
ಬೆಂಗಳೂರಿನಲ್ಲಿ ಕಾಂಗ್ರೆಸ್ ವತಿಯಿಂದ ಸೇನಾಪಡೆಗಳಿಗೆ ಬೆಂಬಲ ಸೂಚಿಸಿ ತಿರಂಗಾ ಯಾತ್ರೆ ನಡೆಸಲಾಯಿತು
India-Pakistan War |ಸೇನಾಪಡೆ ಬೆಂಬಲಿಸಿ ತಿರಂಗಾ ಯಾತ್ರೆ ನಡೆಸಿದ ಕಾಂಗ್ರೆಸ್
ʼಉತ್ತರ ಭಾರತದ ರಾಜ್ಯಗಳಿಗೆ ನೀಡಿರುವ ಸೂಚನೆಗಳನ್ನೇ ನಮಗೂ ಕೇಂದ್ರ ಸರ್ಕಾರ ನೀಡಿದೆ. ಎಲ್ಲ ಜಿಲ್ಲೆಗಳ ಎಸ್ಪಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದೇವೆ. ಸ್ಲೀಪರ್ ಸೆಲ್‌ಗಳ ಮೇಲೂ ನಿಗಾ ಇರಿಸಲು ಹೇಳಿದ್ದೇವೆʼ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
'ಆಪರೇಷನ್ ಸಿಂದೂರʼ ಹೆಸರಿನಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಕೈಗೊಂಡಿರುವ ಸೇನಾ ಕಾರ್ಯಾಚರಣೆಗೆ ಬೆಂಬಲ ಸೂಚಿಸಿ ರಾಜ್ಯ ಕಾಂಗ್ರೆಸ್ ವತಿಯಿಂದ ಬೆಂಗಳೂರಿನಲ್ಲಿ ಶುಕ್ರವಾರ ತಿರಂಗಾ ಯಾತ್ರೆ ನಡೆಸಲಾಯಿತು.
ಬೆಂಗಳೂರಿನ ಕೆ.ಆರ್. ವೃತ್ತದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸರ್ಕಾರದ ಸಚಿವರು, ಪಕ್ಷದ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ತಿರಂಗಾ ಯಾತ್ರೆಯಲ್ಲಿ ಪಾಲ್ಗೊಂಡರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ʼನಾವು ನಮ್ಮ ಸೈನಿಕರ ಪರ ಇದ್ದೇವೆ. ಅದಕ್ಕಾಗಿ ಈ ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದೇವೆ' ಎಂದರು.
ʼಭದ್ರತೆಗೆ ಸಂಬಂಧಿಸಿ ಉತ್ತರ ಭಾರತದ ರಾಜ್ಯಗಳಿಗೆ ನೀಡಿರುವ ಸೂಚನೆಗಳನ್ನೇ ನಮಗೂ ಕೇಂದ್ರ ಸರ್ಕಾರ ಕೊಟ್ಟಿದೆ. ನಾವು ಆರಂಭದಿಂದಲೂ ಎಲ್ಲ ಜಿಲ್ಲೆಗಳ ಎಸ್ಪಿಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ್ದೇವೆ. ಸ್ಲೀಪರ್ ಸೆಲ್‌ಗಳ ಮೇಲೂ ನಿಗಾ ಇರಿಸಲು ಸೂಚಿಸಲಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳು, ಸ್ಥಳಗಳಿಗೆ ಭದ್ರತೆ ಒದಗಿಸಲಾಗಿದೆʼ ಎಂದು ತಿಳಿಸಿದರು.
ʼರಾಜ್ಯದಲ್ಲಿ ಹೆಚ್ಚುವರಿ ಭದ್ರತೆ ಒದಗಿಸುವ ಸಂಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗುವುದು. ಸಂಪುಟ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪ ಮಾಡಲಾಗುವುದುʼ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, 'ಇಡೀ ರಾಜ್ಯದಲ್ಲಿ ನಾವೆಲ್ಲರೂ ಒಂದಾಗಿದ್ದೇವೆ, ಒಟ್ಟಾಗಿದ್ದೇವೆ ಎಂಬ ಸಂದೇಶವನ್ನು ಭಾರತದ ಯೋಧರಿಗೆ ಕಳುಹಿಸಬೇಕು. ಕೇಂದ್ರ ಸರ್ಕಾರದ ನಿರ್ಧಾರದ ಪರ ನಾವೆಲ್ಲರೂ ನಿಲ್ಲಬೇಕು. ದೇಶವನ್ನು ಉಳಿಸೋಣ, ಯೋಧರಿಗೆ ಗೌರವ ಕೊಡೋಣ' ಎಂದರು.
ತಿರಂಗಾ ಯಾತ್ರೆಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ್, ಎಂ.ಸಿ. ಸುಧಾಕರ್, ದಿನೇಶ್ ಗುಂಡೂರಾವ್, ಕೃಷ್ಣ ಭೈರೇಗೌಡ, ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್ ಸೇರಿ ಸರ್ಕಾರದ ಎಲ್ಲಾ ಸಚಿವರು, ಪಕ್ಷದ ನಾಯಕರು ಭಾಗವಹಿಸಿದ್ದರು.