ಅಸ್ಸಾಂ ಚುನಾವಣೆ: ಪ್ರಚಾರ ಕಣದಲ್ಲಿ ಸದ್ದು ಮಾಡಲಿರುವ 5 ಪ್ರಮುಖ ವಿಷಯಗಳು
x

ಅಸ್ಸಾಂ ಚುನಾವಣೆ: ಪ್ರಚಾರ ಕಣದಲ್ಲಿ ಸದ್ದು ಮಾಡಲಿರುವ 5 ಪ್ರಮುಖ ವಿಷಯಗಳು

ಬಾಂಗ್ಲಾದೇಶದ ವಲಸಿಗರನ್ನು ಹೊರಹಾಕುವ ನೆಪದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಆರೋಪಗಳಿವೆ.


Click the Play button to hear this message in audio format

ಅಸ್ಸಾಂ ವಿಧಾನಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗಿದ್ದು, ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳ ಪ್ರಚಾರದಲ್ಲಿ ಹಲವು ವಿಷಯಗಳು ಮುನ್ನೆಲೆಗೆ ಬರುವ ಸಾಧ್ಯತೆಯಿದೆ. ಚುನಾವಣಾ ಕಣದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿರುವ ಐದು ವಿಷಯಗಳು ಇಲ್ಲಿವೆ:

1. ನುಸುಳುವಿಕೆ

ಹಲವು ದಶಕಗಳಿಂದ ಅಸ್ಸಾಂನಲ್ಲಿ ವಲಸೆ ಎಂಬುದು ಪ್ರಮುಖ ಸಮಸ್ಯೆಯಾಗಿಯೇ ಉಳಿದಿದೆ. ಇದು ಐತಿಹಾಸಿಕ ಅಸ್ಸಾಂ ಚಳವಳಿಗೆ ಕಾರಣವಾಗಿ, ಅಂತಿಮವಾಗಿ 'ಅಸ್ಸಾಂ ಒಪ್ಪಂದ'ಕ್ಕೆ (Assam Accord) ನಾಂದಿಯಾಡಿತ್ತು. ಒಪ್ಪಂದದ ನಿಬಂಧನೆಗಳನ್ನು ಜಾರಿಗೊಳಿಸಲು ಕ್ರಮಗಳನ್ನು ಕೈಗೊಂಡಿರುವುದಾಗಿ ಬಿಜೆಪಿ ನೇತೃತ್ವದ ಸರ್ಕಾರ ಪ್ರತಿಪಾದಿಸುತ್ತಿದೆ. ಆದರೆ, ಮೂಲ ಅಸ್ಸಾಮಿ ಸಮುದಾಯಗಳ ಸಾಂಸ್ಕೃತಿಕ, ಸಾಮಾಜಿಕ ಮತ್ತು ಭಾಷಾ ಅಸ್ಮಿತೆಯನ್ನು ಕಾಪಾಡುವ ಸಾಂವಿಧಾನಿಕ, ಶಾಸಕಾಂಗ ಮತ್ತು ಆಡಳಿತಾತ್ಮಕ ರಕ್ಷಣೆಗಳ ಕೊರತೆಯ ಬಗ್ಗೆ ಗಮನಸೆಳೆಯುವ ಮೂಲಕ, ಈಡೇರದ ಭರವಸೆಗಳ ಬಗ್ಗೆ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ನಿರೀಕ್ಷೆಯಿದೆ.

ಬಾಂಗ್ಲಾದೇಶದ ವಲಸಿಗರನ್ನು ಹೊರಹಾಕುವ ನೆಪದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನೈಜ ಭಾರತೀಯ ನಾಗರಿಕರನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ ಎಂದು ವಿಪಕ್ಷಗಳು ಆರೋಪಿಸುವ ಸಾಧ್ಯತೆಯಿದೆ. ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಈ ಕಳವಳವನ್ನು ಪ್ರಮುಖವಾಗಿ ಪ್ರಸ್ತಾಪಿಸಲು ಯೋಜಿಸಿವೆ. ಅಲ್ಲದೆ, ವಲಸೆ ಚರ್ಚೆಯ ಎರಡು ಪ್ರಮುಖ ಆಧಾರಸ್ತಂಭಗಳಾದ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ (CAA) ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಸಿಎಎ ವಿರುದ್ಧದ ವಿರೋಧವು ಅರ್ಥಹೀನ, ಏಕೆಂದರೆ ಬಾಂಗ್ಲಾದೇಶದ ಬೆರಳೆಣಿಕೆಯಷ್ಟು ಹಿಂದೂಗಳು ಮಾತ್ರ ಇದರ ಅಡಿಯಲ್ಲಿ ಪೌರತ್ವ ಕೋರಿದ್ದಾರೆ ಎಂದು ಆಡಳಿತ ಪಕ್ಷವು ಸಮರ್ಥಿಸಿಕೊಳ್ಳುತ್ತಿದೆ.

2. ಒಕ್ಕಲೆಬ್ಬಿಸುವಿಕೆ

ಒತ್ತುವರಿದಾರರನ್ನು, ಅದರಲ್ಲಿ ಬಹುಪಾಲು ಮುಸ್ಲಿಂ ಸಮುದಾಯಕ್ಕೆ ಸೇರಿದವರನ್ನು ಒಕ್ಕಲೆಬ್ಬಿಸುವ ರಾಜ್ಯ ಸರ್ಕಾರದ ಕಾರ್ಯಾಚರಣೆಯು ಆಡಳಿತ ಮತ್ತು ವಿರೋಧ ಪಕ್ಷಗಳೆರಡಕ್ಕೂ ಪ್ರಮುಖ ವಾಗ್ವಾದದ ವಿಷಯವಾಗಲಿದೆ. ಅರಣ್ಯ, ಸತ್ರ, ದೇವಾಲಯ ಮತ್ತು ಇತರ ಸರ್ಕಾರಿ ಭೂಮಿಯನ್ನು ಅಕ್ರಮ ಒತ್ತುವರಿಯಿಂದ ಮರಳಿ ಪಡೆದುಕೊಂಡಿರುವುದಾಗಿ ಆಡಳಿತಾರೂಢ ಮೈತ್ರಿಕೂಟ ವಾದಿಸಲಿದೆ. ಇದಕ್ಕೆ ವ್ಯತಿರಿಕ್ತವಾಗಿ, ಈ ನೀತಿಯನ್ನು "ಗಂಭೀರ ಮಾನವೀಯ ಬಿಕ್ಕಟ್ಟು" ಎಂದು ಬಿಂಬಿಸುವ ವಿಪಕ್ಷಗಳು, ಸರ್ಕಾರದ ಕಾರ್ಯಾಚರಣೆಯಿಂದಾಗಿ ಕುಟುಂಬಗಳು ನಿರ್ವಸಿತರಾಗಿ ಬೀದಿಪಾಲಾಗಿದ್ದು, ಆಶ್ರಯ ಮಾತ್ರವಲ್ಲದೆ ಅವರ ಜೀವನೋಪಾಯವನ್ನು ಕಸಿದುಕೊಳ್ಳಲಾಗಿದೆ ಎಂದು ಟೀಕಿಸಲಿವೆ.

3. ಬಾಲ್ಯವಿವಾಹದ ವಿರುದ್ಧ ಕಠಿಣ ಕ್ರಮ

ಪೋಕ್ಸೊ (POCSO) ಕಾಯ್ದೆಯಡಿ ಹಲವಾರು ಬಂಧನಗಳು ಮತ್ತು ಕಾನೂನು ಕ್ರಮಗಳಿಗೆ ಕಾರಣವಾಗಿರುವ ಬಾಲ್ಯವಿವಾಹದ ಮೇಲಿನ ಸರ್ಕಾರದ ಕಠಿಣ ಕಾರ್ಯಾಚರಣೆಯು ಮುಂಬರುವ ಚುನಾವಣೆಯಲ್ಲಿ ಮತ್ತೊಂದು ಪ್ರಮುಖ ವಿಷಯವಾಗಲಿದೆ. ಆಡಳಿತಾರೂಢ ಮೈತ್ರಿಕೂಟವು ಇದನ್ನು ಬೇರೂರಿರುವ ಸಾಮಾಜಿಕ ಅನಿಷ್ಟವನ್ನು ತೊಡೆದುಹಾಕುವ ನಿರ್ಣಾಯಕ ಹೆಜ್ಜೆ ಎಂದು ಬಿಂಬಿಸಿದರೆ, ಸರ್ಕಾರವು ರಾಜ್ಯದಲ್ಲಿ ಮತ್ತೊಮ್ಮೆ "ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುತ್ತಿದೆ" ಎಂದು ವಿರೋಧ ಪಕ್ಷಗಳು ಆರೋಪಿಸುವ ಸಾಧ್ಯತೆಯಿದೆ.

4. ಅಭಿವೃದ್ಧಿ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳು

ರಸ್ತೆಗಳು, ರೈಲ್ವೆ, ಹೊಸ ವಿಮಾನ ನಿಲ್ದಾಣಗಳು, ಜಲಮಾರ್ಗಗಳು, ಟಾಟಾ ಸೆಮಿಕಂಡಕ್ಟರ್ ಘಟಕ ಹಾಗೂ 'ಅಡ್ವಾಂಟೇಜ್ ಅಸ್ಸಾಂ' (Advantage Assam) ಬಿಸಿನೆಸ್ ಶೃಂಗಸಭೆಯ ಎರಡನೇ ಆವೃತ್ತಿಯ ಸಂದರ್ಭದಲ್ಲಿ ಸಹಿ ಹಾಕಲಾದ ಹಲವಾರು ಒಪ್ಪಂದಗಳು ಸೇರಿದಂತೆ ತನ್ನ ಪ್ರಮುಖ ಅಭಿವೃದ್ಧಿ ಉಪಕ್ರಮಗಳನ್ನು ಅಸ್ಸಾಂ ಸರ್ಕಾರವು ಪ್ರದರ್ಶಿಸುವ ನಿರೀಕ್ಷೆಯಿದೆ. ಆದರೆ, ಇಂತಹ ಪ್ರಗತಿಯು ಆಯ್ದ ಪ್ರದೇಶಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದೆ ಮತ್ತು ಈ ಯೋಜನೆಗಳಿಗಾಗಿ ಮೂಲ ನಿವಾಸಿಗಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ವಿಪಕ್ಷಗಳು ವಾದಿಸಲಿವೆ.

ರಾಜ್ಯದ ಮತದಾರರಲ್ಲಿ ಅರ್ಧದಷ್ಟು ಮಹಿಳೆಯರೇ ಇರುವುದರಿಂದ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ತಿಂಗಳಿಗೆ ರೂ. 1,250 ಆರ್ಥಿಕ ನೆರವು, ಮಹಿಳಾ ಉದ್ಯಮಿಗಳಿಗಾಗಿ ಕಾರ್ಯಕ್ರಮಗಳು ಮತ್ತು ಆರೋಗ್ಯ ಸಂಬಂಧಿತ ಉಪಕ್ರಮಗಳನ್ನು ಎತ್ತಿ ತೋರಿಸಲಿವೆ. ಆದರೆ, ಮಹಿಳೆಯರ ಮೇಲಿನ ಅಪರಾಧಗಳು ಇನ್ನೂ ಹೆಚ್ಚಿವೆ ಮತ್ತು ಸವಲತ್ತುಗಳ ವಿತರಣೆಯಲ್ಲಿ ತಾರತಮ್ಯವಾಗಿದೆ ಎಂದು ವಿಪಕ್ಷಗಳು ಪ್ರತ್ಯುತ್ತರ ನೀಡಲಿವೆ. ಇದೇ ವೇಳೆ, 1.6 ಲಕ್ಷಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ನೀಡಿರುವ ಸರ್ಕಾರಿ ನೇಮಕಾತಿಯನ್ನು ಆಡಳಿತ ಪಕ್ಷವು ಪ್ರಮುಖವಾಗಿ ಬಿಂಬಿಸಲಿದೆ. ಜೊತೆಗೆ, 2016ರಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಯತ್ತ ಮುಖ ಮಾಡಿದ್ದ ಪ್ರಮುಖ ವೋಟ್ ಬ್ಯಾಂಕ್ ಆಗಿರುವ ಚಹಾ ತೋಟದ ಕಾರ್ಮಿಕರಿಗೆ ನೀಡಲಾದ ಸೌಲಭ್ಯಗಳನ್ನು ಒತ್ತಿಹೇಳುವ ಮೂಲಕ ಅವರ ಬೆಂಬಲವನ್ನು ಉಳಿಸಿಕೊಳ್ಳಲು ಯತ್ನಿಸಲಿದೆ.

5. ಜುಬೀನ್ ಗಾರ್ಗ್ ಸಾವು

ಸೆಪ್ಟೆಂಬರ್ 2025 ರಲ್ಲಿ ಸಿಂಗಾಪುರದಲ್ಲಿ ಜನಪ್ರಿಯ ಗಾಯಕ ಜುಬೀನ್ ಗಾರ್ಗ್ ಅವರ ಸಾವು ಮತ್ತು ಅವರ ಕಗ್ಗೊಲೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಗಳು ಮತ್ತೊಂದು ಪ್ರಮುಖ ವಿಷಯವಾಗಿದೆ. ಗಾಯಕನಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಬಿಜೆಪಿ ಸರ್ಕಾರ ನಿರಾಸಕ್ತಿ ತೋರಿದೆ ಎಂದು ವಿಪಕ್ಷಗಳು ಆರೋಪಿಸಲಿವೆ. ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವನ್ನು (SIT) ರಚಿಸಿ, ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು ಈ ವಿಷಯವು ಪ್ರಸ್ತುತ ನ್ಯಾಯಾಲಯದ ಮುಂದಿದೆ ಎಂದು ಆಡಳಿತ ಪಕ್ಷವು ಸಮರ್ಥಿಸಿಕೊಳ್ಳಲಿದೆ.

Read More
Next Story