P John J Kennedy

ಮಿತಿ ಮೀರಿದ ಆರ್ಥಿಕ ಅಭದ್ರತೆ: ಭಾರತದ ಕೌಟುಂಬಿಕ ಜೀವನದ ಮೇಲೆ ಅನಿಶ್ಚಿತತೆಯ ಸವಾರಿ


ಮಿತಿ ಮೀರಿದ ಆರ್ಥಿಕ ಅಭದ್ರತೆ: ಭಾರತದ ಕೌಟುಂಬಿಕ ಜೀವನದ ಮೇಲೆ ಅನಿಶ್ಚಿತತೆಯ ಸವಾರಿ
x
ಏರುತ್ತಿರುವ ಜೀವನಾವಶ್ಯಕತೆಯ ವೆಚ್ಚ, ಉದ್ಯೋಗ ಅಭದ್ರತೆಯ ಕಾರಣಗಳಿಂದಾಗಿ ಲಕ್ಷಾಂತರ ಮಂದಿ ತಾವು ಬಯಸಿದ ಕುಟುಂಬವನ್ನು ಹೊಂದಲು ಹಿಂಜರಿಯುತ್ತಿದ್ದಾರೆ, ಇದರಿಂದಾಗಿ ಫಲವತ್ತತೆ ಅಥವಾ ಸಂತಾನೋತ್ಪತ್ತಿಯ ಅಂತರ ಹೆಚ್ಚುತ್ತ ಸಾಗಿದೆ ಎನ್ನುತ್ತದೆ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ʼವಿಶ್ವ ಜನಸಂಖ್ಯಾ ಸ್ಥಿತಿ-2025ʼರ ವರದಿ.
Click the Play button to hear this message in audio format

ಕೈಗೆಟುಕುವ ದರದ ಶಿಶುಪಾಲನಾ ಕೇಂದ್ರಗಳು ಮತ್ತು ಬಂಜೆತನದ ಚಿಕಿತ್ಸೆಗಳ ಅಲಭ್ಯತೆಯಿಂದಾಗಿ ಅನೇಕ ದಂಪತಿಗಳು ಬಯಸಿದ ಕುಟುಂಬವನ್ನು ಪಡೆಯುವ ಮೊದಲೇ ಸಮಯ ಮೀರಿ ಹೋಗಿರುವ ಸ್ಥಿತಿ ತಲುಪಿದ್ದಾರೆ .

ಪೂರ್ವ ಏಷ್ಯಾದಲ್ಲಿ ಅಥವಾ ಯುರೋಪ್ ನಲ್ಲಿ ಜನನ ಪ್ರಮಾಣವು ಕುಸಿಯುತ್ತಿರುವ ಸುದ್ದಿಗಳು ಬಂದಿವೆ. ಭಾರತದ ದಿನನಿತ್ಯದ ಜೀವನಕ್ಕೂ ಇದಕ್ಕೂ ಸಂಬಂಧವೇ ಇಲ್ಲ ಎಂದು ಭಾಸವಾಗಬಹುದು. ಆದರೆ 2024ರ ದತ್ತಾಂಶವನ್ನು ಆಧರಿಸಿದ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ʼವಿಶ್ವ ಜನಸಂಖ್ಯಾ ಸ್ಥಿತಿ-2025ʼರ ವರದಿಯು ಅತ್ಯಂತ ಮಹತ್ವದ ಹಾಗೂ ಆತಂಕಕಾರಿ ಸಂಗತಿಯನ್ನು ನಮ್ಮ ಮುಂದೆ ಅನಾವರಣ ಮಾಡುತ್ತದೆ; ಇಂಡೋನೇಷ್ಯಾ ಮತ್ತು ಬ್ರೆಜಿಲ್ ನಂತಹ ವಿಭಿನ್ನ ರಾಷ್ಟ್ರಗಳ ರೀತಿಯಲ್ಲಿಯೇ ಭಾರತ ಕೂಡ ಈಗ ಫಲವತ್ತತೆಯ ವಿಚಾರದಲ್ಲಿ ಅತ್ಯಂತ ಆಯಕಟ್ಟಿನ ಸ್ಥಿತಿಯಲ್ಲಿದೆ.

ಇಲ್ಲಿನ ಆತಂಕದ ವಿಚಾರವಿರುವುದು ಭಾರತದ ಜನಸಂಖ್ಯೆ ಕುಸಿಯುತ್ತಿದೆ ಎಂಬುದಲ್ಲ, ಅದು ಕುಸಿಯುತ್ತಿಲ್ಲ ಕೂಡ. ಇಲ್ಲಿ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಲಕ್ಷಾಂತರ ಜನರಿಗೆ ಇಷ್ಟವಾದ ರೀತಿಯಲ್ಲಿ ಕುಟುಂಬವನ್ನು ಹೊಂದಲು ಸಾಧ್ಯವಾಗುತ್ತಿಲ್ಲ ಎಂಬುದು ಚಿಂತೆಯ ಸಂಗತಿ. ಇದಕ್ಕೆ ಕಾರಣ ಏನು ಎಂಬುದನ್ನು ವರದಿಯು ಸ್ಪಷ್ಟವಾಗಿ ಹೇಳಿದೆ ಕೂಡ; ಇದು ದಂಪತಿಗೆ ಮಕ್ಕಳು ಬೇಡ ಎನ್ನುವ ಆಸಕ್ತಿಯ ಕೊರತೆಯೇನೂ ಅಲ್ಲ, ಆರ್ಥಿಕವಾಗಿ ಎಷ್ಟು ಉಳಿತಾಯ ಮಾಡಲು ಸಾಧ್ಯ ಎಂಬುದರ ಬಗ್ಗೆ ಹೆಚ್ಚುತ್ತಿರುವ ಭಯ.

ಕೈಮೀರುತ್ತಿರುವ ವಸತಿ, ಮಕ್ಕಳ ಲಾಲನೆ-ಪಾಲನೆ, ಹೆಚ್ಚುತ್ತಲೇ ಇರುವ ಶಿಕ್ಷಣದ ವೆಚ್ಚಗಳು ಮತ್ತು ಭದ್ರತೆ ಇಲ್ಲದ ಉದ್ಯೋಗಗಳು…. ಇಂತಹ ಕಠಿಣ ವಾಸ್ತವಗಳ ಕಾರಣದಿಂದಾಗಿ ಕುಟುಂಬವನ್ನು ಆರಂಭಿಸುವ ಭರವಸೆಗಳೇ ಕರಗಿ ಹೋಗುತ್ತಿವೆ.

ಸಿಯೋಲ್-ನಿಂದ ಸಾವೊ ಪಾಲೊ ವರೆಗೆ ಮತ್ತು ಭಾರತದ ನಗರಗಳಿಂದ ಸಣ್ಣ ಪಟ್ಟಣಗಳ ವರೆಗೆ ಇದೇ ಕಥೆ-ವ್ಯಥೆ ಪುನರಾವರ್ತನೆಯಾಗುತ್ತಿದೆ ಎನ್ನುತ್ತದೆ ವರದಿ.

ಸವಾರಿ ಮಾಡುವ ಆರ್ಥಿಕ ಒತ್ತಡ

ಈ ಸಂಬಂಧ ಸಮೀಕ್ಷೆ ನಡೆಸಿದ ಬಹುತೇಕ ದೇಶಗಳಲ್ಲಿ ಹಣಕಾಸಿನ ಚಿಂತೆಗಳೇ ಪ್ರಮುಖ ಅಡ್ಡಿಯಾಗಿ ಪರಿಣಮಿಸಿದೆ. ಹತ್ತರಲ್ಲಿ ನಾಲ್ವರು ತಾವು ಬಯಸಿದ್ದಕ್ಕಿಂತ ಕಡಿಮೆ ಮಕ್ಕಳನ್ನು ಪಡೆಯಲು ಆರ್ಥಿಕ ಒತ್ತಡವೇ ಮುಖ್ಯವಾದ ಕಾರಣ ಎಂದು ಹೇಳಿಕೊಂಡಿದ್ದಾರೆ.

ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಫಲವತ್ತತೆಯ ದರವನ್ನು ಹೊಂದಿರುವ ದಕ್ಷಿಣ ಕೋರಿಯಾ ಇಂದು ನಮಗೆ ಬಹಳ ದೊಡ್ಡ ಎಚ್ಚರಿಕೆಯನ್ನು ನೀಡುತ್ತಿದೆ. ಅಲ್ಲಿ ಮಗುವನ್ನು ಹೊಂದುವುದು ಕಷ್ಟದ ಕೆಲಸ ಮಾತ್ರವಲ್ಲ, ಅದು ಅಸಾಧ್ಯವೇ ಎಂಬಷ್ಟು ದುಬಾರಿಯಾಗಿದೆ. ಇದು ಕೇವಲ ಶ್ರೀಮಂತ ದೇಶಗಳಿಗೆ ಮಾತ್ರ ಸೀಮಿತವಾಗಿರುವ ಸಮಸ್ಯೆಯಲ್ಲ. ಇದು ಇಂದು ಪ್ರತಿಯೊಂದು ಹಂತದ ದುಡಿಯುವ ವರ್ಗದ ಮತ್ತು ಮಧ್ಯಮ ವರ್ಗದ ಕುಟುಂಬಗಳ ನಿರ್ಧಾರಗಳನ್ನು ರೂಪಿಸುತ್ತಿದೆ.

ಸಮೀಕ್ಷೆಯಿಂದ ಲಭ್ಯವಾಗಿರುವ ದತ್ತಾಂಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಒಂದು ಗಹನವಾದ ಸಮಸ್ಯೆ ಇರುವುದು ನಿಚ್ಚಳವಾಗಿ ಕಾಣಿಸುತ್ತದೆ. ಇದನ್ನು ವರದಿಯಲ್ಲಿ ʼಜಾಗತಿಕ ಫಲವತ್ತತೆಯ ಅಂತರʼ ಎಂದು ವಿಶ್ಲೇಷಿಸಲಾಗಿದೆ. ಅಂದರೆ ಜನರು ಹೊಂದಲು ಬಯಸುವ ಮಕ್ಕಳ ಸಂಖ್ಯೆ ಮತ್ತು ವಾಸ್ತವವಾಗಿ ಅವರು ಹೊಂದಿರುವ ಮಕ್ಕಳ ಸಂಖ್ಯೆಯ ನಡುವಿನ ವ್ಯತ್ಯಾಸವನ್ನು ಹೇಳುತ್ತದೆ. ಈ ಅಂಕಿ-ಅಂಶಗಳು ನಿಜಕ್ಕೂ ಆತಂಕಕಾರಿ.

ಅಂದರೆ ಪ್ರಪಂಚದಾದ್ಯಂತ ಸಂಭವಿಸುವ ಒಟ್ಟು ಗರ್ಭಧಾರಣೆಗಳಲ್ಲಿ ಸುಮಾರು ಅರ್ಧದಷ್ಟು ಅನಪೇಕ್ಷಿತವಾಗಿರುತ್ತದೆ. ಪ್ರತಿ ಐದು ಮಂದಿ ವಯಸ್ಕರಲ್ಲಿ ಒಬ್ಬರು ತಾವು ಬಯಸಿದಷ್ಟು ದೊಡ್ಡ ಕುಟುಂಬವನ್ನು ಹೊಂದಲು ಸಾಧ್ಯವಾಗುತ್ತಿಲ್ಲ. ವಾಸ್ತವವಾಗಿ ಇಂತಹ ಅಂತರವನ್ನು ಸರ್ಕಾರ ಹೊರಡಿಸುವ ಆದೇಶಗಳ ಮೂಲಕ ಅಥವಾ ಹೆಚ್ಚು ಮಕ್ಕಳನ್ನು ಪಡೆಯಿರಿ ಅಥವಾ ಕಡಿಮೆ ಮಕ್ಕಳನ್ನು ಪಡೆಯಿರಿ ಎಂಬ ಪ್ರಚಾರಗಳ ಮೂಲಕ ತುಂಬಲು ಸಾಧ್ಯವಿಲ್ಲದಂತಾಗಿದೆ.

ಇಂತಹ ಸಂದರ್ಭದಲ್ಲಿ ಭಾರತದ ಹಿಂದಿನ ಅನುಭವಗಳನ್ನು ನೆನಪು ಮಾಡಿಕೊಳ್ಳುವುದು ಸೂಕ್ತ. ಅಂದು ಜನಸಂಖ್ಯೆಯನ್ನು ನಿಯಂತ್ರಿಸಲು ಬಳಸಿದ ಬಲವಂತದ ನೀತಿಗಳು ಹಕ್ಕುಗಳನ್ನು ಉಲ್ಲಂಘಿಸಿದ್ದವು ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲಿದ್ದ ನಂಬಿಕೆಯನ್ನು ದುರ್ಬಲಗೊಳಿಸಲು ದಾರಿ ಮಾಡಿಕೊಟ್ಟವು. ಹಾಗಾಗಿ ಸಂತಾನೋತ್ಪತ್ತಿ ದರದಲ್ಲಿನ ವ್ಯತ್ಯಾಸವು ನಿಜವಾಗಿ ಅಸ್ಥಿರ ಉದ್ಯೋಗ, ಆರೋಗ್ಯ ರಕ್ಷಣೆಯಲ್ಲಿಲನ ಅಸಮಾನತೆ ಮತ್ತು ದೀರ್ಘಕಾಲದ ಲಿಂಗ ತಾರತಮ್ಯದಂತಹ ತೀವ್ರತರದ ವೈಫಲ್ಯಗಳನ್ನು ಬಿಂಬಿಸುವಂತಾಗಿದೆ.

ಜನ ತಮ್ಮ ಸಂತಾನೋತ್ಪತ್ತಿಯ ಆಯ್ಕೆಗಳನ್ನು ಕೈಗೊಳ್ಳಲು ಸ್ವತಂತ್ರರಾಗಿರಬೇಕು ಎನ್ನುವ ವಿಶ್ವಸಂಸ್ಥೆಯ ವಾದ ಸರಿಯಾಗಿಯೇ ಇದೆ. ಆದರೆ, ಅನೇಕರಿಗೆ ಈ ಸ್ವಾತಂತ್ರ್ಯ ಕೇವಲ ಕಾಗದಕ್ಕಷ್ಟೇ ಸೀಮಿತವಾಗಿದೆ.

ಜಗತ್ತಿನಾದ್ಯಂತ ಪ್ರತಿ ಆರು ಮಂದಿ ವಯಸ್ಕರಲ್ಲಿ ಒಬ್ಬರನ್ನು ಕಾಡುತ್ತಿರುವ ಬಂಜೆತನದ ಸಮಸ್ಯೆಯನ್ನೇ ತೆಗೆದುಕೊಳ್ಳಿ; ಇದಕ್ಕೆ ಚಿಕಿತ್ಸೆ ಪಡೆಯುವುದು ಭಾವನಾತ್ಮಕವಾಗಿ ಕುಗ್ಗಿಸುವ ಪ್ರಕ್ರಿಯೆ ಮತ್ತು ಆರ್ಥಿಕವಾಗಿ ಬೆನ್ನೆಲುಬನ್ನೇ ಮುರಿಯುವಂತಹದ್ದು. ಭಾರತದಲ್ಲಿ ಇದು ಇಂದಿಗೂ ಕೈಗೆಟುಕುವ ಸಾರ್ವಜನಿಕ ಆರೋಗ್ಯ ಸೇವೆಯಿಂದ ಬಹುತೇಕ ಹೊರಗುಳಿದಿದೆ.

ಅದೇ ವೇಳೆ, ಭವಿಷ್ಯದ ಬಗೆಗಿನ ಆತಂಕಗಳು ಜನರ ಮೇಲೆ ಗಂಭೀರವಾದ ಪ್ರಭಾವ ಬೀರುತ್ತಿವೆ. ಬ್ರೆಜಿಲ್ನಲ್ಲಿ ಜನರು ಇದಕ್ಕಾಗಿ ರಾಜಕೀಯ ಅಸ್ಥಿರತೆಯ ಕಡೆಗೆ ಬೊಟ್ಟು ಮಾಡಿದರೆ, ಮೊರಾಕ್ಕೊದಲ್ಲಿ ದೀರ್ಘಕಾಲದ ಆರೋಗ್ಯ ಕಾಳಜಿಗಳನ್ನು ಮುಂದಿಡುತ್ತಾರೆ. ನಾನಾ ದೇಶಗಳಲ್ಲಿ ಸುಮಾರು ಐವರಲ್ಲಿ ಒಬ್ಬರು ಹವಾಮಾನ ಬದಲಾವಣೆ ಅಥವಾ ಆರ್ಥಿಕ ಅಸ್ಥಿರತೆಯ ಭಯವು ತಾವು ಮಕ್ಕಳನ್ನು ಪಡೆಯುವ ನಿರ್ಧಾರದ ಮೇಲೆ ಪ್ರಭಾವ ಬೀರುತ್ತಿದೆ ಎಂದು ವಾದಿಸುತ್ತಾರೆ.

ಒಂದು ಸಂಕೀರ್ಣ ಸನ್ನಿವೇಶ

ಭಾರತದ ಸಂತಾನೋತ್ಪತ್ತಿ ದರವು ಈಗ 'ಪರ್ಯಾಯ ಮಟ್ಟ' ಎಂದು ಕರೆಯುವ ಹಂತಕ್ಕೆ ಸಮೀಪದಲ್ಲಿದೆ ಎಂದು ಜನಸಂಖ್ಯಾಶಾಸ್ತ್ರಜ್ಞರು ಹೇಳುತ್ತಾರೆ. ಇದು ವಾಸ್ತವಿಕ ಮತ್ತು ಸಕಾರಾತ್ಮಕ ಬದಲಾವಣೆಗಳಿಂದ ಉಂಟಾದ ಸ್ಥಿತ್ಯಂತರವಾಗಿದೆ. ಹದಿಹರೆಯದ ಗರ್ಭಧಾರಣೆಗಳಂತೂ ಕಡಿಮೆಯಾಗಿವೆ, ಹೆಚ್ಚಿನ ಹುಡುಗಿಯರು ಶಾಲಾ ಶಿಕ್ಷಣವನ್ನು ಮುಂದುವರಿಸುವುದೇ ಉತ್ತಮ ಎಂದು ಭಾವಿಸಿದ್ದಾರೆ ಮತ್ತು ಅನೇಕ ಯುವತಿಯರು ತಡವಾಗಿ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಮಹಿಳೆಯರಲ್ಲಿ ಬೆಳೆಯುತ್ತಿರುವ ಸ್ವಾಯತ್ತತೆ ಮತ್ತು ಅವರಿಗಿರುವ ಅವಕಾಶಗಳ ಅಗಾಧತೆಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ಸ್ವಾಗತಾರ್ಹವೇ ಆಗಿದೆ. ಆದರೆ, ವಿಳಂಬದ ನಿರ್ಧಾರವು ಹೊಸ ಅಪಾಯಗಳನ್ನೂ ತರುತ್ತದೆ.

ಪೂರಕವಾದ ಕೆಲಸದ ವಾತಾವರಣ, ಕೈಗೆಟುಕುವ ದರದ ಶಿಶುಪಾಲನಾ ಕೇಂದ್ರಗಳು ಮತ್ತು ಬಂಜೆತನದ ಚಿಕಿತ್ಸೆಗಳ ಲಭ್ಯತೆಯಿಲ್ಲದೆ, ಅನೇಕ ದಂಪತಿಗಳು ತಾವು ಬಯಸಿದ ಕುಟುಂಬವನ್ನು ಪಡೆಯುವ ಮೊದಲೇ ಸಮಯ ಮೀರಿ ಹೋಗಿರುವುದನ್ನು ಮನಗಾಣುತ್ತಾರೆ. ಈ ಎಲ್ಲಾ ಆಯ್ಕೆಗಳ ಹಿಂದೆ ನಿರಂತರವಾದ ಲಿಂಗ ಅಸಮಾನತೆಯೂ ಕೂಡ ಅಡಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದು ಢಾಳಾಗಿ ಕಣ್ಣಿಗೆ ಕಾಣದೇ ಇದ್ದರೂ ಅತ್ಯಂತ ಪ್ರಭಾವಶಾಲಿಯಾಗಿದೆ. ಜಾಗತಿಕವಾಗಿ, ಕೇವಲ ಅರ್ಧದಷ್ಟು ಮಹಿಳೆಯರು ಮಾತ್ರ ತಮ್ಮ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ.

ಭಾರತದಲ್ಲಿ ಸಾಮಾಜಿಕ ನಿರೀಕ್ಷೆಗಳು, ಕೌಟುಂಬಿಕ ಒತ್ತಡ, ಕೌಟುಂಬಿಕ ಕಳಂಕ ಮತ್ತು ಸಂಗಾತಿಯಿಂದ ನಡೆಯುವ ದೌರ್ಜನ್ಯದ ಕಹಿ ವಾಸ್ತವಗಳು—ಮಹಿಳೆಯರು ಯಾವಾಗ ತಾಯಿಯಾಗಬೇಕು ಅಥವಾ ನಿಜಕ್ಕೂ ತಾಯಿಯಾಗಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವಂತಾಗಿವೆ. ಈ ಶಕ್ತಿಗಳು ಲಕ್ಷಾಂತರ ಜನರ ಪಾಲಕತ್ವದ ನಿಯಮಗಳನ್ನು ಮೌನವಾಗಿ ನಿರ್ಧರಿಸುತ್ತಿವೆ.

ಈ ಸಮಸ್ಯೆಯ ಪ್ರತಿಯೊಂದು ಹಂತದಲ್ಲೂ ಒಂದು ಸತ್ಯವು ನಿಚ್ಚಳವಾಗಿ ಎದ್ದು ಕಾಣುತ್ತದೆ: ಆರ್ಥಿಕ ಭದ್ರತೆಯೇ ಎಲ್ಲಕ್ಕಿಂತ ಮುಖ್ಯ. ದುರ್ಬಲ ಸಾಮಾಜಿಕ ಭದ್ರತಾ ವ್ಯವಸ್ಥೆ ಹೊಂದಿರುವ ದೇಶಗಳಲ್ಲಿ, ಜನರು ಬಯಸುವ ಕುಟುಂಬದ ಗಾತ್ರಕ್ಕೂ ಮತ್ತು ವಾಸ್ತವದಲ್ಲಿ ಅವರು ಹೊಂದಿರುವ ಕುಟುಂಬದ ಗಾತ್ರಕ್ಕೂ ನಡುವೆ ದೊಡ್ಡ ಅಂತರವಿದೆ. ಇದಕ್ಕಾಗಿಯೇ ಕೈಗೆಟುಕುವ ಶಿಶುಪಾಲನೆ, ವೇತನ ಸಹಿತ ಪೋಷಕರ ರಜೆ ಮತ್ತು ಕೆಲಸದ ಅವಧಿಯಲ್ಲಿ ಹೊಂದಾಣಿಕೆಯು ಐಷಾರಾಮಿ ಸೌಲಭ್ಯಗಳಾಗಿಲ್ಲ. ಅವು ಜನರು ಸ್ಥಿರವಾದ ಜೀವನವನ್ನು ರೂಪಿಸಿಕೊಳ್ಳಲು ಬೇಕಾದ ಮೂಲಭೂತ ಸೌಕರ್ಯಗಳಷ್ಟೇ ಆಗಿವೆ.

ಸಮತೋಲಿತ ದೃಷ್ಟಿಕೋನದ ಅಗತ್ಯ

ಭಾರತವು ತನ್ನ ಜನಸಂಖ್ಯಾ ಭವಿಷ್ಯವನ್ನು ಪರಿಗಣಿಸುವಾಗ, ಯಾವುದೇ ದಿಕ್ಕಿನಿಂದ ಬರುವ ಆತಂಕಕ್ಕೆ ಮಣೆ ಹಾಕಬೇಕಾದ ಅಗತ್ಯವಿಲ್ಲ. ಹಿಂದೆಲ್ಲ “ಜನಸಂಖ್ಯಾ ಸ್ಫೋಟ”ದ ಬಗ್ಗೆ ಇದ್ದ ಭಯಗಳು ಗಂಭೀರವಾದ ನೈತಿಕ ಹಾನಿಗೆ ಕಾರಣವಾಗಿದ್ದವು. ಇಂದು, ಕುಸಿಯುತ್ತಿರುವ ಜನನ ದರ ಮತ್ತು ಹೆಚ್ಚುತ್ತಿರುವ ವಯಸ್ಸಾದವರ ಸಂಖ್ಯೆಯ ಬಗ್ಗೆ ಹೊಸ ಆತಂಕಗಳು ಮನೆಮಾಡುತ್ತಿವೆ. ಈ ಎರಡೂ ತೀವ್ರಗಾಮಿ ಚಿಂತನೆಗಳು ಸಹಕಾರಿಯಲ್ಲ.

ಜನಸಂಖ್ಯಾ ಬದಲಾವಣೆಯು ತಕ್ಷಣ ಕೈಗೊಳ್ಳುವ ಪರಿಹಾರಗಳಿಂದ ಸಾಧ್ಯವಾಗುವ ಮಾತಲ್ಲ. ಇದು ಸಂತಾನೋತ್ಪತ್ತಿ ದರ, ವಲಸೆ ಮತ್ತು ಸಾರ್ವಜನಿಕ ಆರೋಗ್ಯದ ಒಟ್ಟು ಪ್ರಭಾವದಿಂದ ಕ್ರಮೇಣ ತೆರೆದುಕೊಳ್ಳುತ್ತ ಹೋಗುತ್ತದೆ.

"ಪರ್ಯಾಯ ದರ” (replacement rate) ಎಂಬ ಪರಿಕಲ್ಪನೆಯೂ ಕೂಡ ಕೇವಲ ಒಂದು ಸ್ಥೂಲ ಅಂಕಿ-ಅಂಶವಷ್ಟೇ; ಇದರಿಂದ ಮಾನವ ಜೀವನದ ಸಂಕೀರ್ಣತೆ ಮತ್ತು ಆಕಾಂಕ್ಷೆಗಳನ್ನು ಸಂಪೂರ್ಣವಾಗಿ ಹಿಡಿದಿಡಲು ಸಾಧ್ಯವಾಗದು.

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಸಂದೇಶವು ಸರಳ ಮತ್ತು ಮಾನವೀಯವಾಗಿದೆ: ಜನರು ತಮ್ಮ ಸ್ವಂತ ಆಯ್ಕೆಗಳನ್ನು ಸಾಕಾರಗೊಳಿಸಲು ಸರಿಯಾದ ಬೆಂಬಲ ಸಿಕ್ಕಾಗ ಮಾತ್ರ ಸಮಾಜ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತದೆ. ಇದರರ್ಥ ಪೂರಕವಾದ ವ್ಯವಸ್ಥೆಯ ನಿರ್ಮಾಣ ಮಾಡುವುದು, ಸಮಗ್ರ ಲೈಂಗಿಕ ಶಿಕ್ಷಣ, ಗರ್ಭನಿರೋಧಕಗಳು ಮತ್ತು ಬಂಜೆತನದ ಚಿಕಿತ್ಸೆಗಳ ಲಭ್ಯತೆ, ಗುಣಮಟ್ಟದ ಮಾತೃ ಆರೋಗ್ಯ ಸೇವೆಗಳು, ಸುರಕ್ಷಿತ ಗರ್ಭಪಾತ ಮತ್ತು ಲಿಂಗ ಆಧಾರಿತ ದೌರ್ಜನ್ಯದ ವಿರುದ್ಧ ಬಲವಾದ ರಕ್ಷಣೆ ನೀಡುವುದಾಗಿದೆ.

ಇದು ಪುರುಷರನ್ನು ಒಳಗೊಳ್ಳಬೇಕು ಎಂಬುದನ್ನೂ ಸೂಚಿಸುತ್ತದೆ, ಏಕೆಂದರೆ ಅವರು ಕೂಡ ತಂದೆಯಾಗುವ ವಿಚಾರದಲ್ಲಿ ತಮ್ಮದೇ ಆದ ಒತ್ತಡಗಳು ಮತ್ತು ಸಾಮಾಜಿಕ ನಿರೀಕ್ಷೆಗಳನ್ನು ಎದುರಿಸುತ್ತಿರುತ್ತಾರೆ. ಭಾರತವು ಇಂದಿಗೂ ಆಶಾದಾಯಕ ಜನಸಂಖ್ಯಾ ಹಂತದಲ್ಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನು ಕೇವಲ ಅಂಕಿ-ಅಂಶಗಳ ಲಾಭವನ್ನಾಗಿ ನೋಡದೆ ನಿಜವಾದ ಕ್ಷೇಮಾಭಿವೃದ್ಧಿಯನ್ನಾಗಿ ಪರಿವರ್ತಿಸಲು, ಆರ್ಥಿಕ ಭದ್ರತೆ, ಲಿಂಗ ಸಮಾನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬಗ್ಗೆ ಗಮನ ಹರಿಸಬೇಕು. ಆಗ ಮಾತ್ರ ಜನರು ಮಕ್ಕಳನ್ನು ಪಡೆಯಲಿ ಅಥವಾ ಪಡೆಯದೇ ಇರಲಿ, ಕೌಟುಂಬಿಕ ಜೀವನದ ಬಗ್ಗೆ ನಿರ್ಧಾರಗಳನ್ನು ಘನತೆ, ಬೆಂಬಲ ಮತ್ತು ನೈಜ ಸ್ವಾತಂತ್ರ್ಯದೊಂದಿಗೆ ಕೈಗೊಳ್ಳಲು ಸಾಧ್ಯವಾಗುತ್ತದೆ.

Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್‌ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್‌' ಇಂಗ್ಲಿಷ್‌ ಜಾಲತಾಣದಲ್ಲಿ ಪ್ರಕಟವಾಗಿದೆ.

Next Story