Shiva Rajakumar in Miami | ಮಿಯಾಮಿಯಲ್ಲಿ ಹ್ಯಾಟ್ರಿಕ್ ಹೀರೋ ಹಾಡು- ಹರಟೆ; ನೋವಿನ ಕ್ಷಣ ನೆನೆದು ಭಾವುಕರಾದ ಶಿವಣ್ಣ
ಸಿನಿಮಾಗಾಗಿ ಜೀವನ ಮುಡುಪಾಗಿಟ್ಟಿರುವ ಶಿವಣ್ಣ ಅವರಿಗೆ ದಿಢೀರನೇ ಎದುರಾದ ಕ್ಯಾನ್ಸರ್ ಗಂಡಾಂತರ ಇದೀಗ ದೂರವಾಗಿದೆ. ಶಿವಣ್ಣ ಅವರಲ್ಲಿ ಮತ್ತೆ ಅದೇ ಹುರುಪು, ಲವಲವಿಕೆ, ಜೀವನೋತ್ಸಾಹ ಪುಟಿಯುತ್ತಿದೆ.
ಸ್ಯಾಂಡಲ್‌ವುಡ್ ನಟ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜಕುಮಾರ್ ಅವರು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕ್ಯಾನ್ಸರ್ ವಿರುದ್ಧ ಸಮರ ಗೆದ್ದಿದ್ದಾರೆ. ಚಿಕಿತ್ಸೆಯ ಹಿನ್ನೆಲೆಯಲ್ಲಿ ಅಭಿನಯಕ್ಕೆ ತಾತ್ಕಾಲಿಕವಾಗಿ ವಿರಾಮ ನೀಡಿರುವ ಶಿವಣ್ಣ, ಈಗ ಅಮೆರಿಕದ ಮಿಯಾಮಿಯಲ್ಲಿ ವಿಹರಿಸುತ್ತಿದ್ದಾರೆ.
ಸೋಮವಾರ ಮಿಯಾಮಿಯಲ್ಲಿ ʼನಂದಿ ಕನ್ನಡ ಕೂಟʼದ ಆಹ್ವಾನದ ಮೇರೆಗೆ ಕನ್ನಡಿಗರನ್ನು ಭೇಟಿ ಮಾಡಿದ ಶಿವರಾಜಕುಮಾರ್, ತಮಗೆ ಹೊಸ ಜೀವನದ ಅವಕಾಶ ನೀಡಿದ ಮಿಯಾಮಿಗೆ ಧನ್ಯವಾದ ಅರ್ಪಿಸಿದರು. ಕನ್ನಡಿಗರೊಂದಿಗೆ ಹಾಡು-ಹರಟೆಯಲ್ಲಿ ತೊಡಗಿ, ತಾವು ಅನುಭವಿಸಿದ ಯಾತನೆ, ಆತಂಕದ ಕ್ಷಣಗಳನ್ನು ಹೇಳಿಕೊಳ್ಳುತ್ತಾ ಭಾವುಕರಾಗಿ ಬಾಷ್ಪ ಸುರಿಸಿದರು.
ಕನ್ನಡ ಚಿತ್ರರಂಗದಲ್ಲಿ ಅಮೋಘ ಅಭಿನಯ, ಸರಳ ವ್ಯಕ್ತಿತ್ವದಿಂದಲೇ ಅಭಿಮಾನಿಗಳ ಮನಸೂರೆಗೊಂಡವರು ಶಿವಣ್ಣ. ನಾಲ್ಕು ದಶಕಗಳ ಅಭಿನಯದಿಂದ ʼಕರುನಾಡ ಚಕ್ರವರ್ತಿʼ ಎಂಬ ಬಿರುದು ಪಡೆದಿದ್ದಾರೆ.
ಕ್ಯಾನ್ಸರ್ ಮೆಟ್ಟಿ ನಿಂತ ಶಿವಣ್ಣ
ಸಿನಿಮಾಗಾಗಿಯೇ ಜೀವನ ಮುಡುಪಾಗಿಟ್ಟಿರುವ ಶಿವಣ್ಣ ಅವರಿಗೆ ದಿಢೀರನೇ ಎದುರಾದ ಕ್ಯಾನ್ಸರ್ ಗಂಡಾಂತರ ಇದೀಗ ಯಾವುದೇ ಅಡ್ಡಿ ಆತಂಕವಿಲ್ಲದೇ ದೂರವಾಗಿದೆ. ಮೂತ್ರಕೋಶದ ಕ್ಯಾನ್ಸರ್ ಮೆಟ್ಟಿನಿಂತ ಅವರಲ್ಲಿ ಇದೀಗ ಮತ್ತದೇ ಹುರುಪು, ಲವಲವಿಕೆ ಹಾಗೂ ಜೀವನೋತ್ಸಾಹ ಪುಟಿಯುತ್ತಿದೆ.
ಶಿವಣ್ಣ ಅವರು ಅನಾರೋಗ್ಯ ಲೆಕ್ಕಿಸದೇ ʼಭೈರತಿ ರಣಗಲ್ʼ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ತಮಗೆ ಮೂತ್ರಕೋಶದ ಕ್ಯಾನ್ಸರ್ ಇರುವ ಕುರಿತು ಪ್ರಸ್ತಾಪಿಸುತ್ತಿದ್ದಂತೆ ಅಭಿಮಾನಿಗಳು ಹಾಗೂ ಚಿತ್ರರಂಗದ ಪಾಲಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿತ್ತು.
ಹೃದಯಾಘಾತದಿಂದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಕಾಲಿಕವಾಗಿ ಮೃತಪಟ್ಟ ನಂತರ ಇಡೀ ಚಿತ್ರರಂಗವೇ ಅನಾಥ ಸ್ಥಿತಿಗೆ ತಲುಪಿತ್ತು. ಇಂದಿಗೂ ಅಪ್ಪುವನ್ನು ನೆನೆಯದವರಿಲ್ಲ. ಅವರ ಸಾಮಾಜಿಕ ಸೇವೆಗಳಲ್ಲೇ ಈಗಲೇ ಅನೇಕರು ಪುನೀತ್ ಅವರನ್ನು ಕಾಣುತ್ತಿದ್ದಾರೆ. ಹೀಗಿರುವಾಗ ಶಿವಣ್ಣನಿಗೆ ಕ್ಯಾನ್ಸರ್ ಇರುವ ವಿಷಯ ತಿಳಿದು ಅಭಿಮಾನಿಗಳು ಮತ್ತಷ್ಟು ಕಂಗಾಲಾಗಿದ್ದರು. ಆದರೆ, ಶಿವಣ್ಣ ಮಾತ್ರ ಆತ್ಮಸ್ಥೈರ್ಯ ಕಳೆದುಕೊಳ್ಳಲಿಲ್ಲ. ತಡ ಮಾಡದೇ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ ಮುಂದಾದರು.
ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಡಿ.24 ರಂದು ಶಿವಣ್ಣ ಅವರಿಗೆ ಡಾ. ಮನೋಹರ್ ನೇತೃತ್ವದ ತಂಡ ಯಶಸ್ವಿಯಾಗಿ ಮೂತ್ರಕೋಶ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆ ನೆರವೇರಿಸಿತು. ಇದೀಗ ವಿಶ್ರಾಂತಿ ಪಡೆಯುತ್ತಿರುವ ಶಿವರಾಜಕುಮಾರ್ ಅವರು ಅಲ್ಲಿನ ನೈಸರ್ಗಿಕ ತಾಣಗಳಲ್ಲಿ ವಿಹರಿಸುತ್ತಾ, ಕನ್ನಡಿಗರೊಂದಿಗೆ ಬೆರೆತು ಮನೋಲ್ಲಾಸ ಪಡೆಯುತ್ತಿದ್ದಾರೆ.
ಕನ್ನಡಿಗರೊಂದಿಗೆ ಹಾಡು-ಹರಟೆ
ಸೋಮವಾರ ಅಮೆರಿಕದ ಮಿಯಾಮಿಯಲ್ಲಿ ʼನಂದಿ ಕನ್ನಡ ಕೂಟʼದ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆದ ಶಿವಣ್ಣ ಅವರು ಅಪ್ಪು ಹಾಡುಗಳಿಗೆ ಜೀವ ತುಂಬಿದರು.
ಮಿಯಾಮಿಯಲ್ಲಿ ಶಿವಣ್ಣ ಅವರ ಕನ್ನಡಿಗರ ಭೇಟಿಯ ವಿಡಿಯೊಗಳು ʼದ ಫೆಡರಲ್ ಕರ್ನಾಟಕʼಕ್ಕೆ ಲಭ್ಯವಾಗಿವೆ.
ಕನ್ನಡಿಗರ ಒತ್ತಾಸೆಯಂತೆ ವೇದಿಕೆ ಮೇಲೆ ಮಾತು ಆರಂಭಿಸಿದ ಶಿವಣ್ಣ ʼʼಕ್ಯಾನ್ಸರ್ ಇರುವುದು ಗೊತ್ತಿದ್ದರೂ ಚಿತ್ರೀಕರಣದ ಕೆಲಸ ನಿಲ್ಲಿಸಿರಲಿಲ್ಲ. ಶಸ್ತ್ರಚಿಕಿತ್ಸೆಗೆ ತೆರಳಬೇಕು ಎಂದಾಗ ಒಂದು ವಾರದವರೆಗೆ ಭಯ ಆವರಿಸಿತ್ತು. ಈ ಹಿಂದೆ ನಾನು ಮಿಯಾಮಿಗೆ ಎರಡು-ಮೂರು ಬಾರಿ ಬಂದಿದ್ದಾಗ ಇದ್ದ ಜೋಶ್ ಈ ಬಾರಿ ಇರಲಿಲ್ಲ. ಆದರೆ, ಮಿಯಾಮಿ ಕ್ಯಾನ್ಸರ್ ಆಸ್ಪತ್ರೆ ಪ್ರವೇಶಿಸುತ್ತಿದ್ದಂತೆ ಇಲ್ಲಿನ ವಾತಾವರಣ, ವೈದ್ಯರ ಮುತುವರ್ಜಿ, ವಿಶ್ವಾಸದ ನುಡಿಗಳು ನನ್ನಲ್ಲಿ ಪಾಸಿಟಿವ್ ವೈಬ್ ಸೃಷ್ಟಿಸಿತು. ನನ್ನನ್ನು ಮುತುವರ್ಜಿಯಿಂದ ಆರೈಕೆ ಮಾಡಿದ ಡಾ. ಮನೋಹರ್ ಅವರಿಂದ ನನಗೆ ಹೊಸ ಜೀವನ ಸಿಕ್ಕಿದೆʼʼ ಎಂದು ಹೇಳುತ್ತಾ ಭಾವುಕರಾದರು.
ಇನ್ನು ಶಿವಣ್ಣ ಅವರೊಂದಿಗೆ ಕನ್ನಡಿಗರ ಸಮಾಗಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಮೂಲದ ರಜನಿ ಶರಣ್ ಅವರು, ಶಿವಣ್ಣ ಅವರಿಗೆ ಶೀಘ್ರ ಪೂರ್ಣ ಗುಣಮುಖರಾಗುವಂತೆ ಹಾರೈಸಿದ್ದಾರೆ.
ʼʼಪ್ರೀತಿಯಿಂದ ಶಿವಣ್ಣ ಎಂದು ಕರೆಯುವ ಶಿವರಾಜ್ ಕುಮಾರ್ ಅವರು ಅತ್ಯಂತ ವಿನಯವಂತರು, ಸ್ಯಾಂಡಲ್‌ವುಡ್ ಕಲಾವಿದರ ಪೈಕಿ ಶಿವಣ್ಣರಂತಹ ವ್ಯಕ್ತಿತ್ವದವರನ್ನು ಎಲ್ಲಿಯೂ ನೋಡಿಲ್ಲ. ಶಿವಣ್ಣ ಅವರು ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿದ್ದರು. ನಮ್ಮ ಮನವಿ ಮೇರೆಗೆ ಮಿಯಾಮಿ ಕನ್ನಡಿಗರನ್ನು ಭೇಟಿಯಾಗಲು ಒಪ್ಪಿಕೊಂಡರು. ಶಿವಣ್ಣರ ರೀತಿ ಯಾವ ಸೆಲೆಬ್ರಿಟಿಗಳೂ ಇಲ್ಲ. ಹ್ಯಾಟ್ಸ್ ಆಫ್ ಟು ಶಿವಣ್ಣʼʼ ಎಂದು ಶ್ಲಾಘಿಸಿದ್ದಾರೆ.
ʼʼಡಾ.ರಾಜಕುಮಾರ್ ಅವರ ಕುಟುಂಬವೇ ವಿಶೇಷವಾಗಿದೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಯೊಬ್ಬರು ಈ ಹಿಂದೆ ವಿಮಾನ ನಿಲ್ದಾಣದಲ್ಲಿ ಒಂದು ಫೋಟೊಗೆ ಪೋಸ್ ನೀಡಲು ಯಾವ ರೀತಿ ವರ್ತಿಸಿದರು ಎಂಬುದನ್ನು ನೆನಪಿಸಿಕೊಂಡಾಗ ಶಿವಣ್ಣ ಭಿನ್ನವಾಗಿದ್ದಾರೆ ಎನಿಸಿತು. ಶಿವಣ್ಣ ಅವರನ್ನು ಸ್ವಾಗತಿಸಲು ಸಭಾಂಗಣದಲ್ಲಿ ಕನ್ನಡಿಗರೆಲ್ಲರೂ ಕಾದು ಕುಳಿತಿದ್ದೆವು. ಶಿವಣ್ಣ ಕನ್ನಡಿಗರನ್ನು ನೋಡುತ್ತಿದ್ದಂತೆ ಭಾವುಕರಾದರು. ಮಿಯಾಮಿ ನನಗೆ ಪಾಸಿಟಿವ್ ವೈಬ್ ತುಂಬಿದ ಸ್ಥಳ. ಅದನ್ನು ಎಂದಿಗೂ ಮರೆಯುವುದಿಲ್ಲ ಎಂದಾಗ ಅಭಿಮಾನಿಗಳ ಹರ್ಷೋದ್ಗಾರ ಸಭಾಂಗಣದಲ್ಲಿ ಅನುರಣಿಸಿತುʼʼ ಎಂದಿದ್ದಾರೆ.
ʼʼತಮಗೆ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಮನೋಹರ್ ಅವರನ್ನು ಶಿವಣ್ಣ ಶ್ಲಾಘಿಸಿದರು. ಸಹೋದರ ಸಮಾನರಾದ ಮನೋಹರ್ ಅವರು ತ್ವರಿತವಾಗಿ ಕಾಯಿಲೆ ಪತ್ತೆ ಹಚ್ಚಿ, ಶಸ್ತ್ರಚಿಕಿತ್ಸೆ ನೀಡಿದರು. ಅವರ ವಿಶ್ವಾಸದ ನುಡಿಗಳಿಂದ ನನ್ನಲ್ಲಿ ಆತ್ಮಸ್ಥೈರ್ಯ ಹೆಚ್ಚಿತುʼʼ ಎಂದ ಶಿವಣ್ಣ ತಾವು ಮಿಯಾಮಿಗೆ ಬರುವ ದಿನದವರೆಗೂ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದನ್ನು ವಿವರಿಸಿದರು.
ಈ ವೇಳೆ ಗೀತಾ ಶಿವರಾಜಕುಮಾರ್ ಅವರು ಕೂಡ ಭಾವುಕರಾಗಿ, ʼʼಮಿಯಾಮಿಯನ್ನು ಎಂದಿಗೂ ಮರೆಯುವುದಿಲ್ಲ. ಏಕೆಂದರೆ ಶಿವಣ್ಣನಿಗೆ ಬದುಕಲು ಮತ್ತೊಂದು ಅವಕಾಶ ನೀಡಿದೆʼʼ ಎಂದು ಹೇಳಿದರು.
ಶಿವಣ್ಣ ಅವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ ಡಾ. ಮನೋಹರ್ ಅವರು ಮಾತನಾಡುತ್ತಾ, ನಾನು ಶಿವಣ್ಣನಿಗೆ ಸರಿಯಾಗಿ ಶಸ್ತ್ರಚಿಕಿತ್ಸೆ ಮಾಡದೇ ಹೋಗಿದ್ದರೆ ಜೈಲರ್ ಚಿತ್ರದ ದೃಶ್ಯದಂತೆ ಅವರು ನನ್ನನ್ನು ಫ್ಯಾನ್‌ಗೆ ನೇಣು ಹಾಕಿಬಿಡುತ್ತಿದ್ದರು ಎಂದು ನಗೆ ಚಟಾಕಿ ಹಾರಿಸಿದರು. ಮುಂದುವರಿದು, ಶಿವಣ್ಣ ಅವರ ಅಂತಃಶಕ್ತಿ ಅಗಾಧವಾದದು. ಅವರ ಹೃದಯ 24 ಕ್ಯಾರೆಟ್ ಚಿನ್ನದಂತದ್ದು ಎಂದು ಹೇಳಿದರು.
ಮಿಯಾಮಿಯಲ್ಲಿ ನಂದಿ ಕನ್ನಡ ಕೂಟ ಆಯೋಜಿಸುವ ವೇದಿಕೆ ಕಾರ್ಯಕ್ರಮಕ್ಕೆ ಮತ್ತೆ ಬರುವುದಾಗಿ ಶಿವಣ್ಣ ಅವರು ಕನ್ನಡಿಗರಿಗೆ ಭರವಸೆ ನೀಡಿದರು. ಬಳಿಕ ತಮ್ಮ ನಟನೆಯ ಹಲವು ಚಿತ್ರ ಹಾಗೂ ಅಪ್ಪು ಅವರ ʼಗೊಂಬೆ ಹೇಳುತೈತೆ, ಮತ್ತೆ ಹೇಳುತೈತೆ..ʼ ಹಾಡನ್ನು ಹಾಡುತ್ತಾ ರಂಜಿಸಿದರು.