Kerala Assembly Elections: BJP releases first list of 47 candidates, Rajeev Chandrashekhar to contest from Nemom
x

ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ 

ಕೇರಳ ವಿಧಾನಸಭಾ ಚುನಾವಣೆ: 47 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಬಿಜೆಪಿ, ನೆಮೊಮ್‌ನಿಂದ ರಾಜೀವ್ ಚಂದ್ರಶೇಖರ್ ಕಣಕ್ಕೆ

ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಅವರಿಗೆ ಕಜಕೂಟಂನಿಂದ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದೆ. ಸಚಿವ ಜಾರ್ಜ್ ಕುರಿಯನ್ ಅವರು ಕಾಂಜಿರಪಳ್ಳಿಯಿಂದ ಕಣಕ್ಕಿಳಿಯಲಿದ್ದಾರೆ.


Click the Play button to hear this message in audio format

ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೋಮವಾರ 47 ಅಭ್ಯರ್ಥಿಗಳನ್ನೊಳಗೊಂಡ ತನ್ನ ಮೊದಲ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗಷ್ಟೇ ಪಂಚರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಕೇರಳದ ಒಟ್ಟು 140 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ತಿರುವನಂತಪುರಂನ ಪ್ರತಿಷ್ಠಿತ 'ನೆಮೊಮ್' ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಇವರ ಜೊತೆಗೆ, ಚಂದ್ರಶೇಖರ್ ಅವರ ಆಪ್ತ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೂಪ್ ಆ್ಯಂಟನಿ ಅವರಿಗೆ ತಿರುವಲ್ಲಾದಿಂದ ಟಿಕೆಟ್ ನೀಡಲಾಗಿದೆ. ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಅವರು ಮಂಜೇಶ್ವರದಿಂದ ತಮ್ಮ ಅದೃಷ್ಟ ಪರೀಕ್ಷಿಸಲಿದ್ದಾರೆ.

ಕೇಂದ್ರ ಮತ್ತು ರಾಜ್ಯದ ಪ್ರಭಾವಿ ಮುಖಗಳಿಗೆ ಮಣೆ

ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ವಿ. ಮುರಳೀಧರನ್ ಅವರಿಗೆ ಕಜಕೂಟಂನಿಂದ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದೆ. ಪ್ರಸ್ತುತ ರಾಜ್ಯ ಮೀನುಗಾರಿಕೆ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಜಾರ್ಜ್ ಕುರಿಯನ್ ಅವರು ಕಾಂಜಿರಪಳ್ಳಿಯಿಂದ ಕಣಕ್ಕಿಳಿಯಲಿದ್ದಾರೆ. ಅದೇ ರೀತಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಅವರಿಗೆ ಪಾಲಕ್ಕಾಡ್‌ ಕ್ಷೇತ್ರದಿಂದ ಟಿಕೆಟ್ ಘೋಷಿಸುವ ಮೂಲಕ ಪಕ್ಷವು ಪ್ರಭಾವಿ ನಾಯಕರಿಗೆ ಮಣೆ ಹಾಕಿದೆ.

ಈ ಬಾರಿಯ ಮೊದಲ ಪಟ್ಟಿಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದ್ದು, ಮಾಜಿ ಡಿಜಿಪಿ ಹಾಗೂ ಹಾಲಿ ತಿರುವನಂತಪುರಂ ಪುರಸಭೆ ಸದಸ್ಯೆ ಆರ್. ಶ್ರೀಲೇಖಾ ಅವರನ್ನು ವಟ್ಟಿಯೂರ್ಕಾವು ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ದಿವಂಗತ ಕಾಂಗ್ರೆಸ್ ಸಿಎಂ ಕೆ. ಕರುಣಾಕರನ್ ಅವರ ಪುತ್ರಿ ಪದ್ಮಜಾ ವೇಣುಗೋಪಾಲ್ ಅವರಿಗೆ ತ್ರಿಶೂರ್ ಕ್ಷೇತ್ರ ಒಲಿದಿದ್ದು, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನವ್ಯ ಹರಿದಾಸ್ ಅವರು ಕೋಝಿಕ್ಕೋಡ್ ಉತ್ತರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ.

Read More
Next Story