶಾನ್ಯ ಭಾರತದ ಭಾರತ-ವಿರೋಧಿ ಬಂಡುಕೋರರೊಂದಿಗೆ ನಿಕಟ ಸಂಪರ್ಕ ಹೊಂದಿವೆ. ಉದಾಹರಣೆಗೆ, ಉಲ್ಫಾ ಮತ್ತು ಎನ್ಎಸ್ಸಿಎನ್ ಗುಂಪುಗಳಿಗೆ ಕಾಚಿನ್ ಇಂಡಿಪೆಂಡೆನ್ಸ್ ಆರ್ಮಿ ಜೊತೆ ಇರುವ ನಂಟು ಬಹಳ ಹಳೆಯದು.

ಎರಡನೆಯದಾಗಿ, ಮ್ಯಾನ್ಮಾರ್ ಬಂಡುಕೋರರಿಗೆ ತರಬೇತಿ ನೀಡುವ ಈ ಕೂಲಿ ಸೈನಿಕರು, ಮ್ಯಾನ್ಮಾರ್‌ನಲ್ಲಿ ನೆಲೆಸಿರುವ ಭಾರತ-ವಿರೋಧಿ ಬಂಡುಕೋರರಿಗೂ ತರಬೇತಿ ಮತ್ತು ಶಸ್ತ್ರಾಸ್ತ್ರಗಳನ್ನು ನೀಡುವ ಅಪಾಯವಿದೆ. 2024ರ ಸೆಪ್ಟೆಂಬರ್ ತಿಂಗಳಿನಲ್ಲಿ ಮಣಿಪುರದ ಹಳ್ಳಿಗಳ ಮೇಲೆ ಸ್ಫೋಟಕಗಳನ್ನು ಎಸೆಯಲು ಕುಕಿ ಬಂಡುಕೋರರು ಡ್ರೋನ್‌ಗಳನ್ನು ಬಳಸಿದ ಇತ್ತೀಚಿನ ಘಟನೆಯನ್ನು ಕೇಂದ್ರ ಸರ್ಕಾರ ಅತ್ಯಂತ ಕಳವಳದಿಂದ ಗಮನಿಸಿದೆ.

ಮ್ಯಾನ್ಮಾರ್‌ನ ಅಂತರ್ಯುದ್ಧವು ಹೀಗೆಯೇ ಮುಂದುವರಿದು ಜಾಗತಿಕ ಶಕ್ತಿಗಳು ಕೂಡ ಇದರಲ್ಲಿ ಶಾಮೀಲಾಯಿತು ಎಂದಾದರೆ, ಅದರ ದುಷ್ಪರಿಣಾಮಗಳು ಈಶಾನ್ಯ ಭಾರತದ ಮೇಲೆ ಬೀರುವುದನ್ನು ಯಾರೂ ಕೂಡ ಅಷ್ಟು ಸುಲಭವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ.

(ಅಮೆರಿಕನ್‌ ದುರಂಧರ್‌: ಬಾಲಿವುಡ್‌ ಸಿನಿಮಾ ಧುರಂಧರ್‌ನಲ್ಲಿ ಭಾರತೀಯ ಏಜೆಂಟ್‌ ಒಬ್ಬ ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಸರ್ಕಾರ ಹಾಗೂ ಮಿಲಿಟರಿ ವಿರುದ್ಧ ರಹಸ್ಯ ಕಾರ್ಯಾಚರಣೆ ನಡೆಸಿದ ಕಥಾಹಂದರ ಹೊಂದಿದೆ. ಎನ್‌ಐಎ ವಶದಲ್ಲಿರುವ ಅಮೆರಿಕನ್‌ ಪ್ರಜೆ ಮ್ಯಾಥ್ಯೂ ವ್ಯಾನ್‌ ಡೈಕ್‌ ಉಕ್ರೇನಿಯನ್‌ ಪ್ರಜೆಗಳೊಂದಿಗೆ ಸೇರಿ ಮ್ಯಾನ್ಮಾರ್‌ನ ಚೀನಾ ಪ್ರಣೀತ ಜುಂಟಾ ಸರ್ಕಾರದ ವಿರುದ್ದ ಅಲ್ಲಿನ ಬಂಡುಕೋರರ ಹೋರಾಟಕ್ಕೆ ಸಹಾಯ ಮಾಡುವ ಮಾಹಿತಿ ಇದೆ. ಅ ಮೂಲಕ ಆತ ಈಶಾನ್ಯ ಭಾರತಕ್ಕೂ ಕಂಟಕಪ್ರಾಯನಾಗಿದ್ದ. ಹಾಗಾಗಿ ದುರಂಧರ್‌ ಎಂಬ ಉಪಮೆಯನ್ನು ಪ್ರಾಸಂಗಿಕವಾಗಿ ಈ ವರದಿಯಲ್ಲಿ ಬಳಸಲಾಗಿದೆ)

Read More
Next Story