
ಕಡಿಮೆಯಾಗುತ್ತಿರುವ ಕಾರ್ಪೊರೇಟ್ ತೆರಿಗೆ ಪಾಲು ಮತ್ತು ಹೆಚ್ಚುತ್ತಿರುವ ವೈಯಕ್ತಿಕ ಆದಾಯ ತೆರಿಗೆಯ ಹೊರೆಯು ಬೆಳವಣಿಗೆಯನ್ನು ಕುಂಠಿತಗೊಳಿಸುವ ಒಂದು ಪ್ರತಿಗಾಮಿ ವ್ಯವಸ್ಥೆಯ ಪ್ರತೀಕ.
ಕಾರ್ಪೊರೇಟ್ ಕಂಪನಿಗಳ ತೆರಿಗೆ ಕಳ್ಳಾಟ: 2019ರ ತೆರಿಗೆ ಪದ್ಧತಿಯ ಸರ್ಜರಿಗೆ ಇದು ಸಕಾಲ
ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ ವಿನಾಯ್ತಿ ನೀಡಿ ಆಗಿದ್ದಾದರೂ ಏನೂ? ಹೂಡಿಕೆ ಮಾಡದೇ ಕಣ್ಣಾಮುಚ್ಚಾಲೆ ಆಟವಾಡಿದ್ದು. ಇವೆಲ್ಲದರ ಒತ್ತಡ ಬಿದ್ದಿದ್ದು ಯಾರ ಮೇಲೆ?
ಭಾರತೀಯ ಕಾರ್ಪೊರೇಟ್ ಕಂಪನಿಗಳು “ಅತಿಯಾದ ಲಾಭದಲ್ಲಿ ತೇಲಾಡುತ್ತಿದ್ದರೂ ಒಟ್ಟು ತೆರಿಗೆ ಸಂಗ್ರಹಕ್ಕೆ ಅವುಗಳು ಕೊಡುಗೆ ಮಾತ್ರ ಕಡಿಮೆಯಾಗುತ್ತ ಸಾಗಿದೆ. ಇದು 2023-24ರ ಆರ್ಥಿಕ ಸಮೀಕ್ಷೆಯ ನುಡಿಗಟ್ಟು.
ಕಾರ್ಪೊರೇಟ್ ತೆರಿಗೆ ಸಂಗ್ರಹವು ವೈಯಕ್ತಿಕ ಆದಾಯ ತೆರಿಗೆಗಿಂತ (ಬಜೆಟ್ ದಾಖಲೆಗಳಲ್ಲಿ ಅದನ್ನು ಆದಾಯದ ಮೇಲಿನ ತೆರಿಗೆ ಎಂದು ಕರೆಯಲಾಗುತ್ತದೆ) ಗಣನೀಯ ಪ್ರಮಾಣದಲ್ಲಿ ಕುಸಿದಿರುವುದು ಮಾತ್ರವಲ್ಲದೆ ಈ ಎರಡರ ನಡುವಿನ ಅಂತರವು ದಿನದಿಂದ ದಿನಕ್ಕೆ ಹಿಗ್ಗುತ್ತ ಸಾಗಿದೆ. ಇಂತಹ ಪರಿಸ್ಥಿತಿಯು ಬೆಳವಣಿಗೆಯನ್ನು ಕುಂಠಿತಗೊಳಿಸುವ ʼಪ್ರತಿಗಾಮಿ ತೆರಿಗೆ ವ್ಯವಸ್ಥೆʼಗೆ ಸಾಕ್ಷಿಯಾಗಿದೆ.
ಒಟ್ಟು ತೆರಿಗೆ ಸಂಗ್ರಹದ ಶೇಕಡಾವಾರು ಪ್ರವೃತ್ತಿ ಏನು ಎಂಬುದನ್ನು ಇಲ್ಲಿ ನೀಡಲಾಗಿರುವ ಗ್ರಾಫ್ ಬಿಂಬಿಸುತ್ತದೆ. ಆ ಮೂಲಕ 2020ರ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ತೆರಿಗೆ ಸಂಗ್ರಹದಲ್ಲಿ ಎಷ್ಟು ಪ್ರಮಾಣದ ಕುಸಿತ ಕಂಡುಬಂದಿದೆ ಎಂಬುದರ ಅರಿವಾಗುತ್ತದೆ; ಆ ಅವಧಿಯಲ್ಲಿ ಮೂಲ ತೆರಿಗೆ ದರಗಳನ್ನು ಶೇ. 15ರಿಂದ 22ಕ್ಕೆ (ಹೊಸ ಕಂಪನಿಗಳಿಗೆ ಶೇ. 15 ಮತ್ತು ಹಳೆಯ ಕಂಪನಿಗಳಿಗೆ 22) ಇಳಿಸಲಾಗಿತ್ತು. ಸಾಂಕ್ರಾಮಿಕ ರೋಗದ ಕಾಲದ 2021ರ ಹಣಕಾಸು ವರ್ಷದಲ್ಲಿ ಈ ಸಂಗ್ರಹವು ವೈಯಕ್ತಿಕ ಆದಾಯ ತೆರಿಗೆ ಸಂಗ್ರಹಕ್ಕಿಂತ ಕೆಳಕ್ಕೆ ಇಳಿಯುವ ಮೂಲಕ ಹಿಂದಿನ ಪ್ರವೃತ್ತಿಯನ್ನು ತಲೆಕೆಳಗು ಮಾಡಿತು. ಈ ಸ್ಥಾನ ಪಲ್ಲಟದ ಬಳಿಕ ಎರಡರ ನಡುವಿನ ಅಂತರ ಮತ್ತಷ್ಟು ಇನ್ನಷ್ಟು ವಿಸ್ತರಿಸುತ್ತ ಹೋಯಿತೇ ವಿನಾಃ ಕಡಿಮೆಯಾಗಲೇ ಇಲ್ಲ.
ಇದು ಪಾವತಿ ಸಾಮರ್ಥ್ಯದ ಮೂಲಭೂತ ತತ್ವವನ್ನೇ ಉಲ್ಲಂಘಿಸುವುದರಿಂದ ಇದನ್ನು ಪ್ರತಿಗಾಮಿ ಎಂದು ಕರೆಯಲಾಗುತ್ತದೆ. ಅಂದರೆ ಯಾರಿಗೆ ತೆರಿಗೆ ಪಾವತಿ ಮಾಡುವ ಸಾಮರ್ಥ್ಯ ಹೆಚ್ಚಿದೆಯೋ ಅವರ ಮೇಲೆ ತೆರಿಗೆಯ ಹೊರೆ ಹೆಚ್ಚಿರಬೇಕು ಎನ್ನುವುದು ಈ ತತ್ವದ ಅರ್ಥ.
ಕಾರ್ಪೊರೇಟ್ ವಲಯದ ಮುಖವಾಡ
ವೈಯಕ್ತಿಕ ಆದಾಯ ತೆರಿಗೆಯನ್ನು ವೇತನದಾರರು, ಸ್ವಯಂ ಉದ್ಯೋಗಿಗಳು, ಬಂಡವಾಳ ಆದಾಯ ಹೊಂದಿರುವ ಇತರ ವ್ಯಕ್ತಿಗಳು, ಹಿಂದೂ ಅವಿಭಜಿತ ಕುಟುಂಬಗಳು, ಟ್ರಸ್ಟ್ಗಳು, ವ್ಯಕ್ತಿಗಳ ಸಂಘಗಳು ಮತ್ತು ವಾಣಿಜ್ಯ ಉದ್ದೇಶದೊಂದಿಗೆ ಅಥವಾ ಇಲ್ಲದೆ ಹಣ ಗಳಿಸುವ ವ್ಯಕ್ತಿಗಳ ಸಮೂಹಗಳು ಪಾವತಿಸುತ್ತಾರೆ. ಕಾರ್ಪೊರೇಟ್ ಕಂಪನಿಗಳಿಗೆ ಹೋಲಿಸಿದರೆ ಇವರಿಗೆ ತೆರಿಗೆ ಪಾವತಿಸುವ ಸಾಮರ್ಥ್ಯ ಕಡಿಮೆ ಇರುತ್ತದೆ. ಇದು ಭಾರತೀಯ ಕಾರ್ಪೊರೇಟ್ ವಲಯದ ಒಂದು ಮುಖವಷ್ಟೇ.
ಮುಖ್ಯ ಆರ್ಥಿಕ ಸಲಹೆಗಾರ ಅನಂತ ವಿ. ನಾಗೇಶ್ವರನ್ ಅವರು ಡಿಸೆಂಬರ್ 2024 ರಲ್ಲಿ ಮತ್ತೊಂದು ಪ್ರಮುಖ ಅಂಶದ ಬಗ್ಗೆ ಗಮನಸೆಳೆದರು: ಅದುವೇ "ತೆವಳುತ್ತಾ ಸಾಗುತ್ತಿರುವ ಅನೌಪಚಾರಿಕತೆ" ಅಂದರೆ ಕಾಯಂ ಉದ್ಯೋಗಿಗಳಿಗಿಂತ ಗುತ್ತಿಗೆ ಆಧಾರಿತ ನೇಮಕಾತಿಯೇ ಹೆಚ್ಚಾಗುತ್ತಿರುವ ಸ್ಥಿತಿ. ಸಾಂಕ್ರಾಮಿಕ ರೋಗದ ನಂತರ, ವೇತನದ ಬೆಳವಣಿಗೆಯು ಹಣದುಬ್ಬರಕ್ಕೆ ಅನುಗುಣವಾಗಿ ಏರಿಕೆಯಾಗಿಲ್ಲ (ಸ್ಥಗಿತಗೊಂಡಿದೆ). ಇವೆರಡೂ ಸೇರಿ ಜನರ ಬಳಕೆಯ ಪ್ರಮಾಣದ ಮೇಲೆ ಇಳಿಕೆಯ ಒತ್ತಡ ಉಂಟುಮಾಡುತ್ತವೆ. ಬಳಕೆಯ ಪ್ರಮಾಣ ಇಳಿಕೆಯಾದಂತೆ ಕಾರ್ಪೊರೇಟ್ ಸಂಸ್ಥೆಗಳು ಉತ್ಪಾದಿಸುವ ಸರಕು ಮತ್ತು ಸೇವೆಗಳಿಗೆ ಬೇಡಿಕೆಯೂ ಕುಸಿಯುತ್ತದೆ. ಆದ್ದರಿಂದಲೇ ಅವರು ಇದನ್ನು "ಆತ್ಮಹತ್ಯಾಕಾರಿ" ಎಂದು ಕರೆದರು.
ತೆರಿಗೆ ಕಡಿತದ ಅಲ್ಪ ಪರಿಣಾಮ
2019ರ ಸೆಪ್ಟೆಂಬರ್ ತಿಂಗಳಿನಲ್ಲಿ ಜಾರಿಗೊಳಿಸಿದ ಕಾರ್ಪೊರೇಟ್ ತೆರಿಗೆ ಕಡಿತದಿಂದಾಗಿ ಸರ್ಕಾರಕ್ಕೆ ರೂ.1.45 ಲಕ್ಷ ಕೋಟಿ ಆದಾಯ ನಷ್ಟವಾಯಿತು, ಅಷ್ಟಾಗಿಯೂ ಇದು ವ್ಯರ್ಥವಾಯಿತು. ಕೇಂದ್ರ ಸರ್ಕಾರ ಭರವಸೆ ನೀಡಿದಂತೆ ಇದು ಹೆಚ್ಚಿನ ಬಂಡವಾಳ ಹೂಡಿಕೆ ಅಥವಾ ಉದ್ಯೋಗ ಸೃಷ್ಟಿಗೆ ದಾರಿ ಮಾಡಿಕೊಡಲಿಲ್ಲ. ಬದಲಾಗಿ, 2019-20ರ ಆರ್ಬಿಐ ವಾರ್ಷಿಕ ವರದಿಯು ಹೇಳುವಂತೆ, ಕಂಪನಿಗಳು ಈ ತೆರಿಗೆ ಉಳಿತಾಯವನ್ನು ಸಾಲ ತೀರಿಸಲು, ನಗದು ಸಮತೋಲನ ಕಾಯ್ದುಕೊಳ್ಳಲು ಮತ್ತು ಇತರ ಪ್ರಸ್ತುತ ಆಸ್ತಿಗಳನ್ನು ಹೆಚ್ಚಿಸಿಕೊಳ್ಳಲು ಬಳಸಿಕೊಂಡವು. ಒಟ್ಟಾರೆಯಾಗಿ ಈ ತೆರಿಗೆ ಕಡಿತದ ಪರಿಣಾಮವು ಅತ್ಯಂತ ವಿನಾಶಕಾರಿಯಾಗಿತ್ತು.
ಕಾರ್ಪೊರೇಟ್ ತೆರಿಗೆ ಸಂಗ್ರಹದ ಸರಾಸರಿ ಬೆಳವಣಿಗೆಯು ತೆರಿಗೆ ಕಡಿತಕ್ಕೂ ಮುನ್ನ (ಹಣಕಾಸು ವರ್ಷ 09--19) ಶೇ. 12 ರಷ್ಟಿತ್ತು, ಆದರೆ ಕಡಿತದ ನಂತರ (ಹ.ವ 20-26 ಬಜೆಟ್ ಅಂದಾಜು) ಅದು ಶೇಕಡಾ 9ಕ್ಕೆ ಕುಸಿಯಿತು. ಜಿಡಿಪಿಯ ಶೇಕಡಾವಾರು ಪ್ರಮಾಣವಾಗಿ ನೋಡಿದರೂ, ಕಾರ್ಪೊರೇಟ್ ತೆರಿಗೆ ಸಂಗ್ರಹವು ಹ.ವ 08 ಹ.ವ. 11ರ ಅವಧಿಯಲ್ಲಿ ಸರಾಸರಿ ಶೇ. 3.9 ರಷ್ಟಿದ್ದುದು, ಹ.ವ 23-26 (ಬಜೆಟ್ ಅಂದಾಜು) ಅವಧಿಯಲ್ಲಿ ಶೇಕಡಾ 3 ಕ್ಕೆ ಕುಸಿದಿದೆ.
ಈ ಕುಸಿತದ ಅರ್ಥವೇನೆಂದರೆ, ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಲಭ್ಯವಿರುವ ಆರ್ಥಿಕ ಸಂಪನ್ಮೂಲಗಳು ಕಡಿಮೆಯಾಗುತ್ತಿವೆ ಎಂಬುದು. ಈ ತೆರಿಗೆ ಕಥಾನಕವು ಇಷ್ಟಕ್ಕೇ ಮುಗಿಯುವುದಿಲ್ಲ, ಇನ್ನೂ ಇದೆ...
ವ್ಯವಸ್ಥೆಯ ದುರ್ಬಳಕೆ
2019ರ ಕಾರ್ಪೊರೇಟ್ ತೆರಿಗೆ ಕಡಿತವು, “ಯಾವುದೇ ವಿನಾಯಿತಿ ಅಥವಾ ಪ್ರೋತ್ಸಾಹಕಗಳನ್ನು” ಪಡೆಯದ ಎಲ್ಲಾ ಸಂಸ್ಥೆಗಳಿಗೆ ಮೂಲ ದರಗಳನ್ನು ಶೇ. 30 ರಿಂದ 22ಕ್ಕೆ ಮತ್ತು ಎಲ್ಲಾ ಹೊಸ ಸಂಸ್ಥೆಗಳಿಗೆ ಶೇಕಡಾ 15ಕ್ಕೆ ಇಳಿಸಿತ್ತು.
ಆದರೆ ವಾಸ್ತವ ಹಾಗಿಲ್ಲ. ಅತಿ ಹೆಚ್ಚು ಲಾಭ ಮಾಡುವ ಕಂಪನಿಗಳು ಅತ್ಯಂತ ಕಡಿಮೆ ತೆರಿಗೆ ಪಾವತಿಸುತ್ತಿವೆ ಎಂದು ಬಜೆಟ್ ದಾಖಲೆಗಳು ಸ್ಪಷ್ಟವಾಗಿ ತೋರಿಸುತ್ತವೆ.
ಇಲ್ಲಿ ನೀಡಲಾಗಿರುವ ಗ್ರಾಫ್,ನಲ್ಲಿ ತೆರಿಗೆ ಕಡಿತಕ್ಕೆ ಮೊದಲು ಮತ್ತು ನಂತರದ ಹ.ವ 19 ಮತ್ತು ಹ.ವ 23ರ ಅವಧಿಯಲ್ಲಿ ವಿವಿಧ ಲಾಭದ ಹಂತಗಳಿಗೆ (ತೆರಿಗೆ ಪೂರ್ವ ಲಾಭ ಅಥವಾ PBT) ಅನ್ವಯವಾಗುವ 'ಪರಿಣಾಮಕಾರಿ ತೆರಿಗೆ ದರಗಳನ್ನು' ಚಿತ್ರಿಸುತ್ತದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ: ಮಧ್ಯಮ ಪ್ರಮಾಣದ ಲಾಭ ಗಳಿಸುವವರು ಈ ಹಿಂದೆ ಹೆಚ್ಚಿನ ತೆರಿಗೆ ಪಾವತಿಸುತ್ತಿದ್ದರು, ಆದರೆ ಹೊಸ ಪದ್ಧತಿಯಲ್ಲಿ ಹಾಗಿಲ್ಲ. ಎಂದಿನಂತೆ, ಗರಿಷ್ಠ ಲಾಭ ಮಾಡುವವರು ಕೂಡ (ರೂ.500 ಕೋಟಿಗಿಂತ ಹೆಚ್ಚು PBT ಹೊಂದಿರುವವರು) ಅತ್ಯಂತ ಕಡಿಮೆ ಪರಿಣಾಮಕಾರಿ ತೆರಿಗೆ ದರದಲ್ಲಿ ತೆರಿಗೆ ಪಾವತಿಸುತ್ತಿದ್ದಾರೆ.
ದೊಡ್ಡ ಕಂಪನಿಗಳ ಕಣ್ಣಾಮುಚ್ಚಾಲೆ
ಈ ಅಸಮತೋಲಿತ ತೆರಿಗೆ ದರವು ಸೂಚಿಸುವುದೇನೆಂದರೆ, ಮಧ್ಯಮ ಮತ್ತು ಉನ್ನತ ಮಟ್ಟದಲ್ಲಿ ಲಾಭ ಗಳಿಸುತ್ತಿರುವ ಅನೇಕ ಕಂಪನಿಗಳು ಒಂದೋ ಹೊಸ ತೆರಿಗೆ ಪದ್ಧತಿಯಿಂದ ದೂರ ಉಳಿದಿವೆ ಅಥವಾ ಈ ವ್ಯವಸ್ಥೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.
2025ರ ಬಜೆಟ್ ದಾಖಲೆಯು ಇದನ್ನು ಒಪ್ಪಿಕೊಳ್ಳುತ್ತಾ ಹೀಗೆ ಹೇಳುತ್ತದೆ: ಹೆಚ್ಚಿನ ಸಂಖ್ಯೆಯ ಕಂಪನಿಗಳು (6,62,877 ಅಥವಾ ಶೇ. 61.61 ರಷ್ಟು) ತಮ್ಮ ಲಾಭಕ್ಕೆ ಹೋಲಿಸಿದರೆ ಅತಿ ಕಡಿಮೆ ಪ್ರಮಾಣದ ತೆರಿಗೆಯನ್ನು ಪಾವತಿಸಿವೆ.
ಆದರೆ ಈ ಬಗ್ಗೆ ಬಜೆಟ್ ನೀಡುವ ವಿವರಣೆಯು ಗೊಂದಲದಿಂದ ಕೂಡಿದೆ. ಅದು ಹೀಗೆ ಹೇಳುತ್ತದೆ: “ದೊಡ್ಡ ಕಂಪನಿಗಳು ಹೆಚ್ಚಿನ ಕಡಿತ ಮತ್ತು ಪ್ರೋತ್ಸಾಹಕಗಳನ್ನು ಬಳಸಿಕೊಳ್ಳುತ್ತಿವೆ ಅಥವಾ ಶೇ. 22ರಷ್ಟು ಕಡಿಮೆ ತೆರಿಗೆ ದರ (ಜೊತೆಗೆ ಸೆಸ್ ಮತ್ತು ಸರ್ಚಾರ್ಜ್) ಹೊಂದಿರುವ ಹೊಸ ಪದ್ಧತಿಗೆ ಬದಲಾಗಿವೆ ಎಂಬುದು ಇದರಿಂದ ಎದ್ದು ಕಾಣುತ್ತದೆ."
ಯಾವ ಹಾದಿಯಲ್ಲಾದರೂ ದೊಡ್ಡ ಕಂಪನಿಗಳೇ ಅತ್ಯಂತ ಕಡಿಮೆ ತೆರಿಗೆ ಪಾವತಿಸುತ್ತಿವೆ ಎಂದಾದರೆ, ಬೃಹತ್ ತೆರಿಗೆ ಆದಾಯದ ನಷ್ಟಕ್ಕೆ ಕಾರಣವಾದ ಈ ಹೊಸ ಪದ್ಧತಿಯ ಅರ್ಥವಾದರೂ ಏನು? ಇದನ್ನು ನಿಸ್ಸಂದೇಹವಾಗಿ ಹಿಂತೆಗೆದುಕೊಳ್ಳಬೇಕು. ನಿಜವಾಗಿ ಏನು ನಡೆಯುತ್ತಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಎಷ್ಟು ಕಂಪನಿಗಳು ಹೊಸ ಪದ್ಧತಿಗೆ ಬದಲಾಗಿವೆ ಎಂಬ ಮಾಹಿತಿಯನ್ನೂ ಸಹ ಬಜೆಟ್ ದಾಖಲೆಯು ಬಹಿರಂಗಪಡಿಸಿಲ್ಲ.
ತೆರಿಗೆ ನಷ್ಟ ಮತ್ತು ಷರತ್ತುಗಳು!
2016ರ ಹಣಕಾಸು ವರ್ಷದಿಂದ ಪ್ರಾರಂಭಿಸಿ, ಬಜೆಟ್ಗಳಲ್ಲಿ ಲೆಕ್ಕಪರಿಶೋಧನೆಯ ಒಂದು ಬದಲಾವಣೆಯನ್ನು ತರಲಾಯಿತು. ಇದರಲ್ಲಿ ಪರೋಕ್ಷ ತೆರಿಗೆ ವಿನಾಯಿತಿಗಳನ್ನು "ಷರತ್ತುಬದ್ಧ" ಮತ್ತು "ಷರತ್ತುರಹಿತ" ಎಂದು ವಿಂಗಡಿಸಲಾಯಿತು. ಕೆಲವು ನೀತಿಗಳ ಅನಿವಾರ್ಯತೆಯಿಂದಾಗಿ "ಷರತ್ತುರಹಿತ" ವಿನಾಯಿತಿಗಳನ್ನು ಎಲ್ಲಾ ಕೈಗಾರಿಕೆಗಳಿಗೆ ನೀಡಲಾಗುತ್ತದೆ ಎಂಬ ಕಾರಣ ನೀಡಿ, ಅವುಗಳನ್ನು ತೆರಿಗೆ ನಷ್ಟದ ಲೆಕ್ಕಾಚಾರದಲ್ಲಿ ಪರಿಗಣಿಸಲಾಗುತ್ತಿಲ್ಲ.
ತೆರಿಗೆ ನಷ್ಟದ ವಿವರ ಬಂದ್
2018ರ ಹಣಕಾಸು ವರ್ಷದಿಂದ ಮತ್ತೊಂದು ಬದಲಾವಣೆಯನ್ನು ಸೇರ್ಪಡೆ ಮಾಡಲಾಯಿತು. ಕೇಂದ್ರ ಅಬಕಾರಿ ಸುಂಕವು (ಪರೋಕ್ಷ ತೆರಿಗೆ) ಜಿಎಸ್ಟಿಯಲ್ಲಿ ವಿಲೀನಗೊಂಡಿದೆ ಎಂದು ಹೇಳುವ ಮೂಲಕ ಬಜೆಟ್ಗಳಲ್ಲಿ ಅದರಿಂದಾಗುವ ತೆರಿಗೆ ನಷ್ಟದ ವಿವರ ನೀಡುವುದನ್ನು ನಿಲ್ಲಿಸಲಾಯಿತು. ಆದರೆ ಇದು ಸಂಪೂರ್ಣ ಸತ್ಯವಾಗಿರಲಿಲ್ಲ. ಏಕೆಂದರೆ ಹೆಚ್ಚಿನ ಮೌಲ್ಯದ ಪೆಟ್ರೋಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಇನ್ನೂ ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿವೆ.
ಈ ಎರಡು ಕ್ರಮಗಳ ಅರ್ಥವೇನೆಂದರೆ, ದೊಡ್ಡ ಕಂಪನಿಗಳು ಹೇಗೆ ನೋಡಿದರೂ ಅತಿ ಕಡಿಮೆ ತೆರಿಗೆಯನ್ನೇ ಪಾವತಿಸುತ್ತಿವೆ ಎಂದಾದರೆ, ಬೃಹತ್ ತೆರಿಗೆ ಆದಾಯದ ನಷ್ಟಕ್ಕೆ ಕಾರಣವಾದ ಈ ಹೊಸ ಪದ್ಧತಿಯ ಉದ್ದೇಶವಾದರೂ ಏನು? ಕಾರ್ಪೊರೇಟ್ಗಳಿಗೆ ನೀಡಲಾಗುತ್ತಿರುವ ನೈಜ ತೆರಿಗೆ ವಿನಾಯಿತಿಗಳನ್ನು ಅತ್ಯಂತ ಕಡಿಮೆ ಎಂದು ಬಿಂಬಿಸಲಾಗುತ್ತಿದೆ, ಆದ್ದರಿಂದ ಈ ಪದ್ಧತಿಯನ್ನು ಹಿಂತೆಗೆದುಕೊಳ್ಳಬೇಕು.
ಹೀಗಿದ್ದರೂ, ಬಜೆಟ್ ದಾಖಲೆಗಳು ಬಹಿರಂಗಪಡಿಸುವ ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿನ (ಮೂಲ ಕಸ್ಟಮ್ಸ್ ಸುಂಕ) ವಿನಾಯಿತಿಯಿಂದಾದ ನಷ್ಟವನ್ನು ಕೆಳಗಿನ ಗ್ರಾಫ್ ನಲ್ಲಿ ಕಾಣಬಹುದಾಗಿದೆ. ತೆರಿಗೆ ಕಡಿತದ ಹಿಂದಿನ ಎರಡು ಅವಧಿಗಳು ಮತ್ತು ಕಡಿತದ ನಂತರದ ಇತ್ತೀಚಿನ ಎರಡು ಆರ್ಥಿಕ ವರ್ಷಗಳನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ. ಇವು ಆಯಾ ಅವಧಿಯ ಸಾಮಾನ್ಯ ಪ್ರವೃತ್ತಿಯನ್ನು ಪ್ರತಿನಿಧಿಸುತ್ತವೆ.
ಆದಾಯ ತೆರಿಗೆ ಏರಿಕೆ ಏಕೆ?
ಕಾರ್ಪೊರೇಟ್ ತೆರಿಗೆ ಸಂಗ್ರಹದ ವಿಷಯದಲ್ಲಿ ತೋರಿದ ಉದಾರವಾದಿ ಧೋರಣೆಗೆ ವ್ಯತಿರಿಕ್ತವಾಗಿ, ವೈಯಕ್ತಿಕ ಆದಾಯ ತೆರಿಗೆಯನ್ನು ಪತ್ತೆಹಚ್ಚುವಲ್ಲಿ ಮತ್ತು ಅದನ್ನು ಪಾವತಿಸುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಕೇಂದ್ರ ಸರ್ಕಾರವು ಬಹಳ ನಿಖರವಾಗಿ ಕಾರ್ಯನಿರ್ವಹಿಸಿದೆ. ಹೀಗಾಗಿ, ವೈಯಕ್ತಿಕ ಆದಾಯ ತೆರಿಗೆಯಲ್ಲಿ ನೀಡಲಾದ ರಿಯಾಯಿತಿಗಳು ಅದರ ಸಂಗ್ರಹದ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮ ಬೀರದೆ, ಬದಲಾಗಿ ಸಂಗ್ರಹವು ಗಣನೀಯವಾಗಿ ಏರಿಕೆಯಾಗಿದೆ.
ಜಿಎಸ್ಟಿ ಜಾರಿಗೊಳಿಸುವ ಮೂಲಕ ಆರ್ಥಿಕತೆಯ ಔಪಚಾರಿಕೀಕರಣ, ಡಿಜಿಟಲ್ ಪಾವತಿಗಳಿಗೆ ಉತ್ತೇಜನ, ಇ-ಇನ್ವಾಯ್ಸಿಂಗ್ ಹಾಗೂ ಪ್ಯಾನ್-ಆಧಾರ್ ಲಿಂಕ್ ಪ್ರಕ್ರಿಯೆ, ಬ್ಯಾಂಕ್ಗಳು ಮತ್ತು ಮ್ಯೂಚುವಲ್ ಫಂಡ್ಗಳಿಂದ ವರದಿ ಪಡೆಯುವಂತಹ ದತ್ತಾಂಶಗಳ ಸಮರ್ಥ ಬಳಕೆ—ಇವೆಲ್ಲವೂ ಈ ಏರಿಕೆಗೆ ಕಾರಣವಾಗಿವೆ.
ಕೆಳಗಿನ ಗ್ರಾಫ್ ನಲ್ಲಿ ತೋರಿಸಿದಂತೆ, ಕಾರ್ಪೊರೇಟ್ ತೆರಿಗೆ ಸಂಗ್ರಹದ ಕುಸಿತವು ಹೆಚ್ಚು ಕಡಿಮೆ ವೈಯಕ್ತಿಕ ಆದಾಯ ತೆರಿಗೆಯ ಏರಿಕೆ ಮತ್ತು ಮತ್ತೊಂದು ಪ್ರತಿಗಾಮಿ ತೆರಿಗೆಯಾದ ಜಿಎಸ್ಟಿ (ಪರೋಕ್ಷ ತೆರಿಗೆ) ಮೂಲಕ ಸರಿದೂಗಿಸಲ್ಪಟ್ಟಿದೆ.
2019ರ ಕಾರ್ಪೊರೇಟ್ ತೆರಿಗೆ ಕಡಿತವು ಆರ್ಥಿಕತೆಗೆ ಮಾಡಿರುವ ಹಾನಿಯನ್ನು ಗಮನಿಸಿದರೆ, ಈ ವ್ಯವಸ್ಥೆಯಲ್ಲಿ 'ಯಾವುದೂ ಉಚಿತವಾಗಿ ಸಿಗುವುದಿಲ್ಲ'ಎಂಬ ಸಂದೇಶವನ್ನು ರವಾನಿಸಲು ಮುಂಬರುವ ಬಜೆಟ್ನಲ್ಲಿ ಈ ತೆರಿಗೆ ಕಡಿತವನ್ನು ನಿಶ್ಚಿತವಾಗಿ ಹಿಂತೆಗೆದುಕೊಳ್ಳಲೇಬೇಕು.

