ಪದವಿ ಕೋರ್ಸ್ ಅವಧಿ ಗೊಂದಲ | ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೇಳಿದ್ದೇನು?
ಸರ್ಕಾರವು ರಾಜ್ಯ ಶಿಕ್ಷಣ ನೀತಿ ಆಯೋಗ ರಚಿಸಿದೆ. ಇದೀಗ ಎಐಡಿಎಸ್ಒ ಪದವಿ ಅವಧಿ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಿದೆ. ಸಮೀಕ್ಷೆಯ ಸಂಪೂರ್ಣ ವಿವರ ಇಲ್ಲಿದೆ.
“ಕರ್ನಾಟಕದಲ್ಲಿ ಪದವಿ ಶಿಕ್ಷಣ ಕೋರ್ಸ್ ಅವಧಿ ನಾಲ್ಕು ವರ್ಷ ಬೇಡ, ಮೂರು ವರ್ಷಕ್ಕೆ ಸೀಮಿತವಾಗಲಿ”. -ಇದು ಕರ್ನಾಟಕ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಶಿಕ್ಷಣ ಪಡೆಯುತ್ತಿರುವ ಶೇ.90ರಷ್ಟು ವಿದ್ಯಾರ್ಥಿಗಳ ಅಭಿಪ್ರಾಯ.
ಇದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO), ನಡೆಸಿದ ಸಮೀಕ್ಷೆಯಲ್ಲಿ ಬಯಲಾದ ಪ್ರಮುಖ ಅಂಶ. ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ(NEP)ಗೆ ವಿರೋಧ ವ್ಯಕ್ತಪಡಿಸಿ ನೂತನ ರಾಜ್ಯ ಶಿಕ್ಷಣ ನೀತಿ ರಚನೆಗೆ ಮುಂದಾದ ರಾಜ್ಯ ಸರ್ಕಾರ ಪದವಿ ಕೋರ್ಸ್ ಅವಧಿ ವಿಚಾರದಲ್ಲಿ ʼತೆರೆ ಮರೆ ಕಸರತ್ತು ನಡೆಸುತ್ತಿರುವಂತೆʼ ಕಾಣುತ್ತಿದೆ. ಎನ್‌ಇಪಿ ನೀತಿಯಂತೆ ಪದವಿಗೆ ನಾಲ್ಕು ವರ್ಷಗಳ ಅವಧಿಯನ್ನು ನಿಗದಿಪಡಿಸುವುದರ ಬಗ್ಗೆ ರಾಜ್ಯ ಸರ್ಕಾರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವುದು ಮತ್ತೆ ಗೊಂದಲ ಸೃಷ್ಟಿಯಾಗಲು ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಪದವಿ ಅವಧಿಯ ಬಗ್ಗೆ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (AIDSO), ʼರಾಜ್ಯದಲ್ಲಿ ಜನಪರ ಶಿಕ್ಷಣ ನೀತಿಗೆ ಆಗ್ರಹಿಸಿ ಸಮೀಕ್ಷೆʼ ಎನ್ನುವ ಹೆಸರಿನಲ್ಲಿ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಲ್ಲಿ ಶೇ.90 ರಷ್ಟು ವಿದ್ಯಾರ್ಥಿಗಳು ಪದವಿ ಅವಧಿ ಮೂರು ವರ್ಷಕ್ಕೆ ಸೀಮಿತವಾಗಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
AIDSO ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಸಮೀಕ್ಷೆಯಲ್ಲಿ ನಾಲ್ಕು ವರ್ಷದ ಪದವಿ ಅವಧಿ ಬಗ್ಗೆ ಬಹುತೇಕ ವಿದ್ಯಾರ್ಥಿಗಳು ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಏನಿದು ಪದವಿ ಅವಧಿ ಗೊಂದಲ ?
ಕೇಂದ್ರ ಬಿಜೆಪಿ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿ- 2020(NEP) ಪರಿಚಯಿಸಿದೆ. ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ, ರಾಷ್ಟ್ರೀಯ ಶಿಕ್ಷಣ ನೀತಿ 2020ರನ್ನು ಅಳವಡಿಸಿಕೊಂಡಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ʼರಾಷ್ಟ್ರೀಯ ಶಿಕ್ಷಣ ನೀತಿʼಯನ್ನು ಹಿಂಪಡೆದು, ರಾಜ್ಯ ಶಿಕ್ಷಣ ನೀತಿ (SEP)ಯನ್ನು ಜಾರಿ ಮಾಡುವುದಾಗಿ ಭರವಸೆ ನೀಡಿತ್ತು. ಆದರೆ, ಇದೀಗ ಶಿಕ್ಷಣ ಇಲಾಖೆ ಪದವಿ ಕೋರ್ಸ್ ಅವಧಿಯ ಕುರಿತು ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹ ಮಾಡುತ್ತಿರುವುದು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಎಐಡಿಎಸ್ಒ ಈಚೆಗೆ ಕರ್ನಾಟಕದಲ್ಲಿ ಪದವಿ ಅವಧಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹಿಸಿದೆ. ಈ ಸಮೀಕ್ಷೆಯಲ್ಲಿ ಕರ್ನಾಟಕದ ಪ್ರಮುಖ 9 ವಿಶ್ವವಿದ್ಯಾಲಯ, ರಾಜ್ಯದ 82 ಪದವಿ ಕಾಲೇಜು, 12 ಸರ್ಕಾರಿ ಎಂಜಿನಿಯರ್ ಕಾಲೇಜು ಹಾಗೂ ಮೆಟ್ರಿಕ್ ನಂತರದ ಬಾಲಕರ / ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳಿಂದ, ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು ಹಾಗೂ ಪ್ರಾಧ್ಯಾಪಕರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.
ಕರ್ನಾಟಕದ ಪ್ರಮುಖ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಂದ ಅಭಿಪ್ರಾಯ ಸಂಗ್ರಹ |
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ, ಬೆಂಗಳೂರು |
ನೃಪತುಂಗ ವಿಶ್ವವಿದ್ಯಾಲಯ, ಬೆಂಗಳೂರು |
ಬೆಂಗಳೂರು ನಗರ ವಿಶ್ವವಿದ್ಯಾಲಯ |
ಬೆಂಗಳೂರು ವಿಶ್ವವಿದ್ಯಾಲಯ |
ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ |
ಮಾನಸ ಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ |
ತುಮಕೂರು ವಿಶ್ವವಿದ್ಯಾನಿಲಯ |
ಕಲಬುರಗಿ ವಿಶ್ವವಿದ್ಯಾನಿಲಯ |
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ |
ಸಮೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳು
ಸಮೀಕ್ಷೆಯಲ್ಲಿ ಕೇಳಿದ ಪ್ರಮುಖ ಪ್ರಶ್ನೆಗಳು ಈ ರೀತಿ ಇವೆ;
ಸರ್ಕಾರಿ ಶಾಲಾ- ಕಾಲೇಜು ನಿರ್ವಹಣೆಯ ಸಂಪೂರ್ಣ ಆರ್ಥಿಕ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕೇ? ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸಲು ವಿದ್ಯಾರ್ಥಿಗಳಿಂದ ದೇಣಿಗೆ ಪಡೆಯುವ ಅವಶ್ಯಕತೆ ಇದೆಯೇ? ನಾಲ್ಕು ವರ್ಷದ ಪದವಿ ಅಧ್ಯಯನ ಅವಶ್ಯಕತೆ ಇದೆಯೇ? ಕಡಿಮೆ ದಾಖಲಾತಿ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವುದು/ ಮುಚ್ಚುವುದು ಸರಿಯಾದ ಕ್ರಮವೇ?, ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ನಡೆಸಲು ಕಾರ್ಪೊರೇಟ್ ಕಂಪನಿಗಳಿಂದ ಆರ್ಥಿಕ ಸಹಾಯ ಪಡೆಯಬೇಕೇ?, ನಮ್ಮ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ವಿದೇಶಿ ವಿ.ವಿಗಳು ಅವಶ್ಯಕತೆ ಇದೆಯೇ?, ವಿದ್ಯಾರ್ಥಿಗಳಿಗೆ ಕೌಶಲ್ಯ/ ಉದ್ಯೋಗ ತರಬೇತಿ ನೀಡುವ ನೆಪದಲ್ಲಿ ಪಠ್ಯಕ್ರಮದಲ್ಲಿ ಮೌಲ್ಯಗಳನ್ನು ಕಡೆಗಣಿಸುವುದು ಸರಿಯಾದ ಕ್ರಮವೇ?, ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಭೂತಪೂರ್ವ ಪಾತ್ರವಹಿಸಿದ ಮಹಾನ್ ಕ್ರಾಂತಿಕಾರಿಗಳು ಹಾಗೂ ಮಹಾನ್ ನವೋದಯ ಚಿಂತಕರ ಕುರಿತಾದ ಪಾಠಗಳು ಪಠ್ಯಕ್ರಮದ ಭಾಗವಾಗಬೇಕೇ? ಹಾಗೂ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡುವ ಅವಶ್ಯಕತೆ ಇದೆಯೇ? ಎನ್ನುವ ಪ್ರಶ್ನೆಗಳಿಗೆ ಹೌದು ಅಥವಾ ಇಲ್ಲ ಎಂದು ಉತ್ತರಿಸುವ ಮಾದರಿಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ.
ಇನ್ನು ಸಮೀಕ್ಷೆಯಲ್ಲಿ ಭಾಗವಹಿಸಿದವರು ಬಹುತೇಕ ಸರ್ಕಾರಿ ಸಂಸ್ಥೆಗಳನ್ನು ಬಲಪಡಿಸಬೇಕು. ಸರ್ಕಾರಿ ಸಂಸ್ಥೆಗಳ ಹಣಕಾಸಿನ ಜವಾಬ್ದಾರಿಯನ್ನು ಸರ್ಕಾರವು ಸಂಪೂರ್ಣವಾಗಿ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಎನ್ಇಪಿ-2020ರ ತರಾತುರಿ ಅನುಷ್ಠಾನವು ಅನೇಕ ಸಮಸ್ಯೆಗಳನ್ನು ತಂದಿಟ್ಟಿದೆ. ಪದವಿ ಕಾಲೇಜುಗಳು ಶೈಕ್ಷಣಿಕವಾಗಿಯೂ ಸಮಸ್ಯೆ ಅನುಭವಿಸುತ್ತಿವೆ ಎನ್ನುವುದು ಬೆಳಕಿಗೆ ಬಂದಿದೆ. ಇನ್ನು ರಾಜ್ಯದ ಎಲ್ಲಾ ಜಿಲ್ಲೆಗಳು ಸೇರಿದಂತೆ 23,210 ಜನರನ್ನು ಸಂಪರ್ಕಿಸಿ ಸಮೀಕ್ಷೆ ನಡೆಸಲಾಗಿದೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಪ್ರತಿ ವ್ಯಕ್ತಿಯು 9 ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಒಟ್ಟು 1,99,129 ಪ್ರತಿಕ್ರಿಯೆಗಳನ್ನು ಸಂಗ್ರಹಿಸಲಾಗಿದೆ.
ಶಾಲೆಗಳ ವಿಲೀನ ಬೇಡ
ಐದಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವುದು ಅಥವಾ ವಿಲೀನ ಮಾಡುವುದಕ್ಕೆ ಕೆಲವು ವರ್ಷಗಳ ಹಿಂದೆ ಸರ್ಕಾರ ಮುಂದಾಗಿತ್ತು. ಇತ್ತೀಚಿನ ವರ್ಷಗಳಲ್ಲಿಯೂ ಕೆಲವು ನಿರ್ದಿಷ್ಟ ಕಾರಣಗಳನ್ನು ನೀಡಿ ಸರ್ಕಾರ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಿದೆ. ಆದರೆ, ಸರ್ಕಾರದ ಕ್ರಮಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಕಡಿಮೆ ದಾಖಲಾತಿ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಕ್ರಮಕ್ಕೆ 4,551 ಬೇಡ ಎಂದರೆ, 49 ಜನ ಸರಿ ಎಂದಿದ್ದಾರೆ. ಅದೇ ರೀತಿ ನಮ್ಮ ದೇಶದ ಶೈಕ್ಷಣಿಕ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ವಿದೇಶಿ ವಿ.ವಿಗಳು ಅವಶ್ಯಕತೆ ಇದೆಯೇ ಎನ್ನುವ ಪ್ರಶ್ನೆಗೆ 3,960 ಜನ ಸರಿಯಾದ ಕ್ರಮ ಎಂದರೆ, 640 ಜನ ಬೇಡ ಎಂದು ಉತ್ತರಿಸಿದ್ದಾರೆ.
ರಾಜ್ಯ ಶಿಕ್ಷಣ ನೀತಿ ಆಯೋಗದ ಗಮನಕ್ಕೆ
ರಾಜ್ಯದಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗಬೇಕು. ಯಾವುದೇ ಜಾತಿ, ಧರ್ಮ, ಲಿಂಗ, ಭಾಷೆ ಸೇರಿದಂತೆ ಯಾವುದೇ ರೀತಿಯ ಆರ್ಥಿಕ - ಸಾಮಾಜಿಕ ಹಾಗೂ ಸಾಂಸ್ಕೃತಿಕ ತಾರತಮ್ಯಗಳಿಗೆ ಅವಕಾಶ ಕೊಡದಂತೆ ಎಲ್ಲ ವಿದ್ಯಾರ್ಥಿಗಳಿಗೂ ಶಿಕ್ಷಣ ತಲುಪಬೇಕು ಎನ್ನುವುದು ಈ ಸಮೀಕ್ಷೆಯ ಆಶಯವಾಗಿದೆ ಎಂದು ಎಐಡಿಎಸ್ಒ (AIDSO) ವಿದ್ಯಾರ್ಥಿ ಸಂಘಟನೆಯ ಬೆಂಗಳೂರು ಜಿಲ್ಲಾಧ್ಯಕ್ಷೆ ಸಿ.ಎಂ. ಅಪೂರ್ವ ತಿಳಿಸಿದರು.
ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಅಭಿಪ್ರಾಯ ತಿಳಿಯಲು, ನಗರ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪರಿಸ್ಥಿತಿ ತಿಳಿಯುವ ಉದ್ದೇಶದಿಂದ ಈ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯ ಪ್ರಮುಖ ಅಂಶಗಳನ್ನು ರಾಜ್ಯ ಶಿಕ್ಷಣ ನೀತಿ ಆಯೋಗ ರಚಿಸಿದ ಸಭೆಗಳಲ್ಲಿ ಉಲ್ಲೇಖಿಸಿದ್ದೇವೆ ಎಂದು ತಿಳಿಸಿದರು.