Karnataka By-Election | ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ; ಬಿಜೆಪಿ-ಜೆಡಿಎಸ್‌ಗೆ ಭಾರೀ ಮುಖಭಂಗ
x

Karnataka By-Election | ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಜಯಭೇರಿ; ಬಿಜೆಪಿ-ಜೆಡಿಎಸ್‌ಗೆ ಭಾರೀ ಮುಖಭಂಗ

ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದು, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟದ ತಂತ್ರಗಾರಿಕೆಗಳು ನೆಲಕಚ್ಚಿವೆ. ಮೂರು ಕ್ಷೇತ್ರಗಳ ಪೈಕಿ ಒಬ್ಬರು ಮಹಿಳೆ ಮತ್ತು ಒಬ್ಬರು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳು ಗೆಲುವು ಪಡೆದಿದ್ದು, ಇದೇ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸುತ್ತಿದ್ದಾರೆ.


ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಮುಕ್ತಾಯವಾಗಿದ್ದು, ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ಸೇರಿ ಮೂರೂ ಕಡೆ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಮೂರೂ ಕಡೆ ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿ ಮತ್ತು ಜೆಡಿಎಸ್‌ನ ಎನ್‌ಡಿಎ ಮೈತ್ರಿಕೂಟ ಭಾರೀ ಮುಖಭಂಗ ಅನುಭವಿಸಿದೆ.

ಯಾವ ಕ್ಷೇತ್ರದಲ್ಲೂ ಆಡಳಿತರೂಢ ಕಾಂಗ್ರೆಸ್‌ ಗೆಲ್ಲುವ ಸಾಧ್ಯತೆಗಳೇ ಇಲ್ಲ ಎಂದು ಹೇಳಿದ್ದ ಮತದಾನೋತ್ತರ ಸಮೀಕ್ಷೆಗಳನ್ನು ತಲೆಕೆಳಗು ಮಾಡಿರುವ ಮತದಾರ, ಮೂರೂ ಕಡೆ ಭಾರೀ ಬಹುಮತದೊಂದಿಗೆ ಆಡಳಿತ ಪಕ್ಷಕ್ಕೆ ಅನುಮೋದನೆ ನೀಡಿದ್ದಾನೆ. ಆ ಮೂಲಕ ಬಿಜೆಪಿ ಮತ್ತು ಜೆಡಿಎಸ್‌ನ ಚುನಾವಣಾ ತಂತ್ರಗಳು ಮತ್ತು ವಿಭಜನೆಯ ರಾಜಕಾರಣ(ವಕ್ಫ್‌ ವಿಷಯ)ಕ್ಕೆ ಮತದಾರ ಮಣೆ ಹಾಕಿಲ್ಲ ಎಂಬುದನ್ನು ಈ ಉಪ ಚುನಾವಣೆ ಸಾರಿ ಹೇಳಿದೆ.

ಅಲ್ಲದೆ, ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ರಾಜ್ಯದ ಮತದಾರರು ಈಗಲೂ ವಿಶ್ವಾಸವಿಟ್ಟಿದ್ದಾರೆ ಮತ್ತು ಮುಡಾ ಮತ್ತು ವಾಲ್ಮೀಕಿ ನಿಗಮ ಪ್ರಕರಣಗಳ ಹೊರತಾಗಿಯೂ ಸಿಎಂ ಸಿದ್ದರಾಮಯ್ಯ ಅವರ ಆಡಳಿತದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿಲ್ಲ ಎಂಬುದನ್ನೂ ಈ ಫಲಿತಾಂಶ ಹೇಳುತ್ತಿರುವಂತಿದೆ.

ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಪೆಟ್ಟು

ಒಕ್ಕಲಿಗರ ಭದ್ರಕೋಟೆ ಹಾಗೂ ಜೆಡಿಎಸ್‌ ಅಧಿನಾಯಕ, ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ಕುಟುಂಬದ ಪ್ರಭಾವದ ಕ್ಷೇತ್ರ ಎಂದೇ ಹೇಳಲಾಗುತ್ತಿದ್ದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿ, ಗೌಡರ ಕುಟುಂಬ ರಾಜಕಾರಣವನ್ನು ತಿರಸ್ಕರಿಸಿದ್ದಾರೆ.

ಪ್ರಚಾರ ಕಣದಲ್ಲಿ ಭಾರೀ ಆರೋಪ- ಪ್ರತ್ಯಾರೋಪ, ವಾಗ್ವಾದ, ವಾಗ್ದಾಳಿಗಳ ರಾಜಕೀಯ ಜಿದ್ದಾಜಿದ್ದಿಯ ಕಾರಣಕ್ಕೆ ತೀವ್ರ ಕುತೂಹಲ ಕೆರಳಿಸಿದ್ದ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ್ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ ಅವರಿಗಿಂತ ಬರೋಬ್ಬರಿ 25,357 ಅಧಿಕ ಮತಗಳ ಅಂತರದಿಂದ ಗೆಲುವು ಪಡೆದಿದ್ದಾರೆ. ಯೋಗೇಶ್ವರ್‌ ಅವರು 1,12,388 ಮತಗಳನ್ನು ಪಡೆದಿದ್ದರೆ, ಪ್ರತಿಸ್ಪರ್ಧಿ ನಿಖಿಲ್‌ ಕುಮಾರಸ್ವಾಮಿ ಅವರು 87,031 ಮತಗಳನ್ನು ಪಡೆದುಕೊಂಡಿದ್ದಾರೆ.

ಚುನಾವಣೆ ಘೋಷಣೆಯಾದ ಬಳಿಕ ಟಿಕೆಟ್‌ ವಂಚಿತರಾಗಿ ಬಿಜೆಪಿ ತೊರೆದು ತಮ್ಮ ಮೂಲ ಪಕ್ಷ ಕಾಂಗ್ರೆಸ್‌ ಸೇರಿದ್ದ ಮಾಜಿ ಸಚಿವ ಸಿ ಪಿ ಯೋಗೇಶ್ವರ್‌, ಕಾಂಗ್ರೆಸ್‌ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಹಾಗೂ ಅವರ ಸಹೋದರ, ಮಾಜಿ ಸಂಸದ ಡಿ ಕೆ ಸುರೇಶ್‌ ಅವರ ಬಲದೊಂದಿಗೆ ಚುನಾವಣಾ ಕಣಕ್ಕಿಳಿದಿದ್ದರು.

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಚುನಾವಣಾ ತಂತ್ರಗಾರಿಕೆ ಹಾಗೂ ಅಭ್ಯರ್ಥಿ ನಿಖಿಲ್ ಅವರ ಕಣ್ಣೀರಿನ ಕೋರಿಕೆಗಳಿಗೆ ಮಣೆ ಹಾಕಿಲ್ಲ ಎಂಬುದನ್ನು ಈ ಫಲಿತಾಂಶ ತೋರಿಸಿದೆ.

ಸಂಡೂರಿನಲ್ಲಿ ಗೆದ್ದ ಸಿ ಅನ್ನಪೂರ್ಣ

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಸಿ ಅನ್ನಪೂರ್ಣ ಅವರು ತಮ್ಮ ಮೊದಲ ಯತ್ನದಲ್ಲೇ ವಿಧಾನಸಭೆಗೆ ಪ್ರವೇಶ ಪಡೆದಿದ್ದು, ಬಿಜೆಪಿಯ ಬಂಗಾರು ಹನುಮಂತ ವಿರುದ್ಧ 9,645 ಮತಗಳ ಅಂತರದ ಜಯ ಪಡೆದಿದ್ದಾರೆ.

ಹಾಲಿ ಸಂಸದ ಹಾಗೂ ಕ್ಷೇತ್ರದ ಮಾಜಿ ಶಾಸಕ ಇ ತುಕಾರಾಂ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕಿಳಿದಿದ್ದ ಅನ್ನಪೂರ್ಣ ಅವರು 93,616 ಮತಗಳನ್ನು ಪಡೆದಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಬಂಗಾರು ಹನುಮಂತ ಅವರು 83,967 ಮತಗಳನ್ನು ಪಡೆದಿದ್ದಾರೆ.

ಬಳ್ಳಾರಿ ಗಣಿ ರೆಡ್ಡಿಗಳ ಅಬ್ಬರದ ಪ್ರಚಾರ ತಂತ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ತಂತ್ರಗಾರಿಕೆಯ ಹೊರತಾಗಿಯೂ ಕ್ಷೇತ್ರದ ಮತದಾರ ಕಾಂಗ್ರೆಸ್‌ ಅಭ್ಯರ್ಥಿಗೆ ಮಣೆ ಹಾಕಿದ್ದಾರೆ.

ಸಚಿವ ಸಂತೋಷ್‌ ಲಾಡ್‌ ಅವರ ಚುನಾವಣಾ ತಂತ್ರಗಾರಿಕೆ ಮತ್ತು ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಯಶಸ್ಸು ಅನ್ನಪೂರ್ಣ ಅವರ ಕೈಹಿಡಿದಿದೆ ಎನ್ನಲಾಗುತ್ತಿದೆ.

ಬೊಮ್ಮಾಯಿ ಕೈತಪ್ಪಿದ ಶಿಗ್ಗಾವಿ

ಶಿಗ್ಗಾವಿ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್‌ ಅಹಮದ್‌ ಖಾನ್‌ ಪಠಾಣ್‌ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಭರತ್ ಬೊಮ್ಮಾಯಿ ವಿರುದ್ಧ 13 ಸಾವಿರಕ್ಕೂ ಹೆಚ್ಚು ಮತಗಳ ಅಂತರದ ಜಯ ದಾಖಲಿಸಿದ್ದಾರೆ.

ಪಠಾಣ್‌ ಅವರು 1,00,587 ಮತಗಳನ್ನು ಪಡೆದಿದ್ದು, ಅವರ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿಯ ಭರತ್‌ ಬೊಮ್ಮಾಯಿ ಅವರು 86,960 ಮತಗಳನ್ನು ಪಡೆದಿದ್ದಾರೆ. ಆ ಮೂಲಕ ಪಠಾಣ್‌ ಅವರು 13,448 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದ ಶಿಗ್ಗಾವಿಯಲ್ಲಿ ವಂಶ ರಾಜಕಾರಣಕ್ಕೆ ಮಣೆ ಹಾಕದ ಮತದಾರ, ಕಾಂಗ್ರೆಸ್‌ ಯಾಸೀರ್ ಖಾನ್ ಪಠಾಣ್ ಅವರಿಗೆ ವಿಧಾನಸಭಾ ಪ್ರವೇಶಕ್ಕೆ ಹಸಿರು ನಿಶಾನೆ ತೋರಿದ್ದಾರೆ. ನಾಲ್ಕು ಬಾರಿ ಬಿಜೆಪಿ ಸತತ ಗೆಲುವು ಪಡೆದಿದ್ದ ಶಿಗ್ಗಾವಿ ಕ್ಷೇತ್ರದಲ್ಲಿ ಜಯ ದಾಖಲಿಸುವ ಮೂಲಕ ಯಾಸೀರ್‌ ಖಾನ್‌ ಪಠಾಣ್‌, ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ತಂದಿದ್ದಾರೆ.

ಒಟ್ಟಾರೆ, ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಿದ್ದು, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟದ ತಂತ್ರಗಾರಿಕೆಗಳು ನೆಲಕಚ್ಚಿವೆ. ಮೂರು ಕ್ಷೇತ್ರಗಳ ಪೈಕಿ ಒಬ್ಬರು ಮಹಿಳೆ ಮತ್ತು ಒಬ್ಬರು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳು ಗೆಲುವು ಪಡೆದಿದ್ದು, ಇದೇ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಚನ್ನಪಟ್ಟಣ ಕ್ಷೇತ್ರದಿಂದ ಆಯ್ಕೆಯಾಗಿರುವ ಯೋಗೇಶ್ವರ್‌ ಈಗಾಗಲೇ ಐದು ಬಾರಿ ಶಾಸಕರಾಗಿದ್ದು, ಇದೀಗ ಆರನೇ ಬಾರಿಗೆ ವಿಧಾನಸಭೆಗೆ ಪ್ರವೇಶ ಪಡೆದಿದ್ದಾರೆ.

Read More
Next Story