Ticket Booking | Train passengers beware; New refund rules to be implemented from April 1st!
x

ಭಾರತೀಯ ರೈಲ್ವೆ (ಸಾಂದರ್ಭಿಕ ಚಿತ್ರ)

Ticket Booking | ರೈಲು ಪ್ರಯಾಣಿಕರೇ ಗಮನಿಸಿ, ಏ. 1ರಿಂದ ಹೊಸ ರೀಫಂಡ್ ನಿಯಮ ಬದಲು!

ರೈಲು ಹೊರಡುವ 24 ಗಂಟೆಗಳಿಂದ 8 ಗಂಟೆಗಳ ಅವಧಿಯ ಮೊದಲು ಟಿಕೆಟ್ ರದ್ದುಗೊಳಿಸಿದರೆ, ಟಿಕೆಟ್ ದರದ ಶೇ. 50ರಷ್ಟು ಮೊತ್ತವನ್ನು ಕಡಿತಗೊಳಿಸಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.


Click the Play button to hear this message in audio format

ನೀವು ಹೆಚ್ಚಾಗಿ ರೈಲಿನಲ್ಲಿ ಪ್ರಯಾಣಿಸುವವರಾಗಿದ್ದರೆ ಈ ಸುದ್ದಿ ನಿಮಗಾಗಿ. ಭಾರತೀಯ ರೈಲ್ವೆಯು ಟಿಕೆಟ್ ರದ್ದತಿ ಮತ್ತು ಮರುಪಾವತಿ (Refund) ನಿಯಮಗಳಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಹೊಸ ನಿಯಮಗಳು ಏಪ್ರಿಲ್ 1ರಿಂದ ಜಾರಿಗೆ ಬರಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಹೊಸ ನಿಯಮದ ಪ್ರಕಾರ, ಪ್ರಯಾಣಿಕರು ನಿಗದಿತ ರೈಲು ಹೊರಡುವ ಕೇವಲ ಎಂಟು ಗಂಟೆಗಳ ಮೊದಲು ಟಿಕೆಟ್ ರದ್ದುಗೊಳಿಸಿದರೆ, ಅವರಿಗೆ ಯಾವುದೇ ಮರುಪಾವತಿ ಸಿಗುವುದಿಲ್ಲ. ಅಂದರೆ ಪಾವತಿಸಿದ ಪೂರ್ಣ ಮೊತ್ತವನ್ನು ರೈಲ್ವೆ ಇಲಾಖೆ ಮುಟ್ಟುಗೋಲು ಹಾಕಿಕೊಳ್ಳಲಿದೆ. ರೈಲು ಹೊರಡುವ 24 ಗಂಟೆಗಳಿಂದ 8 ಗಂಟೆಗಳ ಅವಧಿಯ ಮೊದಲು ಟಿಕೆಟ್ ರದ್ದುಗೊಳಿಸಿದರೆ, ಟಿಕೆಟ್ ದರದ ಶೇ. 50ರಷ್ಟು ಮೊತ್ತವನ್ನು ಕಡಿತಗೊಳಿಸಲಾಗುವುದು ಎಂದು ಹೇಳಿದೆ.

ನಿಗದಿತ ಸಮಯಕ್ಕಿಂತ 24 ರಿಂದ 72 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದರೆ ಶೇ. 25 ರಷ್ಟು ಮೊತ್ತವನ್ನು ಕಡಿತ ಮಾಡಲಾಗುತ್ತದೆ. ಇದುವರೆಗೆ ಇದ್ದ ನಿಯಮಗಳಿಗಿಂತ ಹೊಸ ನಿಯಮಗಳು ಹೆಚ್ಚು ಕಠಿಣವಾಗಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ಯೋಜನೆಯಲ್ಲಿ ಬದಲಾವಣೆಗಳಿದ್ದಲ್ಲಿ ಮೊದಲೇ ಟಿಕೆಟ್ ರದ್ದುಗೊಳಿಸುವುದು ಉತ್ತಮ. ಏಪ್ರಿಲ್ 1 ರಿಂದ ಜಾರಿಗೆ ಬರುವ ಈ ಬದಲಾವಣೆಗಳು ಆನ್‌ಲೈನ್ ಮತ್ತು ಕೌಂಟರ್ ಟಿಕೆಟ್ ಎರಡಕ್ಕೂ ಅನ್ವಯವಾಗುವ ಸಾಧ್ಯತೆಯಿದೆ.

ಮೊದಲಿದ್ದ ನಿಯಮವೇನು ?

ರೈಲ್ವೆ ಇಲಾಖೆ ಈ ಮೊದಲು ಸಾಮಾನ್ಯವಾಗಿ ಕನ್ಫರ್ಮ್ ಆಗಿರುವ ಟಿಕೆಟ್‌ಗಳನ್ನು ರದ್ದುಗೊಳಿಸಿದಾಗ ಪೂರ್ಣ ಹಣ ಸಿಗುವುದಿಲ್ಲ. ಬದಲಿಗೆ ರೈಲ್ವೆ ಇಲಾಖೆಯು ನಿಗದಿತ ರದ್ದತಿ ಶುಲ್ಕವನ್ನು ಕಡಿತಗೊಳಿಸುತ್ತದೆ. ರೈಲು ಹೊರಡುವ 48 ಗಂಟೆಗಳಿಗೂ ಮುಂಚಿತವಾಗಿ ಕನ್ಫರ್ಮ್ ಟಿಕೆಟ್ ರದ್ದುಗೊಳಿಸಿದರೆ, ವರ್ಗಕ್ಕೆ ಅನುಗುಣವಾಗಿ ಕನಿಷ್ಠ ರದ್ದತಿ ಶುಲ್ಕವನ್ನು ಕಡಿತಗೊಳಿಸಿ ಉಳಿದ ಹಣವನ್ನು ನೀಡಲಾಗುತ್ತಿತ್ತು. ಆದರೆ, ಇದೀಗ ಹೊಸ ನಿಯಮದ ಪ್ರಕಾರ ರೈಲು ಹೊರಡುವ 8 ಗಂಟೆಗಳಿಗೂ ಮೊದಲು ಟಿಕೆಟ್ ರದ್ದುಗೊಳಿಸದಿದ್ದರೆ ಯಾವುದೇ ಮರುಪಾವತಿ ಸಿಗುವುದಿಲ್ಲ.

ಸಂಪೂರ್ಣ ಹಣ ವಾಪಸ್ ಯಾವಾಗ ?

ರೈಲ್ವೆ ಇಲಾಖೆಯೇ ರೈಲನ್ನು ರದ್ದುಗೊಳಿಸಿದರೆ, ಪ್ರಯಾಣಿಕರು ರೈಲು ಹೊರಡುವ ಸಮಯದಿಂದ 3 ದಿನಗಳೊಳಗೆ ಟಿಕೆಟ್ ಸಲ್ಲಿಸಿ ಪೂರ್ಣ ಹಣ ಪಡೆಯಬಹುದು. ರೈಲು ನಿಗದಿತ ಸಮಯಕ್ಕಿಂತ 3 ಗಂಟೆ ಹೆಚ್ಚು ತಡವಾಗಿ ಬಂದರೆ ಮತ್ತು ಪ್ರಯಾಣಿಕರು ಪ್ರಯಾಣ ಮಾಡದಿದ್ದರೆ, ರೈಲು ಹೊರಡುವ ಮೊದಲು ಟಿಡಿಆರ್‌ (Ticket Deposit Receipt) ಸಲ್ಲಿಸಿ ಸಂಪೂರ್ಣ ಹಣ ಪಡೆಯಬಹುದು. ರೈಲ್ವೆ ಪ್ರಯಾಣಿಕರ ಚಾರ್ಟ್ ಸಿದ್ಧವಾದ ನಂತರವೂ ಟಿಕೆಟ್ ವೇಟಿಂಗ್ ಲಿಸ್ಟ್‌ನಲ್ಲೇ ಉಳಿದರೆ, ಅಂತಹ ಇ-ಟಿಕೆಟ್‌ಗಳು ಸ್ವಯಂಚಾಲಿತವಾಗಿ ರದ್ದಾಗುತ್ತವೆ ಮತ್ತು ಕನಿಷ್ಠ ಶುಲ್ಕವನ್ನು ಹೊರತುಪಡಿಸಿ ಉಳಿದ ಹಣ ವಾಪಸ್ ಬರುತ್ತದೆ.

Read More
Next Story