
Budget -2026| ಮೆರೂನ್ ಬಣ್ಣದ ಕಾಂಜೀವರಂ ಕಟ್ಟಂ ಸೀರೆಯಲ್ಲಿ ಮಿಂಚಿದ ವಿತ್ತ ಸಚಿವೆ
2026-27ನೇ ಸಾಲಿನ ಬಜೆಟ್ ಮಂಡಿಸಲು ಕರ್ತವ್ಯ ಭವನಕ್ಕೆ ಆಗಮಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮಿಳುನಾಡಿನ ಕೈಮಗ್ಗದಿಂದ ತಯಾರಿಸಿದ ಮೆರೂನ್ ಬಣ್ಣದ 'ಕಾಂಜೀವರಂ ಕಟ್ಟಂ' ಸೀರೆ ಧರಿಸಿ ಬಜೆಟ್ ಮಂಡಿಸಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸತತ ಒಂಬತ್ತನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಅವರ ಬಜೆಟ್ ಭಾಷಣದಷ್ಟೇ, ಧರಿಸಿರುವ ಸಾಂಪ್ರದಾಯಿಕ ಉಡುಪು ಕೂಡ ಭಾರೀ ಕುತೂಹಲ ಕೆರಳಿಸಿದೆ.
2026-27ನೇ ಸಾಲಿನ ಬಜೆಟ್ ಮಂಡಿಸಲು ಕರ್ತವ್ಯ ಭವನಕ್ಕೆ ಆಗಮಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ತಮಿಳುನಾಡಿನ ಕೈಮಗ್ಗದಿಂದ ತಯಾರಿಸಿದ ಮೆರೂನ್ ಬಣ್ಣದ 'ಕಾಂಜೀವರಂ ಕಟ್ಟಂ' ಸೀರೆಯನ್ನು ಧರಿಸಿ ಬಜೆಟ್ ಆರಂಭಿಸಿದರು.
ಕಾಂಜೀವರಂ ಸೀರೆ ವಿಶೇಷತೆ ಏನು?
ಸುಮಾರು 400 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ವಿನ್ಯಾಸವು ದಕ್ಷಿಣ ಭಾರತದ, ವಿಶೇಷವಾಗಿ ತಮಿಳುನಾಡಿನ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ. ಸೀರೆಯಲ್ಲಿರುವ ಚೌಕಾಕಾರದ (ಕಟ್ಟಂ) ವಿನ್ಯಾಸಗಳು ಪವಿತ್ರ 'ಪಡಿ ಕೋಲಂ' ಮಾದರಿ ಹೋಲುತ್ತಿದ್ದು,ಇದು ಮಂಗಳಕರ ಆರಂಭದ ಸೂಚಕವೆಂದು ಪರಿಗಣಿಸಲಾಗಿದೆ.
ತಮಿಳುನಾಡಿನ ನೇಯ್ಗೆಗೆ ಗೌರವ
ಸಂಪ್ರದಾಯ ಹಾಗೂ ಐಷಾರಾಮಿ ರೇಷ್ಮೆ ಸೀರೆಗಳಲ್ಲಿ ಕಾಂಜೀವರಂ ಸೀರೆಯೂ ಕೂಡ ಒಂದು. ಇದು ತನ್ನ ಸಂಕೀರ್ಣ ಜರಿ ಕೆಲಸ ಮತ್ತು ಬಾಳಿಕೆಗೆ ಹೆಸರುವಾಸಿಯಾಗಿದೆ. ಈ ಸೀರೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಅವರು ದೇಶದ ಸ್ಥಳೀಯ ಕರಕುಶಲ ಕಲೆ ಮತ್ತು ನೇಯ್ಗೆಯನ್ನು ಪ್ರೋತ್ಸಾಹ ನೀಡಿದ್ದಾರೆ. ಅವರು ಆಯ್ದುಕೊಂಡಿರುವ ಮೆರೂನ್ ಬಣ್ಣವು ಶಕ್ತಿ, ಸ್ಥಿರತೆ ಮತ್ತು ಅಧಿಕಾರವನ್ನು ಪ್ರತಿನಿಧಿಸುತ್ತದೆ.
ಸೀತಾರಾಮನ್ ಅವರು ಈ ಸೀರೆಯನ್ನು ಧರಿಸುವ ಮೂಲಕ ತಮ್ಮ ಮೂಲಕ್ಕೆ ಗೌರವ ಸಲ್ಲಿಸುವುದರ ಜೊತೆಗೆ, ಭಾರತದ ಸ್ಥಳೀಯ ಕಲೆಗಳನ್ನು ಸಂರಕ್ಷಿಸುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಅವರು ಆರಿಸಿಕೊಂಡ ಕಡುಗೆಂಪು (ಮರೂನ್) ಬಣ್ಣವು ಶಕ್ತಿ, ಅಧಿಕಾರ ಮತ್ತು ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ. ಇದು ದೇಶದ ಆರ್ಥಿಕ ದಿಕ್ಕಿನೊಂದಿಗೆ ಆಳವಾಗಿ ಬೆಸೆದುಕೊಂಡಿದೆ.
ದಾಖಲೆಯ ಒಂಬತ್ತನೇ ಬಜೆಟ್ ಸತತ 9 ಬಾರಿ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಅವರು ಈ ಮೂಲಕ ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರ ದಾಖಲೆಯ ಸಮೀಪಕ್ಕೆ ತಲುಪಿದ್ದಾರೆ. ಪ್ರತಿ ವರ್ಷವೂ ಭಾರತದ ವಿವಿಧ ರಾಜ್ಯಗಳ ವಿಶಿಷ್ಟ ಕೈಮಗ್ಗ ಸೀರೆಗಳನ್ನು ಧರಿಸುವ ಮೂಲಕ ದೇಶದ ವೈವಿಧ್ಯತೆಯನ್ನು ಗೌರವಿಸುವ ಅವರ ಪದ್ಧತಿ ಈ ಬಾರಿಯೂ ಮುಂದುವರೆದಿದೆ.
ಪ್ರತಿ ವರ್ಷ ಬಜೆಟ್ ಮಂಡನೆಯ ವೇಳೆ ನಿರ್ಮಲಾ ಸೀತಾರಾಮನ್ ಅವರ ಸೀರೆ ಗಮನ ಸೆಳೆಯುತ್ತದೆ. ಪ್ರತೀ ಸೀರೆಯೂ ಕೂಡ ಒಂದೊಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ.
ಬಜೆಟ್ ವೇಳೆ ನಿರ್ಮಲಾ ಉಟ್ಟ ಸೀರೆಗಳ ವಿಶೇಷತೆ ಏನು..
2019-20ರ ಬಜೆಟ್: ಮೋದಿ 3.0 ಸರ್ಕಾರದಲ್ಲಿ ಹಣಕಾಸು ಮಂತ್ರಿ ಹೊಣೆ ಪಡೆದ ನಿರ್ಮಲಾ ಸೀತಾರಾಮನ್ ಅವರಿಗೆ ಮೊದಲ ಬಜೆಟ್ ಮಂಡನೆ ಇದಾಗಿತ್ತು. ತನ್ನ ಮೊದಲ ಬಜೆಟ್‌ಗೆ ಸ್ಥಿರತೆ ಮತ್ತು ಗಂಭೀರತೆಯ ಸಂಕೇತವಾಗಿರುವ ಗುಲಾಬಿ ಬಣ್ಣದ ಸೀರೆ ಉಟ್ಟಿದ್ದರು. ಇದು ಆಂಧ್ರಪ್ರದೇಶದ ಮಂಗಳಗಿರಿ ಕಾಟನ್ ಮತ್ತು ರೇಷ್ಮೆ ಮಿಶ್ರಿತ ಗೋಲ್ಡನ್ ಕಲರ್ ಬಾರ್ಡರ್ ಹೊಂದಿತ್ತು.
2020-21ರ ತಮ್ಮ ಎರಡನೇ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಳದಿ ಮತ್ತು ನೀಲಿ ಬಣ್ಣದ ಅಂಚಿನ ರೇಷ್ಮೆ ಸೀರೆಯನ್ನುಂಟು ಗಮನ ಸೆಳೆದಿದ್ದರು.
2021-22ರ ಬಜೆಟ್: ಕೋವಿಡ್ ಸಮಯದಲ್ಲಿ ಮಂಡನೆಯಾದ ಮೂರನೇ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಹೈದರಾಬಾದ್ ಪೋಚಂಪಳ್ಳಿ ಗ್ರಾಮದ ಪೋಚಂಪಳ್ಳಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ್ದರು. ಕೆಂಪು ಮತ್ತು ಬಿಳಿ ಬಣ್ಣದ ಈ ಸೀರೆ ಇಕ್ಕತ್ ಶೈಲಿಯನ್ನು ಹೊಂದಿತ್ತು.
2022-23ರ ಬಜೆಟ್: ಕೋವಿಡ್ನಿಂದ ಅಧಃಪತನಕ್ಕೆ ಇಳಿದಿದ್ದ ಆರ್ಥಿಕತೆಗೆ ಚೇತರಿಕೆ ತುಂಬ ಪ್ರಯತ್ನ ಈ ಬಜೆಟ್ನಲ್ಲೂ ಮುಂದುವರಿದಿತ್ತು. ಈ ಬಜೆಟ್ ಮಂಡನೆ ವೇಳೆ ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಕೈಮಗ್ಗದಲ್ಲಿ ನೇಯ್ದ ಬೊಮ್ಮೆ ಸೀರೆಯನ್ನು ನಿರ್ಮಲಾ ಸೀತಾರಾಮನ್ ತೊಟ್ಟಿದ್ದರು.
2023-24ರ ಬಜೆಟ್: ಕರ್ನಾಟಕದಿಂದ ರಾಜ್ಯಸಭಾ ಸಂಸದೆಯಾಗಿ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದ ಖ್ಯಾತ ಇಳಕಲ್ ಸೀರೆ ತೊಟ್ಟು ಬಜೆಟ್ ಮಂಡಿಸಿದ್ದರು.
2024-25ರ ಮಧ್ಯಂತರ ಬಜೆಟ್: ಮೋದಿ 2.0 ಸರ್ಕಾರದ ಕೊನೆಯ ಬಜೆಟ್. ಚುನಾವಣೆ ಇದ್ದುದ್ದರಿಂದ 2024ರ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಲಾಗಿತ್ತು. ನಿರ್ಮಲಾ ಸೀತಾರಾಮನ್ ಅವರ ಮೊದಲ ಮಧ್ಯಂತರ ಬಜೆಟ್ ಕೂಡ ಇದು. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕಾಂತ ಹೊಲಿಗೆಯಿಂದ ವಿನ್ಯಾಸಗೊಳಿಸಿದ ನೀಲಿ ಬಣ್ಣದ ಟಸ್ಸರ್ ರೇಷ್ಮೆ ಸೀರೆಯಲ್ಲಿ ನಿರ್ಮಲಾ ಸೀತಾರಾಮನ್ ಮಿಂಚಿದ್ದರು.
2024-25ರ ಬಜೆಟ್: ಮೋದಿ 3.0 ಸರ್ಕಾರದ ಮೊದಲ ಪೂರ್ಣ ಬಜೆಟ್ ಮಂಡನೆ ಮಾಡಿದ ನಿರ್ಮಲಾ ಸೀತಾರಾಮನ್ ಮಜೆಂಟಾ ಬಾರ್ಡರ್ ಹೊಂದಿದ್ದ ಮಂಗಳಗಿರಿ ಕಾಟನ್ ಸೀರೆಯಲ್ಲಿ ಗಮನಸೆಳೆದಿದ್ದರು.
2025-26ರ ಬಜೆಟ್: ನಿರ್ಮಲಾ ಸೀತಾರಾಮನ್ ಅವರಿಗೆ ಇದು 8ನೇ ಬಜೆಟ್. ಈ ಸಮಯದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಬಿಹಾರದ ಖ್ಯಾತ ಮಿಥಿಲಾ ಕಲಾವಿದೆ ದುಲಾರಿ ದೇವಿ ಅವರಿಂದ ಕೊಡುಗೆಯಾಗಿ ಸಿಕ್ಕಿದ್ದ ಸೀರೆಯನ್ನುಟ್ಟಿದ್ದರು. ಮಿಥಿಲಾ ಆರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಕ್ರೆಡಿಟ್ ಔಟ್‌ರೀಚ್ ಕಾರ್ಯಕ್ರಮಕ್ಕಾಗಿ ಮಧುಬನಿಗೆ ಭೇಟಿ ನೀಡಿದಾಗ ಸಿಕ್ಕಿದ್ದ ಸೀರೆ ಅದಾಗಿತ್ತು.

