ಪಶ್ಚಿಮ ಬಂಗಾಳ ಚುನಾವಣೆ 2026: ಕುತೂಹಲ ಕೆರಳಿಸಿರುವ 10 ಪ್ರಮುಖ ಕ್ಷೇತ್ರಗಳಿವು
x

ಪಶ್ಚಿಮ ಬಂಗಾಳ ಚುನಾವಣೆ 2026: ಕುತೂಹಲ ಕೆರಳಿಸಿರುವ 10 ಪ್ರಮುಖ ಕ್ಷೇತ್ರಗಳಿವು

ಭವಾನಿಪುರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರತಿನಿಧಿಸುವ ಈ ಕ್ಷೇತ್ರ, ರಾಜ್ಯದ ಅತ್ಯಂತ ಹೈ-ಪ್ರೊಫೈಲ್ ಕಣವಾಗಿದೆ. 2011ರಲ್ಲಿ ಟಿಎಂಸಿ ಅಧಿಕಾರಕ್ಕೆ ಬಂದಾಗಿನಿಂದಲೂ ಇದು ಪಕ್ಷದ ಭದ್ರಕೋಟೆ.


Click the Play button to hear this message in audio format

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಮುಂದಿನ ಐದು ವರ್ಷಗಳ ಕಾಲ ರಾಜ್ಯವನ್ನು ಯಾರು ಆಳಲಿದ್ದಾರೆ ಎಂಬುದನ್ನು ನಿರ್ಧರಿಸಲು ವೇದಿಕೆ ಸಜ್ಜಾಗಿದೆ. ರಾಜ್ಯದ ರಾಜಕೀಯ ಭವಿಷ್ಯವನ್ನು ಬರೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ 10 ಪ್ರಮುಖ ವಿಧಾನಸಭಾ ಕ್ಷೇತ್ರಗಳ ಸಂಕ್ಷಿಪ್ತ ವಿವರ ಇಲ್ಲಿದೆ.

1. ಭವಾನಿಪುರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರತಿನಿಧಿಸುವ ಈ ಕ್ಷೇತ್ರ, ರಾಜ್ಯದ ಅತ್ಯಂತ ಹೈ-ಪ್ರೊಫೈಲ್ ಕಣವಾಗಿದೆ. 2011ರಲ್ಲಿ ಟಿಎಂಸಿ (TMC) ಅಧಿಕಾರಕ್ಕೆ ಬಂದಾಗಿನಿಂದಲೂ ದಕ್ಷಿಣ ಕೋಲ್ಕತ್ತಾದ ಈ ಕ್ಷೇತ್ರವು ಪಕ್ಷದ ಭದ್ರಕೋಟೆ. 2021ರಲ್ಲಿ ನಂದಿಗ್ರಾಮದಲ್ಲಿ ಸುವೇಂದು ಅಧಿಕಾರಿ ವಿರುದ್ಧ ಅಲ್ಪ ಮತಗಳಿಂದ ಸೋತಿದ್ದ ಮಮತಾ, ಅದೇ ವರ್ಷ ನಡೆದ ಭವಾನಿಪುರ ಉಪಚುನಾವಣೆಯಲ್ಲಿ ಶೇ. 71.9ರಷ್ಟು ಮತ ಪಡೆದು ಭರ್ಜರಿ ಜಯ ಸಾಧಿಸಿದ್ದರು. ಆದರೆ, ಇತ್ತೀಚಿನ ಮತದಾರರ ಪಟ್ಟಿ ಪರಿಷ್ಕರಣೆ (SIR) ವೇಳೆ 47,000ಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಟಿಎಂಸಿಯ ಈ 'ಅತ್ಯಂತ ಸುರಕ್ಷಿತ' ಕ್ಷೇತ್ರದಿಂದ ಮಮತಾ ಮತ್ತೆ ಕಣಕ್ಕಿಳಿದರೆ, ಪರಿಷ್ಕೃತ ಮತದಾರರ ಪಟ್ಟಿಯೇ ಅವರಿಗೆ ದೊಡ್ಡ ಸವಾಲಾಗಬಹುದು ಎಂಬುದು ವಿಶ್ಲೇಷಕರ ಲೆಕ್ಕಾಚಾರ.

2. ನಂದಿಗ್ರಾಮ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ, ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿದೆ. 2007ರ ಎಡರಂಗದ ಆಡಳಿತದಲ್ಲಿ ನಡೆದ ಭೂಸ್ವಾಧೀನ ವಿರೋಧಿ ಹೋರಾಟದ ಕೇಂದ್ರಬಿಂದು ಇದಾಗಿತ್ತು. ಪ್ರಸ್ತಾವಿತ ಕೆಮಿಕಲ್ ಹಬ್ ವಿರುದ್ಧದ ಆ ಪ್ರತಿಭಟನೆಗಳು ಎಡರಂಗದ ಮೂರು ದಶಕಗಳ ಆಳ್ವಿಕೆಯನ್ನು ಅಂತ್ಯಗೊಳಿಸಿ, ಮಮತಾ ಬ್ಯಾನರ್ಜಿ ಅಧಿಕಾರಕ್ಕೇರಲು ಮೆಟ್ಟಿಲಾಗಿತ್ತು. 2021ರ ಚುನಾವಣೆಯಲ್ಲಿ ಇಲ್ಲಿ ಹಿರಿಯ ಬಿಜೆಪಿ ನಾಯಕ ಸುವೇಂದು ಅಧಿಕಾರಿ ಅವರು ಸಿಎಂ ಮಮತಾ ಅವರನ್ನು ಮಣಿಸಿದಾಗ ಈ ಕ್ಷೇತ್ರ ಮತ್ತೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಬಾರಿಯೂ ಇಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

3. ಸಂದೇಶ್‌ಖಾಲಿ ಬಂಗಾಳದ ಸುಂದರಬನ್ಸ್ ಡೆಲ್ಟಾದಲ್ಲಿರುವ ಸಂದೇಶ್‌ಖಾಲಿ, ಬಂಧಿತ ಟಿಎಂಸಿ ನಾಯಕ ಶಹಜಹಾನ್ ಶೇಖ್‌ನಿಂದ ಮಹಿಳೆಯರ ಮೇಲಾದ ದೌರ್ಜನ್ಯದ ಆರೋಪಗಳಿಂದಾಗಿ ದೇಶಾದ್ಯಂತ ಸುದ್ದಿಯಾಗಿತ್ತು. ದೌರ್ಜನ್ಯಕ್ಕೊಳಗಾಗಿದ್ದಳು ಎನ್ನಲಾದ ಗೃಹಿಣಿ ರೇಖಾ ಪಾತ್ರಾ ಅವರನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಬಸಿರ್‌ಹತ್ ಕ್ಷೇತ್ರದಿಂದ ಬಿಜೆಪಿ ಕಣಕ್ಕಿಳಿಸಿ, ಮಹಿಳಾ ಹೋರಾಟದ ಸಂಕೇತವಾಗಿ ಬಿಂಬಿಸಿತ್ತು. ಅವರು ಸೋತರೂ, ಸಂದೇಶ್‌ಖಾಲಿ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದು ಬಿಜೆಪಿಗೆ ಬಲ ತುಂಬಿದೆ. ಹಿಂಸಾಚಾರದ ಕಾವು ಕೊಂಚ ತಣ್ಣಗಾಗಿದ್ದರೂ, ಮಹಿಳಾ ಸುರಕ್ಷತೆಯನ್ನೇ ಬಿಜೆಪಿ ಇಲ್ಲಿ ಪ್ರಮುಖ ಚುನಾವಣಾ ಅಸ್ತ್ರವನ್ನಾಗಿಸುವ ಸಾಧ್ಯತೆಯಿದೆ.

4. ಭಾಂಗರ್ ದಕ್ಷಿಣ 24-ಪರಗಣ ಜಿಲ್ಲೆಯ ಭಾಂಗರ್, ಆಗಾಗ್ಗೆ ನಡೆಯುವ ರಾಜಕೀಯ ಘರ್ಷಣೆಗಳಿಂದಾಗಿ 2024ರಲ್ಲಿ ಕೋಲ್ಕತ್ತಾ ಪೊಲೀಸರ ವ್ಯಾಪ್ತಿಗೆ ಸೇರ್ಪಡೆಯಾಗಿದೆ. 2016ರಲ್ಲಿ ಟಿಎಂಸಿ ಗೆದ್ದಿದ್ದ ಈ ಕ್ಷೇತ್ರವನ್ನು, 2021ರಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ (ISF) ವಶಪಡಿಸಿಕೊಂಡಿತ್ತು. ಐಎಸ್‌ಎಫ್‌ನ ನೌಶಾದ್ ಸಿದ್ದಿಕಿ ವಿಧಾನಸಭೆಯಲ್ಲಿರುವ ಏಕೈಕ ಬಿಜೆಪಿಯೇತರ ವಿರೋಧ ಪಕ್ಷದ ಶಾಸಕರಾಗಿದ್ದು, ಈ ಕ್ಷೇತ್ರವನ್ನು ಮರಳಿ ಪಡೆಯಲು ಟಿಎಂಸಿ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. 1972-2011ರ ನಡುವೆ ಇಲ್ಲಿ ಪ್ರಾಬಲ್ಯ ಮೆರೆದಿದ್ದ ಸಿಪಿಐ(ಎಂ) ಜೊತೆಗಿನ ಐಎಸ್‌ಎಫ್ ಮೈತ್ರಿ ಸಿದ್ದಿಕಿ ಅವರ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿದೆ. ಟಿಎಂಸಿಯ ಆಂತರಿಕ ಬಣ ರಾಜಕೀಯವೇ ಆ ಪಕ್ಷಕ್ಕೆ ಮುಳುವಾಗುವ ಅಪಾಯವೂ ಇದೆ.

5. ಗಾಯ್‌ಘಾಟಾ ಭಾರತ-ಬಾಂಗ್ಲಾದೇಶ ಗಡಿಯುದ್ದಕ್ಕೂ ಇರುವ ಉತ್ತರ 24-ಪರಗಣ ಜಿಲ್ಲೆಯ ಗಾಯ್‌ಘಾಟಾ, ಪರಿಶಿಷ್ಟ ಜಾತಿಗೆ ಸೇರಿದ 'ಮತುವಾ' (Matua) ಸಮುದಾಯದ ಭದ್ರಕೋಟೆ. ಈ ಸಮುದಾಯದ ರಾಜಕೀಯ ಒಲವು ಹಲವು ಕ್ಷೇತ್ರಗಳ ಫಲಿತಾಂಶವನ್ನು ಬದಲಾಯಿಸಬಲ್ಲದು. ಪೌರತ್ವ, ನಿರಾಶ್ರಿತರ ಹಕ್ಕುಗಳು ಮತ್ತು ಸಿಎಎ (CAA) ಕಾಯ್ದೆ ಜಾರಿಯಂತಹ ಸೂಕ್ಷ್ಮ ವಿಚಾರಗಳ ಹಿನ್ನೆಲೆಯಲ್ಲಿ, ಮತುವಾ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹಾಗೂ ಆಡಳಿತಾರೂಢ ಟಿಎಂಸಿ ನಡುವೆ ಇಲ್ಲಿ ಭಾರೀ ಹಗ್ಗಜಗ್ಗಾಟ ನಡೆಯಲಿದೆ.

6. ಶಂಶೇರ್‌ಗಂಜ್ ಮುರ್ಷಿದಾಬಾದ್ ಜಿಲ್ಲೆಯ ಈ ಕ್ಷೇತ್ರ, ವಕ್ಫ್ (ತಿದ್ದುಪಡಿ) ಕಾಯ್ದೆಯ ವಿರುದ್ಧ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ನಂತರ ತೀವ್ರ ಸ್ವರೂಪ ಪಡೆದುಕೊಂಡಿದೆ. ಗುಂಪಿನ ದಾಳಿಗೆ 72 ವರ್ಷದ ವೃದ್ಧ ಮತ್ತು ಆತನ ಮಗ ಬಲಿಯಾಗಿದ್ದು, ಇದರ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿತ್ತು. ಪರಿಸ್ಥಿತಿ ನಿಯಂತ್ರಿಸಲು ಹೈಕೋರ್ಟ್ ಆದೇಶದ ಮೇರೆಗೆ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿತ್ತು. ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ 2021ರಲ್ಲಿ ಟಿಎಂಸಿ ಶೇ. 51ರಷ್ಟು ಹಾಗೂ ಕಾಂಗ್ರೆಸ್ ಶೇ. 37ರಷ್ಟು ಮತ ಪಡೆದಿದ್ದವು. ಕಳೆದ ಬಾರಿ ಶೇ. 6ಕ್ಕಿಂತ ಕಡಿಮೆ ಮತ ಪಡೆದಿದ್ದ ಬಿಜೆಪಿ, ಈ ಬಾರಿ ಧ್ರುವೀಕರಣದ ಲಾಭ ಪಡೆಯುವ ವಿಶ್ವಾಸದಲ್ಲಿದೆ.

7. ದಿನ್ಹಾಟಾ ಉತ್ತರ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿರುವ ದಿನ್ಹಾಟಾ, ಇತ್ತೀಚಿನ ವರ್ಷಗಳಲ್ಲಿ ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಗಿದೆ. ಬಹುಪಾಲು ಗ್ರಾಮೀಣ ಪ್ರದೇಶವಾಗಿರುವ ಇಲ್ಲಿ ಶೇ. 41ರಷ್ಟು ಎಸ್‌ಟಿ (ST) ಮತದಾರರಿದ್ದು, ಸಾಮಾಜಿಕ ಹಾಗೂ ಕೃಷಿ ವಿಚಾರಗಳೇ ನಿರ್ಣಾಯಕ. 2011ರವರೆಗೆ ಫಾರ್ವರ್ಡ್ ಬ್ಲಾಕ್ (ಎಡರಂಗ) ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ಪ್ರಸ್ತುತ ಟಿಎಂಸಿಯ ಉದಯನ್ ಗುಹಾ ಪ್ರತಿನಿಧಿಸುತ್ತಿದ್ದಾರೆ. 2021ರಲ್ಲಿ ಬಿಜೆಪಿಯ ನಿಸಿತ್ ಪ್ರಮಾಣಿಕ್ ಇಲ್ಲಿ ಗುಹಾ ಅವರನ್ನು ಸೋಲಿಸಿದ್ದರು. ಆದರೆ, ಪ್ರಮಾಣಿಕ್ ರಾಜೀನಾಮೆ ನೀಡಿದಾಗ ನಡೆದ ಉಪಚುನಾವಣೆಯಲ್ಲಿ ಗುಹಾ ಮರಳಿ ಗೆದ್ದಿದ್ದರು.

8. ಕೋಲ್ಕತ್ತಾ ಪೋರ್ಟ್ ಹೂಗ್ಲಿ ನದಿಯ ದಂಡೆಯಲ್ಲಿರುವ ಈ ಕ್ಷೇತ್ರ, ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮತದಾರರನ್ನು ಹೊಂದಿದ್ದು ರಾಜಕೀಯವಾಗಿ ಅತ್ಯಂತ ಆಯಕಟ್ಟಿನ ಜಾಗವಾಗಿದೆ. ಇಲ್ಲಿನ ಹಾಲಿ ಶಾಸಕ, ಟಿಎಂಸಿಯ ಹಿರಿಯ ನಾಯಕ ಫಿರ್ಹಾದ್ ಹಕೀಮ್ 2021ರಲ್ಲಿ ಭಾರಿ ಅಂತರದಿಂದ ಜಯಗಳಿಸಿದ್ದರು. ಇದು ಟಿಎಂಸಿಯ ಭದ್ರಕೋಟೆಯಾದರೂ, ಬಿಜೆಪಿ ಮತ್ತು ಕಾಂಗ್ರೆಸ್ ಇಲ್ಲಿ ನೆಲೆ ಕಂಡುಕೊಳ್ಳಲು ತೀವ್ರ ಯತ್ನ ನಡೆಸುತ್ತಿವೆ. ಹಾಲಿ ಶಾಸಕರ ಜನಪ್ರಿಯತೆ ಹಾಗೂ ಜನಸಂಖ್ಯಾ ಸಂಯೋಜನೆಯಿಂದಾಗಿ ಈ ಕ್ಷೇತ್ರ ತೀವ್ರ ಕುತೂಹಲ ಕೆರಳಿಸಿದೆ.

9. ಬರುಯಿಪುರ್ ಪಶ್ಚಿಮ ಜಾದವ್‌ಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಇದು, 2011ರಿಂದಲೂ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರನ್ನು ಪ್ರತಿನಿಧಿಸುತ್ತಿರುವ ಟಿಎಂಸಿಯ ಭದ್ರಕೋಟೆ. 2.32 ಲಕ್ಷ ಮತದಾರರಿರುವ ಇಲ್ಲಿ ಶೇ. 30ಕ್ಕೂ ಹೆಚ್ಚು ಮುಸ್ಲಿಂ ಮತದಾರರಿದ್ದಾರೆ. ಟಿಎಂಸಿ ಪ್ರಾಬಲ್ಯದ ನಡುವೆಯೂ, ಬಿಜೆಪಿ ಇಲ್ಲಿ ಪ್ರಬಲ ಪೈಪೋಟಿ ನೀಡುತ್ತಿದೆ (2021ರಲ್ಲಿ ಶೇ. 27.97 ಮತ ಪಡೆದಿತ್ತು). ಜೊತೆಗೆ ಸಿಪಿಐ(ಎಂ) ಕೂಡ ತನ್ನದೇ ಆದ ಸಾಂಪ್ರದಾಯಿಕ ವೋಟ್ ಬ್ಯಾಂಕ್ ಉಳಿಸಿಕೊಂಡಿದ್ದು, ತ್ರಿಕೋನ ಸ್ಪರ್ಧೆಯ ಸಾಧ್ಯತೆಗಳಿವೆ.

10. ಆಸನ್ಸೋಲ್ ದಕ್ಷಿಣ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಈ ಕ್ಷೇತ್ರವು ನಗರ ಮತ್ತು ಕಲ್ಲಿದ್ದಲು ಗಣಿಗಾರಿಕೆ ಪ್ರದೇಶವನ್ನು ಒಳಗೊಂಡಿದೆ. 2021ರಿಂದ ಬಿಜೆಪಿಯ ಅಗ್ನಿಮಿತ್ರ ಪಾಲ್ ಇಲ್ಲಿನ ಶಾಸಕಿಯಾಗಿದ್ದಾರೆ. ಕೈಗಾರಿಕಾ ಕಾರ್ಮಿಕರು, ವ್ಯಾಪಾರಿಗಳು ಮತ್ತು ನಗರದ ಮಧ್ಯಮ ವರ್ಗದ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಈ ಕ್ಷೇತ್ರ, ವಿಶಾಲವಾದ ಆಸನ್ಸೋಲ್-ದುರ್ಗಾಪುರ ಕೈಗಾರಿಕಾ ಪಟ್ಟಿಯ ರಾಜಕೀಯ ಒಲವನ್ನು ಬಿಂಬಿಸುತ್ತದೆ.

Read More
Next Story