
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ತೀರಾ ಸನಿಹದಿಂದ ಫಾರೂಕ್ ಅಬ್ದುಲ್ಲಾ ಮೇಲೆ ದಾಳಿ ನಡೆಸಲಾಗಿದೆ. ಇದು ಅವರಿಗೆ ನೀಡಿರುವ ಝಡ್-ಪ್ಲಸ್ ಭದ್ರತೆಯನ್ನೇ ಅಣಕಿಸುವಂತೆ ಮಾಡಿದೆ. ಕೇಂದ್ರದ ಉತ್ತರದಾಯಿತ್ಮಕ್ಕೆ ಪೆಟ್ಟು ಬಿದ್ದಿದೆ.
ಇದೊಂದು ಭೀಕರ ಹತ್ಯೆಯ ಪ್ರಯತ್ನ. ಜಮ್ಮು ನಗರದಲ್ಲಿ ಏರ್ಪಟ್ಟ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಮುಗಿಸಿಬಿಡುವ ಸಂಚು ನಡೆದಿತ್ತು. ಅದೃಷ್ಟವಶಾತ್ ರಾಷ್ಟ್ರೀಯ ಭದ್ರತಾ ದಳದ ಕಟ್ಟೆಚ್ಚರ ಹಾಗೂ ಕ್ಷಿಪ್ರ ಮತ್ತು ಸಮಯೋಚಿತ ಕಾರ್ಯಾಚರಣೆಯಿಂದಾಗಿ ಅಬ್ದುಲ್ಲಾ ಅವರು ಯಾವುದೇ ಹಾನಿಯಿಲ್ಲದೆ ಪಾರಾಗಿದ್ದಾರೆ.
ಆದರೆ ಈ ಘಟನೆಯ ಹಿನ್ನೆಲೆಯನ್ನು ಗಮನಿಸಿದಾಗ ಅದಕ್ಕೆ ಕಾರಣವಾದ ಅಪಾಯ ಮತ್ತು ಭದ್ರತಾ ವೈಫಲಗಳ ಬಗ್ಗೆ ಕಳವಳಗೊಳ್ಳುವಂತೆ ಮಾಡಿದೆ. ರಿವಾಲ್ವರ್ ಹಿಡಿದ ವ್ಯಕ್ತಿಯೊಬ್ಬ ಅಬ್ದುಲ್ಲಾ ಅವರ ಅಷ್ಟು ಸನಿಹಕ್ಕೆ ಬಂದು ಗುಂಡು ಹಾರಿಸಿದ್ದಾದರೂ ಹೇಗೆ? ಸಲ್ಪದರಲ್ಲೇ ಗುರಿ ತಪ್ಪುವಂತಾದದ್ದು ಹೇಗೆ? ಎಂಬ ಪ್ರಶ್ನೆಗಳಿಗೆ ತಕ್ಕ ಉತ್ತರದ ಅಗತ್ಯವಿದೆ. ದೇಶದ ಗಡಿಪ್ರಾಂತ್ಯದ ದೀರ್ಘಕಾಲದ ಸಮಸ್ಯಾತ್ಮಕ ಹಿನ್ನೆಲೆಯನ್ನು ಹೊಂದಿರುವ ಕಣಿವೆ ರಾಜ್ಯದಲ್ಲಿ ವಯೋವೃದ್ಧ ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥರು ಮತ್ತು ಇತರ ಸೂಕ್ಷ್ಮ ವ್ಯಕ್ತಿಗಳ ಸುರಕ್ಷತೆಯ ಜವಾಬ್ದಾರಿ ಜಮ್ಮು-ಕಾಶ್ಮೀರ ಆಡಳಿತ ಮತ್ತು ನವದೆಹಲಿಯ ಮೇಲೆಯೂ ಇದೆ.
1989ರಲ್ಲಿ ಅಂದಿನ ಕೇಂದ್ರ ಗೃಹ ಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬೈಯಾ ಸಯೀದ್ ಅವರನ್ನು ಶ್ರೀನಗರದಲ್ಲಿ ಗನ್ ತೋರಿಸಿ ಅಪಹರಿಸಿದ ಬಳಿಕ ಕಣಿವೆ ರಾಜ್ಯ ಎಂದಿಗೂ ಕೂಡ ಮೊದಲಿನಂತೆ ಇರಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ವೇದ್ಯವಾಗಿದೆ. ರುಬೈಯಾ ಅವರ ಬಿಡುಗಡೆಗಾಗಿ ಅಂದಿನ ವಿ.ಪಿ.ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಐವರು ಉನ್ನತ ಮಟ್ಟದ ಕೈದಿಗಳನ್ನು ವಿನಿಮಯ ಮಾಡಿಕೊಳ್ಳಬೇಕಾಯಿತು. ಆ ಸಂದರ್ಭದಲ್ಲಿ ಫಾರೂಕ್ ಅಬ್ದುಲ್ಲಾ ಅವರೇ ಮುಖ್ಯಮಂತ್ರಿಯಾಗಿದ್ದರು. ಆ ಘಟನೆ ಎಷ್ಟು ವಿಲಕ್ಷಣವಾಗಿತ್ತೆಂದರೆ ಅದು ಜಮ್ಮು-ಕಾಶ್ಮೀರದ ಮೇಲೆ ಆಳವಾದ ಗಾಯವನ್ನು ಉಂಟುಮಾಡಿತು. ಆ ಗಾಯವು ಇಂದು ವಾಸಿಯಾಗಿರಬಹುದು ಅಥವಾ ಮರೆತುಹೋಗಿರಬಹುದು. ಆದರೆ ಅದು ಮಾಡಿರುವ ಕೆಟ್ಟ ಗಾಯದ ಗುರುತನ್ನು ಮಾತ್ರ ಯಾರೂ ಮರೆಯಲು ಸಾಧ್ಯವಿಲ್ಲ.
ಇಲ್ಲಿ ಬೊಟ್ಟು ಮಾಡಬೇಕಾದ ಪ್ರಮುಖ ವಿಚಾರವೆಂದರೆ ಅಬ್ದುಲ್ಲಾ ಅವರ ಮೇಲಿನ ಇತ್ತೀಚಿನ ದಾಳಿಯಂತಹ ಉದ್ಧಟತನದ ರಾಜಕೀಯ ಹಿಂಸಾಚಾರವು ಅಥವಾ ಸದಾ ಸಂಘರ್ಷದಿಂದ ಕೂಡಿರುವ ಪ್ರದೇಶದಲ್ಲಿ ಇಂತಹ ಘಟನೆಗಳು ಆಗಾಗ ಮರುಕಳಿಸುವುದು ಅತ್ಯಂತ ಅಪಾಯಕಾರಿ.
ಇದರಿಂದ ಉಳಿದ ಜಗತ್ತಿಗೆ ಯಾವುದೇ ತೊಂದರೆ ಆಗದೇ ಇದ್ದರೂ ಕಣಿವೆ ರಾಜ್ಯದಲ್ಲಿ ಇಂತಹ ಘಟನೆಗಳು ಯಾವುದೇ ರೂಪದಲ್ಲಿ ಮತ್ತೆ ಸಂಭವಿಸಲು ಅವಕಾಶ ಮಾಡಿಕೊಟ್ಟರೆ ಅದಕ್ಕೆ ಬಹಳ ದೊಡ್ಡ ಬೆಲೆ ತೆತ್ತಂತೆ ಸರಿ. ಯಾಕೆಂದರೆ ಇಂತಹ ಘಟನೆಗಳು ಜಮ್ಮು-ಕಾಶ್ಮೀರದ ಒಟ್ಟಾರೆ ಶಾಂತಿ ಮತ್ತು ಸ್ಥಿರತೆಯ ಮೇಲೆ ಬೀರುವ ಪರಿಣಾಮ ದೊಡ್ಡದು.
ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಘಟನೆಗಳೊಂದಿಗೆ ತಳಕು ಹಾಕಿಕೊಂಡಿರುವ ಇತರ ಆಯಕಟ್ಟಿನ ಅಂಶಗಳನ್ನು ಕೂಡ ಪತ್ತೆ ಹಚ್ಚಿ ಸರಿಪಡಿಸಬೇಕಾಗಿದೆ. ಇದರಿಂದ ಭವಿಷ್ಯದಲ್ಲಿ ಅವು ಮರುಕಳಿಸುವ ಸಾಧ್ಯತೆ ತಗ್ಗುತ್ತದೆ. ಅದನ್ನು ಬಿಟ್ಟು ಈ ಘಟನೆಯನ್ನು ಮರೆತರೆ ಅಥವಾ ಮೈಮರೆತರೆ ಉಂಟಾಗುವ ಗಾಯದ ಕಲೆಯನ್ನು ಬಹಳ ಕಾಲ ಹೊತ್ತು ತಿರುಗಬೇಕಾಗುತ್ತದೆ. ಯಾಕೆಂದರೆ 1989ರಿಂದ ಹಿಡಿದು ಕಳೆದ ವರ್ಷ ಸಂಭವಿಸಿದ ಭೀಕರ ಪುಲ್ವಾಮಾ ಹತ್ಯಾಕಾಂಡದ ತನಕ ರಾಜಕೀಯವಾಗಿ ಸಕ್ರಿಯರಾಗಿರುವ ವ್ಯಕ್ತಿಗಳ ಮತ್ತು ಸಾರ್ವಜನಿಕ ಸೇವಕರ ಮೇಲೆ ಕ್ರೂರ ಹತ್ಯೆಗಳು ಮತ್ತು ಅಪಹರಣಗಳು ಅಸಂಖ್ಯಾತ ನಿದರ್ಶನಗಳು ನಮ್ಮ ಮುಂದೆ ಇವೆ.
ಪ್ರತಿಯೊಂದು ಘಟನೆಯೂ ಕೂಡ ಮುಂದಿನ ಘಟನೆಗೆ ಮುನ್ನುಡಿಯನ್ನು ಬರೆಯುತ್ತದೆ, ಇದು ಭೇದಿಸಲು ಸಾಧ್ಯವಾಗದಂತಹ ಹಿಂಸಾಚಾರದ ಸರಪಳಿಗೆ ಕಾರಣವಾಗುತ್ತದೆ. ಇದು ಕಾಶ್ಮೀರದ ಕಥೆ. 2020-22ರ ಅವಧಿಯಲ್ಲಿ ಹಲವಾರು ರಾಜಕೀಯ ಕಾರ್ಯಕರ್ತರು ಮತ್ತು ಸರಪಂಚರನ್ನು ಒಬ್ಬರ ನಂತರ ಒಬ್ಬರಂತೆ ಕೊಲೆ ಮಾಡಿದಾಗ ಇದು ಕಣ್ಣಿಗೆ ರಾಚಿತು. ಪುಲ್ವಾಮಾದಲ್ಲಿ ಪ್ರವಾಸಿಗರನ್ನು ರಕ್ಷಣೆಯಿಲ್ಲದೆ ಬಿಡಲಾಗಿದ್ದರೆ, ಅತ್ಯಂತ ಹೆಚ್ಚಿನ ಭದ್ರತೆ ಹೊಂದಿರುವ ಫಾರೂಕ್ ಅಬ್ದುಲ್ಲಾ ಅವರ ವಿಷಯದಲ್ಲಿ, ಅವರು ಭೇಟಿ ನೀಡಿದ ಸ್ಥಳದ ಭದ್ರತೆಯಲ್ಲಿನ ಲೋಪಗಳು ಅಥವಾ ತಾಂತ್ರಿಕ ದೋಷಗಳು ಕ್ಷಮಿಸಲಾಗದಷ್ಟು ಸ್ಪಷ್ಟವಾಗಿ ಕಾಣುತ್ತಿವೆ.
ದೇವರ ದಯೆಯೇ ದೊಡ್ಡದೇ?
ಇಂತಹ ಅಹಿತಕರ ಘಟನೆ ನಡೆದಿದ್ದರೂ ಸಹ, ಕೇಂದ್ರ ಸರ್ಕಾರವು ತನಿಖೆಗೆ ಆದೇಶಿಸಿದ ಹೊರತಾಗಿಯೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಥವಾ ಆಡಳಿತದಲ್ಲಿ ಇದುವರೆಗೆ ಯಾರ ಮೇಲೆಯೂ ಕ್ರಮ ಕೈಗೊಂಡಿಲ್ಲ. ಇದು ಸಾಮಾನ್ಯವಾಗಿ ಸೌಲಭ್ಯವಂತರೆಂದು ಪರಿಗಣಿಸಲಾದ ರಾಜಕೀಯ ವರ್ಗವನ್ನೂ ಸಹ ದೇವರ ದಯೆಯ ಮೇಲೆ ಬಿಟ್ಟಂತಾಗಿದೆ.
ಪುಲ್ವಾಮಾದಲ್ಲಿ ದೇಶದಾದ್ಯಂತದ ಪ್ರವಾಸಿಗರು ಸೇರುತ್ತಿದ್ದ ನಿರ್ಜನ ಪ್ರದೇಶದಂತೆ, ಮಾಜಿ ಮುಖ್ಯಮಂತ್ರಿಗಳು ಭೇಟಿ ನೀಡಿದ್ದ ಜಮ್ಮುವಿನ ಗಿಜಿಗುಟ್ಟುವ ಪ್ರದೇಶವನ್ನು ಸ್ಥಳೀಯ ಪೊಲೀಸರು ಸರಿಯಾಗಿ ತಪಾಸಣೆ ನಡೆಸಿರಲಿಲ್ಲ. ಇದರಿಂದಾಗಿ ಆಯುಧ ಹಿಡಿದಿದ್ದ 63 ವರ್ಷದ ಕಮಲ್ ಸಿಂಗ್ ಜಮ್ವಾಲ್ ಎಂಬ ನಿವಾಸಿಗೆ ಸುಲಭವಾಗಿ ಒಳಪ್ರವೇಶಿಸಲು ಅವಕಾಶ ಮಾಡಿಕೊಟ್ಟಿತು. ಕೇಂದ್ರ ಗೃಹ ಸಚಿವಾಲಯವು ಅಬ್ದುಲ್ಲಾ ಅವರಿಗೆ ಒದಗಿಸಿರುವ 24 ಗಂಟೆಗಳ ಭದ್ರತಾ ಕವಚವಿಲ್ಲದಿದ್ದರೆ, ಈ ಘಟನೆಯು ದೊಡ್ಡ ದುರಂತಕ್ಕೆ ನಾಂದಿ ಹಾಡುತ್ತಿತ್ತು. ಸದ್ಯ ಜಮ್ವಾಲ್ನನ್ನು ಬಂಧಿಸಲಾಗಿದೆ.
ಫಾರೂಕ್ ಅಬ್ದುಲ್ಲಾ ಅವರು ಮುಖ್ಯಮಂತ್ರಿಯಾಗಿದ್ದ ಕಾಲಕ್ಕೆ ಹೋಲಿಸಿದರೆ, ಇಂದು ಜಮ್ಮು ಮತ್ತು ಕಾಶ್ಮೀರವು ಪೂರ್ಣ ಪ್ರಮಾಣದ ರಾಜ್ಯವಾಗಿ ಉಳಿದಿಲ್ಲ. ದೇಶದ ಗಡಿಭಾಗದಿಂದ ಹಿಡಿದು ಪ್ರಾಂತ್ಯದ ಒಳಭಾಗದವರೆಗಿನ ಭದ್ರತೆಯು ಈಗ ನೇರವಾಗಿ ದೆಹಲಿಯ ಜವಾಬ್ದಾರಿಯಾಗಿದೆ.
ಇಂದು ಫಾರೂಕ್ ಅವರ ಪುತ್ರ ಉಮರ್ ಅಬ್ದುಲ್ಲಾ ನೇತೃತ್ವದ ಸ್ಥಳೀಯ ಸರ್ಕಾರವು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಲ್ಲಿ ಕೇವಲ ಒಬ್ಬ ಮೂಕ ಪ್ರೇಕ್ಷಕನಂತೆ ಕೆಲಸ ಮಾಡಬೇಕಾಗಿದೆ.
ತಮ್ಮ ತಂದೆಯಂತೆ ಉಮರ್ ಕೂಡ ತಮ್ಮದೇ ಆದ ಭದ್ರತೆಗಾಗಿ ಕೇಂದ್ರದ ಮೇಲೆ ಅವಲಂಬಿತರಾಗಿದ್ದಾರೆ. ಆದರೂ, ಮಾರ್ಚ್ 11ರ ಘಟನೆಯ ಬಗ್ಗೆ ನವದೆಹಲಿಯು ಸಾಮಾನ್ಯವಾಗಿ ಯಾವುದೇ ಆತಂಕವಿಲ್ಲದೆ ನಿರ್ಲಿಪ್ತವಾಗಿದೆ.
ದ್ವೇಷ ಹರಡುವವರು
ಪ್ರಧಾನಿ ನರೇಂದ್ರ ಮೋದಿಯವರು ಈ ಘಟನೆಯ ಬಗ್ಗೆ ಇದುವರೆಗೂ ಮೌನ ಮುರಿದಿಲ್ಲ. ಆದರೆ ಅವರ ಗೃಹ ಸಚಿವ ಅಮಿತ್ ಶಾ ಘಟನೆಯ ನಂತರ ಫಾರೂಕ್ ಅಬ್ದುಲ್ಲಾ ಅವರೊಂದಿಗೆ ಫೋನ್ನಲ್ಲಿ ಮಾತನಾಡಿ ಸಮಗ್ರ ತನಿಖೆಯ ಭರವಸೆ ನೀಡಿದ್ದಾರೆ. ಆದರೆ, ಈ ಘಟನೆಯ ಸ್ವರೂಪ ಮತ್ತು ಇದರ ಹಿಂದಿರುವ ಶಕ್ತಿಗಳು ಈ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಘಟನೆಗಳಿಗಿಂತ ತೀರಾ ಭಿನ್ನವಾಗಿವೆ.
ವರದಿಯ ಪ್ರಕಾರ, ಶಂಕಿತ ಆರೋಪಿಯು ತೀವ್ರ ಬಲಪಂಥೀಯ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ. ಹೀಗಾಗಿ, ಈ ಘಟನೆಯು ರಾಜಕೀಯ ವೈಷಮ್ಯಗಳನ್ನು ಮೀರಿ, ಹಿಂದೆಂದಿಗಿಂತಲೂ ಹೆಚ್ಚು ಆಳವಾದ ಕೋಮು ಬಣ್ಣವನ್ನು ಪಡೆಯುವ ಬೆದರಿಕೆ ಹಾಕುತ್ತಿದೆ. ಇದು ಯಾರೂ ನಿರ್ಲಕ್ಷಿಸಲಾಗದಷ್ಟು ಸ್ಪಷ್ಟವಾಗಿರುವುದರಿಂದ, ತಡವಾಗುವ ಮೊದಲೇ ಮೋದಿ ಮತ್ತು ಅಮಿತ್ ಶಾ ಅವರು ಬಿಜೆಪಿಯ ಅನೇಕ ಅನುಯಾಯಿಗಳ ಹೃದಯದಲ್ಲಿ ಬೇರೂರುತ್ತಿರುವ ಬಹಿರಂಗ ಅಥವಾ ಗುಪ್ತ ದ್ವೇಷದ ಮನೋಭಾವವನ್ನು ತಡೆಯಬೇಕಾದ ಅಗತ್ಯವಿದೆ.
ಈ ಪರಿಸ್ಥಿತಿಯನ್ನು ಹೀಗೆಯೇ ಬಿಟ್ಟರೆ, ಇದು ಕೇಂದ್ರದ ಆಡಳಿತಾರೂಢ ಪಕ್ಷದ ಉನ್ನತ ನಾಯಕರ ಕೈಮೀರಿ ಹೋಗುವ ಸಾಧ್ಯತೆಯಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

