
ಎಪ್ಸ್ಟೀನ್ ಪ್ರಕರಣದಲ್ಲಿ ಮೀರಾ ನಾಯರ್ ಹೆಸರು: ಗಿಸ್ಲೇನ್ ಮ್ಯಾಕ್ಸ್ವೆಲ್ ಪಾರ್ಟಿಯಲ್ಲಿ ಭಾಗವಹಿಸಿದ್ದ ನಿರ್ದೇಶಕಿ!
ಲೈಂಗಿಕ ಕಳ್ಳಸಾಗಣೆ ಆರೋಪದ ಮೇಲೆ ಜೈಲು ಸೇರಿದ್ದ ಜೆಫ್ರಿ ಎಪ್ಸ್ಟೀನ್ 2019ರಲ್ಲಿ ನ್ಯೂಯಾರ್ಕ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಕೃತ್ಯಗಳಿಗೆ ಸಹಕರಿಸಿದ ಅಪರಾಧಕ್ಕಾಗಿ ಗಿಸ್ಲೇನ್ ಮ್ಯಾಕ್ಸ್ವೆಲ್ ಪ್ರಸ್ತುತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ಕುಖ್ಯಾತ ಲೈಂಗಿಕಾಪರಾಧಿ ಜೆಫ್ರಿ ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ನ್ಯಾಯಾಂಗ ಇಲಾಖೆ ಬಿಡುಗಡೆ ಮಾಡಿರುವ ಹೊಸ ದಾಖಲೆಗಳಲ್ಲಿ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಇದೀಗ ಬಿಡುಗಡೆಯಾಗಿರುವ ದಾಖಲೆಗಳಲ್ಲಿ ಖ್ಯಾತ ಚಲನಚಿತ್ರ ನಿರ್ದೇಶಕಿ ಮತ್ತು ನ್ಯೂಯಾರ್ಕ್ ಮೇಯರ್ ಜೊಹ್ರಾನ್ ಮಮದಾನಿ ಅವರ ತಾಯಿ ಮೀರಾ ನಾಯರ್ ಅವರ ಹೆಸರೂ ಕೇಳಿಬಂದಿದೆ.
2009ರಲ್ಲಿ ಬಿಡುಗಡೆಯಾಗಿದ್ದ ಮೀರಾ ನಾಯರ್ ನಿರ್ದೇಶನದ 'ಅಮೇಲಿಯಾ' ಚಿತ್ರ ಪ್ರದರ್ಶನದ ನಂತರ, ಎಪ್ಸ್ಟೀನ್ನ ಸಹವರ್ತಿ ಹಾಗೂ ಲೈಂಗಿಕ ಕಳ್ಳಸಾಗಣೆ ಪ್ರಕರಣದ ಅಪರಾಧಿ ಗಿಸ್ಲೇನ್ ಮ್ಯಾಕ್ಸ್ವೆಲ್ ಅವರ ನಿವಾಸದಲ್ಲಿ ನಡೆದಿದ್ದ 'ಆಫ್ಟರ್ ಪಾರ್ಟಿ'ಯಲ್ಲಿ ಮೀರಾ ನಾಯರ್ ಭಾಗವಹಿಸಿದ್ದರು ಎಂಬುದು ಈ ದಾಖಲೆಗಳಿಂದ ತಿಳಿದುಬಂದಿದೆ.
ಏನಿದೆ ಇಮೇಲ್ನಲ್ಲಿ?
ಮಾಧ್ಯಮ ವರದಿಗಳ ಪ್ರಕಾರ, 2009ರ ಅಕ್ಟೋಬರ್ 21 ರಂದು ಪ್ರಚಾರಕಿ ಪೆಗ್ಗಿ ಸೀಗೆಲ್ ಅವರು ಜೆಫ್ರಿ ಎಪ್ಸ್ಟೀನ್ಗೆ ಕಳುಹಿಸಿದ ಇಮೇಲ್ ಒಂದು ಈಗ ಬಹಿರಂಗವಾಗಿದೆ. ಅದರಲ್ಲಿ ಮ್ಯಾಕ್ಸ್ವೆಲ್ ಅವರ ಟೌನ್ಹೌಸ್ನಲ್ಲಿ ನಡೆದ ಪಾರ್ಟಿಯ ವಿವರಗಳಿವೆ. "ನಾನೀಗಷ್ಟೇ ಗಿಸ್ಲೇನ್ ಅವರ ಟೌನ್ಹೌಸ್ನಿಂದ ಹೊರಬಂದೆ... ಸಿನಿಮಾದ ನಂತರದ ಪಾರ್ಟಿ ಅದು. ಅಲ್ಲಿ ಬಿಲ್ ಕ್ಲಿಂಟನ್ (ಮಾಜಿ ಅಮೆರಿಕ ಅಧ್ಯಕ್ಷ) ಮತ್ತು ಜೆಫ್ ಬೆಜೋಸ್ (ಅಮೆಜಾನ್ ಸಿಇಒ) ಕೂಡ ಇದ್ದರು... ಜೀನ್ ಪಿಗೋನಿ, ನಿರ್ದೇಶಕಿ ಮೀರಾ ನಾಯರ್ ಮುಂತಾದವರು ಇದ್ದರು," ಎಂದು ಆ ಇಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ, ಆ ಪಾರ್ಟಿಯಲ್ಲಿ ಮೀರಾ ನಾಯರ್ ಅವರ 'ಅಮೇಲಿಯಾ' ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯ ಬಗ್ಗೆಯೂ ಪೆಗ್ಗಿ ಸೀಗೆಲ್ ಬರೆದಿದ್ದಾರೆ. "ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ ಮಹಿಳೆಯರಿಗೆ ಸಿನಿಮಾ ಹೆಚ್ಚು ಇಷ್ಟವಾಗಿದೆ," ಎಂದು ಇಮೇಲ್ನಲ್ಲಿ ತಿಳಿಸಲಾಗಿದೆ.
ಎಲಾನ್ ಮಸ್ಕ್ ಹೆಸರು ಕೂಡ ಉಲ್ಲೇಖ
ಬಿಡುಗಡೆಯಾದ ಹೊಸ ದಾಖಲೆಗಳಲ್ಲಿ ಜೆಫ್ರಿ ಎಪ್ಸ್ಟೀನ್ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ನಡುವಿನ ಇಮೇಲ್ ಸಂಭಾಷಣೆಗಳೂ ಪತ್ತೆಯಾಗಿವೆ. ನವೆಂಬರ್ 2012ರ ಒಂದು ಇಮೇಲ್ನಲ್ಲಿ ಎಪ್ಸ್ಟೀನ್, "ದ್ವೀಪಕ್ಕೆ ಹೆಲಿಕಾಪ್ಟರ್ನಲ್ಲಿ ಎಷ್ಟು ಜನ ಬರುತ್ತಿದ್ದೀರಿ?" ಎಂದು ಮಸ್ಕ್ ಅವರನ್ನು ಕೇಳಿದ್ದಾರೆ. ಅದಕ್ಕೆ ಮಸ್ಕ್, "ಬಹುಶಃ ನಾನು ಮತ್ತು ತಲುಲಾಹ್ ಮಾತ್ರ. ನಿಮ್ಮ ದ್ವೀಪದಲ್ಲಿ ವೈಲ್ಡೆಸ್ಟ್ ಪಾರ್ಟಿ ಯಾವ ದಿನ ಇರುತ್ತದೆ?" ಎಂದು ಮರುಪ್ರಶ್ನೆ ಹಾಕಿದ್ದರು ಎಂಬುದು ಬಹಿರಂಗವಾಗಿದೆ.
ಮೂರು ದಶಲಕ್ಷ ಪುಟಗಳ ದಾಖಲೆ
ಅಮೆರಿಕದ ಉಪ ಅಟಾರ್ನಿ ಜನರಲ್ ಟಾಡ್ ಬ್ಲಾಂಚ್ ತಿಳಿಸಿರುವಂತೆ, ಎಪ್ಸ್ಟೀನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 30 ಲಕ್ಷ ಪುಟಗಳ ದಾಖಲೆಗಳು, 2,000ಕ್ಕೂ ಹೆಚ್ಚು ವಿಡಿಯೋಗಳು ಮತ್ತು 1.80 ಲಕ್ಷ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ರಾಜಕೀಯ, ಉದ್ಯಮ ಮತ್ತು ಸಾಂಸ್ಕೃತಿಕ ವಲಯದ ಅನೇಕ ಗಣ್ಯರ ಹೆಸರುಗಳು ತಳುಕುಹಾಕಿಕೊಂಡಿವೆ.
ಲೈಂಗಿಕ ಕಳ್ಳಸಾಗಣೆ ಆರೋಪದ ಮೇಲೆ ಜೈಲು ಸೇರಿದ್ದ ಜೆಫ್ರಿ ಎಪ್ಸ್ಟೀನ್ 2019ರಲ್ಲಿ ನ್ಯೂಯಾರ್ಕ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಕೃತ್ಯಗಳಿಗೆ ಸಹಕರಿಸಿದ ಅಪರಾಧಕ್ಕಾಗಿ ಗಿಸ್ಲೇನ್ ಮ್ಯಾಕ್ಸ್ವೆಲ್ ಪ್ರಸ್ತುತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

