
ಮುಖ್ಯಮಂತ್ರಿಗಳಿಗೆ ಹೆಲಿಕಾಪ್ಟರ್, ವಿಮಾನ ಪ್ರಯಾಣ ಭಾಗ್ಯ; ಯಾರ ಅವಧಿಯಲ್ಲಿ ಎಷ್ಟು ಖರ್ಚು?
2013 ನೇ ಸಾಲಿನಿಂದ 2025 ನವೆಂಬರ್ವರೆಗೆ ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಹಾಗೂ ವಿಮಾನ ಪ್ರಯಾಣಕ್ಕೆ ಸರ್ಕಾರ ವ್ಯಯಿಸಿರುವ ಹಣವು ಹುಬ್ಬೇರಿಸುವಂತಿದೆ. ಯಾರ ಅವಧಿಯಲ್ಲಿ ವೈಮಾನಿಕ ಪ್ರಯಾಣಕ್ಕೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎಂಬುದು ಕುತೂಹಲ ಕೆರಳಿಸುವಂತಿದೆ.
ಮುಖ್ಯಮಂತ್ರಿ, ರಾಜ್ಯಪಾಲರು, ಸಂಪುಟ ಸಚಿವರು ಹಾಗೂ ಗಣ್ಯರ ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕಾಗಿ ರಾಜ್ಯ ಸರ್ಕಾರ ಕೋಟಿ ಕೋಟಿ ರೂ. ತೆರಿಗೆ ಹಣ ಖರ್ಚು ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದಲ್ಲಿ ಕಳೆದ ಹತ್ತು ವರ್ಷಗಳಿಂದ ಸಿಎಂ, ರಾಜ್ಯಪಾಲರು, ಸಚಿವರ ವೈಮಾನಿಕ ಪ್ರಯಾಣಕ್ಕಾಗಿ ಬರೋಬ್ಬರಿ 96.65 ಕೋಟಿ ವ್ಯಯಿಸಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.
2013 ನೇ ಸಾಲಿನಿಂದ 2025 ನವೆಂಬರ್ವರೆಗೆ ಮುಖ್ಯಮಂತ್ರಿಗಳ ಹೆಲಿಕಾಪ್ಟರ್ ಹಾಗೂ ವಿಮಾನ ಪ್ರಯಾಣಕ್ಕೆ ಸರ್ಕಾರ ವ್ಯಯಿಸಿರುವ ಹಣವು ಹುಬ್ಬೇರಿಸುವಂತಿದೆ. ಯಾರ ಅವಧಿಯಲ್ಲಿ ವೈಮಾನಿಕ ಪ್ರಯಾಣಕ್ಕೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎಂಬುದು ಕುತೂಹಲ ಕೆರಳಿಸುವಂತಿದೆ.
2023ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ಅವರು ಕಳೆದ ಎರಡೂವರೆ ವರ್ಷದಲ್ಲಿ ಹೆಲಿಕಾಪ್ಟರ್ ಹಾಗೂ ವಿಮಾನ ಪ್ರಯಾಣಕ್ಕಾಗಿ 47 ಕೋಟಿ ರೂ. ವ್ಯಯಿಸಿದ್ದಾರೆ. ಇದು ರಾಜ್ಯದ ಮುಖ್ಯಮಂತ್ರಿಗಳ ಪೈಕಿಯೇ ಅತಿ ಹೆಚ್ಚು ವ್ಯಯಿಸಿದರಲ್ಲಿ ಮೊದಲಿಗರಾಗಿದ್ದಾರೆ. ಸಿಎಂ ಅವರ ವೈಮಾನಿಕ ವೆಚ್ಚಗಳ ಕುರಿತು ವಿರೋಧ ಪಕ್ಷಗಳು ಟೀಕಾಪ್ರಹಾರ ನಡೆಸಿದರೆ, ಬಿಜೆಪಿ ಹಾಗೂ ಜೆಡಿಎಸ್ ಅವಧಿಯಲ್ಲಿನ ವೈಮಾನಿಕ ಪ್ರಯಾಣದ ಖರ್ಚುಗಳ ಚರ್ಚೆಗಳು ಕೂಡ ಮುನ್ನೆಲೆಗೆ ಬಂದಿವೆ.
ಯಡಿಯೂರಪ್ಪ ಅವಧಿಯಲ್ಲಾದ ಖರ್ಚೆಷ್ಟು?
2008-11ರ ಅವಧಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೆಲಿಕಾಪ್ಟರ್ ಬಳಕೆಗಾಗಿ ಆರಂಭಿಕ 8 ತಿಂಗಳಲ್ಲಿ ಸುಮಾರು 2.53 ಕೋಟಿ ರೂ. ಖರ್ಚು ಮಾಡಿದ್ದರು. ಹೆಲಿಕಾಪ್ಟರ್ ಪ್ರಯಾಣಕ್ಕಾಗಿ ಸರಾಸರಿ ಮಾಸಿಕ ವೆಚ್ಚ ಸುಮಾರು 31 ಲಕ್ಷ ರೂ.ಗಳಾಗಿತ್ತು. ತಮ್ಮ ಹಿಂದಿನ ಮುಖ್ಯಮಂತ್ರಿಗಳಾದ ಧರಂ ಸಿಂಗ್ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಒಟ್ಟು ಅವಧಿಯ ವೆಚ್ಚಕ್ಕೆ ಹೋಲಿಸಿದರೆ ಯಡಿಯೂರಪ್ಪ ಅವರ ಹೆಲಿಕಾಪ್ಟರ್ ವೆಚ್ಚ ದುಬಾರಿಯಾಗಿತ್ತು.
ಜಗದೀಶ್ ಶೆಟ್ಟರ್ ಅವಧಿಯಲ್ಲಿ ಆದ ಖರ್ಚೆಷ್ಟು?
ಬಿಜೆಪಿ ಸರಕಾರದ ಕೊನೆ ಅವಧಿಯಲ್ಲಿ ಸಿಎಂ ಆಗಿದ್ದ ಜಗದೀಶ್ ಶೆಟ್ಟರ್ ಕೇವಲ ಎಂಟು ತಿಂಗಳಲ್ಲಿ ವೈಮಾನಿಕ ಹಾರಾಟಕ್ಕೆ 12.77 ಕೋಟಿ ರೂ. ಖರ್ಚು ಮಾಡಿದ್ದರು. ಚುನಾವಣೆ ಘೋಷಣೆಯಾಗುವ ಮುನ್ನ ಪಕ್ಷದ ಕಾರ್ಯಕ್ರಮಗಳಿಗಾಗಿ 2013 ಮಾರ್ಚ್ನಲ್ಲಿ ವಿಶೇಷ ವಿಮಾನಕ್ಕಾಗಿ 42,66,815. ಪಾವತಿಸಿದ್ದನ್ನು ಸ್ಮರಿಸಬಹುದು.
ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಆದ ಖರ್ಚು ಎಷ್ಟು?
ಸಿದ್ದರಾಮಯ್ಯ ಅವರು 2013 ರಿಂದ 18 ರವರೆಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೆಲಿಕಾಪ್ಟರ್ ಪ್ರಯಾಣಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿದ್ದರು.
2013-14 ರಲ್ಲಿ 9,69,50,098 ರೂ. ವ್ಯಯಿಸಲಾಗಿದೆ. 2014-15 ರಲ್ಲಿ 6,10,40,773 ರೂ., 2015-16 ರಲ್ಲಿ 6,89,45,646 ರೂ., 2016-17 ರಲ್ಲಿ 8,29,04,994 ರೂ., 2017-18 ರಲ್ಲಿ 17,73,25,113 ರೂ. 2018-19 ರಲ್ಲಿ 5,83,14,951 ರೂ. ಗಳನ್ನು ವೈಮಾನಿಕ ಪ್ರಯಾಣಕ್ಕೆ ವ್ಯಯಿಸಲಾಗಿತ್ತು.
2019-2021ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಲಾಕ್ಡೌನ್ ಕಾರಣ ಅನಗತ್ಯ ಪ್ರಯಾಣಗಳಿಗೆ ಕಡಿವಾಣ ಹಾಕಿದ್ದರು. ಪ್ರವಾಸಗಳು ಕೂಡ ಕಡಿಮೆಯಾದ್ದರಿಂದ ವೆಚ್ಚ ಹೆಚ್ಚಿರಲಿಲ್ಲ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವಂತೆ ವಿವಿಧ ಇಲಾಖೆಗಳಿಗೆ ಸ್ವತಃ ಯಡಿಯೂರಪ್ಪ ಅವರೇ ಸೂಚಿಸಿದ್ದರು.
ಕುಮಾರಸ್ವಾಮಿ ಅವಧಿಯ ಖರ್ಚೆಷ್ಟು?
ಎಚ್.ಡಿ. ಕುಮಾರಸ್ವಾಮಿ ಅವರು 2018ಮೇ 23ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ೨೦೧೯ ಜು. ೨೬ ರವರೆಗೆ ಅಧಿಕಾರ ನಡೆಸಿದ್ದರು. ಜೂನ್ 2019 ರಲ್ಲಿ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ಅದರ ಸಂಪೂರ್ಣ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಿದ್ದರು.
ತಮ್ಮ ಅವಧಿಯಲ್ಲೇ ಆರಂಭಿಸಲಾದ ಮಹತ್ವಾಕಾಂಕ್ಷೆಯ "ಗ್ರಾಮ ವಾಸ್ತವ್ಯ" ಕಾರ್ಯಕ್ರಮದ ಸಂದರ್ಭದಲ್ಲಿ ಹೆಲಿಕಾಪ್ಟರ್ ಬಳಕೆ ಮತ್ತು ಇತರೆ ವ್ಯವಸ್ಥೆಗಳಿಗೂ ಸರ್ಕಾರದ ಹಣ ವ್ಯಯಿಸಿದ್ದರು. ಯಾದಗಿರಿ ಜಿಲ್ಲೆಯ ಚಂಡರಕಿ ಗ್ರಾಮದ ವಾಸ್ತವ್ಯಕ್ಕೆ ಸುಮಾರು 1 ಕೋಟಿ ರೂ,ಗಳಿಗೂ ಹೆಚ್ಚು ವೆಚ್ಚ ಮಾಡಿದ್ದರ. ಇದು ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು.
ಇದಕ್ಕೂ ಹಿಂದೆ 2006-07 ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಹೆಲಿಕಾಪ್ಟರ್ ಪ್ರಯಾಣಕ್ಕಾಗಿ ಮಾಜಿ ಸಿಎಂ ಧರಂ ಸಿಂಗ್ ಜತೆಗೂಡಿ ಒಟ್ಟು 5.39 ಕೋಟಿ ರೂ. ಖರ್ಚು ಮಾಡಿದ್ದರು. ಆ ಅವಧಿಯಲ್ಲಿ ಸರಾಸರಿ ತಿಂಗಳಿಗೆ ಸುಮಾರು 17 ಲಕ್ಷ ರೂ. ಹೆಲಿಕಾಪ್ಟರ್ ಪ್ರಯಾಣಕ್ಕೆ ಖರ್ಚು ಮಾಡಿದ್ದರು.
ಬೊಮ್ಮಾಯಿ ಅವಧಿಯಲ್ಲಿ ವ್ಯಯಿಸಿದ ಹಣವೆಷ್ಟು?
2022-23ರಲ್ಲಿ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ 18 ತಿಂಗಳಲ್ಲಿ ವೈಮಾನಿಕ ಪ್ರಯಾಣಕ್ಕಾಗಿ 23.67 ಕೋಟಿ ರೂ. ಖರ್ಚು ಮಾಡಿದ್ದರು.
ತಮ್ಮ ಹಿಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ಹೋಲಿಸಿದರೆ 7.25 ಕೋಟಿ ರೂ. ಹೆಚ್ಚು ಖರ್ಚು ಮಾಡಿದ್ದರು. ಬೊಮ್ಮಾಯಿ ಅವರು ಹೊರರಾಜ್ಯಗಳಿಗಿಂತಲೂ ರಾಜ್ಯದೊಳಗೇ ಅತಿ ಹೆಚ್ಚು ಬಾರಿ ಹೆಲಿಕಾಪ್ಟರ್ ಬಳಸಿದ್ದರು. ಬೆಂಗಳೂರಿನಿಂದ ಒಂದು ಗಂಟೆಯಲ್ಲಿ ಪ್ರಯಾಣಿಸಬಹುದಾದ ತುಮಕೂರಿಗೂ ಹೆಲಿಕಾಪ್ಟರ್ನಲ್ಲಿ ತೆರಳಿದ್ದರು.
ಸಿದ್ದರಾಮಯ್ಯ ಎರಡನೇ ಅವಧಿಯ ಖರ್ಚೆಷ್ಟು?
2023 ರಿಂದ 2025 ನವೆಂಬರ್ವರೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಹೆಲಿಕಾಪ್ಟರ್ ಹಾಗೂ ವಿಶೇಷ ವಿಮಾನ ಬಳಕೆಗಾಗಿ ರಾಜ್ಯ ಸರ್ಕಾರ 47,38,24,347 ಕೋಟಿ ರೂ. ಖರ್ಚು ಮಾಡಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಹೋಗಲು ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್, ಚಾರ್ಟರ್ ವಿಮಾನ ಬಳಸಿದ್ದಾರೆ. ದೆಹಲಿ, ಹೈದರಾಬಾದ್, ಚೆನೈ ಸೇರಿದಂತೆ ವಿವಿಧೆಡೆ ಪ್ರಯಾಣಿಸಲು ಹೆಲಿಕಾಪ್ಟರ್ ಬಳಸಲಾಗಿದೆ.
2023-24 ರಲ್ಲಿ 12,23,44,365 ರೂ, 2024-25 ರಲ್ಲಿ 21,11,38,784 ರೂ.,
2025 ಏಪ್ರಿಲ್ ತಿಂಗಳಿಂದ ನವೆಂಬರ್ವರೆಗೆ 14,03,41,198 ರೂ ಸೇರಿ ಕಳೆದ ಎರಡೂವರೆ ವರ್ಷದಲ್ಲಿ ಒಟ್ಟು 47,38,24,347 ರೂ. ವ್ಯಯಿಸಲಾಗಿದೆ.
ಮೈಸೂರು ಪ್ರಯಾಣ ಒಂದಕ್ಕೆ ಕಳೆದ ಎರಡೂವರೆ ವರ್ಷದಲ್ಲಿ 5 ಕೋಟಿ ರೂ. ಭರಿಸಿದ್ದಾರೆ ಎಂಬುದು ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲ-ಸಾರಿಗೆ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ (ಕಟ್ಟಡಗಳ ವಿಭಾಗ) ಮಾಹಿತಿ ನೀಡಿದ್ದಾರೆ.
ಕಾನೂನಿನಲ್ಲಿ ಹೇಗಿದೆ ಅವಕಾಶ?
ರಾಜ್ಯಪಾಲರು, ಮುಖ್ಯಮಂತ್ರಿಗಳು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಅಧಿಕೃತ ಪ್ರವಾಸಕ್ಕಾಗಿ ವಿಶೇಷ ವಿಮಾನ, ಹೆಲಿಕಾಪ್ಟರ್ ಸೇವೆ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆ(ಕೆಟಿಪಿಪಿ)ಯ 4 ಜಿ ವಿನಾಯಿತಿ ನೀಡಲಾಗಿದೆ. ಇದರ ಅನ್ವಯ ಖಾಸಗಿ ಏರ್ ಚಾರ್ಟ್ ಸಂಸ್ಥೆಯಾದ ಜಿಎಂಪಿ ಏರ್ ಚಾರ್ಟರ್ಸ್ ಪ್ರೈವೇಟ್ ಲಿಮಿಟೆಡ್ ಸೇವೆ ನೀಡುತ್ತಿದೆ.
2013ರಿಂದ ಈವರೆಗೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳು, ಗಣ್ಯರು ಹೆಲಿಕಾಪ್ಟರ್ ಹಾಗೂ ವಿಮಾನ ಸೇವೆ ಬಳಸಿದ್ದು, ದರಗಳಲ್ಲೂ ಸಾಕಷ್ಟು ವ್ಯತ್ಯಾಸವಾಗಿದೆ.
ಹೆಲಿಕಾಪ್ಟರ್ ಪ್ರಯಾಣಕ್ಕೆ ದರ ನಿಗದಿ ಹೇಗೆ?
ಹೆಲಿಕಾಪ್ಟರ್ ಪ್ರಯಾಣಕ್ಕೆ ಕಿ.ಮೀ. ಅನುಗುಣವಾಗಿ ದರ ವಿಧಿಸುವುದಿಲ್ಲ. ಗಂಟೆಗಳ ಆಧಾರದ ಮೇಲೆ ಕಾರ್ಯಾಚರಣೆ ದರ ನಿಗದಿ ಮಾಡಲಾಗುತ್ತದೆ. ಸಣ್ಣ ಹೆಲಿಕಾಪ್ಟರ್ಗಳಿಗೆ ಗಂಟೆಗೆ 94,400 ರಿಂದ 1.5 ಲಕ್ಷ ದರ ನಿಗದಿ ಮಾಡಲಾಗುತ್ತದೆ. ದೊಡ್ಡ ಹೆಲಿಕಾಪ್ಟರ್ಗಳಿಗೆ ಗಂಟೆಗೆ 3 ರಿಂದ 4 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿರಲಿದೆ.
ಹೆಲಿಕಾಪ್ಟರ್ ಪ್ರಯಾಣ ದರವು ಪ್ರಯಾಣದ ಅವಧಿ, ಲ್ಯಾಂಡಿಂಗ್ ಶುಲ್ಕಗಳು ಮತ್ತು ವಿಶೇಷ ಅವಶ್ಯಕತೆಗಳ ಮೇಲೆ ಅವಲಂಬಿತವಾಗಿರಲಿವೆ. ಕೆಲವೊಮ್ಮೆ ನಿಮಿಷಗಳ ಕಾರ್ಯಾಚರಣೆಗೂ ಕನಿಷ್ಠ ಒಂದು ಗಂಟೆಯ ಶುಲ್ಕ ವಿಧಿಸಲಾಗುತ್ತದೆ.

