Shadow of war threat: Pakistan Super League cricket tournament to be held without spectators!
x

ಪಾಕಿಸ್ತಾನ ಸೂಪರ್ ಲೀಗ್ 

ಯುದ್ಧ ಭೀತಿಯ ಛಾಯೆ: ಪ್ರೇಕ್ಷಕರಿಲ್ಲದೆ ನಡೆಯಲಿದೆ 'ಪಾಕಿಸ್ತಾನ ಸೂಪರ್ ಲೀಗ್' ಕ್ರಿಕೆಟ್ ಟೂರ್ನಿ!

ಪಿಎಸ್‌ಎಲ್‌ನ 11ನೇ ಆವೃತ್ತಿಯು ಮಾರ್ಚ್ 26 ರಿಂದ ಅದ್ಧೂರಿಯಾಗಿ ಆರಂಭವಾಗಬೇಕಿತ್ತು. ಆದರೆ ಭದ್ರತಾ ದೃಷ್ಟಿಯಿಂದ, ಟೂರ್ನಿಯನ್ನು ಕೇವಲ ಲಾಹೋರ್ ಮತ್ತು ಕರಾಚಿ ಮೈದಾನಗಳಿಗಷ್ಟೇ ಸೀಮಿತಗೊಳಿಸಲಾಗಿದೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಭುಗಿಲೆದ್ದಿರುವ ಯುದ್ಧದ ಕಾವು ಇದೀಗ ಕ್ರೀಡಾ ವಲಯಕ್ಕೂ ತಟ್ಟಿದೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಸಂಘರ್ಷ ಹಾಗೂ ಪಾಕ್-ಅಫ್ಘಾನಿಸ್ತಾನ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಮುಂಬರುವ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಟೂರ್ನಿಯ ಆರಂಭಿಕ ಪಂದ್ಯಗಳನ್ನು ಪ್ರೇಕ್ಷಕರಿಲ್ಲದೆ ಖಾಲಿ ಮೈದಾನದಲ್ಲಿ ನಡೆಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಕಠಿಣ ನಿರ್ಧಾರ ಕೈಗೊಂಡಿದೆ. ಈ ಕುರಿತು ಮಾಹಿತಿ ನೀಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಕ್ವಿ, ಸರ್ಕಾರದ ಆದೇಶದ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪಿಎಸ್‌ಎಲ್‌ನ 11ನೇ ಆವೃತ್ತಿಯು ಮಾರ್ಚ್ 26 ರಿಂದ ಅದ್ಧೂರಿಯಾಗಿ ಆರಂಭವಾಗಬೇಕಿತ್ತು. ಆದರೆ ಭದ್ರತಾ ದೃಷ್ಟಿಯಿಂದ, ಟೂರ್ನಿಯನ್ನು ಕೇವಲ ಲಾಹೋರ್ ಮತ್ತು ಕರಾಚಿ ಮೈದಾನಗಳಿಗಷ್ಟೇ ಸೀಮಿತಗೊಳಿಸಲಾಗಿದೆ ಹಾಗೂ ಉದ್ಘಾಟನಾ ಸಮಾರಂಭವನ್ನೂ ರದ್ದುಪಡಿಸಲಾಗಿದೆ. "ಪಿಎಸ್‌ಎಲ್ ಅಂತಾರಾಷ್ಟ್ರೀಯ ಮಟ್ಟದ ಬ್ರ್ಯಾಂಡ್ ಆಗಿದ್ದು ನಮ್ಮ ಹೆಮ್ಮೆಯಾಗಿದೆ. ಆದರೂ ಯುದ್ಧದ ಭೀತಿಯಿಂದಾಗಿ ಪ್ರೇಕ್ಷಕರಿಗೆ ಪ್ರವೇಶ ನಿರಾಕರಿಸಲಾಗಿದೆ. ಆದರೆ, ಯಾವುದೇ ಭದ್ರತಾ ಸಮಸ್ಯೆಯಿಲ್ಲ, ಮಾರ್ಚ್ 22ರ ರಾತ್ರಿಯಿಂದಲೇ ವಿದೇಶಿ ಆಟಗಾರರು ಪಾಕಿಸ್ತಾನಕ್ಕೆ ಬಂದಿಳಿಯಲಿದ್ದಾರೆ" ಎಂದು ನಕ್ವಿ ಭರವಸೆ ನೀಡಿದ್ದಾರೆ. ಪ್ರೇಕ್ಷಕರಿಲ್ಲದ ಕಾರಣ ಫ್ರಾಂಚೈಸಿಗಳಿಗೆ ಉಂಟಾಗುವ ಆರ್ಥಿಕ ನಷ್ಟವನ್ನು ಪಿಸಿಬಿ ಭರಿಸಲಿದೆ ಎಂದೂ ಅವರು ತಿಳಿಸಿದ್ದಾರೆ.

ಐಪಿಎಲ್‌ಗೆ ಹೋದ ಆಟಗಾರರ ವಿರುದ್ಧ ಕಾನೂನು ಸಮರ

ಪಾಕಿಸ್ತಾನ ಸೂಪರ್ ಲೀಗ್ ಒಪ್ಪಂದವನ್ನು ಗಾಳಿಗೆ ತೂರಿ, ಭಾರತದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಲು ತೆರಳಿರುವ ಆಟಗಾರರ ವಿರುದ್ಧ ಪಿಸಿಬಿಯ ಕಾನೂನು ವಿಭಾಗವು ಪ್ರಕರಣ ದಾಖಲಿಸಲಿದೆ ಎಂದು ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ, ಹಲವು ಅತ್ಯುತ್ತಮ ವಿದೇಶಿ ಆಟಗಾರರು ಪಿಎಸ್‌ಎಲ್‌ನಲ್ಲಿ ಭಾಗವಹಿಸುತ್ತಿರುವುದು ಟೂರ್ನಿಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

ಇರಾನ್ ಯುದ್ಧ ಮತ್ತು ತಾಲಿಬಾನ್ ದಾಳಿಯ ಆತಂಕ

ಫೆಬ್ರವರಿ 28ರಂದು ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ಸೇನಾ ಕಾರ್ಯಾಚರಣೆ ನಡೆಸಿದ ಬಳಿಕ, ಇರಾನ್‌ನೊಂದಿಗೆ ನೇರ ಗಡಿ ಹಂಚಿಕೊಂಡಿರುವ ಪಾಕಿಸ್ತಾನದಲ್ಲಿ ಆತಂಕ ಮನೆಮಾಡಿದೆ. ಇದರ ಜೊತೆಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಸಂಘರ್ಷವೂ ಬೂದಿ ಮುಚ್ಚಿದ ಕೆಂಡದಂತಿದ್ದು, ಟೂರ್ನಿಯ ನಡೆಯುವ ವೇಳೆ ತಾಲಿಬಾನ್ ಉಗ್ರರು ದಾಳಿ ನಡೆಸುವ ಭೀತಿ ಆಡಳಿತವನ್ನು ಕಾಡುತ್ತಿದೆ. ಈ ಎಲ್ಲಾ ಸೂಕ್ಷ್ಮ ಭದ್ರತಾ ಕಾರಣಗಳಿಗಾಗಿಯೇ ಪ್ರೇಕ್ಷಕರಿಗೆ ನಿಷೇಧ ಹೇರಲಾಗಿದೆ.

Read More
Next Story