
Smart City Project| ಅಧಿಕಾರಿಗಳ ಬೇಜವಾಬ್ದಾರಿತನ: ಕೈತಪ್ಪಿತು ಕುಂದಾನಗರಿಯ ಸುಸ್ಥಿರ ಅಭಿವೃದ್ಧಿಯ ಕೋಟಿ ಕೋಟಿ ಹಣ
ಕುಂದಾನಗರಿ ಬೆಳಗಾವಿಗೆ ಬಿಡುಗಡೆಯಾಗಿದ್ದ ಸುಮಾರು 7.5 ಕೋಟಿ ರೂ.ಗಳ ಅನುದಾನವು ಬಳಕೆಯಾಗದಿರುವ ಕಾರಣ ಕೇಂದ್ರ ಸರ್ಕಾರವು ವಾಪಸ್ ಕೇಳುತ್ತಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
ಕರ್ನಾಟಕದ ಕುಂದಾನಗರಿ ಬೆಳಗಾವಿಗೆ ಕೇಂದ್ರ ಸರ್ಕಾರದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಬಿಡುಗಡೆಯಾಗಿದ್ದ ಸುಮಾರು 7.5 ಕೋಟಿ ರೂ.ಗಳ ಅನುದಾನವು ಬಳಕೆಯಾಗದಿರುವ ಕಾರಣ ಅಷ್ಟೂ ಹಣವನ್ನು ಕೇಂದ್ರ ಸರ್ಕಾರವು ವಾಪಸ್ ಕೇಳಿದ್ದು, ಅಧಿಕಾರಿವರ್ಗದ ಬೇಜವಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ.
ದೇಶದ ನಗರಗಳನ್ನು ವಿಶ್ವದ ಮಟ್ಟದ ಸುಸ್ಥಿರ ನಗರಗಳನ್ನಾಗಿ ರೂಪಿಸಲು ಕೇಂದ್ರ ಸರ್ಕಾರವು ಕಾಲಕಾಲಕ್ಕೆ ವಿವಿಧ ಯೋಜನೆಗಳ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ಬಿಡುಗಡೆ ಮಾಡುತ್ತದೆ. ಸಿಟೀಸ್ 2.0 ಯೋಜನೆಯು ಅಂತಹ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದು ಕೇವಲ ಮೂಲಸೌಕರ್ಯವಲ್ಲದೆ, ಪರಿಸರ ಸ್ನೇಹಿ ಮತ್ತು ತಾಂತ್ರಿಕವಾಗಿ ಸುಧಾರಿತ ನಗರ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತದೆ. ಆದರೆ, ಅನುದಾನ ಸದ್ಬಳಕೆಯಾಗದಿರುವ ಕಾರಣಕ್ಕೆ ಕೇಂದ್ರ ಸರ್ಕಾರ ಇದೀಗ ವಾಪಸ್ ಕೇಳಿದೆ.
ಸಿಟೀಸ್ ಯೋಜನೆಯು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಒಂದು ವಿಶಿಷ್ಟ ಕಾರ್ಯಕ್ರಮವಾಗಿದೆ. ನಗರಗಳಲ್ಲಿನ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು ಮತ್ತು ಶೂನ್ಯ ತ್ಯಾಜ್ಯ ತತ್ವವನ್ನು ಅಳವಡಿಸುವುದು. ಹಸಿರು ಕಟ್ಟಡಗಳು, ಸೌರಶಕ್ತಿ ಬಳಕೆ ಮತ್ತು ಮಾಲಿನ್ಯ ರಹಿತ ಸಾರಿಗೆಗೆ ಒತ್ತು ನೀಡುವುದು ಮತ್ತು ತಂತ್ರಜ್ಞಾನವನ್ನು ಬಳಸಿ ನಗರದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ಅಭಿವೃದ್ಧಿಗಾಗಿ ಮೊದಲ ಕಂತಿನಲ್ಲಿ 7.5 ಕೋಟಿ ರೂಪಾಯಿ ಬಿಡುಗಡೆಯಾಗಿತ್ತು. ನಿಯಮದ ಪ್ರಕಾರ, ಅನುದಾನ ಬಿಡುಗಡೆಯಾದ ತಕ್ಷಣವೇ ಯೋಜನಾ ವರದಿ ಸಿದ್ಧಪಡಿಸಿ, ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಬೇಕಿತ್ತು. ಆದರೆ, ಹಣ ಬಿಡುಗಡೆಯಾಗಿ ತಿಂಗಳುಗಳೇ ಕಳೆದರೂ, ಈ ಹಣ ಎಲ್ಲಿ ಬಳಕೆಯಾಗಬೇಕು? ಯಾರು ಜವಾಬ್ದಾರರು? ಎಂಬುದರ ಕುರಿತು ಸ್ಥಳೀಯ ಆಡಳಿತದ ಬಳಿ ಸರಿಯಾದ ಮಾಹಿತಿ ಇಲ್ಲದಿರುವುದು ದುರಂತ. ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ಕ್ರಿಯಾ ಯೋಜನೆ ಮತ್ತು ಪ್ರಗತಿ ವರದಿಗಳನ್ನು ಸಕಾಲದಲ್ಲಿ ಸಲ್ಲಿಸದ ಕಾರಣ, ಹಣವು ಬಳಕೆಯಾಗದೆ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದೆ.
ಅನುದಾನ ವಾಪಸ್: ಅಭಿವೃದ್ಧಿಯ ಮೇಲಾಗುವ ಪರಿಣಾಮಗಳು
ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನ ನೀಡಿದರೂ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೇಂದ್ರ ಸರ್ಕಾರವು ಹಣವನ್ನು ವಾಪಸ್ ಕೇಳಿದೆ. ಒಮ್ಮೆ ಬಿಡುಗಡೆಯಾದ ಹಣವನ್ನು ಬಳಸದೆ ವಾಪಸ್ ಮಾಡಿದರೆ, ಮುಂದಿನ ಹಂತದ ನೂರಾರು ಕೋಟಿ ರೂ.ಗಳ ಅನುದಾನವನ್ನು ಕೇಂದ್ರ ಸರ್ಕಾರ ಕಡಿತಗೊಳಿಸುವ ಅಥವಾ ರದ್ದುಗೊಳಿಸುವ ಸಾಧ್ಯತೆ ಇರುತ್ತದೆ. ಯೋಜನೆ ರೂಪಿಸಲು, ಸಭೆ ನಡೆಸಲು ಮತ್ತು ಆಡಳಿತಾತ್ಮಕ ಕೆಲಸಗಳಿಗಾಗಿ ಈಗಾಗಲೇ ಖರ್ಚು ಮಾಡಲಾದ ಹಣ ಮತ್ತು ಸಮಯ ವ್ಯರ್ಥವಾಗುತ್ತದೆ. ತ್ಯಾಜ್ಯ ನಿರ್ವಹಣೆ ಅಥವಾ ಪರಿಸರ ಸ್ನೇಹಿ ಯೋಜನೆಗಳು ಜಾರಿಯಾಗದಿದ್ದರೆ, ಅದರ ನೇರ ಪರಿಣಾಮ ನಗರದ ಜನರ ಆರೋಗ್ಯ ಮತ್ತು ಜೀವನಮಟ್ಟದ ಮೇಲೆ ಬೀರುತ್ತದೆ.
ಆಡಳಿತಾತ್ಮಕ ವಿಳಂಬಕ್ಕೆ ಕಾರಣಗಳೇನು?
ಸ್ಥಳೀಯ ಆಡಳಿತದ ವಿಳಂಬ ಧೋರಣೆಗಳನ್ನು ಪರಿಶೀಲಿಸಿದಾಗ ಹಲವು ಕಾರಣಗಳು ಕಂಡುಬಂದಿವೆ. ಕೇಂದ್ರದ ಯೋಜನೆಗಳ ಗಂಭೀರತೆ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ವರ್ಗಾವಣೆಗಳು ಮತ್ತು ಅಧಿಕಾರ ವಿಕೇಂದ್ರೀಕರಣದ ಕೊರತೆಯಿಂದಾಗಿ ಯೋಜನೆಗಳು ಕಡತದಲ್ಲಿಯೇ ಉಳಿಯುತ್ತಿವೆ. ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ಜಿಲ್ಲಾಡಳಿತದ ನಡುವೆ ಸರಿಯಾದ ಸಮನ್ವಯ ಇಲ್ಲದಿರುವುದು ಅನುದಾನ ಬಳಕೆಗೆ ದೊಡ್ಡ ಅಡ್ಡಿಯಾಗಿದೆ. ಸಿಟೀಸ್ 2.0 ನಂತಹ ನಾವೀನ್ಯತೆಯ ಯೋಜನೆಗಳನ್ನು ಜಾರಿಗೆ ತರಲು ಬೇಕಾದ ತಾಂತ್ರಿಕ ಕೌಶಲ್ಯ ಹೊಂದಿದ ಸಲಹೆಗಾರರ ಅಥವಾ ಅಧಿಕಾರಿಗಳ ಕೊರತೆ ಇದೆ. ಅಲ್ಲದೇ, ಜನಪ್ರತಿನಿಧಿಗಳು ಇಂತಹ ತಾಂತ್ರಿಕ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸುವಲ್ಲಿ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಕೇಂದ್ರದ ಕಠಿಣ ನಿಲುವು
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಹಣ ವಾಪಸ್ ಕೇಳಿರುವುದು ಒಂದು ರೀತಿಯ ಎಚ್ಚರಿಕೆ ಗಂಟೆಯಾಗಿದೆ. ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳು ಕೇಂದ್ರದ ಹಣವನ್ನು ಕೇವಲ ಹಕ್ಕು ಎಂದು ಭಾವಿಸದೆ, ಅದನ್ನು ನಿಗದಿತ ಅವಧಿಯಲ್ಲಿ ಬಳಸುವ ಜವಾಬ್ದಾರಿಯನ್ನು ಹೊರಬೇಕು ಎಂಬುದನ್ನು ಇದು ಸ್ಪಷ್ಟಪಡಿಸಿದೆ. ಈ ಹಿಂದೆ ಅನೇಕ ಯೋಜನೆಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿರುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಇಂತಹ ವಿಳಂಬ ಧೋರಣೆಗಳು ರಾಜ್ಯದ ಪ್ರತಿಷ್ಠೆಗೆ ಧಕ್ಕೆ ತರುತ್ತಿವೆ ಎಂದು ಹೇಳಲಾಗಿದೆ.
ಈ ಪರಿಸ್ಥಿತಿಯನ್ನು ಸರಿಪಡಿಸಲು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕಾದ ಅಗತ್ಯ ಇದೆ. ಅನುದಾನ ವಾಪಸ್ ಹೋಗಲು ಕಾರಣರಾದ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಜರುಗಿಸಬೇಕು. ಯೋಜನೆಗಳ ವಿಳಂಬಕ್ಕೆ ನಿರ್ದಿಷ್ಟ ವ್ಯಕ್ತಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಪ್ರತಿ ಯೋಜನೆಯ ಪ್ರಗತಿಯನ್ನು ಸಾರ್ವಜನಿಕವಾಗಿ ವೀಕ್ಷಿಸಲು ಸಾಧ್ಯವಾಗುವಂತೆ ಡಿಜಿಟಲ್ ಡ್ಯಾಶ್‌ಬೋರ್ಡ್‌ಗಳನ್ನು ಅಳವಡಿಸಬೇಕು. ಕೇಂದ್ರದ ಯೋಜನೆಗಳ ಅನುಷ್ಠಾನಕ್ಕಾಗಿಯೇ ತಾಂತ್ರಿಕ ತಜ್ಞರನ್ನೊಳಗೊಂಡ ಒಂದು ವಿಶೇಷ ತಂಡವನ್ನು ರಚಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ತಿಂಗಳಿಗೊಮ್ಮೆ ಇಂತಹ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಬೇಕು ಎಂಬುದು ಬಿಜೆಪಿಯ ಆಗ್ರಹವಾಗಿದೆ.
ಸದ್ಬಳಕೆಯಲ್ಲಿ ಸರ್ಕಾರ ವಿಫಲ
ಈ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ಬೆಳಗಾವಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾಂತೇಶ್ ವಕ್ಕುಂದ, ಕೇಂದ್ರ ಸರ್ಕಾರವು ಸಿಟಸ್ ಯೋಜನೆಯಡಿ ಬೆಳಗಾವಿಗೆ ಅನುದಾನ ನೀಡಿದರೂ ರಾಜ್ಯ ಸರ್ಕಾರವು ಅದರ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಕೇವಲ ಇದೊಂದೆ ಅಲ್ಲ, ಹಲವು ಯೋಜನೆಗಳ ಅನುದಾನಗಳ ಬಳಕೆಯಲ್ಲಿಯೂ ರಾಜ್ಯ ಸರ್ಕಾರವು ನಿರ್ಲಕ್ಷ್ಯತನ ಹೊಂದಿದೆ. ಸವದತ್ತಿ ಯಲ್ಲಮ್ಮ ದೇವಾಲಯದ ಅಭಿವೃದ್ಧಿಗೆ 100 ಕೋಟಿ ರೂ. ಬಂದಿದ್ದರೂ ಅದರ ಬಳಕೆ ಮಾಡಿಕೊಳ್ಳುವ ಯೋಗ್ಯತೆ ಇಲ್ಲವಾಗಿದೆ. ಕೇಂದ್ರದ ಅನುದಾನವನ್ನು ಯಾವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಸರ್ಕಾರದ ಬಳಿ ರೂಪುರೇಷೆಯೇ ಇಲ್ಲವಾಗಿದೆ ಎಂದು ಸರ್ಕಾರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

