ಆಂಧ್ರಪ್ರದೇಶದ ಕಾಕಿನಾಡದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, 18 ಮಂದಿ ದುರ್ಮರಣ
x

ಶನಿವಾರ ಮಧ್ಯಾಹ್ನ ಸುಮಾರು ಎರಡೂವರೆ ಗಂಟೆಯ ಸುಮಾರಿಗೆ ಪಟಾಕಿ ತಯಾರಿಕಾ ಘಟಕದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ಆಕಸ್ಮಿಕ ಸ್ಫೋಟ ಸಂಭವಿಸಿದೆ.

ಆಂಧ್ರಪ್ರದೇಶದ ಕಾಕಿನಾಡದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, 18 ಮಂದಿ ದುರ್ಮರಣ

ಶನಿವಾರ ಮಧ್ಯಾಹ್ನ ಸುಮಾರು ಎರಡೂವರೆ ಗಂಟೆಯ ಸುಮಾರಿಗೆ ಪಟಾಕಿ ತಯಾರಿಕಾ ಘಟಕದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ಆಕಸ್ಮಿಕ ಸ್ಫೋಟ ಸಂಭವಿಸಿದೆ.


Click the Play button to hear this message in audio format

ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯ ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 18 ಮಂದಿ ಕಾರ್ಮಿಕರು ಸಜೀವ ದಹನವಾಗಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ವರದಿಯಾಗಿದೆ. ಸಾಮರ್ಲಕೋಟ ಮಂಡಲದ ವೆಟ್ಲಪಾಲೆಂ ಗ್ರಾಮದಲ್ಲಿರುವ 'ಸೂರ್ಯ ಶ್ರೀ ಫೈರ್ ವರ್ಕ್ಸ್' ಕಾರ್ಖಾನೆಯಲ್ಲಿ ಈ ದುರ್ಘಟನೆ ಜರುಗಿದ್ದು, ಮೃತಪಟ್ಟವರಲ್ಲಿ ಹೆಚ್ಚಿನವರು ಮಹಿಳಾ ಕಾರ್ಮಿಕರಾಗಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಮಧ್ಯಾಹ್ನ ಸುಮಾರು ಎರಡೂವರೆ ಗಂಟೆಯ ಸುಮಾರಿಗೆ ಪಟಾಕಿ ತಯಾರಿಕಾ ಘಟಕದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾಗ ಈ ಆಕಸ್ಮಿಕ ಸ್ಫೋಟ ಸಂಭವಿಸಿದೆ. ದುರಂತದ ವೇಳೆ ಕಾರ್ಖಾನೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಇದರ ಬೃಹತ್ ಶಬ್ದ ಸುಮಾರು ಐದು ಕಿಲೋಮೀಟರ್‌ಗಳವರೆಗೂ ಕೇಳಿಬಂದಿದೆ. ಬೆಂಕಿಯ ಜ್ವಾಲೆ ಮತ್ತು ಸ್ಫೋಟದ ರಭಸಕ್ಕೆ ಕಾರ್ಮಿಕರ ದೇಹಗಳು ಛಿದ್ರಗೊಂಡು ಅಕ್ಕಪಕ್ಕದ ಭತ್ತದ ಗದ್ದೆಗಳಿಗೆ ಎಸೆಯಲ್ಪಟ್ಟಿದ್ದವು. ದೇಹದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಮೃತದೇಹಗಳನ್ನು ಗುರುತಿಸುವುದು ಕೂಡ ರಕ್ಷಣಾ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿತು. ಜೊತೆಗೆ, ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಸುತ್ತಮುತ್ತಲಿನ ಕಟ್ಟಡಗಳು ಮತ್ತು ಮನೆಗಳಿಗೂ ಹಾನಿಯಾಗಿದೆ.

ರಕ್ಷಣಾ ಕಾರ್ಯಾಚರಣೆ ಮತ್ತು ತುರ್ತು ಚಿಕಿತ್ಸೆ

ಘಟನೆಯ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಹರಸಾಹಸ ಪಟ್ಟರು. ದಟ್ಟ ಹೊಗೆ ಮತ್ತು ಬೆಂಕಿಯ ಜ್ವಾಲೆಯ ನಡುವೆಯೂ ಸ್ಥಳೀಯ ಗ್ರಾಮಸ್ಥರು ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿ ಮಾನವೀಯತೆ ಮೆರೆದರು. ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸುವ ಕಾರ್ಯಾಚರಣೆ ಭರದಿಂದ ಸಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆರು ಮಂದಿ ಕಾರ್ಮಿಕರನ್ನು ತಕ್ಷಣವೇ ಆಂಬ್ಯುಲೆನ್ಸ್‌ಗಳ ಮೂಲಕ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಅವರಿಗೆ ತುರ್ತು ನಿಗಾ ಘಟಕದಲ್ಲಿ ತೀವ್ರ ನಿಗಾದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ

ಮುಖ್ಯಮಂತ್ರಿ ಸಂತಾಪ ಮತ್ತು ಗೃಹ ಸಚಿವರ ಭೇಟಿ

ಪಟಾಕಿ ಕಾರ್ಖಾನೆಯ ದುರಂತದ ಬಗ್ಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ತೀವ್ರ ದಿಗ್ಭ್ರಮೆ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. ದುರಂತಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾಹಿತಿ ಪಡೆದುಕೊಂಡಿರುವ ಅವರು, ತಕ್ಷಣವೇ ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ. ಗಾಯಾಳುಗಳಿಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ. ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಆಂಧ್ರಪ್ರದೇಶದ ಗೃಹ ಸಚಿವರಾದ ವಂಗಲಪುಡಿ ಅನಿತಾ ಅವರು ತಕ್ಷಣವೇ ಘಟನಾ ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿಯ ಅವಲೋಕನ ನಡೆಸುತ್ತಿದ್ದಾರೆ. ಘಟನೆಯಲ್ಲಿ 18 ಮಂದಿ ಸಾವನ್ನಪ್ಪಿರುವ ಹಾಗೂ ಆರು ಮಂದಿ ಗಾಯಗೊಂಡಿರುವ ಬಗ್ಗೆ ಅವರು ಅಧಿಕೃತವಾಗಿ ಖಚಿತಪಡಿಸಿದ್ದಾರೆ

Read More
Next Story