
Union Budget-2026| ರೇಷ್ಮೆ ಬೆಳೆಗಾರರ ನೆರವಿಗೆ ಬಂದ ಕೇಂದ್ರ; ರಾಷ್ಟ್ರೀಯ ಫೈಬರ್ ಯೋಜನೆ ಘೋಷಣೆ
ರಾಷ್ಟ್ರೀಯ ಫೈಬರ್ ಯೋಜನೆ ಘೋಷಣೆಯಿಂದ ಕರ್ನಾಟಕದ ರಾಮನಗರ, ಬಳ್ಳಾರಿ ಮತ್ತು ಉತ್ತರ ಕರ್ನಾಟಕದ ನೇಕಾರ ಸಮುದಾಯಗಳಿಗೆ ದೊಡ್ಡ ಮಟ್ಟದ ಲಾಭವಾಗುವ ನಿರೀಕ್ಷೆಯಿದೆ.
ಜವಳಿ ಉದ್ಯಮಕ್ಕೆ ಸಂಬಂಧಿಸಿದಂತೆ ಕೇಂದ್ರ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಲಾಗಿದೆ. ರೇಷ್ಮೆ, ಉಣ್ಣೆ ಮತ್ತು ಸೆಣಬಿನ ನಾರು ಉದ್ಯಮದಲ್ಲಿ ಸ್ವಾವಲಂಬನೆ ಸಾಧಿಸಲು ʼರಾಷ್ಟ್ರೀಯ ಫೈಬರ್ ಯೋಜನೆʼ ಪ್ರಸ್ತಾಪಿಸಲಾಗಿದೆ. ಸಾಂಪ್ರದಾಯಿಕ ಕ್ಲಸ್ಟರ್‌ಗಳನ್ನು ಆಧುನೀಕರಿಸಲು ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ ಪರಿಚಯಿಸಿದೆ. ಕೃಷಿಯ ಬಳಿಕ ಜವಳಿ ಉದ್ಯಮವು ಜಾಗತಿಕ ಮಟ್ಟದಲ್ಲಿ ಅತಿ ಹೆಚ್ಚಿನ ಉದ್ಯೋಗ ನೀಡುವ ಕ್ಷೇತ್ರವಾಗಿದೆ.
ಹೊಸ ತಲೆಮಾರಿನ ಕೈಗಾರಿಕಾ ಫೈಬರ್‌ಗಳು, ತಾಂತ್ರಿಕ ಜವಳಿಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲು ಉದ್ದೇಶಿಸಲಾಗಿದೆ. ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆ, ಸಾಂಪ್ರದಾಯಿಕ ಕೈಗಾರಿಕಾ ಕ್ಲಸ್ಟರ್‌ಗಳನ್ನು ಆಧುನೀಕರಣಗೊಳಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಯೋಜನೆಯಡಿ ಹಳೆಯ ಯಂತ್ರೋಪಕರಣಗಳನ್ನು ಬದಲಿಸಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಬಂಡವಾಳದ ನೆರವು ಒದಗಿಸಲಾಗುವುದು. ಜವಳಿ ಉತ್ಪನ್ನಗಳ ಗುಣಮಟ್ಟ ತಪಾಸಣೆಗಾಗಿ ಸಾಮಾನ್ಯ ಪರೀಕ್ಷಾ ಮತ್ತು ಪ್ರಮಾಣೀಕರಣ ಕೇಂದ್ರಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ.
ರಾಷ್ಟ್ರೀಯ ಕೈಮಗ್ಗ, ಕರಕುಶಲ ಕಾರ್ಯಕ್ರಮ
ನೇಕಾರರು ಮತ್ತು ಕುಶಲಕರ್ಮಿಗಳ ಆರ್ಥಿಕ ಸ್ಥಿತಿ ಸುಧಾರಿಸಲು ಇರುವ ಹಳೆಯ ಯೋಜನೆಗಳನ್ನೇ ಕ್ರೋಡೀಕರಿಸಿ ಹೊಸ ಕಾರ್ಯಕ್ರಮ ಜಾರಿಗೆ ತರಲಾಗಿದೆ.
ನೇಕಾರರಿಗೆ ಸುಲಭ ಸಾಲ ಸೌಲಭ್ಯ, ವಿನ್ಯಾಸ ನೆರವು ಮತ್ತು ಮಾರುಕಟ್ಟೆ ಸಂಪರ್ಕವನ್ನು ಇದು ಒದಗಿಸುತ್ತದೆ. ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮದಡಿ ಗ್ರಾಮ ಮಟ್ಟದ ಕರಕುಶಲ ವಸ್ತುಗಳಿಗೆ ಅಂತರರಾಷ್ಟ್ರೀಯ ಮಟ್ಟದ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ.
ಮೆಗಾ ಜವಳಿ ಪಾರ್ಕ್‌ಗಳ ಸ್ಥಾಪನೆ
ಜವಳಿ ಉದ್ಯಮದಲ್ಲಿ ಉತ್ಪಾದನಾ ವೆಚ್ಚ ತಗ್ಗಿಸಲು ಮತ್ತು ರಫ್ತು ಹೆಚ್ಚಿಸಲು ಸವಾಲಿನ ಮಾದರಿಯಲ್ಲಿ ಬೃಹತ್ ಜವಳಿ ಪಾರ್ಕ್ ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ.
ಒಂದೇ ಸೂರಿನಡಿ ನೂಲು ತೆಗೆಯುವುದು, ನೇಯುವುದು, ಸಂಸ್ಕರಣೆ ಮತ್ತು ಮುದ್ರಣದಂತಹ ಎಲ್ಲಾ ಸೌಲಭ್ಯಗಳು ಲಭ್ಯವಿರುತ್ತವೆ. ಈ ಪಾರ್ಕ್ ಗಳು ವಿದೇಶಿ ಹೂಡಿಕೆ ಆಕರ್ಷಿಸುವ ಮತ್ತು ಲಕ್ಷಾಂತರ ಯುವಕರಿಗೆ ಉದ್ಯೋಗ ನೀಡುವ ಕೇಂದ್ರಗಳಾಗಲಿವೆ. ಸಮರ್ಥ್ 2.0 ಅಡಿ ಜವಳಿ ವಲಯಕ್ಕೆ ಅಗತ್ಯವಿರುವ ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡುವ ಯೋಜನೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ.
"ಜವಳಿ ವಲಯವು ಕೇವಲ ಸಂಪ್ರದಾಯವಲ್ಲ, ಇದು ಭಾರತದ ಆರ್ಥಿಕತೆಯ ಭವಿಷ್ಯ. ಈ ಯೋಜನೆಗಳ ಮೂಲಕ ನಾವು ಸ್ಥಳೀಯ ನೇಕಾರರನ್ನು ಜಾಗತಿಕ ವ್ಯಾಪಾರಿಗಳನ್ನಾಗಿ ಮಾಡುತ್ತೇವೆ."
-ನಿರ್ಮಲಾ ಸೀತಾರಾಮನ್, ವಿತ್ತ ಸಚಿವೆ.
ಬಜೆಟ್ ಘೋಷಣೆಯಿಂದಾಗಿ ಕರ್ನಾಟಕದ ರಾಮನಗರ, ಬಳ್ಳಾರಿ ಮತ್ತು ಉತ್ತರ ಕರ್ನಾಟಕದ ನೇಕಾರ ಸಮುದಾಯಗಳಿಗೆ ದೊಡ್ಡ ಮಟ್ಟದ ಲಾಭ ತರುವ ನಿರೀಕ್ಷೆಯಿದೆ. ಈಗಾಗಲೇ ಕಲಬುರಗಿಯಲ್ಲಿ ಪಿಎಂ ಮಿತ್ರ ಯೋಜನೆಯಡಿ 1,000 ಎಕರೆ ಪ್ರದೇಶದಲ್ಲಿ ಮೆಗಾ ಜವಳಿ ಪಾರ್ಕ್ ನಿರ್ಮಾಣವಾಗುತ್ತಿದೆ. ಇದರಡಿ 1 ಲಕ್ಷ ನೇರ ಮತ್ತು 2 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ.

