
ರಾಜ್ಯ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆಯ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಯಿತು.
Today's live news Mar 18th: ಅಮೆರಿಕದ ಭೀಕರ ವಾಯುದಾಳಿ: ಇರಾನ್ ಕ್ಷಿಪಣಿ ನೆಲೆಗಳು ಧ್ವಂಸ
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಬುಧವಾರ ಮಾರ್ಚ್ 18, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 18 March 2026 11:15 AM IST
ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಆಗ್ರಹ; ಕೇಂದ್ರದ ವಿರುದ್ಧ ಸರ್ಕಾರದ ವಾಗ್ದಾಳಿ
ರಾಜ್ಯ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಇಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನ ಹೆಚ್ಚಳ ಹಾಗೂ ಸೇವಾ ಭದ್ರತೆಯ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಯಿತು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಈ ವಿಷಯವನ್ನು ಪ್ರಸ್ತಾಪಿಸಿ, ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಸರ್ವೆ ನಡೆಸುವ ಮೂಲಕ ಸರ್ಕಾರದ ಯೋಜನೆಗಳನ್ನು ತಲುಪಿಸಲು ಶ್ರಮಿಸುತ್ತಿದ್ದಾರೆ. ಅವರ ಕೆಲಸದ ಹೊರೆ ಹೆಚ್ಚಿದ್ದು, ಅವರಿಗೆ ತಕ್ಷಣವೇ ಹೆಚ್ಚಿನ ವೇತನ ಹಾಗೂ ಸೇವಾ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಬೇಡಿಕೆಗೆ ಶಾಸಕ ಪ್ರಭು ಚವ್ಹಾಣ್ ಕೂಡ ಧ್ವನಿಗೂಡಿಸಿ ಬೆಂಬಲ ವ್ಯಕ್ತಪಡಿಸಿದರು.
ಇದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರಿಗೆ ಅತಿ ಹೆಚ್ಚು ಗೌರವಧನವನ್ನು ನೀಡುತ್ತಿದೆ ಎಂದು ಸ್ಪಷ್ಟಪಡಿಸಿದರು. ಪ್ರಸ್ತುತ ಕೇಂದ್ರ ಸರ್ಕಾರವು ಕೇವಲ 2,700 ರೂಪಾಯಿಗಳನ್ನು ನೀಡುತ್ತಿದ್ದರೆ, ರಾಜ್ಯ ಸರ್ಕಾರವು ತನ್ನ ಪಾಲಿನಿಂದ 9,800 ರೂಪಾಯಿಗಳನ್ನು ನೀಡುತ್ತಿದೆ. ಇತ್ತೀಚೆಗಷ್ಟೇ ಕಾರ್ಯಕರ್ತೆಯರಿಗೆ 1,200 ರೂಪಾಯಿ ಹಾಗೂ ಸಹಾಯಕಿಯರಿಗೆ 700 ರೂಪಾಯಿಗಳನ್ನು ಹೆಚ್ಚಳ ಮಾಡಲಾಗಿದೆ. ಕಾರ್ಯಕರ್ತೆಯರಲ್ಲಿ ಎಂ.ಎ, ಎಂ.ಕಾಂ ಮತ್ತು ಪಿಎಚ್‌ಡಿ ಪದವೀಧರರೂ ಇದ್ದು, ಅವರ ಸೇವಾ ಭದ್ರತೆಯ ಕುರಿತು ಸರ್ಕಾರ ಗಂಭೀರವಾಗಿ ಗಮನಹರಿಸಲಿದೆ ಎಂದು ತಿಳಿಸಿದರು. ಅಲ್ಲದೆ, ಗೌರವಧನವನ್ನು ಇನ್ನೂ 5,000 ರೂಪಾಯಿಗಳಷ್ಟು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಂಗನವಾಡಿ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ 50:50 ರಷ್ಟು ಅನುಪಾತದಲ್ಲಿ ಅನುದಾನ ಹಂಚಿಕೆಯಾಗಬೇಕು. ಆದರೆ ಕೇಂದ್ರ ಸರ್ಕಾರ ಕೇವಲ 2,700 ರೂಪಾಯಿ ನೀಡಿ ಕೈತೊಳೆದುಕೊಳ್ಳುತ್ತಿದೆ, ರಾಜ್ಯ ಸರ್ಕಾರವೇ ದೊಡ್ಡ ಮೊತ್ತವನ್ನು ಭರಿಸುತ್ತಿದೆ ಎಂದು ಕಿಡಿಕಾರಿದರು. ಕೇವಲ ಪ್ರಚಾರಕ್ಕಾಗಿ ಫೋಟೋ ಹಾಕಿಸಿಕೊಳ್ಳುವ ಕೇಂದ್ರ ಸರ್ಕಾರ, ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ರಾಜ್ಯದ ಫೋಟೋ ಹಾಕಿದರೆ ಹಣ ನೀಡುವುದಿಲ್ಲ ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನಿಸುವ ಮೂಲಕ ಕಲಾಪದಲ್ಲಿ ಕೇಂದ್ರದ ನೀತಿಯನ್ನು ಖಂಡಿಸಿದರು.
- 18 March 2026 7:39 AM IST
ಇಸ್ರೇಲ್ ದಾಳಿಗೆ ಇರಾನ್‌ನ ಅಲಿ ಲಾರಿಜಾನಿ ಬಲಿ; ಟೆಲ್ ಅವಿವ್ ಮೇಲೆ ಇರಾನ್ ಕ್ಷಿಪಣಿ ದಾಳಿ!
ಇಸ್ರೇಲ್ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್‌ನ ಅತ್ಯಂತ ಪ್ರಭಾವಿ ಭದ್ರತಾ ಅಧಿಕಾರಿಗಳಾದ ಅಲಿ ಲಾರಿಜಾನಿ ಮತ್ತು ಜನರಲ್ ಘೋಲಂ ರೇಜಾ ಸೊಲೈಮಾನಿ ಹತರಾಗಿದ್ದು, ಇದು ಇರಾನ್ ನಾಯಕತ್ವಕ್ಕೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದೆ. ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ನಂತರ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದ ಲಾರಿಜಾನಿ ಮತ್ತು ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೊಲೈಮಾನಿ ಅವರ ಸಾವನ್ನು ಇರಾನ್ ಅಧಿಕೃತವಾಗಿ ಖಚಿತಪಡಿಸಿದೆ. ಈ ಹತ್ಯೆಗಳಿಗೆ ಪ್ರತಿಕಾರವಾಗಿ ಬುಧವಾರ ಇರಾನ್ ತನ್ನ ನೆರೆರಾಷ್ಟ್ರಗಳಾದ ಸೌದಿ ಅರೇಬಿಯಾ, ಕುವೈತ್ ಮತ್ತು ಇಸ್ರೇಲ್ ಮೇಲೆ ನೂರಾರು ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿದ್ದು, ಟೆಲ್ ಅವಿವ್ ಸಮೀಪದ ರಾಮತ್ ಗನ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ನಡುವೆ ಜಾಗತಿಕ ಇಂಧನ ಬಿಕ್ಕಟ್ಟಿನ ಭೀತಿ ಹೆಚ್ಚಾಗುತ್ತಿದ್ದು, ಹಾರ್ಮುಜ್ ಜಲಸಂಧಿಯ ಮೇಲಿನ ತನ್ನ ಬಿಗಿಹಿಡಿತವನ್ನು ಬಿಟ್ಟುಕೊಡುವ ಉದ್ದೇಶ ತನಗಿಲ್ಲ ಎಂದು ಇರಾನ್ ಎಚ್ಚರಿಸಿದೆ. ಇರಾನ್‌ನ ಈ ದಬ್ಬಾಳಿಕೆಯ ಆಡಳಿತವನ್ನು ದುರ್ಬಲಗೊಳಿಸುವುದೇ ನಮ್ಮ ಗುರಿ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಘೋಷಿಸಿದ್ದಾರೆ.
- 18 March 2026 7:23 AM IST
ಅಮೆರಿಕದ ಭೀಕರ ವಾಯುದಾಳಿ: ಇರಾನ್ ಕ್ಷಿಪಣಿ ನೆಲೆಗಳು ಧ್ವಂಸ
ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೇಂದ್ರವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮರುಪರಿಚಾಲನೆ ತರುವ ಉದ್ದೇಶದಿಂದ ಅಮೆರಿಕ ಸೇನೆಯು ಇರಾನ್ ಕರಾವಳಿಯಲ್ಲಿದ್ದ ಪ್ರಬಲ ಕ್ಷಿಪಣಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯ ಪ್ರಕಾರ, ಇರಾನ್ ಕರಾವಳಿಯಲ್ಲಿದ್ದ ಅತ್ಯಂತ ಸುರಕ್ಷಿತ ಮತ್ತು ಬಲಿಷ್ಠ ಕ್ಷಿಪಣಿ ನೆಲೆಗಳನ್ನು ಧ್ವಂಸಗೊಳಿಸಲು ಅಮೆರಿಕ ತನ್ನ ಶಸ್ತ್ರಾಗಾರದಲ್ಲಿರುವ ಅತ್ಯಂತ ಶಕ್ತಿಶಾಲಿ 5,000-ಪೌಂಡ್ ತೂಕದ 'ಡೀಪ್ ಪೆನೆಟ್ರೇಟರ್' ಬಾಂಬ್‌ಗಳನ್ನು ಬಳಸಿದೆ. ಇಸ್ರೇಲ್ ಮತ್ತು ಅಮೆರಿಕದ ವಿರುದ್ಧದ ಯುದ್ಧಕ್ಕೆ ಪ್ರತಿಕಾರವಾಗಿ ಇರಾನ್ ಈ ಜಲಸಂಧಿಯನ್ನು ಮುಚ್ಚಿತ್ತು, ಇದರಿಂದಾಗಿ ವಿಶ್ವದ ಶೇಕಡಾ 20ರಷ್ಟು ತೈಲ ಪೂರೈಕೆ ಸ್ಥಗಿತಗೊಂಡು ಜಾಗತಿಕವಾಗಿ ಇಂಧನ ಬೆಲೆಗಳು ಗಗನಕ್ಕೇರಿದ್ದವು. ಈ ನಿರ್ಣಾಯಕ ಜಲಸಂಧಿಯನ್ನು ಸುರಕ್ಷಿತಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಟೋ ಸೇರಿದಂತೆ ಅಮೆರಿಕದ ಮಿತ್ರರಾಷ್ಟ್ರಗಳ ನೆರವು ಕೋರಿದ್ದರೂ, ಹೆಚ್ಚಿನ ದೇಶಗಳು ಈ 'ಯುದ್ಧ'ಕ್ಕೆ ಸಾಥ್ ನೀಡಲು ನಿರಾಕರಿಸಿದ್ದವು. ಈ ಹಿನ್ನೆಲೆಯಲ್ಲಿ, ಅಂತರಾಷ್ಟ್ರೀಯ ಹಡಗು ಸಂಚಾರಕ್ಕೆ ಸಂಚಕಾರ ತಂದೊಡ್ಡಿದ್ದ ಇರಾನ್‌ನ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ತಟಸ್ಥಗೊಳಿಸಲು ಅಮೆರಿಕ ಈ ಏಕಪಕ್ಷೀಯ ಮತ್ತು ಬೃಹತ್ ಸೈನಿಕ ಕಾರ್ಯಾಚರಣೆಗೆ ಮುಂದಾಗಿದೆ.

