
Today's news Feb 20: ವೆನೆಜುವೆಲಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಭಾರತ ಮಾತುಕತೆ
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಶುಕ್ರವಾರ ಫೆಬ್ರುವರಿ 20, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪ್ರಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 20 Feb 2026 2:26 PM IST
ರಷ್ಯಾ ತೈಲಕ್ಕೆ ಗುಡ್ಬೈ? ವೆನೆಜುವೆಲಾದಿಂದ ಕಚ್ಚಾ ತೈಲ ಆಮದು ಮಾಡಿಕೊಳ್ಳಲು ಭಾರತದ ಮಾತುಕತೆ
ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಕೇವಲ ಒಂದು ದೇಶವನ್ನು ಅವಲಂಬಿಸದೆ ಆಮದು ಮೂಲಗಳನ್ನು ವಿಸ್ತರಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವೆನೆಜುವೆಲಾದಿಂದ ಕಚ್ಚಾ ತೈಲ ಖರೀದಿಸುವ ಕುರಿತು ಭಾರತ ಮತ್ತು ಅಮೆರಿಕ ನಡುವೆ ಮಾತುಕತೆಗಳು ನಡೆಯುತ್ತಿವೆ ಎಂದು ಅಮೆರಿಕ ರಾಯಭಾರಿ ಸರ್ಜಿಯೋ ಗೋರ್ ಸ್ಪಷ್ಟಪಡಿಸಿದ್ದಾರೆ.
ರಷ್ಯಾ ತೈಲ ಆಮದು ಕಡಿತಕ್ಕೆ ಒಪ್ಪಂದ
ಇತ್ತೀಚೆಗಷ್ಟೇ ಭಾರತ ಮತ್ತು ಅಮೆರಿಕ ನಡುವೆ ನಡೆದ ಬೃಹತ್ ವ್ಯಾಪಾರ ಒಪ್ಪಂದದ ಅನ್ವಯ, ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲದ ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸಲು ಒಪ್ಪಿಕೊಂಡಿದೆ. ಉಕ್ರೇನ್ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾದ ತೈಲ ಮಾರಾಟಕ್ಕೆ ತಡೆಯೊಡ್ಡುತ್ತಿದ್ದು, ಭಾರತವೂ ಇದಕ್ಕೆ ಪೂರಕವಾಗಿ ಸ್ಪಂದಿಸಿದೆ.
- 20 Feb 2026 8:41 AM IST
ನೆದರ್ಲ್ಯಾಂಡ್ಸ್ ಪ್ರಧಾನಿ ಡಿಕ್ ಶೂಫ್ ಬೆಂಗಳೂರು ಭೇಟಿ: ಸಿಲಿಕಾನ್ ಸಿಟಿಯಲ್ಲಿ ಅದ್ಧೂರಿ ಸ್ವಾಗತ
ಬೆಂಗಳೂರು ಭೇಟಿಗಾಗಿ ಆಗಮಿಸಿದ ನೆದರ್ ಲ್ಯಾಂಡ್ಸ್ ಪ್ರಧಾನ ಮಂತ್ರಿ ಡಿಕ್ ಶೂಫ್ (H.E. Mr. Dick Schoof) ಅವರನ್ನು ಇಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ ಅವರು ಹೂಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಫೆಬ್ರವರಿ 20 ರಂದು ಪ್ರಧಾನ ಮಂತ್ರಿಗಳು ಫಿಲಿಪ್ಸ್ ಇನ್ನೋವೇಶನ್ ಕ್ಯಾಂಪಸ್, ಬೆಂಗಳೂರು ಸಂಚಾರ ಪೊಲೀಸ್ ನಿಯಂತ್ರಣ ಕೇಂದ್ರ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (IISc) ಗೆ ಭೇಟಿ ನೀಡಲಿದ್ದು, ಬಳಿಕ ಹೋಟೆಲ್ ಫೋರ್ ಸೀಸನ್ಸ್ನಲ್ಲಿ ಉದ್ಯಮಿಗಳೊಂದಿಗೆ ಮಧ್ಯಾಹ್ನದ ಭೋಜನ ಸಭೆ ನಡೆಸಿ ವಿಶೇಷ ವಿಮಾನದ ಮೂಲಕ ನಿರ್ಗಮಿಸಲಿದ್ದಾರೆ.

- 20 Feb 2026 7:33 AM IST
ಟ್ರಂಪ್ ಅವರ 'ಬೋರ್ಡ್ ಆಫ್ ಪೀಸ್' ಮೊದಲ ಸಭೆಯಲ್ಲಿ ವೀಕ್ಷಕ ರಾಷ್ಟ್ರವಾಗಿ ಭಾರತ ಭಾಗಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ತಿಂಗಳು ದಾವೋಸ್ನಲ್ಲಿ ಘೋಷಿಸಿದ್ದ 'ಬೋರ್ಡ್ ಆಫ್ ಪೀಸ್' (Board of Peace) ನ ಮೊದಲ ಸಭೆಯು ವಾಷಿಂಗ್ಟನ್ನಲ್ಲಿ ನಡೆದಿದ್ದು, ಭಾರತವು ಇದರಲ್ಲಿ ವೀಕ್ಷಕ ರಾಷ್ಟ್ರವಾಗಿ ಭಾಗವಹಿಸಿದೆ. ವಾಷಿಂಗ್ಟನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಉಸ್ತುವಾರಿ ನಮ್ಗ್ಯಾ ಸಿ. ಖಂಪಾ ಅವರು ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಆರಂಭದಲ್ಲಿ ಇಸ್ರೇಲ್-ಹಮಾಸ್ ಕದನ ವಿರಾಮ ಮತ್ತು ಗಾಜಾ ಪುನರ್ನಿರ್ಮಾಣದ ಉದ್ದೇಶ ಹೊಂದಿದ್ದ ಈ ಸಂಸ್ಥೆ, ಈಗ ವಿಶ್ವಸಂಸ್ಥೆಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆಯುವ ಗುರಿ ಹೊಂದಿದೆ.
ಸುಮಾರು 50 ದೇಶಗಳು ಭಾಗವಹಿಸಿದ್ದ ಈ ಸಭೆಯಲ್ಲಿ ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಇಸ್ರೇಲ್ ಸೇರಿದಂತೆ 27 ದೇಶಗಳು ಸದಸ್ಯರಾಗಿ ಪಾಲ್ಗೊಂಡಿದ್ದರೆ, ಭಾರತ ಮತ್ತು ಯುರೋಪಿಯನ್ ಯೂನಿಯನ್ ಸದ್ಯಕ್ಕೆ ವೀಕ್ಷಕ ಸ್ಥಾನಕ್ಕೆ ಸೀಮಿತವಾಗಿವೆ. ಈ ಮೊದಲು ಆಮಂತ್ರಣವನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದ್ದ ಭಾರತ, ಇದೀಗ ಅಧಿಕೃತವಾಗಿ ಸಭೆಯಲ್ಲಿ ಹಾಜರಾಗುವ ಮೂಲಕ ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ.

