
ಸರ್ಕಾರದ ಆದೇಶ ಪಾಲಿಸಿದರೆ ಶಿಕ್ಷೆ ನೀಡಲಾಗದು': ಪಾಕ್ಗೆ ಅಭಯ ನೀಡಿದ ಐಸಿಸಿ ಮಾಜಿ ಅಧ್ಯಕ್ಷ
ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತದ ವಿರುದ್ಧದ 'ಹೈ ವೋಲ್ಟೇಜ್' ಪಂದ್ಯವನ್ನು ಬಹಿಷ್ಕರಿಸುವಂತೆ ಪಾಕಿಸ್ತಾನ ಸರ್ಕಾರ ಪಿಸಿಬಿಗೆ ಸೂಚನೆ ನೀಡಿದೆ.
ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನದ ನಿರ್ಧಾರ ತೀವ್ರ ಚರ್ಚೆಗೆ ಗ್ರಾಸವಾಗಿರುವಾಗಲೇ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಮಾಜಿ ಅಧ್ಯಕ್ಷ ಎಹ್ಸಾನ್ ಮಣಿ ಪಾಕ್ ಬೆನ್ನಿಗೆ ನಿಂತಿದ್ದಾರೆ. "ಸರ್ಕಾರದ ಸೂಚನೆಯ ಮೇರೆಗೆ ಪಾಕಿಸ್ತಾನ ಈ ನಿರ್ಧಾರ ಕೈಗೊಂಡಿರುವುದರಿಂದ, ಐಸಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (PCB) ಶಿಕ್ಷಿಸಲು ಸಾಧ್ಯವಿಲ್ಲ," ಎಂದು ಅವರು ವಾದಿಸಿದ್ದಾರೆ.
ಐಸಿಸಿ ಈ ಹಿಂದೆ ಭಾರತಕ್ಕೆ ನೀಡಿದ ರಿಯಾಯಿತಿಯನ್ನೇ ಪಾಕಿಸ್ತಾನಕ್ಕೂ ನೀಡಬೇಕು ಎಂಬುದು ಮಣಿ ಅವರ ವಾದ. "2025ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ನಿರಾಕರಿಸಿದಾಗಲೂ 'ಸರ್ಕಾರದ ಅನುಮತಿ ಇಲ್ಲ' ಎಂಬ ಕಾರಣವನ್ನೇ ನೀಡಿತ್ತು. ಆಗ ಐಸಿಸಿ ಅದನ್ನು ಒಪ್ಪಿಕೊಂಡಿತ್ತು. ಈಗ ಪಾಕಿಸ್ತಾನ ಕೂಡ ಸರ್ಕಾರದ ಆದೇಶ ಪಾಲಿಸುತ್ತಿದೆ. ಹೀಗಿರುವಾಗ ದ್ವಂದ್ವ ನೀತಿ ಅನುಸರಿಸಲು ಸಾಧ್ಯವಿಲ್ಲ," ಎಂದು ಮಣಿ 'ಸ್ಪೋರ್ಟ್ಸ್ಸ್ಟಾರ್'ಗೆ ತಿಳಿಸಿದ್ದಾರೆ.
ಸರ್ಕಾರದ ಆದೇಶವೇನು?
ಫೆಬ್ರವರಿ 15ರಂದು ಕೊಲಂಬೊದಲ್ಲಿ ನಡೆಯಬೇಕಿದ್ದ ಭಾರತದ ವಿರುದ್ಧದ 'ಹೈ ವೋಲ್ಟೇಜ್' ಪಂದ್ಯವನ್ನು ಬಹಿಷ್ಕರಿಸುವಂತೆ ಪಾಕಿಸ್ತಾನ ಸರ್ಕಾರ ಪಿಸಿಬಿಗೆ ಸೂಚನೆ ನೀಡಿದೆ. ಆದರೆ, ಫೆಬ್ರವರಿ 7ರಿಂದ ಆರಂಭವಾಗುವ ಟೂರ್ನಿಯ ಉಳಿದ ಪಂದ್ಯಗಳಲ್ಲಿ ಭಾಗವಹಿಸಲು ಅನುಮತಿ ನೀಡಿದೆ.
ಐಸಿಸಿ ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ್ದು, "ಆಯ್ದ ಪಂದ್ಯಗಳನ್ನು ಆಡುವುದು ಜಾಗತಿಕ ಕ್ರೀಡಾಕೂಟದ ನಿಯಮಗಳಿಗೆ ವಿರುದ್ಧವಾಗಿದೆ. ಇದು ಜಾಗತಿಕ ಕ್ರಿಕೆಟ್ ಪರಿಸರ ವ್ಯವಸ್ಥೆಯ ಮೇಲೆ ದೀರ್ಘಕಾಲೀನ ಪರಿಣಾಮ ಬೀರಬಹುದು," ಎಂದು ಎಚ್ಚರಿಸಿದೆ. ಅಲ್ಲದೆ, ಪಾಕಿಸ್ತಾನದ ಈ ನಿರ್ಧಾರದಿಂದ ಕ್ರಿಕೆಟ್ ಮಂಡಳಿಗೆ ಆರ್ಥಿಕ ನಷ್ಟವೂ ಉಂಟಾಗಬಹುದು ಎಂದು ಸೂಚ್ಯವಾಗಿ ತಿಳಿಸಿದೆ.
ಮುಂದೇನು?
ನಿಯಮಗಳ ಪ್ರಕಾರ, ಎದುರಾಳಿ ತಂಡ ಮೈದಾನಕ್ಕೆ ಬರದಿದ್ದರೆ ಪಂದ್ಯದ ರೆಫರಿ ವಾಕ್ಓವರ್ (Walkover) ನೀಡಿ, ಭಾರತಕ್ಕೆ ಪೂರ್ಣ ಅಂಕಗಳನ್ನು ನೀಡುತ್ತಾರೆ. ಭಾರತ ತಂಡ ಈಗಾಗಲೇ ಕೊಲಂಬೊಗೆ ತೆರಳಲು ಸಜ್ಜಾಗಿದ್ದು, ನಾಯಕ ಸೂರ್ಯಕುಮಾರ್ ಯಾದವ್ ಟಾಸ್ಗೆ ಹಾಜರಾಗಲಿದ್ದಾರೆ. ಪಾಕ್ ನಾಯಕ ಸಲ್ಮಾನ್ ಅಲಿ ಆಗಾ ಬರದಿದ್ದರೆ, ಭಾರತ ವಿಜಯಿ ಎಂದು ಘೋಷಿಸಲಾಗುತ್ತದೆ.

