Weather Updates | ನವೆಂಬರ್ ಅಂತ್ಯದಿಂದ ರಾಜ್ಯಾದ್ಯಂತ ಚಳಿ ಚುರುಕು
ರಾಜ್ಯಾದ್ಯಂತ ಮಳೆ ಪ್ರಮಾಣ ತಗ್ಗುತ್ತಿದ್ದಂತೆಯೇ ಚಳಿ ಆರಂಭವಾಗಿದೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಚಳಿ ಅಧಿಕವಾಗಿದೆ. ಒಳನಾಡಿನ ವಾತಾವರಣದಲ್ಲಿ ಮಂಜು ಕವಿದಿದೆ.
ರಾಜ್ಯಾದ್ಯಂತ ಮಳೆ ಪ್ರಮಾಣ ತಗ್ಗುತ್ತಿದ್ದಂತೆಯೇ ಚಳಿ ಆರಂಭವಾಗಿದೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಚಳಿ ಅಧಿಕವಾಗಿದೆ. ಒಳನಾಡಿನಾದ್ಯಂತ ಮಂಜು ಬೀಳುತ್ತಿದ್ದು, ಇದೇ ಪರಿಸ್ಥಿತಿಯು ವಾರವಿಡೀ ಮುಂದುವರಿಯುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಪ್ರದೇಶಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ನವೆಂಬರ್ 24 ರವರೆಗೆ ಒಣ ಹವಾಮಾನ ಇರುತ್ತದೆ. ಇದರೊಂದಿಗೆ ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ ಮಂಜು ಮುಸುಕಿದ ವಾತಾವರಣ ಮುಂದುವರಿಯುವ ಮುನ್ಸೂಚನೆ ಇದೆ.
ರಾಜ್ಯದಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದ ಮಳೆಯೂ ಇತ್ತು. ಅದೇ ರೀತಿ ಚಳಿಯೂ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇರಲಿದ್ದು, ಮುಂಜಾನೆಯ ಸಮಯದಲ್ಲಿ ಮಂಜು ಇರುವ ಸಾಧ್ಯತೆ ಇದೆ. ರಾಜ್ಯದ ಉಳಿದೆಡೆ ಉಷ್ಣಾಂಶ ಕಡಿಮೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಿಜಾಪುರ, ಬಾಗಲಕೋಟೆ, ಗಗದ, ಕೊಪ್ಪಳ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಕಡಿಮೆ ಆಗುವ ಸಾಧ್ಯತೆ ಇದ್ದು, ಬಹಳಷ್ಟು ಚಳಿ ಇರಲಿದೆ. ಬೆಂಗಳೂರಿನಲ್ಲೂ ಭಾರೀ ಚಳಿ ಆರಂಭವಾಗಿದ್ದು, ಜನರು ಬೆಳಿಗ್ಗೆ ಸೂರ್ಯ ಕಾಣಿಸುವ ತನಕ ಅಗತ್ಯ ಇರುವವರಷ್ಟೇ ರಸ್ತೆಗಿಳಿಯುತ್ತಿದ್ದಾರೆ.
ಮುಂಗಾರು ಮಳೆಯ ಅವಧಿ (ಜೂನ್-ಸೆಪ್ಟೆಂಬರ್)ಯಲ್ಲಿ ಕರ್ನಾಟಕದಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಇದರ ಪರಿಣಾಮ ಮಣ್ಣು ಮತ್ತು ವಾತಾವರಣ ಹೆಚ್ಚು ತೇವಾಂಶವನ್ನು ಸಂಗ್ರಹಿಸಿಕೊಂಡಿದೆ. ಇದಲ್ಲದೆ, ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ ಕೂಡ ಚಳಿ ಹೆಚ್ಚಾಗಲು ಕಾರಣ. ಮೋಡ ಕವಿದ ಮತ್ತು ಮಂಜು ಮುಸುಕಿದ ವಾತಾವರಣ ಚಳಿಯ ತೀವ್ರತೆಯನ್ನು ಹೆಚ್ಚಿಸುತ್ತದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.