
26 ವರ್ಷಗಳ ನಂತರ ಮರುಕಳಿಸಲಿದೆ ಇತಿಹಾಸ; ರಜೆ ದಿನವಾದರೂ ಬದಲಾಗಿಲ್ಲ ಬಜೆಟ್ ದಿನಾಂಕ
ದೇಶದ ಸಂಸದೀಯ ಮತ್ತು ಬಜೆಟ್ ಇತಿಹಾಸದಲ್ಲಿ ಭಾನುವಾರ ಸುವರ್ಣ ಅಕ್ಷರದಲ್ಲಿ ಬರೆಯಲ್ಪಡುವ ದಿನವಾಗಲಿದೆ. ದೇಶದ ಇತಿಹಾಸದಲ್ಲಿ ಎರಡನೇ ಬಾರಿಗೆ ಭಾನುವಾರ ಬಜೆಟ್ ಮಂಡನೆಯಾಗುತ್ತಿದೆ.
ದೇಶದ ಸಂಸದೀಯ ಮತ್ತು ಬಜೆಟ್ ಇತಿಹಾಸದಲ್ಲಿ ಭಾನುವಾರ ಸುವರ್ಣ ಅಕ್ಷರದಲ್ಲಿ ಬರೆಯಲ್ಪಡುವ ದಿನವಾಗಲಿದೆ. ದೇಶದ ಮುಂದಿನ ಒಂದು ವರ್ಷದ ಆರ್ಥಿಕ ದಿಕ್ಸೂಚಿಯಾಗುವ ಬಜೆಟ್ ಹಲವು ಕಾರಣಗಳಿಗಾಗಿ ವಿಶೇಷವಾಗಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಅದಕ್ಕಿಂತ ಮುಖ್ಯವಾಗಿ ದಶಕಗಳ ಸಂಪ್ರದಾಯವನ್ನು ಮುರಿದು ಭಾನುವಾರದಂದು ಮಂಡನೆಯಾಗುತ್ತಿರುವುದು ದೇಶದ ಗಮನ ಸೆಳೆದಿದೆ. ದೇಶದ ಇತಿಹಾಸದಲ್ಲಿ ಎರಡನೇ ಬಾರಿಗೆ ಭಾನುವಾರ ಬಜೆಟ್ ಮಂಡನೆಯಾಗುತ್ತಿದೆ.
ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನ ಬಳಿಕ 2019ರ ಮೇ 31ರಂದು ಆರ್ಥಿಕ ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡುತ್ತಾ ಬಂದಿದ್ದಾರೆ. ಕೋವಿಡ್‌ನ ಜಾಗತಿಕ ಬಿಕ್ಕಟ್ಟು, ಜಾಗತಿಕ ಹಣದುಬ್ಬರದ ನಡುವೆಯೂ ದೇಶವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ.
ಎರಡನೇ ಬಾರಿ ಭಾನುವಾರ ಬಜೆಟ್ ಮಂಡನೆ
ದೇಶದ ಬಜೆಟ್ ಇತಿಹಾಸ ಪುಟವನ್ನು ತಿರುವಿ ಹಾಕಿದರೆ ರಜೆ ದಿನದಲ್ಲಿ ಬಜೆಟ್ ಮಂಡನೆ ಮಾಡುವುದಿಲ್ಲ. ಸಾಮಾನ್ಯವಾಗಿ ಭಾನುವಾರ ಸರ್ಕಾರಿ ವ್ಯವಸ್ಥೆ ಸ್ತಬ್ಧವಾಗಿರುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬಜೆಟ್ ಮಂಡನೆಯ ದಿನಾಂಕದ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಕಳೆದ 26 ವರ್ಷಗಳಲ್ಲಿ ಬಜೆಟ್ ಅನ್ನು ಭಾನುವಾರ ಮಂಡಿಸಿದ ಉದಾಹರಣೆಯೇ ಇಲ್ಲ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವಿದ್ದಾಗ, ಅಂದಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಅವರು ಭಾನುವಾರದಂದು ಬಜೆಟ್ ಮಂಡಿಸಿದ್ದರು. ಆ ಘಟನೆಯ ನಂತರ, ಬಜೆಟ್ ಅನ್ನು ವಾರದ ಕೆಲಸದ ದಿನಗಳಲ್ಲೇ ಮಂಡಿಸುವ ಸಂಪ್ರದಾಯ ಮುಂದುವರಿದಿತ್ತು. ಒಂದು ವೇಳೆ ಬಜೆಟ್ ದಿನಾಂಕವು ಶನಿವಾರ ಅಥವಾ ಭಾನುವಾರ ಬಂದರೆ, ಅದನ್ನು ಒಂದು ದಿನ ಮುಂಚಿತವಾಗಿ ಅಥವಾ ನಂತರಕ್ಕೆ ಮುಂದೂಡಲಾಗುತ್ತಿತ್ತು. ಆದರೆ, ಈಗ ಬರೋಬ್ಬರಿ 26 ವರ್ಷಗಳ ನಂತರ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಆ ಇತಿಹಾಸವನ್ನು ಮರುಕಳಿಸುತ್ತಿದೆ. ನಿಗದಿಪಡಿಸಿದ ದಿನಾಂಕವನ್ನು ಬದಲಿಸಿದರೆ ಆಡಳಿತಾತ್ಮಕ ಗೊಂದಲಗಳಿಗೆ ಕಾರಣವಾಗಬಹುದು ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ. ಇದಲ್ಲದೇ, ಷೇರು ಮಾರುಕಟ್ಟೆ ಸಹ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ದಿನಾಂಕದ ವಿಷಯದಲ್ಲಿ ರಾಜಿ ಇಲ್ಲ
2017ಕ್ಕಿಂತ ಮೊದಲು ಫೆಬ್ರವರಿ ಕೊನೆಯ ದಿನದಂದು ಬಜೆಟ್ ಮಂಡಿಸಲಾಗುತ್ತಿತ್ತು. ಆದರೆ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ದಿನಾಂಕವನ್ನು ಫೆ.1ಕ್ಕೆ ಬದಲಾಯಿಸಿದರು. ಏ.1ರಿಂದ ಹೊಸ ಹಣಕಾಸು ವರ್ಷ ಆರಂಭವಾಗುತ್ತದೆ. ಬಜೆಟ್ ಫೆ.1ಕ್ಕೆ ಮಂಡನೆಯಾದರೆ, ಎರಡು ತಿಂಗಳ ಅವಧಿಯಲ್ಲಿ ಸಂಸತ್ತಿನ ಚರ್ಚೆಗಳು ಮುಗಿದು ಏಪ್ರಿಲ್ ವೇಳೆಗೆ ಹಣ ಬಿಡುಗಡೆಯಾಗಲು ಸುಲಭವಾಗುತ್ತದೆ. ದಿನಾಂಕವನ್ನು ಪದೇ ಪದೇ ಬದಲಿಸುವುದು ಆರ್ಥಿಕತೆ ಮೇಲೆ ಮತ್ತು ಸಚಿವಾಲಯಗಳ ಸಿದ್ಧತೆಗಳ ಮೇಲೆ ಪರಿಣಾಮ ಬೀರಬಹುದು. ಈ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಭಾನುವಾರವಾಗಿದ್ದರೂ ಸಹ ಫೆ.1ರಂದೇ ಬಜೆಟ್ ಮಂಡಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ.
ಬಜೆಟ್ ಮಂಡನೆಯ ಕಾಲಾನುಕ್ರಮದ ಬದಲಾವಣೆಗಳು
ದೇಶದ ಬಜೆಟ್ ಇತಿಹಾಸವನ್ನು ನೋಡುವುದಾದರೆ ಬ್ರಿಟಿಷ್ ವಸಾಹತುಶಾಹಿ ಪದ್ಧತಿಯಿಂದ ಆಧುನಿಕ ಭಾರತದ ಅಗತ್ಯಗಳಿಗೆ ತಕ್ಕಂತೆ ಬದಲಿಸಲಾಗಿದೆ. ಸ್ವಾ ತಂತ್ರ್ಯ ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು 1947ರ ನ.26ರಂದು ದೇಶದ ಮೊದಲ ಹಣಕಾಸು ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಮಂಡಿಸಿದ್ದರು. ಬ್ರಿಟಿಷ್ ಕಾಲದಲ್ಲಿ ಬಜೆಟ್ ಸಂಜೆ 5 ಗಂಟೆಗೆ ಮಂಡಿಸಲಾಗುತ್ತಿತ್ತು. ಬಳಿಕ ಹಲವು ದಶಕಗಳವರೆಗೆ ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಸಂಜೆ 5 ಗಂಟೆಗೆ ಬಜೆಟ್ ಮಂಡನೆ ಮಾಡಲಾಗುತ್ತಿತ್ತು. ಯಾಕೆಂದರೆ ಲಂಡನ್‌ನಲ್ಲಿ ಆಗ ಬೆಳಗ್ಗೆಯಾಗಿರುತ್ತಿತ್ತು. ಆದರೆ 1999ರಲ್ಲಿ ಯಶವಂತ್ ಸಿನ್ಹಾ ಅವರು ಈ ಸಂಪ್ರದಾಯವನ್ನು ಮುರಿದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸುವ ಪದ್ಧತಿ ಜಾರಿಗೆ ತಂದರು. ಇದರಿಂದ ದೇಶದ ಮಾಧ್ಯಮಗಳಿಗೆ ಮತ್ತು ಜನಸಾಮಾನ್ಯರಿಗೆ ಬಜೆಟ್ ವಿಶ್ಲೇಷಿಸಲು ಹೆಚ್ಚಿನ ಸಮಯ ಲಭ್ಯವಾಯಿತು. 2016ರವರೆಗೆ ಫೆಬ್ರವರಿ ಕೊನೆಯ ದಿನದಂದು ಬಜೆಟ್ ಮಂಡಿಸಲಾಗುತ್ತಿತ್ತು. ಇದರಿಂದ ಹೊಸ ಹಣಕಾಸು ವರ್ಷ ಆರಂಭವಾಗುವ ಹೊತ್ತಿಗೆ ಬಜೆಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿರಲಿಲ್ಲ. ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2017ರಲ್ಲಿ ಫೆ. 1ಕ್ಕೆ ದಿನಾಂಕವನ್ನು ಬದಲಿಸಿದರು. ಈ ಬದಲಾವಣೆಯಿಂದಾಗಿ ಸಚಿವಾಲಯಗಳಿಗೆ ಹಣಕಾಸು ವರ್ಷದ ಆರಂಭದಲ್ಲೇ ಅನುದಾನ ಲಭ್ಯವಾಗಿ, ಯೋಜನೆಗಳ ಅನುಷ್ಠಾನ ವೇಗ ಪಡೆದುಕೊಂಡಿದೆ ಎಂದು ಹೇಳಲಾಗಿದೆ.
ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಸಚಿವರು
ಮಾಜಿ ಸಚಿವ ಮೊರಾರ್ಜಿ ದೇಸಾಯಿ 10 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಇವರು ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕೇಂದ್ರ ಬಜೆಟ್‌ಗಳನ್ನು ಮಂಡಿಸಿದವರಾಗಿದ್ದಾರೆ. 1959 ಮತ್ತು 1964 ರ ನಡುವೆ ಆರು ಮತ್ತು 1967 ಮತ್ತು 1969 ರ ನಡುವೆ ನಾಲ್ಕು ಬಜೆಟ್ ಗಳನ್ನು ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಡಳಿತದಲ್ಲಿ ಮಂಡಿಸಿದ್ದರು. ಪಿ. ಚಿದಂಬರಂ 9 ಬಜೆಟ್‌ಗಳನ್ನು ಮಂಡಿಸಿದ್ದಾರೆ. 1996 ರಲ್ಲಿ ಮತ್ತು ಬಳಿಕ 2004 ಮತ್ತು 2009 ರ ನಡುವೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅಡಿಯಲ್ಲಿ ಬಜೆಟ್ ಮಂಡಿಸಿದರು. ಪ್ರಣಬ್ ಮುಖರ್ಜಿ 8 ಬಜೆಟ್ ಮಂಡಿಸಿದ್ದು, ಇದರಲ್ಲಿ ಯುಪಿಎ ಸರ್ಕಾರದ ಅಡಿಯಲ್ಲಿ 2009 ರಿಂದ 2012 ರವರೆಗೆ ಐದು ಸತತ ಬಜೆಟ್‌ಗಳನ್ನು ಮಂಡಿಸಿದರು. ಪ್ರಧಾನಿಯಾಗುವ ಮೊದಲು ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಆಡಳಿತ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದು, ಈ ವೇಳೆ 1991 ಮತ್ತು 1995 ರ ನಡುವೆ ಅವರು ಐದು ಸತತ ಬಜೆಟ್‌ಗಳನ್ನು ಮಂಡಿಸಿದರು. ಇದರಲ್ಲಿ 1991ರ ಬಜೆಟ್ ಭಾರತದ ಆರ್ಥಿಕ ಉದಾರೀಕರಣಕ್ಕೆ ನಾಂದಿ ಹಾಡಿತ್ತು. ಈ ಬಾರಿಯ ಬಜೆಟ್ ನಿರ್ಮಲಾ ಸೀತಾರಾಮನ್ ಅವರಿಗೂ ವೈಯಕ್ತಿಕವಾಗಿ ಅತ್ಯಂತ ದೊಡ್ಡ ಸಾಧನೆಯಾಗಿದ್ದು, ಸತತ 9ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ಮೊರಾರ್ಜಿ ದೇಸಾಯಿ ಅವರ 10 ಬಜೆಟ್‌ಗಳ ದಾಖಲೆಯನ್ನು ಸರಿಗಟ್ಟಲು ಅವರಿಗೆ ಇನ್ನೊಂದೇ ಹೆಜ್ಜೆ ಬಾಕಿ ಇದೆ.

