
VB-G RAM G ಕಾಯ್ದೆಯಿಂದ ಬಿಜೆಪಿಗೆ ಆಗಿರುವ ಚುನಾವಣಾ ಹಾನಿಯನ್ನು ನರೇಂದ್ರ ಮೋದಿ ಅವರ ಸರ್ಕಾರ ತಾನು ಮಂಡಿಸಲಿರುವ ಬಜೆಟ್ ಮೂಲಕ ಹೇಗೆ ಸರಿದೂಗಿಸುತ್ತದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ನಾಲ್ಕು ರಾಜ್ಯಗಳ ಚುನಾವಣೆ ಮೇಲೆ ಬಜೆಟ್ ಕಣ್ಣು: ಯಾರಿಗೆ ದಕ್ಕಲಿದೆ ಅನುದಾನದ ಸೀರುಂಡೆ?
ಚುನಾವಣೆ ಗೆಲ್ಲಲು ನಾವೆಂದೂ ಬಜೆಟ್-ನ್ನು ಅಸ್ತ್ರವಾಗಿ ಬಳಸಿಕೊಳ್ಳುವುದಿಲ್ಲ ಎಂದು ಮೋದಿ ಸರ್ಕಾರ ಪದೇ ಪದೇ ಹೇಳಿಕೊಂಡು ಬಂದಿದೆ. ಆದರೆ ಬಿಹಾರ ಮತ್ತು ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ಮಾತು ಸುಳ್ಳಾಗಿದೆ.
ಈ ವರ್ಷದ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಅತ್ಯಂತ ನಿರ್ಣಾಯಕ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮಂಡಿಸಲಿರುವ 2026-27ರ ಬಜೆಟ್ ಎಷ್ಟರ ಮಟ್ಟಿಗೆ ಚುನಾವಣೆ ಆಧಾರಿತವಾಗಿರಲಿದೆ-ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ.
ಕಳೆದ ಒಂದು ದಶಕದ ಅವಧಿಯಲ್ಲಿ ನರೇಂದ್ರ ಮೋದಿ ಅವರ ಸರ್ಕಾರದ ಕೇಂದ್ರ ಮುಂಗಡ ಪತ್ರಗಳು ಹೆಚ್ಚಾಗಿ ಒಂದು ನಿರ್ದಿಷ್ಟ ಮಾದರಿಯನ್ನು ಅನುಸರಿಸಿವೆ. ಬಜೆಟ್-ನಲ್ಲಿ ಘೋಷಿಸಲಾಗುವ ಯೋಜನೆಗಳು ಸಾಮಾನ್ಯವಾಗಿ ಅಖಿಲ ಭಾರತ ಮಟ್ಟದ ಬೃಹತ್ ಯೋಜನೆಗಳಂತೆ ಮೇಲ್ನೋಟಕ್ಕೆ ಗೋಚರಿಸಿದರೂ ಕೂಡ ಅವುಗಳ ಆಂತರ್ಯದಲ್ಲಿ ಇರುವ ತಂತ್ರಗಳೇ ಬೇರೆ. ಚುನಾವಣೆ ಎದುರಿಸಲಿರುವ ನಾನಾ ರಾಜ್ಯಗಳಿಗೆ ವಿಶೇಷ ಅನುದಾನಗಳನ್ನು ನೀಡುವ ಮೂಲಕ ಚುನಾವಣಾ ಪ್ರಭಾವ ಬೀರುವ ತಂತ್ರವನ್ನು ಅದು ಅತ್ಯಂತ ಚಾಣಾಕ್ಷತನದಿಂದ ರೂಪಿಸುತ್ತ ಬಂದಿರುವುದು ಮಾತ್ರ ಸ್ಪಷ್ಟವಾಗುತ್ತದೆ.
ಮೋದಿ ಸರ್ಕಾರದ ಕಳೆದ ಹನ್ನೊಂದೂ ವರ್ಷಗಳ ಬಹುಪಾಲು ಅವಧಿಯಲ್ಲಿ ಈ ವಿಧಾನವು ಅವರ ಸರ್ಕಾರಕ್ಕೆ ದೊಡ್ಡ ಲಾಭವನ್ನು ತಂದುಕೊಟ್ಟಿದೆ. ಅದೆಂದರೆ, “ಹಿಂದಿನ ಸರ್ಕಾರಗಳಂತೆ ನಾವೇನು ಚುನಾವಣಾ ಲಾಭಕ್ಕಾಗಿ ಕೇಂದ್ರ ಬಜೆಟ್-ನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿಲ್ಲ,” ಎಂದು ಹೇಳಿಕೊಳ್ಳಲು ಈ ಪದ್ಧತಿಯು ಅವರಿಗೆ ಅವಕಾಶ ಮಾಡಿಕೊಟ್ಟಿದೆ.
ಅನುದಾನಗಳ ಅಸಮಾನ ಹಂಚಿಕೆ
ಆದರೆ ಕಳೆದ ಎರಡು ಬಜೆಟ್-ಗಳು ಈ ಹಿಂದಿನ ಮಾದರಿಯನ್ನು ಮುರಿದಿವೆ. 2024ರ ಸಾರ್ವತ್ರಿಕ ಚುನಾವಣೆಯು ಲೋಕಸಭೆಯಲ್ಲಿ ಬಿಜೆಪಿಯ ಸ್ವಂತ ಬಹುಮತವನ್ನು ತಗ್ಗಿಸಿದ ಬೆನ್ನಲ್ಲೇ ಜುಲೈ 2024 ಮತ್ತು ಫೆಬ್ರುವರಿ 2025ರಲ್ಲಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಗಳ ಸ್ವರೂಪವೂ ಕೂಡ ಬದಲಾಯಿತು.
ಮರುರೂಪಗೊಂಡ ಮೋದಿ ಸರ್ಕಾರದ ದೀರ್ಘಾಯುಷ್ಯಕ್ಕೆ ಈಗ ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಎನ್.ಚಂದ್ರಬಾಬು ನಾಯ್ಡು ಅವರ ಟಿಡಿಪಿ ಬೆಂಬಲವು ಅತ್ಯಗತ್ಯವಾಗಿದೆ. ಈ ಕಾರಣದಿಂದಾಗಿ ಅಕ್ಟೋಬರ್ 2025ರಲ್ಲಿ ಚುನಾವಣೆ ಎದುರಿಸಿದ್ದ ನಿತೀಶ್ ಅವರ ಬಿಹಾರ ಮತ್ತು ನಾಯ್ಡು ಅವರ ಆಂಧ್ರ ಪ್ರದೇಶಕ್ಕೆ ಈ ಎರಡು ಬಜೆಟ್ ಗಳಲ್ಲಿ ಬಹಿರಂಗವಾಗಿಯೇ ಅತಿ ಹೆಚ್ಚಿನ ಅನುದಾನಗಳನ್ನು ಹಂಚಿಕೆ ಮಾಡಲಾಯಿತು.
ಅದೇ ರೀತಿ 2024ರ ಚುನಾವಣೆಯಲ್ಲಿ ಬಿಜೆಪಿ ಅನುಭವಿಸಿದ ಹಿನ್ನಡೆಗೆ ಮಿತಿಮೀರಿದ ನಿರುದ್ಯೋಗ ಸಮಸ್ಯೆಯನ್ನು ಪ್ರತಿಪಕ್ಷಗಳು ಪ್ರಬಲ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿದ್ದೇ ಭಾಗಶಃ ಕಾರಣ ಎಂದು ವಿಶ್ಲೇಷಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯೆಯೋ ಎಂಬಂತೆ ನಿರ್ಮಲಾ ಅವರು ಖಾಸಗಿ ವಲಯದಲ್ಲಿ ಉದ್ಯೋಗಾಧಾರಿತ ಪ್ರೋತ್ಸಾಹಕಗಳು ಮತ್ತು ಇಂಟರ್ನಶಿಪ್ ಯೋಜನೆಗಳ ಸರಣಿಯನ್ನೇ ಘೋಷಿಸಿದರು.
ಮುಂಬರುವ ಬಜೆಟ್ 2024ರ ನಂತರದ ಮಾದರಿಯನ್ನು ಅನುಸರಿಸುತ್ತದೆಯೇ (ಅಂದರೆ ಚುನಾವಣೆ ಎದುರಿಸಲಿರುವ ರಾಜ್ಯಗಳು ಮತ್ತು ಬಿಜೆಪಿಗೆ ಸವಾಲಾಗುವ ವಿಷಯಗಳ ಮೇಲೆ ನೇರವಾಗಿ ಗಮನ ಹರಿಸುವುದು) ಅಥವಾ 2024ಕ್ಕೂ ಮುಂಚಿನ ಪ್ರವೃತ್ತಿಗೆ ಮರಳುತ್ತದೆಯೇ ಎಂಬುದು ಭಾನುವಾರವಷ್ಟೇ ತಿಳಿಯಲಿದೆ. ಏನೇ ಇರಲಿ, 2026ರ ಬಜೆಟ್ ಜನಾಕರ್ಷಕ ಹಾದಿಯನ್ನು ಹಿಡಿಯುವ ಸಾಧ್ಯತೆಯಿದೆ ಎಂಬ ನಿರೀಕ್ಷೆಗಳಂತೂ ಇವೆ. ಒಟ್ಟಾರೆಯಾಗಿ ಹೇಳುವುದಾದರೆ, ದೊಡ್ಡ ಮಟ್ಟದ ಘೋಷಣೆಗಳನ್ನು 'ವಿಕಸಿತ ಭಾರತ' ಎಂಬ ಮುದ್ರೆಯಡಿ ಚಾಣಾಕ್ಷತನದಿಂದ ಪ್ಯಾಕೇಜ್ ಮಾಡುವ ಮೋದಿ ಸರ್ಕಾರದ ಹಳೆಯ ಶೈಲಿಯೇ ಈ ಬಾರಿಯೂ ಮುಂದುವರಿದರೆ ಅಚ್ಚರಿಯೇನೂ ಇಲ್ಲ.
MGNREGA ರದ್ದತಿ ಬಳಿಕ ಮುಂದೇನು?
ಯುಪಿಎ ಕಾಲದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (MGNREGA) ಸಂಸತ್ತು ರದ್ದುಗೊಳಿಸಿ, ಅದರ ಬದಲಿಗೆ 'ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ)' ಅಥವಾ VB-G RAM G ಕಾಯ್ದೆಯನ್ನು ಜಾರಿಗೆ ತಂದ ಕೆಲವೇ ತಿಂಗಳುಗಳಲ್ಲಿ ಈ ಬಜೆಟ್ ಮಂಡನೆಯಾಗುತ್ತಿರುವುದು ವಿಶೇಷ ಸಂಗತಿ. ಕೇಂದ್ರದ ಈ ವಿವಾದಾತ್ಮಕ ಹೊಸ ಶಾಸನದಿಂದ ಬಿಜೆಪಿಗೆ ಉಂಟಾಗಬಹುದಾದ ಚುನಾವಣಾ ಹಿನ್ನಡೆಯನ್ನು ಸರಿಪಡಿಸಲು ಸೀತಾರಾಮನ್ ಅವರು ಈ ಮುಂಗಡ ಪತ್ರವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದು ಕುತೂಹಲಕಾರಿ ಎಂದು ಕಾಂಗ್ರೆಸ್ ಸೇರಿದಂತೆ 'ಇಂಡಿಯಾ' ಒಕ್ಕೂಟದ ವಿವಿಧ ಪಕ್ಷಗಳ ನಾಯಕರು 'ದ ಫೆಡರಲ್'ಗೆ ತಿಳಿಸಿದ್ದಾರೆ.
MGNREGA ಬದಲಿಗೆ VB-G RAM G ತಂದಿರುವುದನ್ನು ಕಾಂಗ್ರೆಸ್, ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಡಿಎಂಕೆ ಮತ್ತು ಎಡರಂಗದ ಸಿಪಿಐ(ಎಂ) ಹಾಗೂ ಸಿಪಿಐ ಪಕ್ಷಗಳು ಒಕ್ಕೊರಲಿನಿಂದ ವಿರೋಧಿಸುತ್ತಿವೆ. ಕಳೆದ ಎರಡು ದಶಕಗಳಲ್ಲಿ MGNREGA ನಿರ್ಮಿಸಿದ್ದ ಗ್ರಾಮೀಣ ಉದ್ಯೋಗ ಖಾತರಿ ಚೌಕಟ್ಟನ್ನು ಕೆಡವುವುದೇ ಈ ಹೊಸ ಕಾಯ್ದೆಯ ಏಕೈಕ ಉದ್ದೇಶ ಎಂದು ಈ ಪಕ್ಷಗಳು ವಾದಿಸುತ್ತಿವೆ.
ಹೆಚ್ಚುವರಿಯಾಗಿ, ಈ ಮೊದಲು MGNREGA ಸಂಪೂರ್ಣವಾಗಿ ಕೇಂದ್ರದ ಅನುದಾನದಿಂದ ನಡೆಯುತ್ತಿತ್ತು. ಆದರೆ ಹೊಸ ಕಾನೂನಿನ ಪ್ರಕಾರ, ಯೋಜನೆಯ ವೆಚ್ಚದಲ್ಲಿ ಶೇಕಡಾ 40 ರಷ್ಟನ್ನು ರಾಜ್ಯ ಸರ್ಕಾರಗಳೇ ಭರಿಸಬೇಕಾಗಿದೆ. ಈಗಾಗಲೇ ಆರ್ಥಿಕ ಸಂಪನ್ಮೂಲಗಳ ಕೊರತೆ ಮತ್ತು ಹೆಚ್ಚುತ್ತಿರುವ ಸಾಲದ ಹೊರೆಯ ಬಗ್ಗೆ ಪ್ರತಿಪಕ್ಷ ಆಡಳಿತವಿರುವ ರಾಜ್ಯಗಳು ದೂರುತ್ತಿರುವ ಹೊತ್ತಿನಲ್ಲಿಯೇ, ಈ ಹೊರೆಯನ್ನು ರಾಜ್ಯಗಳ ಮೇಲೆ ಹೇರಲಾಗಿದೆ. ನಿರುದ್ಯೋಗದ ವಿಷಯದಲ್ಲಿ ಕೇಂದ್ರದ ಮೇಲಿರುವ ಜವಾಬ್ದಾರಿಯನ್ನು ರಾಜ್ಯಗಳ ಮೇಲೆ ವರ್ಗಾಯಿಸಿ ದೂಷಿಸುವ ಉದ್ದೇಶವನ್ನು ಇಟ್ಟುಕೊಂಡೇ ಈ ಹೊಸ ವೆಚ್ಚ-ಹಂಚಿಕೆಯ ಸೂತ್ರವನ್ನು ರೂಪಿಸಲಾಗಿದೆ ಎಂದು ಈ ಪಕ್ಷಗಳು ಪ್ರತಿಪಾದಿಸುತ್ತಿವೆ.
MGNREGA ಯೋಜನೆಯನ್ನು ಮರುಸ್ಥಾಪಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಈಗಾಗಲೇ 45 ದಿನಗಳ ಸುದೀರ್ಘ 'MGNREGA ಬಚಾವೋ ಸಂಗ್ರಾಮ' ಎಂಬ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ನಡೆಸುತ್ತಿದೆ. ಈ ಅಭಿಯಾನವು ಗ್ರಾಮೀಣ ಭಾಗಗಳಲ್ಲಿ ಬಿಜೆಪಿಯ ಚುನಾವಣಾ ಪ್ರಾಬಲ್ಯವನ್ನು ತಡೆಯಲು ಸಹಾಯ ಮಾಡುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ.
ಮರಣಶಾಸನದ ಪ್ರಭಾವ
MGNREGA ರದ್ದತಿಯು ಬಿಜೆಪಿಗೆ ಬಹುದೊಡ್ಡ ರಾಜಕೀಯ ಸವಾಲನ್ನು ತಂದೊಡ್ಡಿದೆ. ಇದನ್ನು ನಿರ್ಮಲಾ ಸೀತಾರಾಮನ್ ಅವರು ಹೇಗೆ ಎದುರಿಸುತ್ತಾರೆ ಎಂಬುದನ್ನು ಪ್ರತಿಪಕ್ಷಗಳು ಬಹಳ ಎಚ್ಚರಿಕೆಯಿಂದ ಗಮನಿಸುತ್ತಿವೆ.
“ಮೋದಿ ಸರ್ಕಾರವು ಕಳೆದ ಒಂದು ದಶಕದಿಂದ ಅನುದಾನವನ್ನು ಕಡಿತಗೊಳಿಸುವ ಮೂಲಕ ಮತ್ತು ರಾಜ್ಯಗಳಿಗೆ ನೀಡಬೇಕಾದ ಬಾಕಿಯನ್ನು ಉಳಿಸಿಕೊಳ್ಳುವ ಮೂಲಕ MGNREGA ಯೋಜನೆಯನ್ನು ಮುಗಿಸಿಬಿಡಲು ಪ್ರಯತ್ನ ನಡೆಸುತ್ತಲೇ ಇತ್ತು. ಕಳೆದ ತಿಂಗಳ ಚಳಿಗಾಲದ ಅಧಿವೇಶನದಲ್ಲಿ, ಈ ಕಾಯ್ದೆಯನ್ನು ರದ್ದುಗೊಳಿಸುವ ಮೂಲಕ ಸರ್ಕಾರ ಅದಕ್ಕೆ ಮರಣಶಾಸನ ಬರೆದಿದೆ. ಇದರ ಬದಲಿಗೆ ತಂದಿರುವ ಹೊಸ ಕಾನೂನು ಕೇಂದ್ರ ಪುರಸ್ಕೃತ ಯೋಜನೆಯಂತಿದ್ದರೂ, ಇದರಲ್ಲಿ ಕೇಂದ್ರವು ರಾಜ್ಯಗಳ ಎಲ್ಲಾ ಹಕ್ಕುಗಳನ್ನು ಕಸಿದುಕೊಂಡು, ಜವಾಬ್ದಾರಿಗಳನ್ನು ಮಾತ್ರ ರಾಜ್ಯಗಳ ಮೇಲೆ ಹಾಕಿದೆ," ಎಂದು ಕಾಂಗ್ರೆಸ್‌ನ ಹಿರಿಯ ರಾಜ್ಯಸಭಾ ಸಂಸದರೊಬ್ಬರು 'ದ ಫೆಡರಲ್'ಗೆ ತಿಳಿಸಿದ್ದಾರೆ.
“ಹಣಕಾಸು ಸಚಿವರು ಬಜೆಟ್‌ನಲ್ಲಿ ಈ ವಿಷಯವಾಗಿ ಯಾವ ತೀರ್ಮಾನಕ್ಕೆ ಬರುತ್ತಾರೆ ಎಂದು ತಿಳಿಯಲು ನಾವು ಕುತೂಹಲದಿಂದ ಕಾದಿದ್ದೇವೆ. VB-G RAM G ಯೋಜನೆಗೆ ಎಷ್ಟು ಅನುದಾನ ನೀಡಲಾಗುತ್ತದೆ? ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಅವರು ಯಾವುದಾದರೂ ಹೊಸ ಯೋಜನೆ ತರುತ್ತಾರೆಯೇ? ಅವರು ಘೋಷಿಸಿದ್ದ ELI ಪ್ರೋತ್ಸಾಹಕಗಳು ಒಂದೇ ವರ್ಷದಲ್ಲಿ ವಿಫಲವಾಗಿವೆ ಮತ್ತು ಆ ಯೋಜನೆಗಳಿಂದ ಉದ್ಯೋಗ ಸೃಷ್ಟಿಯಾಗಿದೆ ಎಂಬುದಕ್ಕೆ ಯಾವುದೇ ವಿಶ್ವಾಸಾರ್ಹ ಅಂಕಿಅಂಶಗಳು ಲಭ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅವರು ಸಾಮಾನ್ಯ ಉದ್ಯೋಗ ಸೃಷ್ಟಿಗೆ ಏನು ಮಾಡುತ್ತಾರೆ?" ಎಂದು ಅವರು ಪ್ರಶ್ನಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಬಂಗಾಳ ಸರ್ಕಾರಕ್ಕೆ ನೀಡಬೇಕಾದ MGNREGA ಬಾಕಿ ಹಣವನ್ನು ಕೇಂದ್ರವು ಬಿಡುಗಡೆ ಮಾಡುತ್ತಿಲ್ಲ ಎಂದು ನಿರಂತರವಾಗಿ ಸಂಘರ್ಷ ನಡೆಸುತ್ತಿರುವ ತೃಣಮೂಲ ಕಾಂಗ್ರೆಸ್, ಯುಪಿಎ ಕಾಲದ ಈ ಕಾನೂನನ್ನು ರದ್ದುಗೊಳಿಸಿರುವುದು ಇನ್ನು ಎರಡು ತಿಂಗಳಲ್ಲಿ ನಡೆಯಲಿರುವ ಬಂಗಾಳ ಚುನಾವಣೆಯಲ್ಲಿ ಬಿಜೆಪಿಗೆ ಭಾರಿ ನಷ್ಟ ಉಂಟುಮಾಡಲಿದೆ ಎಂದು ನಂಬಿದೆ. ಒಂದು ವೇಳೆ ಹಣಕಾಸು ಸಚಿವರು ಈ ಬಜೆಟ್‌ನಲ್ಲಿಯೂ "ಕೇಂದ್ರದ ಅನುದಾನದಲ್ಲಿ ಬಂಗಾಳಕ್ಕೆ ಸಿಗಬೇಕಾದ ನ್ಯಾಯಸಮ್ಮತ ಪಾಲನ್ನು ಕಸಿದುಕೊಳ್ಳಲು" ಯತ್ನಿಸಿದರೆ, ಅದಕ್ಕೆ "ಸಂಸತ್ತಿನಲ್ಲಿ ಮತ್ತು ಬಂಗಾಳದ ಬೀದಿಗಳಲ್ಲಿ ತಕ್ಕ ಉತ್ತರ ನೀಡಲಾಗುವುದು" ಎಂದು ತೃಣಮೂಲ ನಾಯಕರೊಬ್ಬರು ಎಚ್ಚರಿಸಿದ್ದಾರೆ.
ಅಸ್ಸಾಂ, ತಮಿಳುನಾಡು, ಕೇರಳಕ್ಕೆ ಒಲವು ತೋರುವರೇ?
ಸತತ ಮೂರನೇ ಅವಧಿಗೆ ಗೆಲ್ಲುವ ನಿರೀಕ್ಷೆಯಲ್ಲಿರುವ ಅಸ್ಸಾಂ ಮತ್ತು ಇದುವರೆಗೆ ತನಗೆ ಸವಾಲಾಗಿಯೇ ಉಳಿದಿರುವ ಸಾಂಪ್ರದಾಯಿಕ ಚುನಾವಣಾ ಮಾದರಿಗಳನ್ನು ಮುರಿಯಲು ಬಿಜೆಪಿ ಹವಣಿಸುತ್ತಿರುವ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ನಿರ್ಮಲಾ ಅವರು ಬಜೆಟ್‌ನಲ್ಲಿ ಎಷ್ಟು ಅನುದಾನ ನೀಡಲಿದ್ದಾರೆ ಎಂಬುದು ಪ್ರತಿಪಕ್ಷಗಳ ಪಾಲಿನ ದೊಡ್ಡ ನಿರೀಕ್ಷೆಯಾಗಿದೆ.
ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರು ಬಂಗಾಳದಿಂದ ಮೊದಲ 'ವಂದೇ ಭಾರತ್ ಸ್ಲೀಪರ್' ರೈಲನ್ನು ಉದ್ಘಾಟಿಸಿರುವುದು, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಿಗೆ ರೈಲು ಸಂಪರ್ಕ ಹಾಗೂ ಹೆದ್ದಾರಿ ಮೂಲಸೌಕರ್ಯಗಳಿಗಾಗಿ ಭಾರಿ ಮೊತ್ತದ ಅನುದಾನ ಮೀಸಲಿಡಬಹುದು ಎಂಬ ಚರ್ಚೆಗಳಿಗೆ ಪುಷ್ಟಿ ನೀಡಿದೆ.
ಇನ್ನು ದಕ್ಷಿಣದ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನ ಪ್ರತಿಪಕ್ಷ ನಾಯಕರು, ಈ ರಾಜ್ಯಗಳ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುವ ಹಡಗು ಸಾಗಣೆ, ಮೀನುಗಾರಿಕೆ ಮತ್ತು ಹೆದ್ದಾರಿ ಮೂಲಸೌಕರ್ಯಗಳಂತಹ ಕ್ಷೇತ್ರಗಳಿಗೆ ಬಜೆಟ್‌ನಲ್ಲಿ "ಬೃಹತ್ ಭರವಸೆಗಳನ್ನು" ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

