
ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್
ತಮಿಳುನಾಡು ಚುನಾವಣೆ: ಸಿಪಿಐ(ಎಂ)ಗೆ 5 ಸ್ಥಾನಗಳ ಆಫರ್ ನೀಡಿದ ಡಿಎಂಕೆ
2021ರ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ) ತಲಾ ಆರು ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಹೀಗಾಗಿ ಈ ಬಾರಿಯೂ ತಮಗೆ ಎರಡಂಕಿ ಸ್ಥಾನಗಳನ್ನು ನೀಡಬೇಕೆಂದು ಸಿಪಿಐ(ಎಂ) ಬೇಡಿಕೆ ಇಟ್ಟಿತ್ತು.
ತಮಿಳುನಾಡು ವಿಧಾನಸಭಾ ಚುನಾವಣೆಯ ಕಾವು ದಿನೇ ದಿನೇ ರಂಗೇರುತ್ತಿದ್ದು, ಆಡಳಿತಾರೂಢ ಡಿಎಂಕೆ ತನ್ನ ಪ್ರಬಲ ಮಿತ್ರಪಕ್ಷವಾದ ಸಿಪಿಐ(ಎಂ) ಗೆ 5 ಸ್ಥಾನಗಳನ್ನು ಬಿಟ್ಟುಕೊಡುವ ಆಫರ್ ನೀಡಿದೆ. ಕಳೆದ 20 ದಿನಗಳಿಂದ ಉಭಯ ಪಕ್ಷಗಳ ನಡುವೆ ನಡೆಯುತ್ತಿದ್ದ ಸೀಟು ಹಂಚಿಕೆ ಮಾತುಕತೆಗಳು ಇದೀಗ ಅಂತಿಮ ಘಟ್ಟ ತಲುಪಿದ್ದು, ಸ್ವತಃ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಭಾನುವಾರ ಖುದ್ದಾಗಿ ಮಾತುಕತೆಯಲ್ಲಿ ಪಾಲ್ಗೊಂಡು 5 ಸ್ಥಾನಗಳನ್ನು ಒಪ್ಪಿಕೊಳ್ಳುವಂತೆ ಎಡಪಕ್ಷದ ನಾಯಕರನ್ನು ಕೋರಿದ್ದಾರೆ. ಈ ಕುರಿತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಪಿ. ಷಣ್ಮುಗಂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
2021ರ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳಾದ ಸಿಪಿಐ ಮತ್ತು ಸಿಪಿಐ(ಎಂ) ತಲಾ ಆರು ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಹೀಗಾಗಿ ಈ ಬಾರಿಯೂ ತಮಗೆ ಎರಡಂಕಿ ಸ್ಥಾನಗಳನ್ನು ನೀಡಬೇಕೆಂದು ಸಿಪಿಐ(ಎಂ) ಬೇಡಿಕೆ ಇಟ್ಟಿತ್ತು. ಆದರೆ, 'ಜಾತ್ಯತೀತ ಪ್ರಗತಿಪರ ಮೈತ್ರಿಕೂಟ'ಕ್ಕೆ ಹೊಸ ಮಿತ್ರಪಕ್ಷಗಳು ಸೇರ್ಪಡೆಯಾಗಿರುವುದರಿಂದ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡುವುದು ಕಷ್ಟ ಎಂದು ಡಿಎಂಕೆ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಸಿಪಿಐ(ಎಂ) ರಾಜ್ಯ ಸಮಿತಿಯು ಎರಡು ಬಾರಿ ಸಭೆ ನಡೆಸಿ, ಪ್ರಸ್ತುತ ರಾಜಕೀಯ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಕಳೆದ ಬಾರಿಯಂತೆ ಕನಿಷ್ಠ 6 ಸ್ಥಾನಗಳನ್ನಾದರೂ ಪಡೆದುಕೊಳ್ಳಲು ನಿರ್ಧರಿಸಿತ್ತು. ಶನಿವಾರ (ಮಾರ್ಚ್ 21) ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಅವರು ಇದೇ ನಿಲುವಿಗೆ ಬದ್ಧರಾಗಿದ್ದರು.
ಮೈತ್ರಿಯಲ್ಲಿ ಮುಂದುವರಿಯುವಂತೆ ಸಿಎಂ ಸ್ಟಾಲಿನ್ ಮನವಿ
ಬೃಹತ್ ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯ ಸವಾಲುಗಳನ್ನು ಎಳೆಎಳೆಯಾಗಿ ವಿವರಿಸಿದ ಸಿಎಂ ಎಂ.ಕೆ. ಸ್ಟಾಲಿನ್ ಅವರು, ತಾವು ನೀಡುತ್ತಿರುವ 5 ಸ್ಥಾನಗಳ ಆಫರ್ ಅನ್ನು ಒಪ್ಪಿಕೊಂಡು ಮೈತ್ರಿಕೂಟದಲ್ಲೇ ಮುಂದುವರಿಯುವಂತೆ ಸಿಪಿಐ(ಎಂ) ನಾಯಕರನ್ನು ಖುದ್ದಾಗಿ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿಗಳೇ ನೇರವಾಗಿ ಈ ಮನವಿ ಮಾಡಿರುವುದರಿಂದ, ಸಿಪಿಐ(ಎಂ) ತನ್ನ ಕಾರ್ಯಕಾರಿ ಸಮಿತಿಯ ಸಭೆಯನ್ನು ಶೀಘ್ರವೇ ಕರೆದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದೆ. "ಬೇಡಿಕೆ ಈಡೇರದಿದ್ದರೆ ಮೈತ್ರಿಕೂಟದಿಂದ ಹೊರಬರುತ್ತೀರಾ?" ಎಂಬ ಪತ್ರಕರ್ತರ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಷಣ್ಮುಗಂ, ಊಹಾಪೋಹದ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ, ಕಮ್ಯುನಿಸ್ಟ್ ಪಕ್ಷವು ಅಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

