ನಾನು ಮಾಡುತ್ತಿರುವ ಸಿನೆಮಾಗಳ ಬಗ್ಗೆ ನನಗೆ ಅತೀವ ಹೆಮ್ಮೆಯಿದೆ. ಅವು ದೊಡ್ಡ ಸಂಭಾವನೆ ಅಥವಾ ಬ್ಯಾಂಕ್ ಬ್ಯಾಲೆನ್ಸ್ ತಂದುಕೊಡದಿರಬಹುದು. ಅದಕ್ಕಾಗಿ ರಾಜಿ ಮಾಡಿಕೊಳ್ಳಲು ಸಿದ್ಧಳಿದ್ದೇನೆ.
ಒಂದು ಸಂಗತಿಯು ತಮಗೆ ಎಷ್ಟರಮಟ್ಟಿಗೆ ಆಪ್ತವಾಗಿದೆ ಎನ್ನುವುದರ ಆಧಾರದಲ್ಲಿ ಜನರ ನೈತಿಕತೆಯಲ್ಲಿ ಏರುಪೇರಾಗುವ ಈಗಿನ ಕಾಲಘಟ್ಟದಲ್ಲಿ ಅನುಭವ್ ಸಿನ್ಹಾ ಅವರ ʼಅಸ್ಸಿʼ ಚಿತ್ರದ ವಕೀಲೆ ರಾವಿಯ ಪಾತ್ರ ನಮ್ಮ ಮನಸ್ಸಿನಲ್ಲಿ ಚಿಂತನೆಗೆ ಗ್ರಾಸ ಒದಗಿಸುತ್ತದೆ. ಇಂತಹುದೊಂದು ಪ್ರಮುಖ ಪಾತ್ರದಲ್ಲಿ ತಾಪ್ಸಿ ಪನ್ನು ಅವರು ಒಬ್ಬ ವ್ಯಕ್ತಿಗಿರುವ ತಾಕತ್ತು ಮತ್ತು ಮೃದುತ್ವದ ಶೇಡ್ಗಳನ್ನು ಸಮಪ್ರಮಾಣದಲ್ಲಿ ಅದ್ಭುತವಾಗಿ ನಿರೂಪಿಸಿದ್ದಾರೆ.
ಶಿಕ್ಷಕಿ ಪರಿಮಾ (ಕನಿ ಕುಸ್ರುತಿ) ಅವರ ಮೇಲೆ ಅತ್ಯಾಚಾರ ಎಸಗಿದ ಕಾಮುಕರಿಗೆ ಶಿಕ್ಷೆ ಕೊಡಿಸಲು ಹೋರಾಡುವ ಒಬ್ಬ ಸರ್ಕಾರಿ ಅಭಿಯೋಜಕಿಯ ಸುತ್ತ ಈ ಸಿನಿಮಾ ಸಾಗುತ್ತದೆ. ಸಾಕಷ್ಟು ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿರುವ ಆಕೆ, ಯಾವುದೇ ಕಾರಣಕ್ಕೂ ಅದರಿಂದ ಹಿಂದೆಕ್ಕೆ ಹೆಜ್ಜೆಯಿಡಲು ಸಿದ್ಧಳಿರುವುದಿಲ್ಲ. ಏಕೆಂದರೆ, ಒಮ್ಮೆ ತಲೆಬಾಗಿದರೆ (ರಾಜಿ ಮಾಡಿಕೊಂಡರೆ) ಮತ್ತೆ ಮೊದಲಿನಂತೆಯೇ ಇರಲು ಸಾಧ್ಯವಿಲ್ಲ ಎಂಬುದು ಆಕೆಯ ನಂಬಿಕೆ.
ಸಿನಿಮಾದ ಕೊನೆಯ ದೃಶ್ಯಗಳಲ್ಲಿ ತಾಪ್ಸಿ ಪನ್ನು ಅವರು ರಾವಿ ಪಾತ್ರವನ್ನು ಅತ್ಯಂತ ಉತ್ಕಟವಾದ ರೀತಿಯಲ್ಲಿ ನಿರ್ವಹಿಸಿದ್ದಾರೆ. ಅವರೊಳಗಿನ ಆಕ್ರೋಶ ನಮ್ಮನ್ನು ನೇರವಾಗಿ ತಟ್ಟುತ್ತದೆ; ಕಣ್ಣೀರು ಕೆನ್ನೆಯ ಮೇಲೆ ಉರುಳದಂತೆ ತಡೆಯಲು ಅವರು ಪಡುವ ಆ ತೀವ್ರವಾದ ಹೋರಾಟ ನಮ್ಮನ್ನು ನಾಟುತ್ತದೆ.
2010ರಲ್ಲಿ ತೆಲುಗಿನ 'ಝುಮ್ಮಂದಿ ನಾದಂ' ಚಿತ್ರದ ಮೂಲಕ ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ, ನಂತರ 2011ರಲ್ಲಿ ವೆಟ್ರಿಮಾರನ್ ಅವರ ಸಂಪೂರ್ಣ ಭಿನ್ನವಾದ 'ಆಡುಕಳಂ' ಚಿತ್ರದಲ್ಲಿ ನಟಿಸಿದ ತಾಪ್ಸಿ ಪನ್ನು ಇಂದು ಏರಿದ ಎತ್ತರ ಆಶ್ಚರ್ಯವೇನಲ್ಲ ಅವರು ಕೆಲವು ನಿಯಮಗಳನ್ನು ಪಾಲಿಸಿದ್ದಾರೆ, ಇನ್ನು ಕೆಲವು ನಿಯಮಗಳನ್ನು ತಾವೇ ರೂಪಿಸಿದ್ದಾರೆ, ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಹಾದಿಯನ್ನು ಕಂಡುಕೊಂಡವರಲ್ಲಿ ಒಬ್ಬರು. ಜೊತೆಗೆ ಅನೇಕ ಹೆಮ್ಮೆಪಡುವಂತಹ ಸಿನಿಮಾಗಳನ್ನು ನೀಡಿದ್ದಾರೆ.
ಒಂದು ಸಂದರ್ಶನದಲ್ಲಿ, ತಾಪ್ಸಿ ಅವರು ನಿರ್ದೇಶಕ ಅನುಭವ್ ಸಿನ್ಹಾ ಅವರೊಂದಿಗಿನ ತಮ್ಮ ಸೃಜನಶೀಲ ಒಡನಾಟದ ಬಗ್ಗೆ ಮತ್ತು ಮಹಿಳಾ ಪ್ರಧಾನ ಚಿತ್ರಗಳಿಗೆ ಪ್ರೇಕ್ಷಕರ ಬೆಂಬಲ ಯಾಕೆ ಅಗತ್ಯ ಎಂಬುದರ ಕುರಿತು ಮಾತನಾಡಿದ್ದಾರೆ. ಅದರ ಆಯ್ದ ಭಾಗಗಳು ಇಲ್ಲಿವೆ:
ಈ ಹಿಂದೆ ನೀವು ಅನುಭವ್ ಸಿನ್ಹಾ ಅವರ ʼಮುಲ್ಕ್ʼ (2018) ಚಿತ್ರದಲ್ಲಿ ವಕೀಲೆ ಪಾತ್ರ ನಿರ್ವಹಿಸಿದವರು. ಆದರೆ ʼರಾವಿʼ ಪಾತ್ರ ತುಂಬ ಭಿನ್ನವಾಗಿ ಕಾಣುತ್ತದೆ. ಇದಕ್ಕೆ ಹೇಗೆ ಸಿದ್ಧತೆ ಮಾಡಿಕೊಂಡಿರಿ?
ಮುಲ್ಕ್ ಚಿತ್ರದ ಆರತಿ ಪಾತ್ರಕ್ಕೂ ಈ ರಾವಿ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿರಬೇಕು ಎಂಬ ಬಗ್ಗೆ ನಾವು ಹೆಚ್ಚು ಎಚ್ಚರಿಕೆಯಿಂದ ಇದ್ದೆವು. ಅಲ್ಲಿ ಆರತಿ ತನ್ನ ಕುಟುಂಬವನ್ನು ರಕ್ಷಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ಇರುತ್ತಾಳೆ. ಅಲ್ಲಿರುವುದು ವೈಯಕ್ತಿಕ ಭಾವನೆಗಳು. ಆದರೆ ʼಅಸ್ಸಿʼ ಚಿತ್ರದಲ್ಲಿ ರಾವಿ ಒಬ್ಬ ಪಬ್ಲಿಕ್ ಪ್ರಾಸಿಕ್ಯೂಟರ್. ಆಕೆ ಇಂತಹ ಪ್ರಕರಣಗಳನ್ನು ಪ್ರತಿದಿನವೂ ನೋಡುತ್ತಿರುತ್ತಾಳೆ. ಹಾಗಾಗಿ ಒಬ್ಬಾಕೆ ಎಷ್ಟು ತಾನೇ ಸಂವೇದನಾಶೀಲತೆ ಅಥವಾ ವೈಯಕ್ತಿಕ ಆಸಕ್ತಿಯನ್ನು ತೋರಿಸಲು ಸಾಧ್ಯ? ಅದಕ್ಕಾಗಿಯೇ ನಾನು ಈ ಪಾತ್ರವನ್ನು ತಕ್ಕಮಟ್ಟಿಗೆ ಭಾವನಾರಹಿತವಾಗಿ, ನ್ಯಾಯಾಲಯದ ಗೊಂದಲದ ನಡುವೆಯೂ ಇದೂ ಕೂಡ ಒಂದು ಸಾಧಾರಣ ಕೇಸ್ ಅನ್ನುವ ಹಾಗೆ ಬಿಂಬಿಸಬೇಕಾಯಿತು. ಇಲ್ಲಿ ಆರೋಪಿಗಳಿಗೆ ಯಾರೋ ಸಹಾಯ ಮಾಡುತ್ತಿದ್ದಾರೆ ಎಂಬ ಸಂಗತಿ ರಾವಿ ಅರಿವಿಗೆ ಬಂದಾಗ ಮಾತ್ರ ಪರಿಸ್ಥಿತಿ ಬದಲಾಗುತ್ತದೆ.
ತೆರೆಯ ಮೇಲೆ ನೀವು ಪ್ರದರ್ಶಿಸುವ ಗಟ್ಟಿತನ ಮತ್ತು ಮೃದುತ್ವದ ಮಿಶ್ರಣವಿದೆಯಲ್ಲ ಅದು ಮಾನಸಿಕವಾಗಿ ನಿಮ್ಮನ್ನು ಎಷ್ಟರಮಟ್ಟಿಗೆ ದಣಿಸುತ್ತದೆ?
ಶೂಟಿಂಗ್ ನಂತರದ ಒತ್ತಡ ಮತ್ತು ನೋವನ್ನು ನಿಭಾಯಿಸುವ ವಿಷಯದಲ್ಲಿ ನಾನೀಗ ಹಿಂದಿಗಿಂತ ಹೆಚ್ಚು ಪಳಗಿದ್ದೇನೆ. ಆದರೆ ಶೂಟಿಂಗ್ ನಡೆಯುತ್ತಿರುವಾಗ ಇದನ್ನು ನಿಭಾಯಿಸಲು ನನ್ನ ಬಳಿ ಯಾವುದೇ ನಿರ್ದಿಷ್ಟ ಅಥವಾ ಆರೋಗ್ಯಕರವಾದ ಪದ್ಧತಿ ಇಲ್ಲ. ಯಾಕೆಂದರೆ ನಾನು ತರಬೇತಿ ಪಡೆದ ನಟಿ ಅಲ್ಲ. ನಾನು ಏನನ್ನೇ ಮಾಡಿದರೂ ಅದು ಸಹಜವಾಗಿರಬೇಕು, ಪ್ರಾಮಾಣಿಕವಾಗಿರಬೇಕು ಎಂದು ಬಯಸುತ್ತೇನೆ. ಅದಕ್ಕಾಗಿ ನಾನು ಮಾನಸಿಕ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಇದು ಸಹಜವಾಗಿ ನನ್ನ ಮೇಲೆ ಪ್ರಭಾವ ಬೀರುತ್ತದೆ. ಪ್ರತಿಯೊಂದು ಚಿತ್ರ ಮುಗಿದ ಬಳಿಕವೂ ನಾನು ಮೊದಲಿನಂತೆ ಇರುವುದಿಲ್ಲ. ನನ್ನಲ್ಲಿ ಒಂದಷ್ಟು ಬದಲಾವಣೆಗಳು ಉಂಟಾಗುತ್ತವೆ. ಜಗತ್ತು ಯಾವತ್ತೂ ನೀವು ಪೂರ್ತಿ ಕುಸಿದುಹೋಗಬೇಕು ಅಥವಾ ಕಲ್ಲಿನಂತೆ ಗಟ್ಟಿಯಾಗಿರಬೇಕು ಎಂದು ಬಯಸುತ್ತದೆ. ಆದರೆ ಅದು ನನಗೆ ಸರಿಹೊಂಡುವುದಿಲ್ಲ. ಅಂತಹ ಸೂಕ್ಷ್ಮತೆಯನ್ನು ನಾನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಕಾಪಾಡಿಕೊಂಡು ಬಂದಿದ್ದೇನೆ.
ಇಂತಹ ವಿಷಯಗಳು ನನ್ನ ಬಳಿ ಬಂದಾಗ ಮೊದಲು ಅವು ನನ್ನ ಮೃದು ಸ್ವಭಾವಕ್ಕೆ ಕನೆಕ್ಟ್ ಆಗುತ್ತವೆ. ಆದರೆ ನಾನು ಹೊರನೋಟಕ್ಕೆ ಕಠಿಣವಾದ ಮುಖವಾಡವನ್ನು ತೊಟ್ಟಿರುತ್ತೇನೆ. ಇದನ್ನು ಅನೇಕ ಮಹಿಳೆಯರು ಸುಲಭವಾಗಿ ಗುರುತಿಸಬಲ್ಲರು. ಯಾಕೆಂದರೆ ನಾವು ನಮ್ಮಲ್ಲಿರುವ ಸೂಕ್ಷ್ಮ ಸ್ವಭಾವವನ್ನು ಕಳೆದುಕೊಂಡರೆ ಮನುಷ್ಯರಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ. ಸಿನೆಮಾಗಳಲ್ಲಿ ನಾನು ಸಾಮಾನ್ಯವಾಗಿ ಈ ಗಟ್ಟಿತನ ಮತ್ತು ಸೂಕ್ಷ್ಮ ಸ್ವಭಾವದ ನಡುವೆ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನ ಮಾಡುತ್ತೇನೆ. ಆಗ ಮಾತ್ರ ಆ ಪಾತ್ರ ನೈಜವಾಗಿ ಕಾಣಲು ಸಾಧ್ಯ.
ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ನೀವು ಹೆಮ್ಮೆಪಡುವಂತಹ ಸಿನೆಮಾಗಳನ್ನು ಮಾಡಿದ್ದೀರಿ. ಈ ವೃತ್ತಿ ಜೀವನವನ್ನು ಆರಂಭಿಸಿದಾಗ ಒಂದು ವಿಭಿನ್ನ ಶೈಲಿಯ ಸಿನೆಮಾಗಳ ಪಾಲಿಗೆ ನೀವೇ ಗುರುತಾಗುತ್ತೀರಿ ಎಂದು ಭಾವಿಸಿದ್ದಿದೆಯೇ?
ನಾನು ನಟಿಯಾಗುತ್ತೇನೆ ಎಂಬ ಸಣ್ಣ ಸುಳಿವು ಕೂಡ ಇರಲಿಲ್ಲ. ಚಿತ್ರೀಕರಣದ ಸೆಟ್ನಲ್ಲಿಯೇ ಎಲ್ಲವನ್ನೂ ಕಲಿಯುತ್ತ ಹೋದೆ. ಕಲಿಕೆಗೆ ಅದಕ್ಕಿಂತ ಕಠಿಣ ಹಾದಿ ಇನ್ನೊಂದಿಲ್ಲ. ಈ ವೃತ್ತಿಯ ಅಡೆತಡೆಗಳನ್ನು ಎದುರಿಸಲು ನಾನು ಸಿದ್ಧತೆ ಮಾಡಿಕೊಂಡಿರಲಿಲ್ಲ. ಅದೇನಾದರೂ ನನಗೆ ಮೊದಲೇ ತಿಳಿದಿದ್ದಾರೆ ನನ್ನ ನಾನು ಬಗ್ಗೆಯೇ ಇಷ್ಟೊಂದು ಕಠಿಣವಾಗಿ ನಡೆದುಕೊಳ್ಳುತ್ತಿರಲಿವೇನೋ ಅನ್ನಿಸುತ್ತದೆ. ಕಾಲ ಸರಿಯುತ್ತ ಹೋದ ಹಾಗೆ ನನಗೆ ಅರ್ಥವಾದ ಸಂಗತಿ ಏನೇಂದರೆ ಹೃದಯ ಮತ್ತು ಮನಸ್ಸು ಒಂದೇ ಲಯದಲ್ಲಿದ್ದಾಗ ಮಾತ್ರ ಅತ್ಯುತ್ತಮ ಕೆಲಸ ಮಾಡಬಲ್ಲೆ ಎಂದು. ಅಂದರೆ ನಾನು ಕ್ರಮಿಸುವ ಹಾದಿ, ನನ್ನ ಇಮೇಜ್, ವ್ಯಕ್ತಿತ್ವ, ಸಂದರ್ಶನಗಳು ಮತ್ತು ತೋರಿಕೆಗಳು ಎಲ್ಲವೂ ಒಂದಕ್ಕೊಂದು ಪೂರಕವಾಗಿರಬೇಕು. ಸಿನೆಮಾದಲ್ಲಿ ಒಂದು ರೀತಿಯ ಪಾತ್ರಗಳನ್ನು ಆಯ್ಕೆಮಾಡಿಕೊಂಡು ಸಿನೆಮಾದ ಹೊರಗೆ ಅದಕ್ಕೆ ವ್ಯತಿರಿಕ್ತವಾದ ವ್ಯಕ್ತಿಯಾಗಿರುವುದು ನನ್ನಿಂದ ಆಗದ ಕೆಲಸ. ನನ್ನ ಸಿನೆಮಾಗಳ ಬಗ್ಗೆ ನನಗೆ ಅತೀವವಾದ ಹೆಮ್ಮೆಯಿದೆ. ಅವು ನನಗೆ ದೊಡ್ಡ ಮೊತ್ತದ ಸಂಭಾವನೆ ಅಥವಾ ಬ್ಯಾಂಕ್ ಬ್ಯಾಲೆನ್ಸ್ ತಂದುಕೊಡಬೇಕು ಎಂದೇನೂ ಇಲ್ಲ. ಅದಕ್ಕಾಗಿ ನಾನು ರಾಜಿ ಮಾಡಿಕೊಳ್ಳಲು ಸಿದ್ಧಳಿದ್ದೇನೆ. ಹಾಗಾಗಿ ನಾನೀಗ ನೆಮ್ಮದಿಯಿಂದ ಇದ್ದೇನೆ. ಈ ʼನೆಮ್ಮದಿʼ ಎನ್ನುವುದು ಇಂದಿನ ದಿನಗಳಲ್ಲಿ ಅತ್ಯಂತ ಕಡಿಮೆ ಮೌಲ್ಯದ ಐಷಾರಾಮಿ ವಸ್ತು.
ಅಸ್ಸಿ, ಪಿಂಕ್ ಮತ್ತು ತಪ್ಪಡ್‌ನಂತಹ ಸಿನೆಮಾಗಳನ್ನು ಆಕ್ಟಿವಿಸ್ಟ್ ಸಿನೆಮಾಗಳೆಂದು ವರ್ಗೀಕರಿಸಲಾಗುತ್ತದೆ. ಆದರೆ ಈ ಆಕ್ಟಿವಿಸಮ್ಮಿನಿಂದಷ್ಟೇ ದೇಶದ ಜೀವಂತಿಕೆ ಉಳಿದುಕೊಂಡಿದೆ ಎಂಬ ಸಣ್ಣ ಅರಿವು ಕೂಡ ಜನರಿಗೆ ಇರುವುದಿಲ್ಲ…
ಪ್ರತಿಯೊಂದನ್ನೂ ಕೂಡ ಒಂದು ನಿರ್ದಿಷ್ಟ ವರ್ಗಕ್ಕೆ ಸೀಮಿತಗೊಳಿಸಿ ನೋಡುವ ಮಾನವ ಸ್ವಭಾವ ನನಗೆ ಅರ್ಥವಾಗುತ್ತದೆ. ಯಾಕೆಂದರೆ ನಾವಿರುವುದೇ ಹಾಗೆ, ಯಾವುದನ್ನಾದರೂ ವರ್ಗೀಕರಿಸಿ ನೋಡದೇ ಇದ್ದರೆ ನಮಗೆ ಅಸಮಾಧಾನವಾಗುತ್ತದೆ. ಯಾರು ಎಂತಹ ವ್ಯಕ್ತಿ ಎಂದು ಊಹಿಸಿಕೊಳ್ಳುವುದು ನಮಗೆ ಇಷ್ಟ. ಯಾವುದನ್ನೇ ಆಗಲಿ, ಇದು ಕಮರ್ಷಿಯಲ್, ಇದು ಕಲಾತ್ಮಕ, ವಿಷಯಾಧಾರಿತ ಸಿನೆಮಾ ಎಂದು ಹಣೆಪಟ್ಟಿ ಕಟ್ಟುವುದು ನಮಗೆ ರೂಢಿಯಾಗಿದೆ. ಪ್ರತಿಯೊಂದು ಕಥೆಯೂ ನಮಗೆ ಏನನ್ನಾದರೂ ನೀಡುತ್ತದೆ. ಆದರೆ ಇಂತಹ ವರ್ಗೀಕರಣ ಹೆಚ್ಚಾಗಿ ನಡೆಯುವುದು ಮಹಿಳಾ ಪ್ರಧಾನ ಚಿತ್ರಗಳ ವಿಚಾರದಲ್ಲಿ. ನಾವು ತಕ್ಷಣ ಅವುಗಳಿಗೆ ಒಂದು ಟ್ಯಾಗ್ ಹಚ್ಚಿಬಿಡುತ್ತೇವೆ.
ಅನುಭವ್ ಸಿನ್ಹಾ ಅವರ ಜೊತೆಗಿನ ನಿಮ್ಮ ಒಡನಾಟದಿಂದ ಅತ್ಯುತ್ತಮ ಸಿನಿಮೀಯ ಕ್ಷಣಗಳು ದಕ್ಕಿವೆ. ಅವರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾರೆ? ಒಬ್ಬ ಕಲಾವಿದನಿಗೆ ನಿರ್ದೇಶಕನ ದೃಷ್ಟಿಕೋನವನ್ನು ಹಂಚಿಕೊಳ್ಳುವುದು ಎಷ್ಟು ಮುಖ್ಯ?
ಅನುಭವ್ ಸಿನ್ಹಾ ಆಯ್ಕೆ ಮಾಡುವ ವಿಷಯಗಳು ಮತ್ತು ಅವರು ನನಗೆ ನೀಡುವ ಸಾಹಿತ್ಯವೇ ಅರ್ಧದಷ್ಟು ಕೆಲಸ ಮುಗಿಸಿಬಿಡುತ್ತವೆ. ಅವರ ವಿಷಯಗಳಿಗೆ ನಾನು ಸುಲಭವಾಗಿ ಸ್ಪಂದಿಸುವುದರಿಂದ, ನನ್ನ ಸಂಪೂರ್ಣ ಶ್ರಮವನ್ನು ಅವುಗಳಲ್ಲಿ ತೊಡಗಿಸುತ್ತೇನೆ; ಅದರ ಫಲವಾಗಿ ತೆರೆಯ ಮೇಲೆ ಒಂದು ವಿಶೇಷ ಅನುಭೂತಿ ಮೂಡಿಬಿಡುತ್ತದೆ. ನಾನು ಸಂಪೂರ್ಣವಾಗಿ 'ನಿರ್ದೇಶಕರ ನಟಿ'. ನಾನು ಮಾನಿಟರ್ಗಳನ್ನು ನೋಡುವುದಿಲ್ಲ ಮತ್ತು ಒಂದು ಮಿತಿಗಿಂತ ಹೆಚ್ಚು ಪ್ರಶ್ನೆಗಳನ್ನು ಕೇಳುವುದಿಲ್ಲ. ಒಂದು ದೃಶ್ಯವು ಅವರಿಗೆ ತೃಪ್ತಿ ನೀಡಿದೆ ಎಂದು ನಿರ್ದೇಶಕರು ಹೇಳಿದರೆ, ಅದನ್ನು ಅಚ್ಚುಕಟ್ಟಾಗಿ ನೀಡುವುದು ಕಲಾವಿದನಾಗಿ ನನ್ನ ಕರ್ತವ್ಯ. ಏಕೆಂದರೆ ಒಮ್ಮೆ ನಾನು ಸಿನಿಮಾವನ್ನು ಒಪ್ಪಿಕೊಂಡ ಮೇಲೆ, ಅವರ ದೃಷ್ಟಿಕೋನಕ್ಕೆ ಸಮ್ಮತಿ ಸೂಚಿಸಿದ್ದೇನೆ ಎಂದು ಅರ್ಥ. ನನ್ನ ಪಾತ್ರಗಳ ಮೂಲಕ ನಾನು ಬೀರುವ ಪ್ರಭಾವದ ಸಂಪೂರ್ಣ ಶ್ರೇಯಸ್ಸು ನಿರ್ದೇಶಕರಿಗೆ ಸಲ್ಲುತ್ತದೆ. ಸಿನಿಮಾ ಎಂಬುದು ನಿರ್ದೇಶಕರ ಮಾಧ್ಯಮ; ನೀವು ಅವರ ಆಲೋಚನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ, ಚಿತ್ರವು ದಿಕ್ಕಿಲ್ಲದಂತಾಗುತ್ತದೆ.
ನಾವು ಮಹಿಳಾ ಪ್ರಧಾನ ಸಿನಿಮಾಗಳು, ಬಾಕ್ಸ್ ಆಫೀಸ್ ಗಳಿಕೆ ಮತ್ತು ಚಿತ್ರರಂಗದ ಪರಿಸರ ಬಗ್ಗೆ ಮಾತನಾಡುತ್ತೇವೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಗೆಲ್ಲುವುದು ಒಬ್ಬ ಕಲಾವಿದರಿಗೆ ಎಷ್ಟು ಮುಖ್ಯ?
ಬಾಕ್ಸ್ ಆಫೀಸ್ ಮುಖ್ಯವಾಗುವುದು ನನ್ನ ಕಲೆ ಚೆನ್ನಾಗಿದೆ ಎಂದು ಸಾಬೀತುಪಡಿಸುವುದಕ್ಕಲ್ಲ, ಬದಲಿಗೆ ಇಂತಹ ಸಿನಿಮಾಗಳು ನಿರಂತರವಾಗಿ ನಿರ್ಮಾಣವಾಗಲಿ ಎಂಬ ಕಾರಣಕ್ಕಾಗಿ ಮಾತ್ರ. ಸಿನಿಮಾ ನಿರ್ಮಾಣಕ್ಕೆ ಹಣ ಬೇಕು. ನೀವು ಒಂದು ಅಥವಾ ಎರಡು ಸಿನಿಮಾಗಳಿಗಾಗಿ ನಿಮ್ಮ ಸಂಭಾವನೆಯನ್ನು ಬಿಟ್ಟುಕೊಡಬಹುದು, ಆದರೆ ಪ್ರತಿಯೊಬ್ಬರಿಗೂ ಜೀವನ ನಡೆಸಲು ಹಣದ ಅಗತ್ಯವಿರುತ್ತದೆ. ಮಹಿಳಾ ಪ್ರಧಾನ ಚಿತ್ರಗಳ ವ್ಯವಹಾರದ ವಿಷಯಕ್ಕೆ ಬಂದರೆ ಪರಿಸ್ಥಿತಿ ಅಷ್ಟೇನೂ ನ್ಯಾಯಯುತವಾಗಿಲ್ಲ. ಕೆಲವು ಅಪವಾದಗಳನ್ನು ಹೊರತುಪಡಿಸಿದರೆ, ಹತ್ತರಲ್ಲಿ ಎರಡು ಸಿನಿಮಾಗಳು ಮಾತ್ರ ಯಶಸ್ವಿಯಾಗಬಹುದು. ಹಾಗಾದರೆ ಉಳಿದವುಗಳು ಚೆನ್ನಾಗಿರಲಿಲ್ಲವೇ? ಅವು ಬಹುಶಃ ಸರಾಸರಿಗಿಂತ ಉತ್ತಮವಾಗಿಯೇ ಇದ್ದವು, ಆದರೆ ಅವುಗಳಿಗೆ ಸಿಗಬೇಕಾದ ಸೂಕ್ತ ಪ್ರೋತ್ಸಾಹ ಸಿಗಲಿಲ್ಲ ಅಷ್ಟೆ.
ನಾವು ಇದರ ಬಗ್ಗೆ ಪದೇ ಪದೇ ಚರ್ಚಿಸುತ್ತಲೇ ಇರುತ್ತೇವೆ. ಸಾಮಾನ್ಯವಾಗಿ ಮನೆಯಲ್ಲಿ ಯಾವ ಸಿನಿಮಾ ನೋಡಬೇಕು ಎಂದು ನಿರ್ಧರಿಸುವುದು ಮನೆಯ ಪುರುಷನೇ ಆಗಿರುತ್ತಾನೆ; ಅವನು ಸಹಜವಾಗಿಯೇ ನಾಯಕ ಪ್ರಧಾನ ಚಿತ್ರವನ್ನೇ ಆರಿಸಿಕೊಳ್ಳುತ್ತಾನೆ. ಕೆಲವರು ಒಳ್ಳೆಯ ವಿಮರ್ಶೆ ಬರುವವರೆಗೂ ಮಹಿಳಾ ಪ್ರಧಾನ ಚಿತ್ರಗಳಿಗೆ ಹೋಗಲು ಸಿದ್ಧರಿರುವುದಿಲ್ಲ. ಬೇರೆ ಸಾಮಾನ್ಯ ಸಿನಿಮಾಗಳಿಗೆ ಮೊದಲೇ ಟಿಕೆಟ್ ಬುಕ್ ಮಾಡುವವರು, ದೊಡ್ಡ ಮಹಿಳಾ ತಾರೆಯ ಚಿತ್ರವಿದ್ದರೂ ಮುಂಗಡ ಬುಕ್ಕಿಂಗ್ ಮಾಡಲು ಹಿಂಜರಿಯುತ್ತಾರೆ. ಈಗಂತೂ ಒಟಿಟಿ ಸಂಸ್ಥೆಗಳು ಕೂಡ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಚೆನ್ನಾಗಿ ಓಡಿದರೆ ಮಾತ್ರ ಅದನ್ನು ಕೊಳ್ಳಲು ಆಸಕ್ತಿ ತೋರಿಸುತ್ತಿವೆ. ಹಾಗಾದರೆ ಇಂತಹ ಸಿನಿಮಾಗಳ ಭವಿಷ್ಯವೇನು? ಕೊನೆಗೆ, ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಸಿನಿಮಾಗಳ ಗುಣಮಟ್ಟ ಮತ್ತು ವೈವಿಧ್ಯತೆ ಮಾಯವಾಗುತ್ತಾ ಹೋಗುತ್ತದೆ. ನಿಜ ಹೇಳಬೇಕೆಂದರೆ, ಚಿತ್ರರಂಗದ ಈ ಕುಸಿತಕ್ಕೆ ಪ್ರೇಕ್ಷಕರೂ ಅಷ್ಟೇ ಜವಾಬ್ದಾರರು; ಯಾಕೆಂದರೆ ಅವರು ಇಂತಹ ಸಿನಿಮಾಗಳನ್ನು ನೋಡುವುದನ್ನು ಬಿಟ್ಟರು, ಆದ್ದರಿಂದ ಚಿತ್ರರಂಗವೂ ಕೂಡ ಅವುಗಳನ್ನು ನಿರ್ಮಿಸುವುದನ್ನು ನಿಲ್ಲಿಸಿತು.
ನೀವು ನೇರ ನುಡಿಗೆ ಹೆಸರಾದವರು. ಸೋಷಿಯಲ್ ಮೀಡಿಯಾದಲ್ಲಿ ನಡೆಯುವ ಟೀಕೆಗಳು ಮತ್ತು ಈ 'ಕ್ಯಾನ್ಸಲ್ ಕಲ್ಚರ್' ನಿಮ್ಮ ಮೇಲೆ ಏನಾದರೂ ಪರಿಣಾಮ ಬೀರಿದೆಯೇ?
ನಾನು ನಾನಾಗಿಯೇ ಇರಲು ಬಯಸುತ್ತೇನೆ, ಹಾಗಾಗಿಯೇ ನಾನು ಸೋಷಿಯಲ್ ಮೀಡಿಯಾದಿಂದ ಸಾಕಷ್ಟು ದೂರ. ಇದು ನನ್ನೊಳಗಿನ ಮೃದುತ್ವವನ್ನು ಕಾಪಾಡಿಕೊಳ್ಳಲು ಮತ್ತು ನಾನು ನಂಬಿದ ತತ್ವಗಳಿಂದ ನಾನು ದೂರ ಸರಿಯದಂತೆ ನೋಡಿಕೊಳ್ಳಲು ಮಾಡಿದ ಒಂದು ಪ್ರಯತ್ನ. ಟ್ರೋಲ್ಗಳು, ಜನರ ತೀರ್ಪುಗಳು ಮತ್ತು ಈ ಕ್ಯಾನ್ಸಲ್ ಕಲ್ಚರ್ನಿಂದ ಪ್ರಭಾವಿತಳಾಗಬಾರದು ಎಂದು ನನ್ನನ್ನು ನಾನು ಇನ್ನಷ್ಟು ಕಠಿಣವಾಗಿ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆ; ಆ ಸಂದರ್ಭದಲ್ಲಿ ನಾನು ಕಳೆದುಹೋಗುತ್ತಿದ್ದೇನೆ ಎಂಬ ಭಾವನೆ ಕಾಡತೊಡಗಿತ್ತು. ಏಕೆಂದರೆ, ನನ್ನನ್ನು ನಾನು ಗಟ್ಟಿಗೊಳಿಸುವ ಆ ಪ್ರಯತ್ನದಲ್ಲಿ, ನಾನು ನಂಬುವ ವಿಷಯಗಳ ಬಗ್ಗೆ ಹೊಂದಿದ್ದ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತಿದ್ದೆ. ನಾನು ಮೊದಲಿಗೆ ಒಬ್ಬ ಮನುಷ್ಯಳು. ಕರುಣೆ, ದಯೆ ಮತ್ತು ಮೃದುತ್ವದಂತಹ ಮೂಲಭೂತ ಗುಣಗಳೇ ಮಾಯವಾಗುತ್ತಿದ್ದವು. ಈಗಲೂ ನಾನು ನನ್ನ ಅನಿಸಿಕೆಗಳನ್ನು ಹೇಳುತ್ತೇನೆ, ಆದರೆ ಜನರಿಗೆ ಯಾವಾಗ ನನ್ನನ್ನು ತೆರೆದುಕೊಳ್ಳಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ. ನಾನು ಯಾವಾಗಲೂ ಎಲ್ಲರಿಗೂ ಲಭ್ಯವಿರಲು ಅಥವಾ ದಿನದ 24 ಗಂಟೆಯೂ ಜಗತ್ತಿನ ಸಂಪರ್ಕದಲ್ಲಿರಲು ಬಯಸುವುದಿಲ್ಲ.
ಒಬ್ಬ ಪಾರಿಮಾಳಿಗೆ ಏನಾಯಿತು ಎಂಬ ಕಾರಣಕ್ಕಿಂತ ಹೆಚ್ಚಾಗಿ, ಸಮಾಜವು ಹೇಗೆ ವಿಫಲವಾಗಿದೆ ಎಂಬ ಕಾರಣಕ್ಕೆ 'ಅಸ್ಸಿ' ಚಿತ್ರವು ನಮ್ಮೆಲ್ಲರ ಮನಸ್ಸನ್ನು ಭಾರವಾಗಿಸುತ್ತದೆ. ಕಥೆಯನ್ನು ಓದುವಾಗ ಮತ್ತು ನಂತರ ಅದನ್ನು ಪರದೆಯ ಮೇಲೆ ವೀಕ್ಷಿಸುವಾಗ ಅದು ನಿಮ್ಮ ಮೇಲೆ ಎಂತಹ ಪರಿಣಾಮ ಬೀರಿತು?
ನಾನು ಮತ್ತು ನನ್ನಂತಹ ಅನೇಕರು ನಾವು ವಾಸಿಸುತ್ತಿರುವ ಸಮಾಜದ ಬಗ್ಗೆ ಏನು ಅನುಭವಿಸುತ್ತೇವೆಯೋ, ಅದಕ್ಕೆ ಈ ಚಿತ್ರವು ಶಬ್ದ ಮತ್ತು ದೃಶ್ಯ ರೂಪವನ್ನು ನೀಡಿದೆ ಎಂದು ನಾನು ಭಾವಿಸುತ್ತೇನೆ. ಇದು ನಮ್ಮಲ್ಲಿ ಕಾಣೆಯಾಗಿರುವ 'ಕರುಣೆ'ಯ ಬಗ್ಗೆ ಮಾತನಾಡುತ್ತದೆ. ಇಂತಹ ವಿಷಯದ ಬಗ್ಗೆ ಮಾತನಾಡಿದ ಮೊದಲ ಸಿನಿಮಾ ಇದಲ್ಲದೇ ಇರಬಹುದು, ಆದರೆ ಇದು ನಿಮ್ಮನ್ನು ವಿಚಲಿತಗೊಳಿಸಲು ಕಾರಣವೆಂದರೆ, ಅದು ತೀರ್ಪು ಮತ್ತು ನ್ಯಾಯದ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದೆ. ಕೇವಲ ಶಿಕ್ಷೆ ನೀಡುವುದರಿಂದ ಇಂತಹ ಘಟನೆಗಳು ಮರುಕಳಿಸುವುದಿಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವೇ? 'ಅಸ್ಸಿ' ಚಿತ್ರವು ನಮ್ಮ ಮನೆಗಳನ್ನೇ ಪ್ರವೇಶಿಸಿರುವ ಕಹಿಸತ್ಯಕ್ಕೆ ಕನ್ನಡಿ ಹಿಡಿದಿದೆ. ನಾವು ಒಬ್ಬರನ್ನೊಬ್ಬರು ದೂಷಿಸುವುದನ್ನು ಬಿಟ್ಟು, ಜವಾಬ್ದಾರಿಗೆ ಹೆಗಲುಕೊಡಬೇಕು. ಸಿನಿಮಾ ಮುಗಿದ ನಂತರ ನಮ್ಮ ಮನಸ್ಸು ಯಾಕೆ ಅಷ್ಟು ಭಾರವಾಗುತ್ತದೆ ಎಂಬುದನ್ನು ನಾವೇ ಕಂಡುಕೊಳ್ಳಬೇಕು.
ಸಮಾನ ಸಿದ್ಧಾಂತ ಅಥವಾ ವಿಶ್ವದೃಷ್ಟಿಕೋನವನ್ನು ಹೊಂದಿರುವ ಸಹ-ನಟರೊಂದಿಗೆ ಕೆಲಸ ಮಾಡುವ ಬಗ್ಗೆ ಕೆಲವು ಮಾತುಗಳು. ಇದು ನಿಮಗೆ ಮುಕ್ತವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆಯೇ?
ಚಿತ್ರೀಕರಣದ ಸಮಯದಲ್ಲಿ ನಾನು ಈ ಬಗ್ಗೆ ಅಷ್ಟಾಗಿ ಯೋಚಿಸುವುದಿಲ್ಲ. ಬಹಳಷ್ಟು ಬಾರಿ, ಜನರ ಸಿದ್ಧಾಂತದ ಬಗ್ಗೆ ನನಗೆ ಸಹಮತವಿರಬಹುದು, ಆದರೆ ಅವರ ಜೀವನ ವಿಧಾನದ ಬಗ್ಗೆ ಇರಲಿಕ್ಕಿಲ್ಲ, ಅಥವಾ ಅದು ಉಲ್ಟಾ ಆಗಿರಬಹುದು. ಚಿತ್ರೀಕರಣದ ಸೆಟ್‌ನಲ್ಲಿ ಸಹ-ನಟರ ವೈಯಕ್ತಿಕ ವಿಚಾರಗಳಾಗಲಿ ಅಥವಾ ಅವರು ಎಂತಹವರು ಎಂಬುದರ ಬಗ್ಗೆಯಾಗಲಿ ನಾನು ತಲೆಕೆಡಿಸಿಕೊಳ್ಳುವುದು ಬಹಳ ಅಪರೂಪ.
ಅಲ್ಲಿ ನಾನು ಸ್ವಲ್ಪ ಡಿಟ್ಯಾಚ್ ಆಗಿಯೇ ಇರುತ್ತೇನೆ. ನಾನು ಹೆಚ್ಚಾಗಿ ನನ್ನ ನಿರ್ದೇಶಕರ ಜೊತೆ ಭಾವನಾತ್ಮಕವಾಗಿ ಸಂಪರ್ಕದಲ್ಲಿರುತ್ತೇನೆ, ಏಕೆಂದರೆ ನಾನು ಏನು ಅನುಭವಿಸಬೇಕು ಮತ್ತು ಹೇಗೆ ನಟಿಸಬೇಕು ಎಂಬುದನ್ನು ಅವರು ನನ್ನ ಮನಸ್ಸಿಗೆ ತುಂಬುತ್ತಿರುತ್ತಾರೆ. ಆ ಮಟ್ಟದ ಸಂಪರ್ಕವನ್ನು ನಾನು ಸಹ-ನಟರೊಂದಿಗೆ ಇಟ್ಟುಕೊಳ್ಳುವುದಿಲ್ಲ.
ಸಾಲು ಸಾಲು ಉತ್ತಮ ಚಿತ್ರಕತೆಯನ್ನು ಹೊಂದಿರುವ, ಸಾಮಾಜಿಕ ಕಳಕಳಿಯ ಚಿತ್ರಗಳ ಭಾಗವಾದ ನಂತರ, ಒಬ್ಬ ನಟಿಯಾಗಿ ಇದು ನಿಮ್ಮ 'ಕಂಫರ್ಟ್ ಝೋನ್' ಆಗಿಬಿಟ್ಟಿದೆಯೇ?
ಜನರು ಇಂತಹ ʼಡಿಸ್‌ಕಂಫರ್ಟ್ʼ ಚಿತ್ರಗಳನ್ನೇ ನನ್ನ 'ಕಂಫರ್ಟ್ ಝೋನ್' ಎಂದು ಕರೆಯುತ್ತಿರುವುದು ತುಂಬಾ ವಿಚಿತ್ರ ಎನಿಸುತ್ತದೆ. ನಾನು ನನ್ನ ಸಿನಿಮಾಗಳ ಬಗ್ಗೆ ಆ ರೀತಿ ಎಂದಿಗೂ ಯೋಚಿಸಿರಲಿಲ್ಲ. ಒಬ್ಬ ವ್ಯಕ್ತಿಯಾಗಿ ನನ್ನ ಮೌಲ್ಯಗಳಿಗೆ ಅನುಗುಣವಾಗಿರುವ ಚಿತ್ರಗಳು ಮತ್ತು ಪಾತ್ರಗಳೇ ನನ್ನ ನಿಜವಾದ ಕಂಫರ್ಟ್ ಝೋನ್. ನನ್ನ ಸಿದ್ಧಾಂತಕ್ಕೆ ಹೊಂದಿಕೆಯಾಗದ ಯಾವುದನ್ನಾದರೂ ನಾನು ಮಾಡಿದಾಗ, ಆ ಪಾತ್ರದ ಅಂತಿಮ ಪರಿಣಾಮವೇನು ಎಂಬುದನ್ನು ನಾನು ಗಮನಿಸುತ್ತೇನೆ. ಉದಾಹರಣೆಗೆ, ನಾನು ಒಬ್ಬ ಕಳನಾಯಕನ ಪಾತ್ರವನ್ನು ಮಾಡುತ್ತಿದ್ದು, ಯುದ್ಧದಲ್ಲಿ ಗೆಲ್ಲುತ್ತಿದ್ದರೆ ಅಥವಾ ಎಲ್ಲರನ್ನೂ ಮೂರ್ಖರನ್ನಾಗಿ ಮಾಡುತ್ತಿದ್ದರೆ, ಅದು ನನ್ನ ಸಿದ್ಧಾಂತದ ವ್ಯಾಪ್ತಿಯಿಂದ ಹೊರಗಿರುತ್ತದೆ. ಆದರೆ, ನಾನು ಒಬ್ಬ ಕೆಟ್ಟ ಮನುಷ್ಯನ ಪಾತ್ರವನ್ನು ನಿರ್ವಹಿಸಿ, ಆ ಕೆಟ್ಟತನಕ್ಕೆ ತಕ್ಕ ಶಿಕ್ಷೆಯನ್ನು ಅನುಭವಿಸುವಂತಿದ್ದರೆ, ಅದು ನನ್ನ ಕಂಫರ್ಟ್ ಝೋನ್. ಯಾವುದಾದರೂ ಒಂದು ಸಂದೇಶ ನೀಡುವ ಕಥೆಗಳನ್ನು ನಾನು ಇಷ್ಟಪಡುತ್ತೇನೆ. ಸಿನಿಮಾದ ಸಿದ್ಧಾಂತವು ನನ್ನ ಸಿದ್ಧಾಂತದೊಂದಿಗೆ ಹೊಂದಿಕೆಯಾಗುವ ಮತ್ತು ಪಾತ್ರವು ಆ ಸಿದ್ಧಾಂತದೊಂದಿಗೆ ಸಮನ್ವಯತೆ ಸಾಧಿಸುವ ಚಿತ್ರಗಳೇ ನನ್ನ ಆರಾಮದಾಯಕ ಕ್ಷೇತ್ರ.

