University Syndicate | ಸಿಂಡಿಕೇಟ್‌ ನೇಮಕಾತಿ: ಅರ್ಹತೆ, ಹೊಣೆಗಾರಿಕೆಗಿಂತ ರಾಜಕೀಯವೇ ಮೇಲಾಯಿತೆ?
x

University Syndicate | ಸಿಂಡಿಕೇಟ್‌ ನೇಮಕಾತಿ: ಅರ್ಹತೆ, ಹೊಣೆಗಾರಿಕೆಗಿಂತ ರಾಜಕೀಯವೇ ಮೇಲಾಯಿತೆ?

ಈಗ ಆಯ್ಕೆಯಾಗಿರುವ 80ಕ್ಕೂ ಹೆಚ್ಚು ಮಂದಿಯ ಪೈಕಿ ಬಹುತೇಕರ ಶೈಕ್ಷಣಿಕ ಅರ್ಹತೆ ಮತ್ತು ಹಿನ್ನೆಲೆಯ ಬಗ್ಗೆಯೇ ವಿವಿಗಳ ವಲಯದಲ್ಲೇ ಅಪಸ್ವರ ಎದ್ದಿವೆ. ಅಲ್ಲದೆ, ವಿವಿಗಳ ಕಾರ್ಯನಿರ್ವಹಣೆಯ ಬಗ್ಗೆಯಾಗಲೀ, ಸಿಂಡಿಕೇಟ್ ಕಾರ್ಯವಿಧಾನದ ಬಗ್ಗೆಯಾಗಲೀ ಏನು ಗೊತ್ತಿದೆ? ಎಂಬ ಪ್ರಶ್ನೆಯೂ ಎದ್ದಿದೆ.


ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರ ನಾಮನಿರ್ದೇಶನ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದ ಪ್ರತಿಷ್ಠಿತ ಹಂಪಿ ಕನ್ನಡ ವಿವಿ, ಬೆಂಗಳೂರಿನ ಸಂಸ್ಕೃತ ವಿವಿ, ಬೆಂಗಳೂರು ವಿವಿ, ಬೆಂಗಳೂರು ನಗರ ವಿವಿ, ಬೆಂಗಳೂರು ಉತ್ತರ ವಿವಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ, ವಿಜಯಪುರದ ಅಕ್ಕಮಹಾದೇವಿ ವಿವಿ, ಧಾರವಾಡದ ಕರ್ನಾಟಕ ವಿವಿ, ಶಿವಮೊಗ್ಗದ ಕುವೆಂಪು ವಿವಿ, ಕಲಬುರ್ಗಿಯ ಗುಲ್ಬರ್ಗಾ ವಿವಿ, ರಾಯಚೂರು ವಿವಿ, ಬಳ್ಳಾರಿಯ ಶ್ರೀ ಕೃಷ್ಣ ದೇವರಾಯ ವಿವಿ ಮತ್ತು ಕರ್ನಾಟಕ ಜಾನಪದ ವಿವಿಗಳಿಗೆ 80ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸರ್ಕಾರವನ್ನು ಅನುಮೋದಿಸುವ ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಒಟ್ಟು ಹದಿಮೂರು ವಿಶ್ವವಿದ್ಯಾನಿಲಯಗಳಿಗೆ ಅವುಗಳ ಚಾಲನಾಶಕ್ತಿಯಾಗಿ ಕಾರ್ಯನಿರ್ವಹಿಸುವ ಹಣಕಾಸು ನಿರ್ವಹಣೆ, ಶೈಕ್ಷಣಿಕ ಮತ್ತು ಅಭಿವೃದ್ಧಿ ವಿಷಯದಲ್ಲಿ ನಿರ್ಣಾಯಕವಾದ ಸಿಂಡಿಕೇಟ್ ಗೆ ಓರ್ವ ಮಠಾಧೀಶರು, ಕೆಲವು ಜಾನಪದ ಕಲಾವಿದರು, ಹಾಲಿ ಮತ್ತು ಮಾಜಿ ಪ್ರಾಧ್ಯಾಪಕರು, ಬರಹಗಾರರು, ವಕೀಲರು ಮತ್ತು ಪತ್ರಕರ್ತರೂ ಸೇರಿದಂತೆ ಪಕ್ಷದ ಬೆಂಬಲಿಗರು ಮತ್ತು ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ.

ಆಯ್ಕೆಯಾದವರು ಮತ್ತು ಅವರ ಆಪ್ತರು, ಹಿಂದೆಂದೂ ಕಂಡಿರದ ಪ್ರಮಾಣದಲ್ಲಿ ಈ ಆಯ್ಕೆಯನ್ನು ಸಂಭ್ರಮಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಈ ಆಯ್ಕೆಯನ್ನು ಸಂಭ್ರಮಿಸಿದ್ದಾರೆ. ಆದರೆ,

1. ಇದೊಂದು ಮೂರು ವರ್ಷಗಳ ಅವಧಿಯ ಸಾಮಾನ್ಯ ನೇಮಕಾತಿ.

2. ವರ್ಷದಲ್ಲಿ ಎಂಟು ಬಾರಿ, ವಿವಿ ವ್ಯವಹಾರಗಳು ಮತ್ತು ಶೈಕ್ಷಣಿಕ ಸಂಗತಿಗಳ ಕುರಿತು ಚರ್ಚಿಸಲು ಸಭೆ ನಡೆಸುವ ಅವಕಾಶ ಈ ಸಿಂಡಿಕೇಟ್ ಸದಸ್ಯರಿಗೆ ಇದೆ ಅಷ್ಟೇ.

3. ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ ಕಾಯ್ದೆ-2000ರ ಪ್ರಕಾರ ಹೀಗೆ ನೇಮಕವಾದವರು ವಿಶ್ವವಿದ್ಯಾನಿಲಯಗಳ ಹಣಕಾಸು, ಅನುದಾನ, ಆಸ್ತಿಪಾಸ್ತಿ ಅಭಿವೃದ್ಧಿಯ ವಿಷಯದಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ. ಜೊತೆಗೆ ವಿವಿಯ ಶೈಕ್ಷಣಿಕ ಸಂಗತಿಗಳಾದ ಪಠ್ಯಕ್ರಮ, ಬೋಧನೆ, ಪರೀಕ್ಷೆ, ಮೌಲ್ಯಮಾಪನ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿಯಂತಹ ವಿಷಯಗಳನ್ನು ನಿರ್ಣಾಯಕರಾಗಿರುತ್ತಾರೆ.

4. ವಿವಿ ವ್ಯಾಪ್ತಿಯ ಕಾಲೇಜುಗಳು, ಅವುಗಳ ಗ್ರಂಥಾಲಯ, ಹಾಸ್ಟೆಲುಗಳು, ಪ್ರಯೋಗಾಲಯಗಳು, ತರಗತಿ ಕೊಠಡಿಗಳ ಪರಿಶೀಲನೆ, ನಿಗಾದಿಂದ ಹಿಡಿದು ವಿವಿಯ ಉಪ ಕುಲಪತಿ, ಕುಲಸಚಿವರ ಕಾರ್ಯವಿಧಾನದ ಮೇಲೆ ಕಣ್ಣಿಡುವ ವರೆಗೆ, ಗೌರವ ಡಾಕ್ಟರೇಟ್ ವಿಷಯದಲ್ಲಿ ನಿರ್ಧಾರ ಕೈಗೊಳ್ಳುವವರೆಗೆ ಮಹತ್ತರ ಹೊಣೆಗಾರಿಕೆಗಳು ಈ ಸಿಂಡಿಕೇಟ್‌ಗೆ ಇರುತ್ತದೆ.

ಸಿಂಡಿಕೇಟ್‌ನಲ್ಲಿ ಎಷ್ಟು ಮಂದಿ ಇರುತ್ತಾರೆ?

ನಿಯಮದ ಪ್ರಕಾರ ಒಂದು ವಿವಿಯ ಸಿಂಡಿಕೇಟ್‌ನಲ್ಲಿ ರಾಜ್ಯ ಸರ್ಕಾರದಿಂದ ಆಯ್ಕೆಯಾಗುವ ಆರು ಮಂದಿ ಸದಸ್ಯರಿದ್ದರೆ, ಉಳಿದಂತೆ ವಿವಿ ಉಪ ಕುಲಪತಿಯವರ ಕೋಟಾದಡಿ ಆಯ್ಕೆಯಾದ ಇಬ್ಬರು, ಮತ್ತು ಸ್ವತಃ ಉಪ ಕುಲಪತಿಯೂ ಸೇರಿದಂತೆ ಇತರೆ ಕೋಟಾಗಳಿಂದ ಆಯ್ಕೆಯಾಗುವ ಒಟ್ಟು ಹದಿನಾಲ್ಕು ಮಂದಿ ಇರುತ್ತಾರೆ.

ಹಾಗಾಗಿ, ಸರ್ಕಾರ ಪ್ರತಿ ವಿವಿಗೆ ನೇಮಕ ಮಾಡುವುದು ಆರು ಮಂದಿ ಸದಸ್ಯರು(ಒಟ್ಟು ಕೋಟಾ) ಇಡೀ ಸಿಂಡಿಕೇಟ್‌ನ ಮೂರನೇ ಒಂದು ಭಾಗದಷ್ಟು ಮಾತ್ರ.

ಉಳಿದಂತೆ ವಿವಿ ಉಪ ಕುಲಪತಿಗಳೂ ಅವರದೇ ಆದ ಮಾನದಂಡಗಳ ಮೇಲೆ ಇಬ್ಬರು ಸದಸ್ಯರನ್ನು ನೇಮಕ ಮಾಡುತ್ತಾರೆ. ಅದರೊಂದಿಗೆ ಸ್ವತಃ ವಿವಿ ಉಪ ಕುಲಪತಿ, ಕಾಲೇಜು ಶಿಕ್ಷಣ ಆಯುಕ್ತರು, ತಾಂತ್ರಿಕ ಶಿಕ್ಷಣ ನಿರ್ದೇಶಕರು, ಡೀನ್(ಎರಡು ವರ್ಷ ಅವಧಿಗೆ ರೊಟೇಷನ್‌ ಮೇಲೆ), ವಿವಿ ವ್ಯಾಪ್ತಿಯ ಕಾಲೇಜುಗಳ ನಾಲ್ವರು ಪ್ರಾಂಶುಪಾಲರು(ಒಂದು ವರ್ಷದ ಅವಧಿಗೆ ರೊಟೇಷನ್‌ ಮೇಲೆ), ಸ್ನಾತಕೋತ್ತರ ಅಧ್ಯಯನ ವಿಭಾಗದ ಒಬ್ಬರು ಪ್ರೊಫೆಸರ್‌(ಒಂದು ವರ್ಷದ ಅವಧಿಗೆ ರೊಟೇಷನ್‌ ಮೇಲೆ), ವೈದ್ಯ ಶಿಕ್ಷಣ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಆಯುಕ್ತರು ಮತ್ತು ಪಿಯು ಶಿಕ್ಷಣ ನಿರ್ದೇಶಕರು ಕೂಡ ಸಿಂಡಿಕೇಟ್‌ ನ ಸದಸ್ಯರಾಗಿರುತ್ತಾರೆ.


ನಿಯಮ ಉಲ್ಲಂಘನೆಯ ಅಪಸ್ವರ

ಆದರೆ, ಈಗ ಆಯ್ಕೆಯಾಗಿರುವ 80ಕ್ಕೂ ಹೆಚ್ಚು ಮಂದಿಯ ಪೈಕಿ ಬಹುತೇಕರ ಶೈಕ್ಷಣಿಕ ಅರ್ಹತೆ ಮತ್ತು ಹಿನ್ನೆಲೆಯ ಬಗ್ಗೆಯೇ ವಿವಿಗಳ ವಲಯದಲ್ಲೇ ಅಪಸ್ವರ ಎದ್ದಿವೆ. ಅಲ್ಲದೆ, ಇನ್ನುಳಿದ ಅರ್ಹರಲ್ಲಿ ಕೆಲವರು ಸ್ವತಃ ವಿವಿಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಅನುಭವಿಗಳಿದ್ದಾರೆ ಎಂಬುದನ್ನು ಹೊರತುಪಡಿಸಿದರೆ ಉಳಿದವರಿಗೆ ವಿವಿಗಳ ಕಾರ್ಯನಿರ್ವಹಣೆಯ ಬಗ್ಗೆಯಾಗಲೀ, ಸಿಂಡಿಕೇಟ್ ಕಾರ್ಯವಿಧಾನದ ಬಗ್ಗೆಯಾಗಲೀ ಏನು ಗೊತ್ತಿದೆ? ಎಂಬ ಪ್ರಶ್ನೆಯೂ ಎದ್ದಿದೆ.

ಶೈಕ್ಷಣಿಕ ವಲಯದ ಈ ಅಪಸ್ವರಗಳ ನಡುವೆಯೇ, ವಿವಿ ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವ ಪ್ರತಿ ವಿವಿಗೆ ರಾಜ್ಯ ಸರ್ಕಾರ ಪ್ರತಿ ಅವಧಿಗೆ ಮಾಡುವ ಆರು ಮಂದಿಯ ನೇಮಕಾತಿಯಲ್ಲಿ ಅವರೆಲ್ಲರೂ ʼಅರ್ಹ ಶಿಕ್ಷಣ ತಜ್ಞರೇ ಆಗಿರಬೇಕುʼ ಎಂಬ ನಿಯಮವಿದೆ(ನಿಯಮಾವಳಿ ವಿವರಕ್ಕೆ ಚಿತ್ರ ನೋಡಿ). ʼಎಮಿನೆಂಟ್ ಎಜುಕೇಶನಿಸ್ಟ್ಸ್ʼ ಎಂದು ಸಿಂಡಿಕೇಟ್ ಸದಸ್ಯರ ಆಯ್ಕೆಯ ಕುರಿತ ಮಾರ್ಗಸೂಚಿಯಲ್ಲಿ ಸ್ಪಷವಾಗಿ ಹೇಳಲಾಗಿದೆ. ಆ ಹಿನ್ನೆಲೆಯಲ್ಲಿ ಈಗ ಆಯ್ಕೆಯಾಗಿರುವ 80ಕ್ಕೂ ಹೆಚ್ಚು ಮಂದಿಯಲ್ಲಿ ಎಷ್ಟು ಜನ ಈ ಅರ್ಹತೆ ಹೊಂದಿದ್ದಾರೆ? ಎಂಬ ಪ್ರಶ್ನೆ ಕೂಡ ಎದ್ದಿದೆ.

ಕುವೆಂಪು ವಿವಿಯ ಹಿರಿಯ ಪ್ರೊಫೆಸರ್ ಒಬ್ಬರ ಪ್ರಕಾರ, “ಈ ಬಾರಿಯ ಸಿಂಡಿಕೇಟ್ ನೇಮಕಾತಿಯಲ್ಲಿ ಸರ್ಕಾರ ಮೂಲಭೂತ ಮಾರ್ಗಸೂಚಿಯನ್ನೇ ಉಲ್ಲಂಘಿಸಿ ಹಲವರನ್ನು ಆಯ್ಕೆ ಮಾಡಿದೆ. ಸಿಂಡಿಕೇಟ್‌ಗೆ ನೇಮಕವಾಗುವವರು ಶಿಕ್ಷಣ ತಜ್ಞರಾಗಿರಬೇಕು ಎಂಬುದು ಮೂಲ ನಿಯಮ. ಅದನ್ನೇ ಉಲ್ಲಂಘಿಸಲಾಗಿದೆ. ಹಾಗಂತ ಈ ಹಿಂದೆಯೂ ಇಂತಹ ಉಲ್ಲಂಘನೆ ಆಗಿರಲಿಲ್ಲ ಎಂದೇನಿಲ್ಲ. ಆದರೆ, ಈ ಬಾರಿ ಏಕ ಕಾಲಕ್ಕೆ ಇಷ್ಟೊಂದು ಜನರನ್ನು ನೇಮಕ ಮಾಡುವಾಗ ಈ ಲೋಪ ಎದ್ದು ಕಾಣುತ್ತಿದೆ” ಎಂದರು.

ಜೊತೆಗೆ, ವಿವಿಗಳ ಸಿಂಡಿಕೇಟ್ ನೇಮಕಾತಿಯ ಕುರಿತು ಸರ್ಕಾರಗಳು ತೋರುವ ಆಸಕ್ತಿ, ಅದೇ ವಿವಿಗಳ ಮೂಲಸೌಕರ್ಯ, ನೇಮಕಾತಿ, ತಾಂತ್ರಿಕ ಬೆಂಬಲದಂತಹ ವಿಷಯದಲ್ಲಿ ಯಾಕೆ ತೋರುತ್ತಿಲ್ಲ ಎಂದೂ ಪ್ರಶ್ನಿಸಿದರು.

ವಿವಿಗಳ ಉದ್ಧಾರಕ್ಕೆ ದನಿ ಎತ್ತುವರೆ?

ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ, ಹಣಕಾಸು, ಭೌತಿಕ ಮೂಲಸೌಕರ್ಯ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಬಹಳ ನಿರ್ಣಾಯಕವಾಗಿರುವ ಸಿಂಡಿಕೇಟ್‌ಗೆ ನೇಮಕವಾಗಿರುವ ಈ ನೂತನ ಸದಸ್ಯರು, ತಮ್ಮ ತಮ್ಮ ವಿವಿಗಳು ಎದುರಿಸುತ್ತಿರುವ ಈ ಕೆಳಗಿನ ಸಮಸ್ಯೆಗಳ ವಿಷಯದಲ್ಲಿ ಯಾವ ರೀತಿಯಲ್ಲಿ ದನಿ ಎತ್ತಲಿದ್ದಾರೆ? ಸರ್ಕಾರವನ್ನು ಹೇಗೆ ಕಣ್ತೆರೆಸಲಿದ್ದಾರೆ ಎಂಬ ಪ್ರಶ್ನೆ ಕೂಡ ಇದೆ.

1. ವಿಶ್ವವಿದ್ಯಾಲಯಗಳಲ್ಲಿ ಪೂರ್ಣಾವಧಿ ಬೋಧಕ ಸಿಬ್ಬಂದಿಯ ನೇಮಕಾತಿ ಇಲ್ಲದೆ ಹಲವು ವಿಭಾಗಗಳಲ್ಲಿ ಅರೆಕಾಲಿಕ ಸಿಬ್ಬಂದಿಯೇ ಪೂರ್ಣ ಬೋಧನೆಯನ್ನು ನೋಡಿಕೊಳ್ಳುವ ಸ್ಥಿತಿ ಇದೆ.

2. ಹಣಕಾಸು ವಿಷಯದಲ್ಲಂತೂ ವಿವಿಗಳು ಸ್ವಯಂ ನಿರ್ವಹಣೆ ಮಾಡಿಕೊಳ್ಳಬೇಕು ಎಂಬುದನ್ನು ಮುಂದು ಮಾಡಿ ಅನುದಾನ ನೀಡದೆ ಸತಾಯಿಸಲಾಗುತ್ತಿದೆ.

3. ಬುದ್ದಿಜೀವಿಗಳು, ಪ್ರಗತಿಪರರು, ಸಾಮಾಜಿಕ ಹೋರಾಟಗಾರರನ್ನು ಸರ್ಕಾರಗಳು ತಮ್ಮ ಹಂಗಿನಲ್ಲಿ ಇಡುವ ಉದ್ದೇಶದ ಈ ನೇಮಕಾತಿ ಹೊರತುಪಡಿಸಿದರೆ, ಸರ್ಕಾರ ವಿವಿಗಳ ಶೈಕ್ಷಣಿಕ ಗುಣಮಟ್ಟದ ಮತ್ತು ಮೂಲಸೌಕರ್ಯದ ವಿಷಯದಲ್ಲಿ ಯಾವ ಆಸಕ್ತಿಯನ್ನೂ ಹೊಂದಿದಂತಿಲ್ಲ.

4. ಇತ್ತೀಚೆಗೆ ಸರ್ಕಾರ ರಚಿಸಿರುವ 10 ವಿವಿಗಳಿಗೆ ವಾರ್ಷಿಕ ಎರಡು ಕೋಟಿ ರೂ. ಅನುದಾನ ಹೊರತುಪಡಿಸಿ ಉಳಿದ ಯಾವ ಸೌಲಭ್ಯ, ಸೌಕರ್ಯಗಳನ್ನೂ ನೀಡಿಲ್ಲ.

ವಿವಿಗಳನ್ನು ಶೈಕ್ಷಣಿಕವಾಗಿ ಮತ್ತು ಭೌತಿಕವಾಗಿ ದುರ್ಬಲಗೊಳಿಸುವ ಸರ್ಕಾರದ ಇಂತಹ ಕ್ರಮಗಳ ಬಗ್ಗೆ ಇದೀಗ ಹೊಸದಾಗಿ ನೇಮಕವಾಗಿರುವ ಸಿಂಡಿಕೇಟ್ ಸದಸ್ಯರೂ ಸೇರಿದಂತೆ ಇನ್ನು ನೇಮಕವಾಗಲಿರುವವರು ಕೂಡ ಏನು ಮಾಡಲಿದ್ದಾರೆ ಎಂಬುದನ್ನೂ ಕಾದುನೋಡಬೇಕಿದೆ.

Read More
Next Story