
India-Pakistan War |ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ- ಪೊಲೀಸ್ ಆಯುಕ್ತರ ಎಚ್ಚರಿಕೆ
ಸಾಮಾಜಿಕ ಜಾಲತಾಣಗಳಲ್ಲಿ ಯುದ್ದ ಕುರಿತು ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಹೇಳಿದ್ದಾರೆ.
ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ನಂತರ ಭಾರತದ ವಿರುದ್ಧ ಪಾಕ್ ಅಪ್ರಚೋದಿತ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಕೂಡ ತಿರುಗಿ ಬಿದ್ದಿದೆ.
ಜಮ್ಮು-ಕಾಶ್ಮೀರ ಗಡಿಯಲ್ಲಿ ಶೆಲ್ ಹಾಗೂ ಡ್ರೋನ್ ದಾಳಿಯನ್ನು ಭಾರತ ತಡೆದಿದೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಯುದ್ದ ಕುರಿತು ಕೆಲವರು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಬಿ.ದಯಾನಂದ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತದ ಗಡಿ ಭಾಗಗಳಲ್ಲಿ ಪರಿಸ್ಥಿತಿ ಉಗ್ವಿಗ್ನವಾಗಿದೆ. ಸೇನಾಧಿಕಾರಿಗಳು ಅಧಿಕೃತ ಮಾಧ್ಯಮಗಳ ಮೂಲಕ ಮಾಹಿತಿ ಒದಗಿಸುತ್ತಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ಸಂಖ್ಯೆ ಹೆಚ್ಚಾಗಿದೆ. ಹಮಾಸ್, ಉಕ್ರೇನ್ ಹಾಗೂ ಇಸ್ರೇಲ್ ಯುದ್ಧದ ಸಂದರ್ಭದಲ್ಲಿ ಚಿತ್ರಗಳನ್ನು ಬಳಸಿ ಸುಳ್ಳು ಸುದ್ದಿ ಹರಡಲಾಗುತ್ತಿದೆ. ಇಂತಹ ಅನಧಿಕೃತ ಸುದ್ದಿಗಳನ್ನು ಹರಡುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೇ ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.
ಆಹಾರ ಧಾನ್ಯ ಕೊರತೆ ಸುಳ್ಳು ಸುದ್ದಿ
ಈ ಮಧ್ಯೆ ಪಂಜಾಬ್‌ನಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ ಎಂಬ ಸುಳ್ಳು ಸುದ್ದಿ ಹರಡಿದ್ದು, ಅದಕ್ಕೆ ಕೇಂದ್ರ ಆಹಾರ ಸಚಿವ ಪ್ರಹ್ಲಾದ ಜೋಶಿ ಅವರು ನವದೆಹಲಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಆಹಾರ ಕೊರತೆ ಇದೆ ಎಂಬುದು ಸುಳ್ಳು ಸುದ್ದಿ. ಈ ಹುಸಿ ವದಂತಿಗೆ ಯಾರೂ ಕಿವಿಗೊಡಬಾರದು ಎಂದು ಜೋಶಿ ಮನವಿ ಮಾಡಿದ್ದಾರೆ.
ಯುದ್ಧದ ಸನ್ನಿವೇಶದಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕಿಡಿಗೇಡಿಗಳ ಪ್ರಯತ್ನ ಇದಾಗಿದೆ. ಪಂಜಾಬ್‌ನಿಂದಲೇ ಸುಳ್ಳು ವದಂತಿ ಹಬ್ಬಿದೆ. ಆದರೆ, ದೇಶದ ಯಾವುದೇ ಸ್ಥಳದಲ್ಲೂ ಆಹಾರ ಪದಾರ್ಥ ಮತ್ತು ಅಗತ್ಯ ವಸ್ತುಗಳ ಕೊರತೆಯಿಲ್ಲ. ಅಗತ್ಯಕ್ಕಿಂತ ಹೆಚ್ಚು ದಾಸ್ತಾನು ಇದೆ. ಯಾರೊಬ್ಬರೂ ಆತಂಕಪಡಬೇಕಿಲ್ಲ ಎಂದು ಹೇಳಿದ್ದಾರೆ.