
ತಮಿಳುನಾಡು ಚುನಾವಣೆ 2026: ಪ್ರಚಾರ ಕಣದಲ್ಲಿ ಸದ್ದು ಮಾಡಲಿರುವ 5 ಪ್ರಮುಖ ವಿಚಾರಗಳು
ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ 133 ಶಾಸಕರನ್ನು ಹೊಂದಿದ್ದರೆ, ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ (AIADMK) 60ಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದಿದೆ.
ಮಹಿಳೆಯರ ಮೇಲಿನ ಅಪರಾಧಗಳ ಹೆಚ್ಚಳ, ಚುನಾವಣಾ ಭರವಸೆಗಳ ಈಡೇರಿಕೆಯಲ್ಲಿನ ವಿಫಲತೆ ಮತ್ತು ಸಾಲದ ಬಿಕ್ಕಟ್ಟು 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಆದರೂ, ಆಡಳಿತಾರೂಢ ಡಿಎಂಕೆ (DMK) ತನ್ನ ಸಮಾಜ ಕಲ್ಯಾಣ ಯೋಜನೆಗಳು ಮತ್ತು ಹೂಡಿಕೆಗಳ ಆಧಾರದ ಮೇಲೆ ಸತತ ಎರಡನೇ ಬಾರಿಗೆ ಅಧಿಕಾರಕ್ಕೇರಲು ಜನರ ಬೆಂಬಲ ನಿರೀಕ್ಷಿಸುತ್ತಿದೆ.
ಒಟ್ಟು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 23ರಂದು ಚುನಾವಣೆ ನಡೆಯಲಿದೆ. ಪ್ರಸ್ತುತ ವಿಧಾನಸಭೆಯಲ್ಲಿ ಡಿಎಂಕೆ 133 ಶಾಸಕರನ್ನು ಹೊಂದಿದ್ದರೆ, ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ (AIADMK) 60ಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದಿದೆ. ಆದಾಗ್ಯೂ, ಎಂ.ಕೆ. ಸ್ಟಾಲಿನ್ ನೇತೃತ್ವದ ಆಡಳಿತ ಪಕ್ಷಕ್ಕೆ ಎಐಎಡಿಎಂಕೆ, ಬಿಜೆಪಿ ಮತ್ತು ಇತರ ಪಕ್ಷಗಳನ್ನೊಳಗೊಂಡ ಎನ್‌ಡಿಎ (NDA) ಮೈತ್ರಿಕೂಟದ ವಿರುದ್ಧದ ಈ ಬಾರಿಯ ಚುನಾವಣೆ ಸುಲಭದ ಹಾದಿಯಾಗಿಲ್ಲ. ಈ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಪ್ರಮುಖ ವಿಚಾರಗಳು ಇಲ್ಲಿವೆ.
ಮಹಿಳಾ ಸುರಕ್ಷತೆ
ಇತ್ತೀಚೆಗೆ ತಮಿಳುನಾಡಿನಲ್ಲಿ ಶಾಲಾ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ರಾಜ್ಯದಲ್ಲಿ ಮಹಿಳಾ ಸುರಕ್ಷತೆಯ ಬಗ್ಗೆ ಆಕ್ರೋಶ ಮತ್ತು ರಾಜಕೀಯ ಚರ್ಚೆಗೆ ಕಾರಣವಾಗಿವೆ. ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸುತ್ತಿದ್ದಾರೆ. ಆದರೆ, ಅಧಿಕೃತ ಅಂಕಿ-ಅಂಶಗಳ ಪ್ರಕಾರ ಅಪರಾಧಗಳು ಕಡಿಮೆಯಾಗುತ್ತಿವೆ ಎಂದು ರಾಜ್ಯ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದೆ.
ಭ್ರಷ್ಟಾಚಾರ
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಭ್ರಷ್ಟಾಚಾರದ ಆರೋಪಗಳು ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿವೆ. ವಿರೋಧ ಪಕ್ಷಗಳಾದ ಎಐಎಡಿಎಂಕೆ, ಬಿಜೆಪಿ ಹಾಗೂ ಹೊಸದಾಗಿ ರಚನೆಯಾದ ತಮಿಳಗ ವೆಟ್ರಿ ಕಳಗಂ (TVK), ವಿವಿಧ ಇಲಾಖೆಗಳಲ್ಲಿ ವ್ಯವಸ್ಥಿತ ಮತ್ತು ವೈಜ್ಞಾನಿಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿವೆ. 2021ರಿಂದ 20 ಇಲಾಖೆಗಳಲ್ಲಿ ಸುಮಾರು 4 ಲಕ್ಷ ಕೋಟಿ ರೂಪಾಯಿಗಳ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಎಐಎಡಿಎಂಕೆ ಈ ವರ್ಷದ ಆರಂಭದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತ್ತು.
ಸಮಾಜ ಕಲ್ಯಾಣ ಯೋಜನೆಗಳು
ಡಿಎಂಕೆ, ಎಐಎಡಿಎಂಕೆ ಮತ್ತು ಟಿವಿಕ್ ಪಕ್ಷಗಳು ಮತದಾರರಿಗೆ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಉಚಿತ ಕೊಡುಗೆಗಳ ಭರವಸೆಗಳನ್ನು ನೀಡುತ್ತಿವೆ. ಪಡಿತರ ಚೀಟಿ ಹೊಂದಿರುವ ಕುಟುಂಬದ ಯಜಮಾನಿಯರಿಗೆ ನೀಡುವ ಮಾಸಿಕ ಆರ್ಥಿಕ ನೆರವನ್ನು 2,000 ರೂಪಾಯಿಗಳಿಗೆ ಹೆಚ್ಚಿಸುವುದಾಗಿ ಡಿಎಂಕೆ ಘೋಷಿಸಿದೆ. ತಾವು ಅಧಿಕಾರಕ್ಕೆ ಬಂದರೆ ಪ್ರತಿ ತಿಂಗಳು 2,000 ರೂಪಾಯಿ ನೀಡುವುದಾಗಿ ಎಐಎಡಿಎಂಕೆಯೂ ಭರವಸೆ ನೀಡಿದೆ.
ಈಡೇರದ ಚುನಾವಣಾ ಭರವಸೆಗಳು
2021ರಲ್ಲಿ ನೀಡಿದ್ದ 505 ಚುನಾವಣಾ ಭರವಸೆಗಳ ಪೈಕಿ 364 ಅನ್ನು ಈಡೇರಿಸಿದ್ದೇವೆ ಎಂದು ಆಡಳಿತಾರೂಢ ಡಿಎಂಕೆ ಹೇಳಿಕೊಂಡಿದೆ. ಆದರೆ ಇದನ್ನು ತಳ್ಳಿಹಾಕಿರುವ ವಿರೋಧ ಪಕ್ಷಗಳು, ಕೇವಲ ಶೇ. 10ರಿಂದ 30ರಷ್ಟು ಮಾತ್ರ ಜಾರಿಯಾಗಿದೆ ಎಂದು ಆರೋಪಿಸಿವೆ. ನೀಟ್ (NEET) ರದ್ದತಿ, ಹಳೆಯ ಪಿಂಚಣಿ ಯೋಜನೆ (OPS) ಮರುಸ್ಥಾಪನೆ, ಶೈಕ್ಷಣಿಕ ಸಾಲ ಮನ್ನಾ, ಎರಡು ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ ಮತ್ತು ಮಾಸಿಕ ವಿದ್ಯುತ್ ಬಿಲ್ಲಿಂಗ್ ಪದ್ಧತಿ ಪರಿಚಯಿಸುವಂತಹ ಪ್ರಮುಖ ಭರವಸೆಗಳು ಇನ್ನೂ ಈಡೇರಿಲ್ಲ.
ಸಾಲದ ಬಿಕ್ಕಟ್ಟು
ಆಡಳಿತ ಪಕ್ಷವು ರಾಜ್ಯವನ್ನು ಸಾಲದ ಸುಳಿಗೆ ತಳ್ಳಿದೆ ಎಂದು ಎಐಎಡಿಎಂಕೆ ಆರೋಪಿಸಿದ್ದು, 2021ರಲ್ಲಿದ್ದ 4.85 ಲಕ್ಷ ಕೋಟಿ ರೂ. ಸಾಲ 2026ರ ವೇಳೆಗೆ 10 ಲಕ್ಷ ಕೋಟಿ ರೂ.ಗಳಿಗೆ ದ್ವಿಗುಣಗೊಂಡಿದೆ ಎಂದು ಉಲ್ಲೇಖಿಸಿದೆ. ಮತ್ತೊಂದೆಡೆ, ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆಯಲ್ಲಿ ತಮಿಳುನಾಡಿನ ಪಾಲು ಶೇ. 7.9ರಿಂದ ಶೇ. 4.07ಕ್ಕೆ ಕುಸಿದಿದ್ದು, ನಿಧಿ ತಡೆಹಿಡಿದಿರುವುದರಿಂದ ರಾಜ್ಯಕ್ಕೆ 3.17 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಆರೋಪಿಸಿದ್ದಾರೆ.

