NABARD Grant Cut | ನಬಾರ್ಡ್‌ ಸಾಲ ಕಡಿತ: ವಿತ್ತ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ
x
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಸಿದ್ದರಾಮಯ್ಯ ಮನವಿ ಸಲ್ಲಿಸಿದರು.

NABARD Grant Cut | ನಬಾರ್ಡ್‌ ಸಾಲ ಕಡಿತ: ವಿತ್ತ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಚರ್ಚೆ

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ನಿಂದ (NABARD) ರಾಜ್ಯಕ್ಕೆ ಈ ವರ್ಷದ ಸಾಲದ ಮೊತ್ತವನ್ನು ಕಡಿತ ಮಾಡಿರುವ ಕುರಿತು ಗುರುವಾರ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಚರ್ಚಿಸಿದರು.


Click the Play button to hear this message in audio format

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ನಿಂದ (NABARD) ರಾಜ್ಯಕ್ಕೆ ಈ ವರ್ಷ ಸಾಲದ ಮೊತ್ತವನ್ನು ಕಡಿತ ಮಾಡಿರುವ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ಇದಕ್ಕೂ ಮುನ್ನ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಸಕ್ತ ಸಾಲಿನಲ್ಲಿ ನಬಾರ್ಡ್‌ನಿಂದ ರಾಜ್ಯಕ್ಕೆ ನೀಡಲಾಗಿದ್ದ ಸಾಲವನ್ನು ಕಡಿಮೆ ಮಾಡಿರುವ ಕಾರಣ ನಾನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಳಿ ಆ ಬಗ್ಗೆ ಚರ್ಚಿಸಲು ಅವರ ಸಮಯ ಕೇಳಿದ್ದೇನೆ. ಕಳೆದ ವರ್ಷ 5,600 ಕೋಟಿ ನೀಡಿದ್ದರೆ, ಈ ವರ್ಷ 2,340 ಕೋಟಿ ನೀಡಲಾಗಿದೆ. ಅಂದರೆ ಈ ಬಾರಿ ಶೇ. 58ರಷ್ಟು ಕಡಿತ ಮಾಡಲಾಗಿದೆ ಎಂದು ಹೇಳಿದ್ದರು.

ಗುರುವಾರ ದೆಹಲಿಗೆ ತೆರಳಿದ ಸಿ.ಎಂ ಕೇಂದ್ರ ಹಣಕಾಸು ಸಚಿವೆ‌ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ನಬಾರ್ಡ್ ನಿಂದ ರಾಜ್ಯದ ರೈತರಿಗೆ ಆಗಿರುವ ಸಾಲದ ಕೊರತೆಯನ್ನು ಸರಿಪಡಿಸಿ, ಆಗಿರುವ ಅನ್ಯಾಯವನ್ನು ಸರಿದೂಗಿಸುವಂತೆ ಮನವಿ ಮಾಡಿದರು. ಈ ವೇಳೆ ಸಚಿವರಾದ ಬೈರತಿ ಸುರೇಶ್, ಚಲುವರಾಯಸ್ವಾಮಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಉಪಸ್ಥಿತರಿದ್ದರು.

ಸಿ.ಎಂ ಮನವಿಯಲ್ಲಿ ಏನಿದೆ?

2024-25 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರ 35ಲಕ್ಷ ರೈತರಿಗೆ ರೂ.25ಸಾವಿರ ಕೋಟಿ ಅಲ್ಪಾವಧಿ ಕೃಷಿ ಸಾಲ ವಿತರಿಸುವ ಗುರಿಯನ್ನು ಹೊಂದಿದೆ. 2023-24ನೇ ಹಣಕಾಸು ವರ್ಷದಲ್ಲಿ ಅಲ್ಪಾವಧಿ ಸಹಕಾರಿ ಸಾಲ ವ್ಯವಸ್ಥೆಯಡಿ ಕರ್ನಾಟಕದಲ್ಲಿ ರೂ. 22,902 ಕೋಟಿ ಅಲ್ಪಾವಧಿ ಕೃಷಿ ಸಾಲವನ್ನು ವಿತರಿಸಲಾಗಿದೆ.

2024-25ನೇ ಸಾಲಿನಲ್ಲಿ ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಅಲ್ಪಾವಧಿ ಸಹಕಾರಿ ಸಾಲ ವ್ಯವಸ್ಥೆಯಡಿ ರೂ.9,162ಕೋಟಿ ಕೃಷಿ ಸಾಲ ಮಿತಿಗೆ ಅನುಮೋದನೆ ನೀಡುವಂತೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಲಿಮಿಟೆಡ್ ನಬಾರ್ಡ್‌ಗೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು.

ಕಳೆದ ಐದು ವರ್ಷಗಳ ಅವಧಿಯಲ್ಲಿ ನಬಾರ್ಡ್ ಕರ್ನಾಟಕ ರಾಜ್ಯಕ್ಕೆ ಅನುಮೋದಿಸಿರುವ ಕೃಷಿ ಸಾಲದ ಮಿತಿ ಇಂತಿವೆ.

2023-24ನೇ ಸಾಲಿನಲ್ಲಿ ನಬಾರ್ಡ್ ಕೃಷಿ ಚಟುವಟಿಕೆಗಳಿಗೆ ರೂ.5600 ಕೋಟಿ ಮೊತ್ತದ ರಿಯಾಯಿತಿ ದರದ ಸಾಲದ ಮಿತಿಗೆ ಅನುಮೋದನೆ ನೀಡಿತ್ತು. 2024-25ನೇ ಸಾಲಿನಲ್ಲಿ ರೂ.9,162 ಕೋಟಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ, ನಬಾರ್ಡ್ ಕೃಷಿ ಚಟುವಟಿಕೆಗಳಿಗೆ ಕೇವಲ ರೂ.2340 ಕೋಟಿ ರಿಯಾಯಿತಿ ದರದ ಸಾಲವನ್ನು ಅನುಮೋದಿಸಿದೆ. ಇದು ಕಳೆದ ವರ್ಷಕ್ಕಿಂತ ಶೇ.58ರಷ್ಟು ಕಡಿಮೆಯಾಗಿದೆ. ಆರ್‌ಬಿಐ ಸಾಮಾನ್ಯ ಸಾಲದ ಮಿತಿ (ಎಲ್ಒಸಿ)ಯನ್ನು ಕಡಿಮೆಗೊಳಿಸಿರುವುದೇ ಪ್ರಸ್ತುತ ವರ್ಷ ರಿಯಾಯಿತಿ ದರದ ಸಾಲದ ಮಿತಿಯನ್ನು ಕಡಿಮೆಗೊಳಿಸಲು ಕಾರಣ ಎಂದು ನಬಾರ್ಡ್ ಮಾಹಿತಿ ನೀಡಿದೆ.

ಕರ್ನಾಟಕದಲ್ಲಿ ಈ ಬಾರಿ ಉತ್ತಮ ಮಾನ್ಸೂನ್ ಮಳೆಯಾಗಿದ್ದು, ರೈತರು ಕೃಷಿ ಸಹಕಾರಿ ಚಟುವಟಿಕೆಗಳಿಗೆ ರಿಯಾಯಿತಿ ದರದ ಸಾಲದ ಮಿತಿಯನ್ನು ಹೆಚ್ಚಿಸುವಂತೆ ಬೇಡಿಕೆ ಇರಿಸಿದ್ದಾರೆ. ಆದರೆ ಕರ್ನಾಟಕಕ್ಕೆ 2024-25ನೇ ಸಾಲಿಗೆ ರಿಯಾಯಿತಿ ದರದ ಸಾಲದ ಮಿತಿಯನ್ನು ಕಡಿತಗೊಳಿಸಿರುವುದು ಅಲ್ಪಾವಧಿ ಕೃಷಿ ಸಹಕಾರಿ ಸಾಲದ ವಿತರಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಎಲ್ಲಾ ಹಿನ್ನೆಲೆಯಲ್ಲಿ, ಕರ್ನಾಟಕದ ರೈತರ ಹಿತದೃಷ್ಟಿಯಿಂದ ಅವರು ಉತ್ತಮ ಬೆಳೆಯನ್ನು ಬೆಳೆಯಲು ಅನುಕೂಲವಾಗುವಂತೆ 2024-25 ನೇ ಸಾಲಿನಲ್ಲಿ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ಹೆಚ್ಚಿಸುವಂತೆ ನಬಾರ್ಡ್ ಹಾಗೂ ಆರ್‌ಬಿಐಗೆ ನಿರ್ದೇಶನ ನೀಡಲು ಕೋರುವಂತೆ ಸಿ.ಎಂ ಮನವಿ ಮಾಡಿದ್ದಾರೆ.

ಸರ್ಕಾರದ ಆತಂಕಕ್ಕೆ ಕಾರಣ?

ಕರ್ನಾಟಕಕ್ಕೆ ನಬಾರ್ಡ್ ಅಲ್ಪಾವಧಿ ಕೃಷಿ ಸಾಲ ಮಂಜೂರು ಮಿತಿಯನ್ನು ಕಡಿತಗೊಳಿಸಿತ್ತು. ಇದರಿಂದ ಸಹಕಾರ ಸಂಸ್ಥೆಗಳ ಮೂಲಕ ರೈತರಿಗೆ ಶೂನ್ಯ ಬಡ್ಡಿ ಮತ್ತು ರಿಯಾಯಿತಿ ಬಡ್ಡಿ ದರದ ಸಾಲ ಸೌಲಭ್ಯಕ್ಕೆ ಹೊಡೆತ ಬಿದ್ದಿದೆ.

ಪ್ರಸಕ್ತ ಸಾಲಿನಲ್ಲಿ ಸಹಕಾರ ಸಂಘಗಳ ಮೂಲಕ 35 ಲಕ್ಷ ರೈತರಿಗೆ ಒಟ್ಟು 25,000 ಕೋಟಿ ರೂ. ಅಲ್ಪಾವಧಿ ಬೆಳೆಸಾಲ ವಿತರಿಸುವ ಗುರಿ ವಿಫಲವಾಗುವ ಆತಂಕ ಕರ್ನಾಟಕಕ್ಕೆ ಎದುರಾಗಿದೆ. ಕಳೆದ 5 ವರ್ಷಗಳಲ್ಲಿ ನಬಾರ್ಡ್ 2019-20 ರಲ್ಲಿ 4,200 ಕೋಟಿ ರೂ. (ಶೇ 15 ಏರಿಕೆ), 2020-21 5 ರಲ್ಲಿ 500 ಕೋಟಿ ರೂ. (ಶೇ 27 ಏರಿಕೆ), 2021-22ರಲ್ಲಿ 5,483 ಕೋಟಿ ರೂ. (ಶೇ 1 ಏರಿಕೆ), 2022-23ರಲ್ಲಿ 5,550 ಕೋಟಿ ರೂ. (ಶೇ 1 ಏರಿಕೆ), 2023-24 5,600 ಕೋಟಿ ರೂ. (ಶೇ 1 ಏರಿಕೆ) ಸಾಲ ಮಂಜೂರಾಗಿತ್ತು. ಆದರೆ, ಈ ಬಾರಿ (2024-25) 2,340 ಕೋಟಿ ರೂ ಸಾಲ ಮಂಜೂರಿಗೆ ನಬಾರ್ಡ್‌ ನಿರ್ಧರಿಸಿದ್ದು, ಶೇ 58 ಇಳಿಕೆಯಾದಂತಾಗಿದೆ. ನಬಾರ್ಡ್ ಶೇ.4.5 ರಿಯಾಯಿತಿ ಬಡ್ಡಿ ದರದಲ್ಲಿ ವಾರ್ಷಿಕ ಅಲ್ಪಾವಧಿ ಕೃಷಿ ಸಾಲದ ಮಿತಿ ನಿಗದಿಪಡಿಸುತ್ತಿದ್ದು, ಅದು ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಣೆಯಾಗುತ್ತದೆ. ಆದರೆ, ಕಳೆದ ವರ್ಷ 5,600 ಕೋಟಿ ರೂ. ಇದ್ದ ಸಾಲದ ಮಿತಿಯನ್ನು ನಬಾರ್ಡ್ ಈ ವರ್ಷ ಶೇ. 58 ಕಡಿತಗೊಳಿಸಿ 2,340 ಕೋಟಿ ರೂ.ಗಳನ್ನಷ್ಟೇ ಮಂಜೂರು ಮಾಡಿರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.

ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ರಾಷ್ಟ್ರೀಯ ಬ್ಯಾಂಕ್‌ನಿಂದ ರಾಜ್ಯಕ್ಕೆ ಬರಬೇಕಾದ ಸಾಲದ ಮೊತ್ತ ಇಳಿಕೆ ಮಾಡಿ ಕರ್ನಾಟಕದ ಕುರಿತಂತೆ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಈ ನಿಲುವನ್ನು ಖಂಡಿಸಿ ಈ ಸಂಬಂಧ ಚರ್ಚಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಿ.ಎಂ ಭೇಟಿ ಮಾಡಿ ತಮಗೆ ಆಗುತ್ತಿರುವ ಅನ್ಯಾಯವನ್ನು ಸರಿದೂಗಿಸಲು ಮನವಿ ಮಾಡಿದ್ದಾರೆ.

Read More
Next Story