ಶೇಖ್ ಹಸೀನಾರ ʼರಾಜಕೀಯ ಆಶ್ರಯʼ ದ ಪ್ರಶ್ನೆ ರಾಜತಾಂತ್ರಿಕವಾಗಿ ಭಾರತಕ್ಕೆ ನುಂಗಲಾರದ ತುತ್ತು
x

ಶೇಖ್ ಹಸೀನಾರ ʼರಾಜಕೀಯ ಆಶ್ರಯʼ ದ ಪ್ರಶ್ನೆ ರಾಜತಾಂತ್ರಿಕವಾಗಿ ಭಾರತಕ್ಕೆ ನುಂಗಲಾರದ ತುತ್ತು

ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಭಾರತದಲ್ಲಿ ಆಶ್ರಯ ಪಡೆಯಲು ಎಲ್ಲ ರೀತಿಯ ಅರ್ಹತೆ ಪಡೆದವರು. ಅವರು ಭಾರತಕ್ಕೆ ಎಷ್ಟು ಹತ್ತಿರವಾಗಿದ್ದಾರೆ ಎಂಬುದನ್ನು ಅರ್ಥಮಾಡಿಕೊಂಡರೆ, ಅವರಿಗೆ ಭಾರದಲ್ಲಿ ಆಶ್ರಯ ಪಡೆಯಲು ಮತ್ತು ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ಅವರಿಗೆ ಉಳಿದುಕೊಳ್ಳಲು ಅವಕಾಶ ನೀಡುವುದು ಹೆಚ್ಚು ಕಷ್ಟವಾಗಲಿಕ್ಕಿಲ್ಲ.


ಭಾರತದ ಆಪ್ತ ಸ್ನೇಹಿತೆ ಮತ್ತು ನೆರೆ ರಾಷ್ಟ್ರವಾದ ಬಾಂಗ್ಲಾ ದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಮತ್ತು ಒಂದರ್ಥದ ದಂಗೆಯ ನಂತರ ಅಲ್ಲಿಂದ ಸ್ಥಳಾಂತರಗೊಂಡಿರುವ ಅಲ್ಲಿನ ಮಾಜಿ ಪ್ರಧಾನಿ, ತನ್ನ ಮಿತ್ರ ರಾಷ್ಟ್ರವಾಗಿರುವ ಭಾರತದಲ್ಲಿ ಔಪಚಾರಿಕವಾಗಿ ರಾಜಕೀಯ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದರೆ, ಈ ಸಂದರ್ಭದಲ್ಲಿ ಭಾರತಕ್ಕೆ ತುಸು ಕಷ್ಟವಾಗಿ ಪರಿಣಮಿಸಬಹುದು.

ಬಾಂಗ್ಲಾ ದೇಶದಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಪ್ರತಿಭಟನೆಯ ನಂತರ, ಶೇಖ್‌ ಹಸೀನಾ ತಮ್ಮ ಆಪ್ತರೊಂದಿಗೆ ದೇಶ ತ್ಯಜಿಸಿದರು. ಜೊತೆಯಲ್ಲಿ ಬಾಂಗ್ಲಾ ದೇಸದ ಸೇನೆ ಕೂಡ ಆಕೆಯನ್ನು ದೇಶ ತೊರೆಯುವಂತೆ ಒತ್ತಾಯಿಸಿತು. ಹಸೀನಾ ರಾಜಕೀಯ ಆಶ್ರಯಕ್ಕಾಗಿ ಇಂಗ್ಲೆಂಡ್‌ ಗೆ ತೆರಳುವ ಮೊದಲು, ಭಾರತದಲ್ಲಿ ಕೆಲವು ಕಾಲ ಆಶ್ರಯ ಪಡೆಯುತ್ತಾರೆ ಎಂಬುದು ಈ ಮುಂಚಿನ ನಂಬಿಕೆಯಾಗಿತ್ತು. ಆದರೆ ಈಗ ಯುನೈಟೆಡ್‌ ಕಿಂಗ್‌ಡಮ್‌ ನ ಕೀರ್‌ ಸ್ಟ್ರಾಮರ್‌ ಸರ್ಕಾರವು ಅದೇಕೋ ಹಸಿನಾಗೆ ರಾಜಾಶ್ರಯವನ್ನು ನಿರಾಕರಿಸಿದೆ. ಈ ಕಾರಣದಿಂದಾಗಿ ಹಸೀನಾ ಭಾರತದ ರಾಜಕೀಯ ಆಶ್ರಯದಲ್ಲಿಯೇ ಇರಬೇಕಾದ ಸಂದರ್ಭ ಎದುರಾಗಿದೆ.

ಭಾರತದೊಂದಿಗೆ ಹಸೀನಾ ಅವರ ಸಂಬಂಧ

ಯುರೋಪಿಯನ್ ರಾಷ್ಟ್ರವು ಆಶ್ರಯ ನೀಡಲು ಮುಂದೆ ಬರುವ ಸಾಧ್ಯತೆಯಿದೆ, ಆದರೆ ಅದು ಇನ್ನೂ ಊಹಾಪೋಹದ ಹಂತಕ್ಕೆ ಸ್ಥಗಿತಗೊಂಡಂತೆ ಕಾಣುತ್ತಿದೆ. ಹಸೀನಾ ಭಾರತದಲ್ಲಿರುವುದರಿಂದ ಮತ್ತು ಶಾಂತಿಯುತ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಆಕೆಗೆ ಸದ್ಯಕ್ಕೆ ಅಗತ್ಯವಿರುವ ಭದ್ರತೆಯನ್ನು ನೀಡುವುದು, ಭಾರತಕ್ಕೆ ಸಾಧ್ಯವಾಗಬಹುದು. ಈ ಹಂತದಲ್ಲಿ ಹಸೀನಾಗೆ ತರಾತುರಿಯಲ್ಲಿ ರಾಜಕೀಯ ಆಶ್ರಯ ನೀಡಿ ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಇತರ ಪ್ರಜಾತಾಂತ್ರಿಕ ದೇಶಗಳಿಗೆ ಕಷ್ಟವಾಗಬಹುದೆನ್ನಿಸುತ್ತಿದೆ.

ಭಾರತದ ಆಪ್ತ ಸ್ನೇಹಿತೆ ಮತ್ತು ನೆರೆ ರಾಷ್ಟ್ರವಾದ ಬಾಂಗ್ಲಾ ದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಮತ್ತು ಒಂದರ್ಥದ ದಂಗೆಯ ನಂತರ ಅಲ್ಲಿಂದ ಸ್ಥಳಾಂತರಗೊಂಡಿರುವ ಅಲ್ಲಿನ ಮಾಜಿ ಪ್ರಧಾನಿ, ತನ್ನ ಮಿತ್ರ ರಾಷ್ಟ್ರವಾಗಿರುವ ಭಾರತದಲ್ಲಿ ಔಪಚಾರಿಕವಾಗಿ ರಾಜಕೀಯ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದರೆ, ಈ ಸಂದರ್ಭದಲ್ಲಿ ಭಾರತಕ್ಕೆ ತುಸು ಕಷ್ಟವಾಗಿ ಕೂಡ ಪರಿಣಮಿಸಬಹುದು. ಕಾರಣ ರಾಜತಾಂತ್ರಿಕವಾಗಿ ಇದು ಭಾರತಕ್ಕೆ ಕೂಡ ಬಿಸಿ ತುಪ್ಪವನ್ನು ಬಾಯಿಗೆ ಹಾಕಿಕೊಂಡು ನುಂಗಲೂ ಆಗದ, ಉಗುಳಲೂ ಆಗದಂಥ ಸಂಕಷ್ಟ ಸ್ಥಿತಿ ಎನ್ನಬಹುದು.

ದಕ್ಷಿಣ ಏಷ್ಯಾದ ನೆರೆಹೊರೆಯ ಎಲ್ಲಾ ಇತರ ದೇಶಗಳು, ಹಸೀನಾ ಅವರಿಗೆ ರಾಜಕೀಯ ಆಶ್ರಯ ನೀಡಲು ಅದೇಕೋ ಹಿಂಜರಿಯುತ್ತಿರುವ ಈ ಸಂದರ್ಭದಲ್ಲಿ ಭಾರತಕ್ಕೆ ಇದುವರೆಗೆ ಎಲ್ಲ ರೀತಿಯಲ್ಲೂ ತೀರಾ ಹತ್ತಿರವಾಗಿದ್ದ ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಹಸೀನಾ ಭಾರತಕ್ಕೆ ಬೆಂಬಲವಾಗಿ ನಿಂತಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಚೀನಾ ದೇಶ, ಬಾಂಗ್ಲಾದ ಅತಿ ದೊಡ್ಡ ವಾಣಿಜ್ಯಾತ್ಮಕ ಪಾಲುದಾರನಾಗಿ ತೋರ್ಪಡಿಸಿಕೊಂಡಿದ್ದರೂ, ಹಸೀನಾ, ಚೀನಾದೊಂದಿಗೆ ಅಂಥದ್ದೇನೂ, ಉತ್ತಮ ಬಾಂಧವ್ಯ ಹೊಂದಿರತ ಭಾರತಕ್ಕೆ ಅವಕಾಶಗಳ ಬಾಗಿಲನ್ನು ತೆರೆದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಈ ಪೈಕಿ ತೀರಾ ಇತ್ತೀಚಿನ ಪ್ರತಿಷ್ಠಿತ ಮತ್ತು ನಿರ್ಣಾಯಕ ಯೋಜನೆಯಾದ ಒಂದು ಬಿಲಿಯನ್‌ ಡಾಲರ್‌ ವೆಚ್ಚದ ತೀಸ್ತಾ ನದಿಯ ಸಮಗ್ರ ನಿರ್ವಹಣೆ ಮತ್ತು ನವೀಕರಣ ಯೋಜನೆ ಮುಖ್ಯವಾದದ್ದೆನ್ನುವುದನ್ನು ಮರೆಯಲಾಗದು. ಈ ಯೋಜನೆಯ ಪೂರ್ವ ಭಾವಿ ಸಮೀಕ್ಷೆಯನ್ನು ಚೀನಾ ಆರಂಭಿಸಿ ಪೂರ್ಣಗೊಳಿಸಿದ್ದರು, ಹಸೀನಾ ಭಾರತದ ಪರವಾಗಿ ನಿಂತು ಆ ಯೋಜನೆಗೆ ಭಾರತದೊಂದಿಗೆ ರಾಜತಾಂತ್ರಿಕ ಒಪ್ಪಂದಕ್ಕೆ ಮುಂದಾಗಿರುವುದು, ಚೀನಾ ದೇಶಕ್ಕೆ ಅಷ್ಟೇನೂ ರುಚಿಸಿದಂತೆ ಕಾಣುತ್ತಿಲ್ಲ. ಚೀನಾದ ಕೋಪದ ರಾಜಕಾರಣದ ಅರಿವಿದ್ದೂ, ಹಸೀನಾ ಈ ಕಟುವಾದ, ಅಷ್ಟೇ ಕ್ಲಿಷ್ಟವಾದ ತೀರ್ಮಾನವನ್ನು ತೆಗೆದುಕೊಂಡಿದ್ದರು. ಈ ಕುರಿತು, ಇತ್ತೀಚೆಗೆ ಚೀನಾದೊಂದಿಗೆ ಮಾತುಕತೆಗೆ ತೆರಳಿದ್ದ, ಹಸೀನಾ ತಮ್ಮ ಪ್ರವಾಸವನ್ನು ಹಠಾತ್‌ ಆಗಿ ಮೊಟಕುಗೊಳಿಸಿ, ಢಾಕಾಗೆ ಹಿಂದಿರುಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಹಸೀನಾ ಅವರ ಈ ನಡೆ, ಬಾಂಗ್ಲಾ ಮತ್ತು ಚೀನಾದ ನಡುವಿನ ಸಂಬಂಧ ಅಷ್ಟೇನೂ ಮಧುರವಾಗಿಲ್ಲ ಎಂಬುದನ್ನು ಮತ್ತಷ್ಟು ಮನದಟ್ಟು ಮಾಡುತ್ತದೆ. ಭರವಸೆಯ 5 ಬಿಲಿಯನ್ ಡಾಲರ್‌ ಸಾಲದ ಮೊತ್ತದಲ್ಲಿ ಕೇವಲ 100 ಮಿಲಿಯನ್‌ ಡಾಲರ್‌ ಸಾಲವನ್ನು ನೀಡಲು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿರುವುದು, ಚೀನಾ ದೇಶದ ತೋರಿಕೆಯ ರಾಜತಾಂತ್ರಿಕ ಪಟ್ಟಿನ ದ್ಯೋತಕವಾಗಿದೆ.

ಆದರೆ ಈಗ ಅದೆಲ್ಲವೂ ಈಗ ಮುಗಿದ ಅಧ್ಯಾಯ ಪರಿಸ್ಥಿತಿಯು ನಾಟಕೀಯವಾಗಿ 180 ಡಿಗ್ರಿ ಯಷ್ಟು ತಿರುಗಿ ನಿಂತಿದೆ. ಹಸೀನಾ ಅಧಿಕಾರದಿಂದ ಹೊರಗುಳಿದಿದ್ದು, ಅವರ ವೈಯಕ್ತಿಕ ಭದ್ರತೆಯೇ ಭಾರತಕ್ಕೆ ದೊಡ್ಡ ಸಮಸ್ಯೆಯಾಗಿದೆ. ರಾಜತಾಂತ್ರಿಕವಾಗಿ, ಭಾರತದಲ್ಲಿ ಹಸೀನಾ ಅವರ ಉಪಸ್ಥಿತಿಯು ಮೋದಿ ಆಡಳಿತಕ್ಕೆ ಸವಾಲಾಗಿ ಪರಿಣಮಿಸಬಹುದು.

ಅವರು ಕಳೆದ ಕೆಲವು ವರ್ಷಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಇತ್ತೀಚೆಗೆ ಚೀನಾವನ್ನು ಕೋಪಗೊಳಿಸಿದ್ದರು. ಹಸೀನಾ ಅವರು, ಬಾಂಗ್ಲಾ ದೇಶದಲ್ಲಿ ಚೀನಾ ಪ್ರಾಬಲ್ಯಕ್ಕೆ ಅನುವು ಮಾಡಿಕೊಟ್ಟದ್ದು ಅಮೆರಿಕಾವನ್ನು ಕೆರಳಿಸಿತ್ತು. ಹಾಗೂ, ಬಾಂಗ್ಲಾ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳನ್ನು ದುರ್ಬಲಗೊಳಿಸುವುದಕ್ಕಾಗಿ ಸರ್ಕಾರದ ಮೇಲೆ ದಾಳಿ ಮಾಡಲು ಎಲ್ಲ ರೀತಿಯಲ್ಲೂ, ಪ್ರಯತ್ನಿಸಿತು ಎಂಬ ಆಪಾದನೆಯೂ ಇದೆ. ಇದಕ್ಕೆ ಹಸೀನಾ ಅವರ ಇತ್ತೀಚಿನ ಹೇಳಿಕೆಗಳೇ ಸಾಕ್ಷಿ.

ಜೋ ಬೈಡನ್‌ ಆಡಳಿತವು ಮಾಡಿದ ಮೊದಲ ಕೆಲಸವೆಂದರೆ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೂಡಲೇ ಅವರ ವೀಸಾಗಳನ್ನು ಕೂಡಲೇ ರದ್ದುಗೊಳಿಸಿದ್ದು. ಯುನೈಟೆಡ್‌ ಕಿಂಗ್ಡಮ್‌ ಸರ್ಕಾರವು ಹಸೀನಅ ಅವರಿಗೆ ರಾಜಕೀಯ ಆಶ್ರಯ ನೀಡಲಾಗದ್ದಕ್ಕೆ ಹಲವಾರು ರಾಜತಾಂತ್ರಿಕ ಕಾರಣಗಳನ್ನು ಮುಂದು ಮಾಡಿದೆ. ಯುನೈಟೆಡ್‌ ಕಿಂಗ್ಡಮ್‌ ಹೆಚ್ಚೂ ಕಡಿಮೆ ಅಮೇರಿಕಾದೊಂದಿಗೆ ಕೈ ಜೋಡಿಸಿದಂತೆ ಕಾಣುತ್ತಿದೆ.

ರಾಜತಾಂತ್ರಿಕ ಬಿಕ್ಕಟ್ಟು ಸಾಧ್ಯತೆ

ಢಾಕಾದಲ್ಲಿ ಹೊಸ ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಮುಂದಿನ ದಿನಗಳಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗಲು ಇದೇ ಕಾರಣ ಎಂದು ಕೂಡ ಹೇಳಲಾಗುತ್ತದೆ.

ನೊಬೆಲ್ ಪ್ರಶಸ್ತಿ ಪುರಸ್ಕೃತ ಮತ್ತು ಹಸೀನಾ ಪ್ರತಿಸ್ಪರ್ಧಿ ಮುಹಮ್ಮದ್ ಯೂನಸ್ ಅವರು ಈಗ ಅಧಿಕಾರವಹಿಸಿಕೊಂಡಿದ್ದಾರೆ. ಅವರೊಂದಿಗೆ ವಿದ್ಯಾರ್ಥಿ ಪ್ರತಿಭಟನಕಾರರು ಮತ್ತು ಬಾಂಗ್ಲಾ ದೇಶದ ನ್ಯಾಷಲಿಸ್ಟ್‌ ಪಕ್ಷಕ್ಕೆ ಸಂಬಂಧಿಸಿರುವರೊಂದಿಗೆ ಹೊಂದಾಣಿಕೆ ಕೂಟ ಇದೆ. ಹಸೀನಾ ಅವರ ವಿರುದ್ಧ ಕೆಲವು ಕ್ರಿಮಿನಲ್‌ ಪ್ರಕರಣಗಳನ್ನು ಕೂಡ ದಾಖಲಾಗಿಸಲಾಗಿದೆ. ಆಕೆಯನ್ನು ಬಾಂಗ್ಲಾಕ್ಕೆ ಹಸ್ತಾಂತರಿಸುವಂತೆ ಹೊಸ ಸರ್ಕಾರ ಭಾರತವನ್ನು ಕೇಳುವ ಸಾಧ್ಯತೆಗಳಿವೆ. 2013 ರಿಂದ ಉಭಯ ದೇಶಗಳ ನಡುವೆ ಈಗಾಗಲೇ ಕಾರ್ಯಗತಗೊಳಿಸುವ ಹಸ್ತಾಂತರ ಒಪ್ಪಂದವಿರುವುದರಿಂದ ಬಾಂಗ್ಲಾ ಸರ್ಕಾರವು ಹಸೀನಾರನ್ನು ಹಿಂದಕ್ಕೆ ಕಳುಹಿಸಲು ಭಾರತದ ಮೇಲೆ ಒತ್ತಡ ಹೇರುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. .

ಯುನೈಟೆಡ್ ಸ್ಟೇಟ್ಸ್ ಹಸೀನಾಗೆ ಪ್ರತಿಕೂಲ ಮತ್ತು ಯೂನಸ್‌ಗೆ ಸ್ನೇಹಪರವಾಗಿರುವುದರಿಂದ, ಅವರ ನೇತೃತ್ವದ ಢಾಕಾ ಸರ್ಕಾರ ಮಧ್ಯಪ್ರವೇಶಕ್ಕಾಗಿ ಅಮೇರಿಕಾವನ್ನು ಕೇಳುವ ಸಾಧ್ಯತೆಗಳಿವೆ.

ಢಾಕಾವನ್ನು ಕೆರಳಿಸಲು ಭಾರತಕ್ಕೆ ಸಾಧ್ಯವಿಲ್ಲ

ಹಸೀನಾ ಅವರು ಆಶ್ರಯ ಮತ್ತು ಭದ್ರತೆಗಾಗಿ ಭಾರತಕ್ಕೆ ಆಗಮಿಸಿದ ರಾಷ್ಟ್ರೀಯ ಮಟ್ಟದ ಎರಡನೇ ದೇಶಭ್ರಷ್ಟ ವಿದೇಶದ ರಾಜಕೀಯ ನಾಯಕರಾಗಿದ್ದಾರೆ. (1975 ಮತ್ತು 1981 ರ ನಡುವೆ ಹಸೀನಾ ಒಮ್ಮೆ ಭಾರತದಲ್ಲಿ ರಾಜಕೀಯ ಆಶ್ರಯ ಪಡೆದಿದ್ದರು. ಆ ಸಂದರ್ಭದಲ್ಲಿ ಆಕೆಯ ತಂದೆ ಮತ್ತು ಬಾಂಗ್ಲಾದೇಶದ ಅಪ್ರಮಿತ ನಾಯಕ ಶೇಖ್‌ ಮುಜಿಬೂರ್‌ ರೆಹಮಾನ್‌ ಅವರೂ ಸೇರಿದಂತೆ ಅವರ ಕುಟುಂಬದ ಹಲವರನ್ನು ಢಾಕಾದಲ್ಲಿ ಹತ್ಯೆ ಮಾಡಲಾಗಿತ್ತು. ಆದರೆ ಹಸೀನಾ ಆಗಿನ್ನೂ ರಾಜಕೀಯ ಪ್ರವೇಶ ಮಾಡಿದರಲಿಲ್ಲ).

1950 ರ ದಶಕದಲ್ಲಿ, ಆಗಿನ ಜವಾಹರಲಾಲ್ ನೆಹರು ಸರ್ಕಾರವು ಮಾವೋ ತ್ಸೆ ತುಂಗ್ ಅವರ ಚೀನಾದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರೂ, ಟಿಬೆಟಿಯನ್ ನಾಯಕ ದಲೈ ಲಾಮಾ ಮತ್ತು ಅವರ ಹಲವಾರು ಅನುಯಾಯಿಗಳಿಗೆ, ಭಾರತದಲ್ಲಿ ಆಶ್ರಯ ನೀಡಿದ್ದರು. ಟಿಬೆಟಿಯನ್ ದೇಶಭ್ರಷ್ಟ ಸರ್ಕಾರವು, ಈಗಲೂ ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಕಾರ್ಯನಿರ್ವಹಿಸುತ್ತಿದೆ. 1950 ರ ಮತ್ತು ಈಗಿನ ಪರಿಸ್ಥಿತಿಗಳು ವಿಭಿನ್ನವಾಗಿವೆ. ಹಸೀನಾಳನ್ನು ಹಸ್ತಾಂತರಿಸುವ ಢಾಕಾದ ಮನವಿಗೆ ಭಾರತ ಸಮ್ಮತಿಸದಿದ್ದರೆ ಅದು ಇಬ್ಬರ ನಡುವಿನ ಘರ್ಷಣೆಯನ್ನು ಹೆಚ್ಚಿಸುತ್ತದೆ. ಇದು ಬಾಂಗ್ಲಾದೇಶದೊಂದಿಗಿನ ಭಾರತದ ವ್ಯಾಪಾರ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿನ ಭದ್ರತೆಯ ಮೇಲೆ ತಕ್ಷಣದ ಪರಿಣಾಮವನ್ನು ಬೀರುತ್ತದೆ, ಏಕೆಂದರೆ ಎರಡೂ ದೇಶಗಳೂ ತಮ್ಮ ಗಡಿಯನ್ನು ಹಂಚಿಕೊಳ್ಳುತ್ತವೆ. ಎರಡೂ ದೇಶಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಹದಗೆಡಿಸಲು ಢಾಕಾದಲ್ಲಿರುವ ಸರ್ಕಾರವು ಚೀನಾ ದೇಶಕ್ಕೆ ತನ್ನ ದೇಶದಲ್ಲಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಬಹುದು. ಈ ನಡುವೆ ಪಾಕಿಸ್ತಾನ ಕೂಡ ತನ್ನ ಆಟವನ್ನು ಪ್ರಾರಂಭಿಸಬಹುದು. ಈ ಎಲ್ಲ ಬೆಳವಣಿಗೆಗಳೂ ನಡೆದಲ್ಲಿ, ಭಾರತ ರಾಜಕೀಯವಾಗಿ ಮತ್ತು ಭದ್ರತೆಯ ದೃಷ್ಟಿಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಭಾರತದ ಸಂದಿಗ್ಧತೆ

ಭಾರತ ಸರ್ಕಾರ ಅಗತ್ಯವಾಗಿ ಹಸೀನಾ ಜೊತೆ ನಿಲ್ಲಬೇಕಾಗುತ್ತದೆ. ಅದು ಒತ್ತಡಕ್ಕೆ ಸಿಲುಕಿದರೆ, ಅದು ವಿಶ್ವಾಸಾರ್ಹ ಮಿತ್ರರಾಷ್ಟ್ರ ಎಂಬ ಭಾರತದ ಖ್ಯಾತಿಗೆ ಧಕ್ಕೆ ತರುತ್ತದೆ ಮತ್ತು ಪ್ರಪಂಚದಾದ್ಯಂತ ಅದರ ನಿಲುವನ್ನು ದುರ್ಬಲಗೊಳಿಸುತ್ತದೆ. ಮೋದಿ ಸರ್ಕಾರವು ಹಸೀನಾ ಅವರ ಬಿಸಿಯನ್ನು ತಗ್ಗಿಸಲು ಮತ್ತೊಂದು ದೇಶದೊಂದಿಗೆ ಆಶ್ರಯ ಒಪ್ಪಂದವನ್ನು ಮಾತುಕತೆಗೆ ಸದ್ದಿಲ್ಲದೆ ಒತ್ತಡ ಹೇರಬಹುದು, ಆದರೆ ಭಾರತದ ಕಾಳಜಿಯನ್ನು ಬೇರೆ ಯಾರು ಸರಿಹೊಂದಿಸುತ್ತಾರೆ? ಸದ್ಯಕ್ಕೆ ಯಾವುದೇ ಸಾಧ್ಯತೆಗಳೂ ಕಾಣುತ್ತಿಲ್ಲ.

ಈ ನಡುವೆ ಹಸೀನಾಗೆ ರಾಜಕೀಯ ಆಶ್ರಯ ನೀಡುವುದು ರಾಜತಾಂತ್ರಿಕವಾಗಿ ಬಿಕ್ಕಟ್ಟಿನ ಸಂಗತಿಯಾಗಿದೆ. NATO ತನ್ನ 75 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವಾಗ ಪ್ರಧಾನಿ ನರೇಂದ್ರ ಮೋದಿಯವರ ಉಕ್ರೇನ್‌ ಭೇಟಿ ಮತ್ತು ಮಾಸ್ಕೋ ಪ್ರವಾಸ ಅಮೆರಿಕಾವನ್ನು ಸಾಕಷ್ಟು ಕೆರಳಿಸಿದೆ. ಈ ಸಂಗತಿಗಳಿಗೆ ಸಂಬಂಧಿಸಿದಂತೆ ಭಾರತ ಅನುಸರಿಸುತ್ತಿರುವ ರಾಜತಾಂತ್ರಿಕ ನೀತಿ ತೋರಿಕೆಯಂತೆ ಕಾಣುತ್ತಿದೆ. ಆದರೆ ನವದೆಹಲಿ ಇದಕ್ಕೆ ಅಧಿಕೃತತೆ ನೀಡಿಲ್ಲ ಎನ್ನುವುದು ಸಮಾಧಾನದ ಸಂಗತಿ.

ಭಾರತದ ಅನಾನುಕೂಲಕ್ಕೆ, ಜಾಗತಿಕ ಪ್ರತಿಸ್ಪರ್ಧಿಗಳಾದ ಯುಎಸ್ ಮತ್ತು ಚೀನಾ ಬಾಂಗ್ಲಾದೇಶದಲ್ಲಿ ತಮ್ಮದೇ ಆದ ಹಿತಾಸಕ್ತಿ ಹೊಂದಿದ್ದು, ಅದಕ್ಕೆ ಭಾರತ ಅಡ್ಡಿಯಾಗುವ ಸಾಧ್ಯತೆ ಇದೆ ಎನ್ನುವುದು ಅಮೇರಿಕಾ ಮತ್ತು ಚೀನಾದ ಭಾವನೆ. ಅಮೆರಿಕಾ ಮಿತ್ರರಾಷ್ಟ್ರವಾಗಿದ್ದರೂ, ಹಸೀನಾಗೆ ಪ್ರತಿಕೂಲವಾಗಿತ್ತು ಮತ್ತು ಭಾರತ ವಿರೋಧಿ ಎಂಬ ಭಾವನೆಯನ್ನು ಹೊಂದಿರುವ BNP ಗೆ ಹತ್ತಿರವಾಗಿತ್ತು. ಬಾಂಗ್ಲಾದೇಶದ ಮೇಲೆ ಪ್ರಾಬಲ್ಯ ಸಾಧಿಸುವ ಉದ್ದೇಶದಿಂದ ಚೀನಾ ಭಾರತದೊಂದಿಗೆ ಪಪೈಪೋಟಿಯಲ್ಲಿ ತೊಡಗಿತ್ತು.

ಈ ಸನ್ನಿವೇಶವನ್ನು ಗಮನಿಸಿದರೆ, ದೆಹಲಿಯಲ್ಲಿ ಹಸೀನಾ ಅವರ ಉಪಸ್ಥಿತಿಯಿಲ್ಲದಿದ್ದರೂ, ಬಾಂಗ್ಲಾದೇಶದಲ್ಲಿ ಹೊಸ ಬಿಎನ್‌ಪಿ ಪರವಾದ ಆಡಳಿತವು ಭಾರತದ ಪರವಾಗಿರುತ್ತದೆ ಎಂಬ ನಂಬಿಕೆ ಸುಳ್ಳಾಗಬಹುದು. ಇಂಥ ಕ್ಲಿಷ್ಟ ಪರಿಸ್ಥಿತಿಯಲ್ಲಿ ʼದೇಶ ಭ್ರಷ್ಟರಾಗಿರುವ ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಹಸೀನಾ ಅವರು ಭಾರತದಲ್ಲಿ ಉಳಿದರೆ, ಅದರಿಂದ ಭಾರತಕ್ಕೆ ರಾಜತಾಂತ್ರಿಕವಾಗಿ ಹಲವಾರು ಸಂಕಷ್ಟಗಳು ಎದುರಾಗಬಹುದು ಎಂಬುದು ಊಹಿಸಲಾರಷ್ಟು ಭಿನ್ನವಾದ ಪರಿಸ್ಥಿತಿ ಏನಲ್ಲ. ಢಾಕಾದ ಹೊಸ ಸರ್ಕಾರ ಭಾರತದ ವಿರುದ್ಧ ಮಲೆತು ನಿಲ್ಲುವ ಸಾಧ್ಯತೆಗೆ ಮತ್ತಷ್ಟು ಕಾರಣಗಳು ಸಿಕ್ಕುತ್ತವೆ.

ಈ ನಡುವೆ ಢಾಕಾದ ಪ್ರಕ್ಷುಬ್ದ ಪರಿಸ್ಥಿತಿ, ಭಾರತದಲ್ಲಿ ಆಡಳಿತರೂಢ ಮೋದಿ ಸರ್ಕಾರಕ್ಕೆ ಹೊಸ ಸಮಸ್ಯೆಗಳನ್ನು ಸೃಷ್ಟಿಸುವುದಂತೂ ಖಂಡಿತ ಎನ್ನುವ ವಾತಾವರಣ ಕಾಣಿಸುತ್ತಿದೆ.

Read More
Next Story