Union budget- 2026:  ಬ್ಯಾಂಕಿಂಗ್‌, ಶಿಕ್ಷಣ ಕ್ಷೇತ್ರಕ್ಕೆ ಸುಧಾರಣೆಗೆ ಉನ್ನತಮಟ್ಟದ ಸಮಿತಿ
x

ಎಐ ಆಧಾರಿತ ಚಿತ್ರ

Union budget- 2026: ಬ್ಯಾಂಕಿಂಗ್‌, ಶಿಕ್ಷಣ ಕ್ಷೇತ್ರಕ್ಕೆ ಸುಧಾರಣೆಗೆ ಉನ್ನತಮಟ್ಟದ ಸಮಿತಿ

ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಬ್ಯಾಂಕಿಂಗ್ ವಲಯವು ಸದೃಢವಾಗಿರಲು ಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಕೈಗೊಳ್ಳುವ ಬಗ್ಗೆಉನ್ನತಮಟ್ಟದ ಸಮಿತಿಯು ಸಲಹೆ ನೀಡಲಿದೆ.


Click the Play button to hear this message in audio format

ದೇಶವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿಸುವ ಹಿನ್ನೆಲೆಯಲ್ಲಿ ಕೇಂದ್ರವು ಗುರಿಯನ್ನು ಹೊಂದಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಮತ್ತು ಶಿಕ್ಷಣ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸಲು ಪ್ರತ್ಯೇಕವಾಗಿ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡುವ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಬ್ಯಾಂಕಿಂಗ್ ವಲಯವನ್ನು ಮುಂದಿನ ಪೀಳಿಗೆಯ ಅಗತ್ಯಗಳಿಗೆ ತಕ್ಕಂತೆ ರೂಪಿಸಲು ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಮೇಲಿನ ಉನ್ನತ ಮಟ್ಟದ ಸಮಿತಿಯನ್ನು ಸ್ಥಾಪಿಸುವ ಪ್ರಸ್ತಾಪ ಮಾಡಲಾಗಿದೆ.

ಈ ಸಮಿತಿಯು ಬ್ಯಾಂಕಿಂಗ್ ವಲಯದ ಪ್ರಸ್ತುತ ಸ್ಥಿತಿಗತಿಯನ್ನು ಸಮಗ್ರವಾಗಿ ಪರಿಶೀಲಿಸುವುದು. ದೇಶದ ಆರ್ಥಿಕತೆಯು ಮುಂದಿನ ಹಂತಕ್ಕೆ ಹೋಗುತ್ತಿರುವ ವೇಳೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕಾ ವಿಸ್ತರಣೆ ಮತ್ತು ಸ್ಟಾರ್ಟಪ್‌ಗಳಿಗೆ ದೊಡ್ಡ ಮಟ್ಟದ ಬಂಡವಾಳದ ಅಗತ್ಯವಿರುತ್ತದೆ. ಬ್ಯಾಂಕುಗಳು ಕೇವಲ ಸಾಲ ನೀಡುವ ಸಂಸ್ಥೆಗಳಾಗದೆ, ರಾಷ್ಟ್ರದ ಆರ್ಥಿಕ ಬೆಳವಣಿಗೆಯ ಪೂರಕವಾಗಿ ಕಾರ್ಯನಿರ್ವಹಿಸಲು ಬೇಕಾದ ಸುಧಾರಣೆಗಳನ್ನು ಸಮಿತಿಯು ಶಿಫಾರಸು ಮಾಡಲಿದೆ. ಬ್ಯಾಂಕುಗಳು ಎದುರಿಸಿದ್ದ ಅನುತ್ಪಾದಕ ಆಸ್ತಿ ಬಿಕ್ಕಟ್ಟಿನಂತಹ ಸವಾಲುಗಳು ಮತ್ತೆ ಎದುರಾಗದಂತೆ ನೋಡಿಕೊಳ್ಳುವುದು ಸಮಿತಿಯ ಜವಾಬ್ದಾರಿಯಾಗಿರಲಿದೆ. ಜಾಗತಿಕ ಆರ್ಥಿಕ ಏರಿಳಿತಗಳ ನಡುವೆಯೂ ಭಾರತದ ಬ್ಯಾಂಕಿಂಗ್ ವಲಯವು ಸದೃಢವಾಗಿರಲು ಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಕೈಗೊಳ್ಳುವುದಾಗಿದೆ.

ಈಗಾಗಲೇ ದೇಶದ ಶೇ. 98 ರಷ್ಟು ಹಳ್ಳಿಗಳಿಗೆ ಬ್ಯಾಂಕಿಂಗ್ ಸೇವೆ ತಲುಪಿದೆ. ಆದರೆ, ಈ ಸೇರ್ಪಡೆಯು ಕೇವಲ ಬ್ಯಾಂಕ್ ಖಾತೆ ತೆರೆಯುವುದಕ್ಕೆ ಸೀಮಿತವಾಗಬಾರದು. ಕಟ್ಟಕಡೆಯ ಹಳ್ಳಿಯ ರೈತರಿಗೂ, ಸಣ್ಣ ಉದ್ಯಮಿಗಳಿಗೂ ಕೈಗೆಟಕುವ ದರದಲ್ಲಿ ಸಾಲ ಸೌಲಭ್ಯ, ವಿಮೆ ಮತ್ತು ಹೂಡಿಕೆಯ ಅವಕಾಶಗಳು ಸಿಗುವಂತೆ ಮಾಡುವುದು ಸಮಿತಿಯ ಆಶಯವಾಗಿರುತ್ತದೆ. ಡಿಜಿಟಲ್ ಬ್ಯಾಂಕಿಂಗ್ ವಿಸ್ತರಣೆಯಾಗುತ್ತಿದ್ದಂತೆ ಸೈಬರ್ ವಂಚನೆಗಳು ಮತ್ತು ತಾಂತ್ರಿಕ ಸವಾಲುಗಳು ಹೆಚ್ಚುತ್ತಿವೆ. ಬ್ಯಾಂಕಿಂಗ್ ವ್ಯವಸ್ಥೆಯ ಮೇಲೆ ಸಾಮಾನ್ಯ ಜನರ ನಂಬಿಕೆ ಉಳಿಯಬೇಕಾದರೆ ಗ್ರಾಹಕರ ಹಿತರಕ್ಷಣೆ ಅತ್ಯಗತ್ಯ. ಗ್ರಾಹಕರ ದೂರುಗಳ ಶೀಘ್ರ ವಿಲೇವಾರಿ, ಪಾರದರ್ಶಕ ವ್ಯವಹಾರ ಮತ್ತು ಡೇಟಾ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಮಿತಿಯು ಕಟ್ಟುನಿಟ್ಟಾದ ಕ್ರಮಗಳನ್ನು ಪ್ರಸ್ತಾಪಿಸಲಿದೆ.

ಶಿಕ್ಷಣಕ್ಕಾಗಿ ಉನ್ನತ ಮಟ್ಟದ ಸಮಿತಿ

ಶಿಕ್ಷಣ, ಉದ್ಯೋಗ ಮತ್ತು ಉದ್ಯಮಶೀಲತೆಗಳನ್ನು ಒಗ್ಗೂಡಿಸುವ ಸಮಗ್ರ ವ್ಯವಸ್ಥೆಯ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ, ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮಶೀಲತೆ ಎಂಬ ಉನ್ನತ ಮಟ್ಟದ ಸಮಿತಿಯ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಲಾಗಿದೆ.

ಪ್ರಸ್ತುತ ಶಿಕ್ಷಣ ವ್ಯವಸ್ಥೆ ಮತ್ತು ಮಾರುಕಟ್ಟೆಯ ಅಗತ್ಯತೆಗಳ ನಡುವೆ ಅಂತರವಿದೆ. ಈ ಸಮಿತಿಯು ಶಿಕ್ಷಣವನ್ನು ನೇರವಾಗಿ ಉದ್ಯೋಗ ಮತ್ತು ಉದ್ಯಮಶೀಲತೆಗೆ ಜೋಡಿಸುವ ಕಾರ್ಯವನ್ನು ಮಾಡಲಿದೆ. ವಿದ್ಯಾರ್ಥಿಗಳು ಕೇವಲ ಪದವೀಧರರಾಗದೆ, ಮಾರುಕಟ್ಟೆಗೆ ಬೇಕಾದ ಕೌಶಲ್ಯಗಳನ್ನು ಹೊಂದಿರುವ ಉದ್ಯೋಗ ಸಿದ್ಧ ಅಭ್ಯರ್ಥಿಗಳಾಗಲು ಸಮಿತಿಯು ಶಿಫಾರಸುಗಳನ್ನು ನೀಡಲಿದೆ. ಅಲ್ಲದೆ, ಯುವಜನರು ಕೇವಲ ಉದ್ಯೋಗಾಕಾಂಕ್ಷಿಗಳಾಗದೆ ಉದ್ಯೋಗದಾತರಾಗಿ ಹೊರಹೊಮ್ಮಲು ಬೇಕಾದ ಪೂರಕ ಪರಿಸರವನ್ನು ನಿರ್ಮಿಸುವುದು ಈ ಸಮಿತಿಯ ಮುಖ್ಯ ಉದ್ದೇಶವಾಗಿದೆ. ತಂತ್ರಜ್ಞಾನದ ಬೆಳವಣಿಗೆ ವೇಗವಾಗಿದ್ದು, ಕೃತಕ ಬುದ್ಧಿಮತ್ತೆ ಉದ್ಯೋಗ ಮಾರುಕಟ್ಟೆಯ ಸ್ವರೂಪವನ್ನೇ ಬದಲಿಸುತ್ತಿದೆ. ಪ್ರಸ್ತಾಪಿತ ಸಮಿತಿಯು ಇಂತಹ ಉದಯೋನ್ಮುಖ ತಂತ್ರಜ್ಞಾನಗಳು ಉದ್ಯೋಗಗಳ ಮೇಲೆ ಬೀರುವ ಪರಿಣಾಮಗಳನ್ನು ಆಳವಾಗಿ ವಿಶ್ಲೇಷಿಸಲಿದೆ.

ಕೈಗಾರಿಕಾ ಕಾರಿಡಾರ್‌ಗಳ ಸಮೀಪ ವಿಶ್ವವಿದ್ಯಾಲಯಗಳ ಟೌನ್‌ಶಿಪ್‌

ಪ್ರಮುಖ ಕೈಗಾರಿಕಾ ಕಾರಿಡಾರ್‌ಗಳ ಬಳಿ ವಿಶ್ವವಿದ್ಯಾಲಯಗಳ ಟೌನ್‌ಶಿಪ್‌ಗಳನ್ನು ಸ್ಥಾಪಿಸುವುದು ಮತ್ತು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ (ಸ್ಟೆಮ್‌) ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ.

ಕೈಗಾರಿಕಾ ಮತ್ತು ಲಾಜಿಸ್ಟಿಕ್ ಕಾರಿಡಾರ್‌ಗಳ ಸಮೀಪ 5 ವಿಶ್ವವಿದ್ಯಾಲಯಗಳ ಟೌನ್‌ಶಿಪ್‌ಗಳನ್ನು ಸ್ಥಾಪಿಸುವ ಯೋಜನೆಯು ಕೈಗಾರಿಕೆ-ಶೈಕ್ಷಣಿಕ ನಂಟನ್ನು ಬಲಪಡಿಸುತ್ತದೆ. ಕೈಗಾರಿಕಾ ಪ್ರದೇಶಗಳ ಸಮೀಪದಲ್ಲೇ ಶಿಕ್ಷಣ ಸಂಸ್ಥೆಗಳಿರುವುದರಿಂದ, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ಮತ್ತು ಇಂಟರ್ನ್‌ಶಿಪ್ ಅವಕಾಶಗಳು ಸುಲಭವಾಗಿ ಸಿಗುತ್ತವೆ. ಇದು ಪದವೀಧರರನ್ನು ನೇರವಾಗಿ ಉದ್ಯೋಗಕ್ಕೆ ಸನ್ನದ್ಧರನ್ನಾಗಿ ಮಾಡುತ್ತದೆ. ಈ ಟೌನ್‌ಶಿಪ್‌ಗಳು ಕೇವಲ ಕಾಲೇಜುಗಳಿಗೆ ಸೀಮಿತವಾಗದೆ, ಸಂಶೋಧನಾ ಸಂಸ್ಥೆಗಳು, ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ಮತ್ತು ವಸತಿ ಸಂಕೀರ್ಣಗಳನ್ನು ಒಳಗೊಂಡಿರುತ್ತವೆ. ಇದು ಒಂದು ಸ್ವಯಂ-ಚಾಲಿತ ಜ್ಞಾನದ ಆರ್ಥಿಕ ವಲಯವನ್ನು ಸೃಷ್ಟಿಸುತ್ತದೆ.

ಸ್ಟೆಮ್‌ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ

ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದ್ದರೂ, ಹಲವು ಪ್ರಯೋಗಾಲಯದ ಕೆಲಸ ಮತ್ತು ದೀರ್ಘಾವಧಿಯ ಅಧ್ಯಯನದ ಕಾರಣದಿಂದ ಸವಾಲುಗಳನ್ನು ಎದುರಿಸುತ್ತಾರೆ. ಪ್ರತಿಯೊಂದು ಜಿಲ್ಲೆಯಲ್ಲೂ ಬಾಲಕಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್‌ಗಳನ್ನು ಸ್ಥಾಪಿಸುವ ಪ್ರಸ್ತಾಪವು ಶಿಕ್ಷಣದಲ್ಲಿನ ಲಿಂಗ ಸಮಾನತೆಯನ್ನು ಉತ್ತೇಜಿಸುತ್ತದೆ. ವಿಶೇಷವಾಗಿ ಗ್ರಾಮೀಣ ಭಾಗದ ಪ್ರತಿಭಾವಂತ ಹೆಣ್ಣುಮಕ್ಕಳು ನಗರ ಪ್ರದೇಶಗಳಲ್ಲಿ ಸುರಕ್ಷಿತ ವಸತಿ ಇಲ್ಲದೆ ಶಿಕ್ಷಣ ಮೊಟಕುಗೊಳಿಸುವುದನ್ನು ಇದು ತಪ್ಪಿಸುತ್ತದೆ. ಹಾಸ್ಟೆಲ್‌ಗಳು ಲಭ್ಯವಾಗುವುದರಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೂ ಗುಣಮಟ್ಟದ ವಸತಿ ವ್ಯವಸ್ಥೆ ಸಿಗಲಿದೆ.

Read More
Next Story