
ಹೆಸರಿಗಾಗಿ ಸಮರ : ಅಮೆರಿಕದ ಎಐ ದಿಗ್ಗಜ 'ಆಂಥ್ರೊಪಿಕ್' ವಿರುದ್ಧ ಕೇಸ್ ದಾಖಲಿಸಿದ ಬೆಳಗಾವಿಯ ಕಂಪನಿ
ಬೆಳಗಾವಿ ಮೂಲದ 'ಆಂಥ್ರೊಪಿಕ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್' ಕಂಪನಿ 2017ರಲ್ಲಿ ಸ್ಥಾಪನೆಗೊಂಡಿದ್ದರೆ ಕ್ಲಾಡ್ ಎಐ ಅಭಿವೃದ್ಧಿಪಡಿಸಿರುವ ಅಮೆರಿಕದ 'ಆಂಥ್ರೊಪಿಕ್' ಸ್ಥಾಪನೆಯಾಗಿದ್ದು 2021ರಲ್ಲಿ.
ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಕಂಪನಿ 'ಆಂಥ್ರೊಪಿಕ್' ವಿರುದ್ಧ ಕರ್ನಾಟಕದ ಬೆಳಗಾವಿ ಮೂಲದ ಸಾಫ್ಟ್‌ವೇರ್ ಕಂಪನಿಯೊಂದು ಕಾನೂನು ಸಮರ ಸಾರಿದ್ದು ದೊಡ್ಡ ಸುದ್ದಿಯಾಗಿದೆ. ಒಂದೇ ಹೆಸರಿನ ಬಳಕೆಯ ವಿಚಾರವಾಗಿ ಉಂಟಾಗಿರುವ ಈ ವಿವಾದ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, ಬೆಳಗಾವಿಯ ವಾಣಿಜ್ಯ ನ್ಯಾಯಾಲಯವು ಅಮೆರಿಕದ ಕಂಪನಿಗೆ ಹೊಸದಾಗಿ ಸಮನ್ಸ್ ಜಾರಿ ಮಾಡಿದೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಬೃಹತ್ ಎಐ ಕಂಪನಿಯು ಭಾರತದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ತನ್ನ ಕಚೇರಿ ತೆರೆದಿದೆ. ಈ ಮೂಲಕ ಬೆಂಗಳೂರನ್ನು ಭಾರತದ ಪ್ರಧಾನ ಕಚೇರಿಯನ್ನಾಗಿಸಲು ಮುಂದಾಗಿದೆ. ಈ ಹೊತ್ತಿನಲ್ಲೇ ಕರ್ನಾಟಕ ಕಂಪನಿಯೊಂದು ಅವರ ವಿರುದ್ಧ ಕಾನೂನು ಸಮರ ಸಾರಿದೆ.
ಏನಿದು ವಿವಾದ?
ಬೆಳಗಾವಿ ಮೂಲದ 'ಆಂಥ್ರೊಪಿಕ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್' ಕಂಪನಿ 2017ರಲ್ಲಿ ಸ್ಥಾಪನೆಗೊಂಡಿತ್ತು. ಆದರೆ, ಚಾಟ್‌ಜಿಪಿಟಿಗೆ ಪೈಪೋಟಿ ನೀಡುವ ಕ್ಲಾಡ್ ಎಐ ಅಭಿವೃದ್ಧಿಪಡಿಸಿರುವ ಅಮೆರಿಕದ 'ಆಂಥ್ರೊಪಿಕ್' ಕಂಪನಿ ಸ್ಥಾಪನೆಯಾಗಿದ್ದು 2021ರಲ್ಲಿ. ಆದರೆ, ಎರಡೂ ಕಂಪನಿಗಳ ಹೆಸರು ಒಂದೇ. ಹೀಗಾಗಿ ನಾವೇ ಮೊದಲು ಹಾಗೂ ಹೆಸರು ನನಗೆ ಸಿಗಬೇಕು ಎಂದು ಬೆಳಗಾವಿ ಮೂಲದ ಕಂಪನಿ ಮಾಲೀಕರು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಮೊಹಮ್ಮದ್ ಅಯಾಜ್ ಮುಲ್ಲಾ
ಈ ಕುರಿತು 'ದ ಫೆಡರಲ್ ಕರ್ನಾಟಕ' ದ ಜತೆ ಮಾತನಾಡಿದ ಕಂಪನಿಯ ಸಂಸ್ಥಾಪಕ ಮೊಹಮ್ಮದ್ ಅಯಾಜ್ ಮುಲ್ಲಾ "ನಾವು ಅವರಿಗಿಂತ ಮೊದಲು, ಅಂದರೆ 2017ರಿಂದಲೇ 'ಆಂಥ್ರೊಪಿಕ್' ಹೆಸರಿನಲ್ಲಿ ಕಾರ್ಯಾಚರಿಸುತ್ತಿದ್ದೇವೆ. ಆದರೆ ಅಮೆರಿಕದ ಕಂಪನಿಯು ಅದೇ ಹೆಸರಿನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರಿಂದ ನಮ್ಮ ಬ್ರ್ಯಾಂಡ್ ಮೌಲ್ಯಕ್ಕೆ ಧಕ್ಕೆಯಾಗಿದೆ ಮತ್ತು ಗ್ರಾಹಕರಲ್ಲಿ ಗೊಂದಲ ಮೂಡಿದೆ," ಎಂದು ಹೇಳಿದ್ದಾರೆ.
ಅಮೆರಿಕದ ಕಂಪನಿಯ ನಡೆವಳಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಮೆರಿಕದ ದೈತ್ಯ ಕಂಪನಿಯ ಅಬ್ಬರದಲ್ಲಿ ನಮ್ಮ ಕಂಪನಿಯು ತನ್ನ ಪ್ರಾಧಾನ್ಯತೆ ಕಳೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಕಾನೂನು ಹೋರಾಟಕ್ಕೆ ಇಳಿದಿದ್ದೇವೆ. ಆರಂಭದಲ್ಲಿ ನಾವು ಅಮೆರಿಕದಲ್ಲಿರುವ ಅವರ ಕೇಂದ್ರ ಕಚೇರಿಗೆ ನೋಟಿಸ್ ಕಳುಹಿಸಿದ್ದೆವು. ಇತ್ತೀಚೆಗೆ ಅವರು ಬೆಂಗಳೂರಿನಲ್ಲಿ ಕಚೇರಿ ತೆರೆದಿದ್ದರಿಂದ ಅಲ್ಲಿಗೂ ನೋಟಿಸ್ ರವಾನಿಸಾಗಿದೆ. ಆದರೆ, ಅವರಿಂದ ಇಲ್ಲಿಯವರೆಗೆ ಯಾವುದೇ ಪ್ರತ್ಯುತ್ತರ ಬಂದಿಲ್ಲ. ಹೀಗಾಗಿ ನಾವು ತಕ್ಷಣವೇ ನ್ಯಾಯಾಲಯದಿಂದ 'ಎಕ್ಸ್ ಪಾರ್ಟಿ ಇಂಜೆಕ್ಷನ್' (Ex-parte injunction ) ತರಲು ನಿರ್ಧರಿಸಿದ್ದೇವೆ," ಎಂದು ಹೇಳಿದ್ದಾರೆ.
ಮೂರು ಪೇಟೆಂಟ್ ಹೊಂದಿರುವ ಕಂಪನಿ
ಆಂಥ್ರೊಪಿಕ್ ಸಾಫ್ಟ್‌ವೇರ್ ಪ್ರೈವೇಟ್ ಲಿಮಿಟೆಡ್' ತಾಂತ್ರಿಕವಾಗಿಯೂ ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ ಎಂಬುದು ಸಂಸ್ಥಾಪಕರ ವಾದ "ನಾವು ಹಲವು ವರ್ಷಗಳಿಂದ ಈ ಉದ್ಯಮದಲ್ಲಿದ್ದೇವೆ. ನಮ್ಮ ಕಂಪನಿಯ ಬಳಿ 'ಡ್ರೈವಿಂಗ್ ಸೇಫ್ಟಿ' (ಚಾಲನಾ ಸುರಕ್ಷತೆ) ತಂತ್ರಜ್ಞಾನದ ಬಗ್ಗೆ ಎರಡು ಹಾಗೂ 'ವೈಫೈ ಮಾನಿಟರಿಂಗ್ ಸಿಸ್ಟಮ್' ಬಗ್ಗೆ ಒಂದು ಸೇರಿ ಒಟ್ಟು ಮೂರು ಪೇಟೆಂಟ್‌ಗಳಿವೆ. ರಸ್ತೆ ಅಪಘಾತಗಳನ್ನು ತಡೆಯುವ 'ಕ್ವಿಕ್ ಟ್ಯೂನ್ಸ್' (QuickTunes) ನಂತಹ ಪರಿಹಾರಗಳನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ಇದಕ್ಕಾಗಿ ಕರ್ನಾಟಕ ಸರ್ಕಾರದಿಂದ ನಗದು ಬಹುಮಾನವನ್ನೂ ಪಡೆದಿದ್ದೇವೆ. ಇಷ್ಟೆಲ್ಲಾ ಇತಿಹಾಸವಿರುವ ನಮಗೆ, ತಡವಾಗಿ ಬಂದ ಎಐ ಕಂಪನಿಯಿಂದಾಗಿ ಮಾರುಕಟ್ಟೆಯಲ್ಲಿ ಉಂಟು ಮಾಡುತ್ತಿದೆ," ಎಂದು ಮೊಹಮ್ಮದ್ ಅಯಾಜ್ ಮುಲ್ಲಾ ಹೇಳಿದ್ದಾರೆ.
ಅಸ್ತಿತ್ವದ ಪ್ರಶ್ನೆ
ತಮ್ಮದು anthropic.in ಎಂಬ ಡೊಮೇನ್ ಹೊಂದಿರುವ ಕಂಪನಿ. ಆದರೆ ಅಂತರ್ಜಾಲದಲ್ಲಿ ಯಾರೇ 'Anthropic' ಎಂದು ಹುಡುಕಾಟ ನಡೆಸಿದರೂ ಅಮೆರಿಕದ ಕಂಪನಿಯೇ (anthropic.com) ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಸ್ಥಳೀಯವಾಗಿ ನಾವು ಅದೃಶ್ಯರಾಗಿದ್ದೇವೆ ನಮ್ಮ ಗ್ರಾಹಕರು ಮತ್ತು ಹೊಸ ಉದ್ಯಮ ಅವಕಾಶಗಳ ಮೇಲೆ ಇದು ಗಂಭೀರ ಪರಿಣಾಮ ಬೀರಿದೆ ಎಂದು ಮುಲ್ಲಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮೊದಲ ಬಳಕೆಗಾಗಿ ಹೆಸರು ನನಗೆ ಸಿಗಬೇಕು ಹಾಗೂ ಆಗಿರುವ ನಷ್ಟಕ್ಕೆ 90 ಲಕ್ಷ ರೂಪಾಯಿ (10 ಸಾವಿರ ಡಾಲರ್) ಪರಿಹಾರ ನೀಡಬೇಕು ಎಂದು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.
ಕೋರ್ಟ್ ವಿಚಾರಣೆ
ದೂರು ದಾಖಲಿಸಿಕೊಂಡಿರುವ ಬೆಳಗಾವಿಯ ವಾಣಿಜ್ಯ ವಿಭಾಗದ ಜಿಲ್ಲಾ ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ಅಮೆರಿಕದ ಆಂಥ್ರೊಪಿಕ್ ಕಂಪನಿಗೆ ಸೂಚಿಸಿತ್ತು. ಆದರೆ ಫೆಬ್ರವರಿ 16ರಂದು ನಡೆದ ವಿಚಾರಣೆಗೆ ಕಂಪನಿಯ ಪ್ರತಿನಿಧಿಗಳು ಹಾಜರಾಗದ ಕಾರಣ, ಇದೀಗ ಮಾರ್ಚ್ 9ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದ್ದು, ಅಂದು ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
ಕಾನೂನು ತಜ್ಞರ ಅಭಿಪ್ರಾಯವೇನು?
'ದ ಫೆಡರಲ್ ಕರ್ನಾಟಕ'ದ ಜತೆಗೆ ಮಾತನಾಡಿದ ಎಲ್ಕೆ ಲಾ ಅಸೋಸಿಯೇಟ್‌ನ ವ್ಯಾಪಾರ ಕಾನೂನು ತಜ್ಞರಾದ ಸಿರಿ ಪಿ. ಅವರು ಪ್ರಕರಣದಲ್ಲಿ ಏನೆಲ್ಲ ಸಾಧ್ಯತೆಗಳಿಗೆ ಎಂಬುದಾಗಿ ವಿವರಿಸಿದ್ದಾರೆ. ಇಂಥ ಪ್ರಕರಣಗಳನ್ನು ಕಮರ್ಷಿಯಲ್ ಕೋರ್ಟ್‌ಗಳಲ್ಲಿ ವಿಚಾರಣೆ ನಡೆಸಲಾಗುತ್ತದೆ. ಸಾಮಾನ್ಯವಾಗಿ ಉದ್ಯಮ ವಿಚಾರಕ್ಕೆ ಬಂದಾಗ ಮೊದಲು ಅಸ್ತಿತ್ವದಲ್ಲಿ ಇರುವ ಕಂಪನಿಗಳಿಗೆ ಜಯ ಸಿಗುತ್ತದೆ. ಆದರೆ ವಿಚಾರಣೆಯ ವೇಳೆ ಕೋರ್ಟ್, ವಿವಾದಕ್ಕೆ ಕಾರಣವಾಗಿರುವ ಹೆಸರಿನಲ್ಲಿ ಬಳಸಿರುವ ಅಕ್ಷರಗಳು ಹಾಗೂ ಉಚ್ಛಾರಣೆಯನ್ನೂ ಗಮನಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.
ಪೂರಕ ದಾಖಲೆಗಳಾದ ಉದ್ಯಮ ಆರಂಭದ ಪತ್ರ, ತೆರಿಗೆ ಪಾವತಿ ಹಾಗೂ ಸೇವಾ ಒಪ್ಪಂದಗಳ ದಾಖಲೆಗಳನ್ನು ಗಮನಿಸಿ ಕೋರ್ಟ್ ತನ್ನ ತೀರ್ಪು ಪ್ರಕಟಿಸುತ್ತದೆ. ನೋಟಿಸ್ ನೀಡಿದ ಬಳಿಕವೂ ಕಂಪನಿಯು ವಿಚಾರಣೆಗೆ ದಾಖಲಾಗದೇ ಇದ್ದರೆ ಏಕಪಕ್ಷೀಯ ತಡೆಯಾಜ್ಞೆ ತರುವ ಅವಕಾಶವೂ ಉಂಟು ಎಂಬುದಾಗಿ ಅವರು ಹೇಳಿದ್ದಾರೆ.
ಕಮರ್ಷಿಯಲ್ ಕೋರ್ಟ್, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತನಕ ಈ ಪ್ರಕರಣವನ್ನು ಕೊಂಡೊಯ್ಯಲು ಸಾಧ್ಯ. ವಿಚಾರಣಾ ಕೋರ್ಟ್‌ನಲ್ಲಿ ಗರಿಷ್ಠ 6 ತಿಂಗಳ ಒಳಗೆ ಪ್ರಕರಣ ಇತ್ಯರ್ಥಗೊಳ್ಳಬಹುದು. ಒಂದು ವೇಳೆ ಕೋರ್ಟ್ ಅಮೆರಿಕದ ಕಂಪನಿಗೆ ಪರಿಹಾರ ಪಾವತಿ ಮಾಡಿ ಅಸ್ತಿತ್ವ ಮುಂದುವರಿಸಲು ಅವಕಾಶ ಕೊಟ್ಟರೆ ಅದನ್ನು ಪಾಲಿಸಬೇಕಾಗುತ್ತದೆ ಎಂಬುದಾಗಿ ಸಿರಿ ಅವರು ಸ್ಪಷ್ಟಪಡಿಸಿದ್ದಾರೆ.
ಭಾರತದ ಕೋರ್ಟ್‌ಗಳು ನೀಡುವ ಆದೇಶಗಳು ಭಾರತದ ವ್ಯಾಪ್ತಿಗೆ ಮಾತ್ರ ಸೀಮಿತ. ಅಂತಾರಾಷ್ಟ್ರಿಯ ಮಟ್ಟದಲ್ಲಾದರೆ ಜಿನೀವಾದಲ್ಲಿ ಇತ್ಯರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

