
Today's live news Mar 11th: IPL 2026| ಮಾ.28ರಿಂದ ಐಪಿಎಲ್ ಆರಂಭ, ಉದ್ಘಾಟನಾ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜು
ರಾಜ್ಯ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಅತ್ಯಂತ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ಇಂದು ಬುಧವಾರ ಮಾರ್ಚ್ 11, 2026. ಭಾರತದ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇಂದಿನ ಪಮುಖ ಮತ್ತು ಟ್ರೆಂಡಿಂಗ್ ಸುದ್ದಿಗಳ ಸಮಗ್ರ ನೋಟ ಇಲ್ಲಿದೆ.
Live Updates
- 11 March 2026 8:18 PM IST
ಭಾರತಕ್ಕೆ ತೆರಳುತ್ತಿದ್ದ ಥಾಯ್ ಸರಕು ಹಡಗಿನ ಮೇಲೆ ಹಾರ್ಮುಜ್ ಜಲಸಂಧಿಯ ಬಳಿ ದಾಳಿ
ಯುನೈಟೆಡ್ ಅರಬ್ ಎಮಿರೇಟ್ಸ್‌ನ ಬಂದರಿನಿಂದ ಹೊರಟ ಸ್ವಲ್ಪ ಸಮಯದ ನಂತರ ಥಾಯ್ ಧ್ವಜವನ್ನು ಹೊಂದಿರುವ ಸರಕು ಹಡಗಿನ ಮೇಲೆ ದಾಳಿ ನಡೆಸಲಾಗಿದ್ದು, 20 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಆದರೆ ಮೂವರು ನಾವಿಕರು ಕಾಣೆಯಾಗಿದ್ದಾರೆ ಎಂದು ರಾಯಲ್ ಥಾಯ್ ನೌಕಾಪಡೆ ತಿಳಿಸಿದೆ.
ಥಾಯ್ ಸಂಸ್ಥೆ ಪ್ರೆಷಿಯಸ್ ಶಿಪ್ಪಿಂಗ್ ಪಿಸಿಎಲ್ ಒಡೆತನದ ಬೃಹತ್ ವಾಹಕವಾದ ಮಯೂರಿ ನಾರೀ, ಯುಎಇಯ ಖಲೀಫಾ ಬಂದರಿನಿಂದ ಹೊರಟು ಭಾರತದ ಕಾಂಡ್ಲಾ ಬಂದರಿಗೆ ಹೋಗುವ ಮಾರ್ಗದಲ್ಲಿ ಹಾರ್ಮುಜ್ ಜಲಸಂಧಿಯ ಬಳಿ ಹಾದು ಹೋಗುವಾಗ ದಾಳಿಗೆ ಒಳಗಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಯಲ್ ಥಾಯ್ ನೌಕಾಪಡೆ ಬಿಡುಗಡೆ ಮಾಡಿದ ಚಿತ್ರಗಳು ಹಡಗಿನ ಹಲ್ ಮತ್ತು ಮೇಲ್ಭಾಗದ ರಚನೆಯಿಂದ ದಟ್ಟವಾದ ಕಪ್ಪು ಹೊಗೆ ಬರುತ್ತಿರುವುದನ್ನು ತೋರಿಸಿವೆ. ಜತೆಗೆ ಲೈಫ್ ರಾಫ್ಟ್‌ಗಳು ಹತ್ತಿರದಲ್ಲಿ ತೇಲುತ್ತಿವೆ. ದಾಳಿಗೆ ನಿಖರವಾದ ಕಾರಣ ತನಿಖೆಯ ಮೂಲಕ ತಿಳಿಯಬೇಕಿದೆ. ಯಾವುದೇ ಗುಂಪು ಇನ್ನೂ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ ಎಂದು ನೌಕಾಪಡೆ ತಿಳಿಸಿದೆ.
ಓಮಾನಿ ನೌಕಾಪಡೆಯು 20 ಸಿಬ್ಬಂದಿಯನ್ನು ರಕ್ಷಿಸಿದೆ ಮತ್ತು ಉಳಿದ ಮೂವರು ನಾವಿಕರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಗಳು ಮುಂದುವರೆದಿವೆ ಎಂದು ಹೇಳಿದೆ.
- 11 March 2026 7:23 PM IST
IPL 2026 | ಮಾ.28ರಿಂದ ಆರಂಭ, ಆರ್‌ಸಿಬಿ VS ಎಸ್‌ಆರ್‌ಎಚ್ ನಡುವೆ ಉದ್ಘಾಟನಾ ಪಂದ್ಯ
ಕಳೆದ ಒಂದು ತಿಂಗಳಿಂದ ಟಿ-20 ವಿಶ್ವಕಪ್ ಪಂದ್ಯಗಳ ರಸದೌತಣ ಸವಿದಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಬಿಸಿಸಿಐ ಸಿಹಿ ಸುದ್ದಿ ನೀಡಿದೆ. 19 ನೇ ಆವೃತ್ತಿಯ ಐಪಿಎಲ್ ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮಾ.28ರಿಂದ ಪಂದ್ಯಗಳು ಆರಂಭವಾಗಲಿವೆ.
ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ 2025ರ ಚಾಂಪಿಯನ್ ಆರ್‌ಸಿಬಿ, ಹೈದರಾಬಾದ್ ಸನ್‌ರೈಸರ್ಸ್ ತಂಡವನ್ನು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಲಿದೆ.
- 11 March 2026 2:20 PM IST
ಎರಡು ತಿಂಗಳಲ್ಲಿ ಉದ್ಯೋಗಿನ ಯೋಜನೆ ಸಹಾಯಧನ ಬಿಡುಗಡೆ: ಸಚಿವೆ ಹೆಬ್ಬಾಳ್ಕರ್
ಮುಂದಿನ ಎರಡು ತಿಂಗಳಲ್ಲಿ 2023-24 ಮತ್ತು 2024-25ನೇ ಸಾಲಿನ ಉದ್ಯೋಗಿನಿ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಬಜೆಟ್ ಅಧಿವೇಶನದ ವಿಧಾನಸಭೆಯ ಕಲಾಪದಲ್ಲಿ ಬುಧವಾರ(ಮಾ.11) ತೇರದಾಳ ಶಾಸಕ ಸಿದ್ದು ಸವದಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಸಕರ ಅಧ್ಯಕ್ಷತೆಯಲ್ಲಿ ಫಲಾನುಭವಿಗಳ ಆಯ್ಕೆ ಆಗುವುದು ವಿಳಂಬವಾಗಿದ್ದರಿಂದ ಸಹಾಯಧನ ಪಾವತಿಗೆ ತಡವಾಗಿದೆ. ಈ ಸಂಬಂಧ ಸಮಿತಿ ಸಭೆಗಳನ್ನು ತುರ್ತಾಗಿ ನಡೆಸಿ, ಶಾಸಕರನ್ನು ಖುದ್ದಾಗಿ ಭೇಟಿ ಮಾಡಿ ಆಯ್ಕೆ ಸಮಿತಿ ಸಭೆಯನ್ನು ನಡೆಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಈ ವರ್ಷದ ಉದ್ಯೋಗಿನಿ ಯೋಜನೆಯ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿರುವುದೇ ಮಹಿಳಾ ಸಬಲೀಕರಣಕ್ಕಾಗಿ. ಜತೆಗೆ ಗೃಹಲಕ್ಷ್ಮೀ, ಶಕ್ತಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.
ಉದ್ಯೋಗಿನಿ ಯೋಜನೆಯ ಸಹಾಯಧನ ತಲುಪಲು ಬ್ಯಾಂಕ್‌ಗಳು ಕೂಡ ಸರಿಯಾಗಿ ಸಹಕರಿಸುತ್ತಿಲ್ಲ. ಶಾಸಕರು ಆಯ್ಕೆ ಮಾಡಿದ ಫಲಾನುಭವಿಗಳಲ್ಲಿ ಸಿಬಿಲ್ ಸ್ಕೋರ್ ಆಧಾರದ ಮೇಲೆ ಬ್ಯಾಂಕ್‌ಗಳೂ ಫಲಾನುಭವಿಗಳನ್ನು ಆಯ್ಕೆ ಮಾಡಲು ವಿಳಂಬ ಮಾಡುತ್ತಿವೆ. ಈ ಕುರಿತು ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಬ್ಯಾಂಕ್ಸ್ (SLBC) ಕಮಿಟಿಯಲ್ಲಿ ಈ ಸಂಬಂಧ ಸಾಲ ಮಂಜೂರಾತಿಯನ್ನು ತುರ್ತಾಗಿ ಕ್ರಮವಹಿಸಲು ತಿಳಿಸಲಾಗಿದೆ ಎಂದು ಹೇಳಿದರು.
- 11 March 2026 11:44 AM IST
ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ಕ್ಷಿಪಣಿ ದಾಳಿ
ಇರಾನ್ ಪಡೆಗಳು ಸೌದಿ ಅರೇಬಿಯಾದ ತೈಲ ಮೂಲಸೌಕರ್ಯಗಳು ಮತ್ತು ಯುಎಇ ಕರಾವಳಿಯ ಸಮೀಪವಿದ್ದ ಹಡಗುಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿವೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಮತ್ತು ಅಮೆರಿಕ ಪಡೆಗಳು ಇರಾನ್‌ನಾದ್ಯಂತ ಇರುವ ವಿವಿಧ ಗುರಿಗಳ ಮೇಲೆ ದಾಳಿ ನಡೆಸಿವೆ. ಸೌದಿ ಅರೇಬಿಯಾವು ಹಲವು ಡ್ರೋನ್ ದಾಳಿಗಳನ್ನು ಯಶಸ್ವಿಯಾಗಿ ತಡೆಹಿಡಿದಿರುವುದಾಗಿ ಘೋಷಿಸಿದೆ.
- 11 March 2026 11:43 AM IST
ಕತಾರ್‌ನಲ್ಲಿ ಹೈ ಅಲರ್ಟ್: ನಿವಾಸಿಗಳು ಮನೆಯಲ್ಲೇ ಇರಲು ಸೂಚನೆ
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಕತಾರ್ ಸರ್ಕಾರ, ತನ್ನ ದೇಶದ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಮತ್ತು ಸುರಕ್ಷಿತವಾಗಿರುವಂತೆ ಸೂಚಿಸಲಾಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
- 11 March 2026 11:43 AM IST
ದೋಹಾದಿಂದ ಸೀಮಿತ ವಿಮಾನ ಸಂಚಾರ
ಯುದ್ಧದ ಪರಿಸ್ಥಿತಿಯ ನಡುವೆಯೂ ಕತಾರ್ ನಾಗರಿಕ ವಿಮಾನಯಾನ ಪ್ರಾಧಿಕಾರವು ತಾತ್ಕಾಲಿಕವಾಗಿ ಸೀಮಿತ ವಿಮಾನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ. ಮಾರ್ಚ್ 11 ರಂದು ದೋಹಾದಿಂದ ಲಂಡನ್, ಪ್ಯಾರಿಸ್, ಟೊರೊಂಟೊ ಮತ್ತು ಮೆಲ್ಬೋರ್ನ್ ಸೇರಿದಂತೆ ಆಯ್ದ ನಗರಗಳಿಗೆ ಮಾತ್ರ ವಿಮಾನಗಳು ಲಭ್ಯವಿರಲಿವೆ.
- 11 March 2026 11:40 AM IST
ಹಾರ್ಮುಜ್ ಜಲಸಂಧಿ ಬಂದ್ ಭೀತಿ- ಶೇ. 97ರಷ್ಟು ಕುಸಿದ ಹಡಗು ಸಂಚಾರ
ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಸಂಘರ್ಷದ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟರೆ ಜಾಗತಿಕ ಆಹಾರ ಮತ್ತು ಇಂಧನ ಬೆಲೆಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಮಂಡಳಿ (UNCTAD) ಎಚ್ಚರಿಸಿದೆ. ವರದಿಯ ಪ್ರಕಾರ, ಫೆಬ್ರವರಿ 28 ರಿಂದ ಈ ಭಾಗದಲ್ಲಿ ಹಡಗುಗಳ ಸಂಚಾರ ಶೇ. 97ರಷ್ಟು ಕುಸಿದಿದ್ದು, ಜಾಗತಿಕ ಸಮುದ್ರ ಮಾರ್ಗದ ತೈಲ ವ್ಯಾಪಾರದ ಶೇ. 25ರಷ್ಟು ಅಂದರೆ ದಿನಕ್ಕೆ ಸುಮಾರು 20 ಮಿಲಿಯನ್ ಬ್ಯಾರೆಲ್ ತೈಲ ಹಾಗೂ ಹೆಚ್ಚಿನ ಪ್ರಮಾಣದ ನೈಸರ್ಗಿಕ ಅನಿಲ ಮತ್ತು ರಸಗೊಬ್ಬರಗಳು ಈ ಮಾರ್ಗದಲ್ಲೇ ಸಾಗುವುದರಿಂದ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಲಿದೆ. ಇಂಧನ ಮತ್ತು ಸಾರಿಗೆ ವೆಚ್ಚದ ಏರಿಕೆಯು ನೇರವಾಗಿ ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವಾಗಲಿದ್ದು, ಈಗಾಗಲೇ ಸಾಲದ ಸುಳಿಯಲ್ಲಿರುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಅಭಿವೃದ್ಧಿಶೀಲ ರಾಷ್ಟ್ರಗಳ ಮೇಲೆ ಇದು ಅತಿ ಹೆಚ್ಚಿನ ಒತ್ತಡ ಹೇರಲಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
- 11 March 2026 7:15 AM IST
ಅಮೆರಿಕದೊಂದಿಗೆ ಮಾತುಕತೆ ಇಲ್ಲ ಎಂದ ಇರಾನ್
ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ, ಅಮೆರಿಕದೊಂದಿಗೆ ಮಾತುಕತೆ ನಡೆಸುವುದು ಇನ್ನು ಮುಂದೆ ಇರಾನ್‌ನ ಕಾರ್ಯಸೂಚಿಯಲ್ಲಿ ಇಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ಇತ್ತ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಯುದ್ಧವು ಬಹುತೇಕ ಕೊನೆಯ ಹಂತದಲ್ಲಿದೆ ಎಂದು ಹೇಳುತ್ತಲೇ, ಹಾರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಣೆಗೆ ಅಡ್ಡಿಪಡಿಸಿದರೆ ಇರಾನ್ ಮೇಲೆ ಇದುವರೆಗೆಗಿಂತ ಇಪ್ಪತ್ತು ಪಟ್ಟು ಕಠಿಣ ದಾಳಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ, ಯುದ್ಧದ ತ್ವರಿತ ಇತ್ಯರ್ಥದ ಕುರಿತು ಟ್ರಂಪ್ ಅವರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಚರ್ಚಿಸಿದ್ದು, ಮತ್ತೊಂದೆಡೆ ರಷ್ಯಾವು ಇರಾನ್‌ನ ನೂತನ ಸುಪ್ರೀಂ ಲೀಡರ್ ಆಗಿ ನೇಮಕಗೊಂಡಿರುವ ಅಯತೊಲ್ಲಾ ಮೊಜ್ತಾಬಾ ಖಮೇನಿ ಅವರಿಗೆ ತಮ್ಮ ಬೆಂಬಲ ಘೋಷಿಸಿದೆ.




