Sonam Wangchuks health check-up: Supreme Court orders admission to AIIMS
x
ಸುಪ್ರೀಂ ಕೋರ್ಟ್‌ ಹಾಗೂ ಹೋರಾಟಗಾರ ಸೋನಮ್‌ ವಾಂಗ್ಚುಕ್‌

ಏಮ್ಸ್ ಆಸ್ಪತ್ರೆಗೆ ದಾಖಲಾದ ಸೋನಮ್​ ವಾಂಗ್ಚುಕ್‌

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಲೇಹ್‌ನಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟ ಮೂರು ದಿನಗಳ ನಂತರ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಳೆದ ವರ್ಷ ಸೆಪ್ಟೆಂಬರ್ 27 ರಂದು ಸೋನಮ್‌ ವಾಂಗ್ಚುಕ್‌ ಅವರನ್ನು ಬಂಧಿಸಲಾಗಿತ್ತು.


Click the Play button to hear this message in audio format

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ, ಶಿಕ್ಷಣ ತಜ್ಞ ಸೋನಮ್‌ ವಾಂಗ್ಚುಕ್‌ ಅವರ ವೈದ್ಯಕೀಯ ವರದಿಯನ್ನು ಫೆಬ್ರವರಿ 2ರೊಳಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರಿಂದ ವಾಂಗ್ಚುಕ್‌ ಅವರನ್ನು ಜೈಲು ಅಧಿಕಾರಿಗಳು ಶನಿವಾರ(ಫೆ.1) ವೈದ್ಯಕೀಯ ಪರೀಕ್ಷೆಗಾಗಿ ಜೋಧ್‌ಪುರದ ಏಮ್ಸ್‌ಗೆ ಕರೆದೊಯ್ದಿದ್ದಾರೆ.

ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಲೇಹ್‌ನಲ್ಲಿ ನಡೆದ ಪ್ರತಿಭಟನೆ ಹಿಂಸಾತ್ಮಕವಾಗಿ ಮಾರ್ಪಟ್ಟ ಮೂರು ದಿನಗಳ ನಂತರ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಳೆದ ವರ್ಷ ಸೆಪ್ಟೆಂಬರ್ 27 ರಂದು ಬಂಧಿಸಿ, ರಾಜಸ್ಥಾನದ ಜೋಧ್‌ಪುರ ಕೇಂದ್ರ ಜೈಲಿನಲ್ಲಿ ಅವರನ್ನು ಇಡಲಾಗಿದೆ.

ಸೋನಮ್‌ ವಾಂಗ್ಚುಕ್‌(59) ಉದರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಆರೋಗ್ಯ ಕ್ಷೀಣಿಸುತ್ತಿರುವ ಬಗ್ಗೆ ಕುಟುಂಬಸ್ಥರು ಇತ್ತೀಚೆಗೆ ಕಳವಳ ವ್ಯಕ್ತಪಡಿಸಿದ್ದರು. ತನ್ನ ಪತಿಯ ಬಂಧನವನ್ನು ಪ್ರಶ್ನಿಸಿ ಪತ್ನಿ ಗೀತಾಂಜಲಿ ಆಂಗ್ಮೋ ರಿಟ್‌ ಅರ್ಜಿಯನ್ನೂ ಸಲ್ಲಿಸಿದ್ದರು.

ರಿಟ್‌ ಅರ್ಜಿಯನ್ನು ಗುರುವಾರ(ಜ.29) ವಿಚಾರಣೆಯ ನಡೆಸಿದ್ದ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಳೆ ಅವರನ್ನೊಳಗೊಂಡ ಪೀಠವು, ವಾಂಗ್ಚುಕ್‌ ಅವರನ್ನು ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಪರೀಕ್ಷೆ ನಡೆಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ರಾಜಸ್ಥಾನ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್, ಜೈಲು ವೈದ್ಯರು ಕಳೆದ ನಾಲ್ಕು ತಿಂಗಳಲ್ಲಿ 21 ಬಾರಿ ವಾಂಗ್ಚುಕ್‌ ಅವರನ್ನು ಪರೀಕ್ಷಿಸಿದ್ದಾರೆ ಮತ್ತು ಜನವರಿ 26 ರಂದು ತಪಾಸಣೆ ನಡೆಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಆದಾಗ್ಯೂ, ವಾಂಗ್ಚುಕ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ತಮ್ಮ ಕಕ್ಷಿದಾರರು ಜೈಲಿನಲ್ಲಿ ಒದಗಿಸಲಾದ ನೀರಿನ ಗುಣಮಟ್ಟದಿಂದಾಗಿ ನಿರಂತರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳುತ್ತಾ, ಈ ವಾದವನ್ನು ಆಕ್ಷೇಪಿಸಿದ್ದರು. ಈ ವಾದವನ್ನು ಅಂಗೀಕರಿಸಿದ ನ್ಯಾಯಾಲಯವು, ರೋಗಿಯ ಅಗತ್ಯಗಳಿಗೆ ಅನುಗುಣವಾಗಿ ತಜ್ಞರಿಂದ ವೈದ್ಯಕೀಯ ಚಿಕಿತ್ಸೆಯನ್ನು ಒದಗಿಸಬೇಕು ಎಂದು ತಿಳಿಸಿತ್ತು.

Read More
Next Story