ಅಂಗನವಾಡಿಗೆ ಸಂಚಕಾರ | ವೇತನವಿಲ್ಲ, ವೆಚ್ಚವಿಲ್ಲ; ನಿಜವಾಗುತ್ತಿದೆಯೇ ಕಾರ್ಯಕರ್ತೆಯರ ಆತಂಕ?
x

ಅಂಗನವಾಡಿಗೆ ಸಂಚಕಾರ | ವೇತನವಿಲ್ಲ, ವೆಚ್ಚವಿಲ್ಲ; ನಿಜವಾಗುತ್ತಿದೆಯೇ ಕಾರ್ಯಕರ್ತೆಯರ ಆತಂಕ?

ಅಂಗನವಾಡಿಗೆ ಪರ್ಯಾಯವಾಗಿ ರಾಜ್ಯ ಶಿಕ್ಷಣ ಇಲಾಖೆ ಶಾಲೆಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಿರುವ ಬೆನ್ನಲ್ಲೇ ಕಳೆದ ಮೂರು ತಿಂಗಳುಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನ ಹಾಗೂ ಪೌಷ್ಟಿಕ ಆಹಾರ ವೆಚ್ಚ ಸೇರಿದಂತೆ ಯಾವುದೇ ಹಣಕಾಸು ನೆರವು ನೀಡದೆ ಸತಾಯಿಸಲಾಗುತ್ತಿದೆ.


ಅಂಗನವಾಡಿಗೆ ಪರ್ಯಾಯವಾಗಿ ರಾಜ್ಯ ಶಿಕ್ಷಣ ಇಲಾಖೆ ಶಾಲೆಗಳಲ್ಲೇ ಎಲ್‌ಕೆಜಿ, ಯುಕೆಜಿ ಆರಂಭಿಸಿರುವ ಬೆನ್ನಲ್ಲೇ ಕಳೆದ ಮೂರು ತಿಂಗಳುಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನ ಹಾಗೂ ಪೌಷ್ಟಿಕ ಆಹಾರ ವೆಚ್ಚ ಸೇರಿದಂತೆ ಯಾವುದೇ ಹಣಕಾಸು ನೆರವು ನೀಡದೆ ಸತಾಯಿಸಲಾಗುತ್ತಿದೆ.

ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೆಕೆಆರ್‌ಡಿಬಿ ಯೋಜನೆಯಡಿಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಬೆಂಗಳೂರು ನಗರ ಸೇರಿದಂತೆ ರಾಜ್ಯದ ಸುಮಾರು ಎರಡು ಸಾವಿರ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ - ಯುಕೆಜಿ ತರಗತಿಗಳನ್ನು ಆರಂಭಿಸಿದೆ.

ಸರ್ಕಾರದ ಈ ನಿರ್ಧಾರದಿಂದ ಅಂಗನವಾಡಿಗಳಿಗೆ ಮಕ್ಕಳು ನೇರವಾಗಿ ಶಾಲೆಗಳಲ್ಲಿ ಆರಂಭಿಸಿರುವ ಎಲ್‌ಕೆಜಿ -ಯುಕೆಜಿ ತರಗತಿಗೆ ಪ್ರವೇಶ ಪಡೆಯಲಿದ್ದಾರೆ. ಹಾಗಾಗಿ ಅಂಗನವಾಡಿಗಳು ಮಕ್ಕಳಿಲ್ಲದೆ ಮುಚ್ಚುವ ಸ್ಥಿತಿ ಬರಲಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಆತಂಕ ವ್ಯಕ್ತಪಡಿಸಿದ್ದರು. ಆದರೆ ಸರ್ಕಾರ ತನ್ನದೇ ಸಮಜಾಯಿಷಿ ನೀಡಿ ಅಂಗನವಾಡಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಮಾತನಾಡಿತ್ತು.

ಆದರೆ, ಶಾಲೆಗಳಲ್ಲಿ ಎಲ್‌ಕೆಜಿ ತರಗತಿಗಳು ಆರಂಭವಾಗಿ ಮೂರು ತಿಂಗಳು ಕಳೆಯುವುದರೊಳಗೆ ಅದರ ಪರಿಣಾಮ ಅಂಗನವಾಡಿಗಳ ಮೇಲಾಗಿದ್ದು, ಕಳೆದ ಮೂರು ತಿಂಗಳುಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ವೇತನ ಬಿಡುಗಡೆಯಾಗಿಲ್ಲ. ಅಷ್ಟೇ ಅಲ್ಲ; ಮಕ್ಕಳು, ಬಾಣಂತಿಯರು ಮತ್ತು ಗರ್ಭಿಣಿಯರಿಗೆ ನೀಡುವ ಮೊಟ್ಟೆ, ಪೌಷ್ಟಿಕ ಆಹಾರ ಮತ್ತು ಸೊಪ್ಪು-ತರಕಾರಿಯ ವೆಚ್ಚವನ್ನೂ ಬಿಡುಗಡೆ ಮಾಡಿಲ್ಲ. ಜೊತೆಗೆ ಅಂಗನವಾಡಿ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಕೆಲಸ ನಿರ್ವಹಿಸಲು ನೀಡಿರುವ ಮೊಬೈಲ್‌ ಸಿಮ್‌ಗೆ ಕಳೆದ ಒಂದು ವರ್ಷದಿಂದ ಕರೆನ್ಸಿಯನ್ನು ಕೂಡ ಹಾಕಿಸಿಲ್ಲ!

ಹಾಗೇ ಈ ಹಿಂದೆ ನೀಡುತ್ತಿದ್ದ ಮೊಳಕೆ ಕಾಳು, ಚಿಕ್ಕಿ ಮತ್ತು ಕಾಳು-ಬೇಳೆ ಸರಬರಾಜನ್ನು ಕೂಡ ಸರ್ಕಾರ ಕಳೆದ ಮೂರು ತಿಂಗಳುಗಳಿಂದ ಸ್ಥಗಿತಗೊಳಿಸಿದೆ.

ಮೂರು ತಿಂಗಳಿಂದ ವೇತನ ಕಂಡಿಲ್ಲ!

ಶಾಲೆಗಳಲ್ಲಿ ಎಲ್‌ಕೆಜಿ ತರಗತಿಗಳನ್ನು ಆರಂಭಿಸಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳೂ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕಳೆದ ಮೂರು ತಿಂಗಳುಗಳಿಂದ ಅಂಗನವಾಡಿ ಸಿಬ್ಬಂದಿಗೆ ವೇತನ ನೀಡಿಲ್ಲ. ಇನ್ನೂ ಕೆಲವು ಜಿಲ್ಲೆಗಳಲ್ಲಿ ಎರಡು ತಿಂಗಳಿಂದ ವೇತನ ಬಾಕಿ ಇದೆ.

ಕೇವಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮಾತ್ರವಲ್ಲದೆ, ಐಸಿಡಿಎಸ್ ವ್ಯಾಪ್ತಿಯ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗೂ ಎರಡು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ ಎಂದು ನೌಕರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಹಾಗಾಗಿ, ಇಷ್ಟು ದಿನ ವೇತನ ಹೆಚ್ಚಳಕ್ಕಾಗಿ ಹೋರಾಟ ಮಾಡುತ್ತಿದ್ದ ಅಂಗನವಾಡಿ ಸಿಬ್ಬಂದಿ, ಇದೀಗ ವೇತನವನ್ನು ಸಕಾಲದಲ್ಲಿ ಪಾವತಿ ಮಾಡುವಂತೆ ಒತ್ತಾಯಿಸಿ ಬೀದಿಗಿಳಿಯುವ ಸ್ಥಿತಿ ನಿರ್ಮಾಣವಾಗಿದೆ.

ಕೋಲಾರದಿಂದ ಕೊಪ್ಪಳದವರೆಗೆ, ಕೊಡಗಿನಿಂದ ರಾಯಚೂರಿನವರೆಗೆ ಎಲ್ಲೆಡೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವೇತನಕ್ಕಾಗಿ ಕಳೆದ ಮೂರು ತಿಂಗಳುಗಳಿಂದ ಚಾತಕಪಕ್ಷಿಗಳಂತೆ ಕಾದಿದ್ದಾರೆ.

ವೇತನವಷ್ಟೇ ಅಲ್ಲದೆ, ಐಸಿಡಿಎಸ್ ಯೋಜನೆಯಡಿ ನೀಡಬೇಕಾದ ಇತರೆ ಅನುದಾನವನ್ನು ಕೂಡ ಸರ್ಕಾರ ನೀಡುತ್ತಿಲ್ಲ. ಮಕ್ಕಳು, ಬಾಣಂತಿಯರು ಹಾಗೂ ಗರ್ಭಿಣಿಯರಿಗೆ ನೀಡುವ ಮೊಟ್ಟೆ, ಮೊಳಕೆ ಕಾಳು, ಪೌಷ್ಟಿಕ ಆಹಾರ ಸಾಮಗ್ರಿ, ಸ್ಟೇಷನರಿ ಸಾಮಗ್ರಿ ಖರೀದಿಯಂತಹ ದೈನಂದಿನ ವೆಚ್ಚಗಳಿಗೂ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಕೈಯಿಂದ ಕಾಸು ಕರ್ಚು ಮಾಡಬೇಕಾದ ಸ್ಥಿತಿ ಬಂದಿದೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟುವುದು ಕೂಡ ದುಸ್ತರವಾಗಿದೆ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.

ದುಡ್ಡೇ ಕೊಡದೇ ದಬ್ಬಾಳಿಕೆ

ಅಂಗನವಾಡಿ ಮಕ್ಕಳಿಗೆ ಮೊಟ್ಟೆ ನೀಡಲು ಹಣವಿಲ್ಲದೇ ಇದ್ದರೂ, ಪೌಷ್ಟಿಕ ಆಹಾರ ವೆಚ್ಚದ ಹಣ ಬಿಡುಗಡೆ ಮಾಡದೇ ಇದ್ದರೂ ಸಿಬ್ಬಂದಿ ಮಾತ್ರ ಮಕ್ಕಳಿಗೆ ನಿತ್ಯ ಮೊಟ್ಟೆ ಸೇರಿದಂತೆ ಪೌಷ್ಟಿಕ ಆಹಾರ ನೀಡಲೇಬೇಕು ಮತ್ತು ಮೊಟ್ಟೆ ಸೇರಿದಂತೆ ಆಹಾರವನ್ನು ಮಕ್ಕಳು ಊಟ ಮಾಡುವ ವಿಡಿಯೋವನ್ನು ಪ್ರತಿನಿತ್ಯ ಇಲಾಖೆಗೆ ಕಳುಹಿಸಲೇಬೇಕು ಎಂಬ ಕಟ್ಟು ನಿಟ್ಟಿನ ನಿಯಮವನ್ನು ಮಾತ್ರ ಇಲಾಖೆ ಜಾರಿ ಮಾಡಿದೆ.

ಹಾಗಾಗಿಯೇ “ಮಕ್ಕಳ ತಟ್ಟೆಗೆ ಮೊಟ್ಟೆ ಹಾಕಿ ವಿಡಿಯೋ ಮಾಡಿ ಬಳಿಕ ಮೊಟ್ಟೆ ವಾಪಸ್ ತೆಗೆದುಕೊಂಡಂತಹ ಘಟನೆಗಳು ನಡೆದವು. ಖರೀದಿಗೆ ಹಣವನ್ನೇ ನೀಡದೆ, ವೇತನವನ್ನೂ ನೀಡದೆ ಇಲಾಖೆ, ಮೊಟ್ಟೆ ಕೊಡಿ, ಊಟ ಕೊಡಿ ಎಂದು ಸಿಬ್ಬಂದಿಗೆ ಒತ್ತಡ ಹಾಕಿದರೆ ಅವರಾದರೂ ಏನು ಮಾಡಿಯಾರು? ಹೇಳಿ..” ಎನ್ನುತ್ತಾರೆ ʼದ ಫೆಡರಲ್‌ ಕರ್ನಾಟಕʼದೊಂದಿಗೆ ಮಾತನಾಡಿದ (ಹೆಸರು ಹೇಳಲು ಇಚ್ಛಿಸದ) ಅಂಗನವಾಡಿ ಕಾರ್ಯಕರ್ತೆಯೊಬ್ಬರು.

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಘಟನೆಯ ಕುರಿತು ಅವರು ಪ್ರಸ್ತಾಪಿಸಿದರು.

“ಮಕ್ಕಳಿಗೆ ಶಿಕ್ಷಣದ ಅಡಿಪಾಯ ಹಾಕುವುದು ಮಾತ್ರವಲ್ಲದೆ ಅವರ ಆರೈಕೆಯನ್ನೂ ಮಾಡುವ, ಆಟ ಪಾಠವನ್ನು ನೋಡಿಕೊಳ್ಳುವ ನಮಗೆ, ಆ ಹೊಣೆಗಾರಿಕೆಯಷ್ಟೇ ಅಲ್ಲದೆ, ತನ್ನ ಎಲ್ಲಾ ಇಲಾಖೆಗಳ ಚಾಕರಿಗೂ ಬಳಸುವ ಸರ್ಕಾರ, ಎಲ್ಲಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಮತ್ತು ಅದರ ಸಾಧಕಬಾಧಕಗಳ ವರದಿಯನ್ನು ಅಂಕಿಅಂಶಗಳ ಸಹಿತ ತಯಾರಿಸುವ ನಮ್ಮನ್ನು ಇದೀಗ ಕಡೆಗಣಿಸುತ್ತಿದೆ. ಈಗಾಗಲೇ ಶಾಲೆಗಳಲ್ಲೇ ಎಲ್‌ಕೆಜಿ ಆರಂಭಿಸುವ ಮೂಲಕ ಪರ್ಯಾಯ ಅಂಗನವಾಡಿಗಳನ್ನು ತೆರೆದಿರುವ ಸರ್ಕಾರ, ಈ ಮೂಲಕ ಅಂಗನವಾಡಿಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆಯೇ?” ಎಂಬ ಆತಂಕ ನಮಗಿದೆ ಎನ್ನುತ್ತಾರೆ ಅವರು.

ಕೇಂದ್ರದ ಹಣ ಬಂದಿಲ್ಲ ಎಂಬ ಸಬೂಬು

ಈ ಕುರಿತು ʼದ ಫೆಡರಲ್ ಕರ್ನಾಟಕʼ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್ ವರಲಕ್ಷ್ಮಿ ಅವರನ್ನು ಮಾತನಾಡಿಸಿದಾಗ, “ಹೌದು, ಸರ್ಕಾರ ಅಂಗನವಾಡಿ ನೌಕರರನ್ನು ಇತ್ತೀಚೆಗೆ ನಿರ್ಲಕ್ಷಿಸುತ್ತಿದೆ ಎಂಬ ಭಾವನೆ ಇದೆ. ಹಲವು ಜಿಲ್ಲೆಗಳಲ್ಲಿ ಮೂರು ತಿಂಗಳುಗಳಿಂದ ಗೌರವಧನ ನೀಡಿಲ್ಲ. ಇನ್ನೂ ಕೆಲವು ಕಡೆ ಎರಡು ತಿಂಗಳ ಬಾಕಿ ಇದೆ. ಇಲಾಖೆಯನ್ನು ಕೇಳಿದರೆ, ಕೇಂದ್ರದಿಂದ ಬರಬೇಕಾದ ಪಾಲಿನ ಹಣ ಬಂದಿಲ್ಲ ಎನ್ನುತ್ತಿದ್ದಾರೆ” ಎಂದು ಸಮಸ್ಯೆಯನ್ನು ವಿವರಿಸಿದರು.

ಅಲ್ಲದೆ, “ವೇತನ ಮಾತ್ರವಲ್ಲದೆ ಅಂಗನವಾಡಿಗಳಿಗೆ ನೀಡಬೇಕಾದ ತಿಂಗಳ ಕರ್ಚುವೆಚ್ಚದ ಹಣವನ್ನು ಕೂಡ ಬಿಡಗಡೆ ಮಾಡಿಲ್ಲ. ಹಾಗಾಗಿ ಮೊಟ್ಟೆ, ತರಕಾರಿ, ಕಾಳುಬೇಳೆಯಂತಹ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು, ಅಂಗನವಾಡಿ ಕಟ್ಟಡಗಳ ಬಾಡಿಗೆ ಕಟ್ಟುವುದು ಕೂಡ ಕಷ್ಟವಾಗಿದೆ. ಅಂಗನವಾಡಿ ಸಿಬ್ಬಂದಿಯಿಂದ ಎಲ್ಲಾ ಇಲಾಖೆಗಳ ಚಾಕರಿ ಮಾಡಿಸಿಕೊಳ್ಳುವ ಸರ್ಕಾರ, ಕನಿಷ್ಟ ನಿರ್ವಹಣೆಯ ಹಣ ನೀಡುವುದಕ್ಕೂ ಕೇಂದ್ರದತ್ತ ಬೊಟ್ಟು ಮಾಡುವುದು ಸರಿಯಲ್ಲ. ಕೇಂದ್ರದಿಂದ ಹಣ ಬಂದ ಮೇಲೆ ನೀವು ತೆಗೆದುಕೊಳ್ಳಿ. ಆದರೆ, ಕೂಡಲೇ ಅಂಗನವಾಡಿ ಸಿಬ್ಬಂದಿ ವೇತನ ಮತ್ತು ನಿರ್ವಹಣೆಯ ಹಣ ಬಿಡುಗಡೆ ಮಾಡಿ ಎಂದು ಸರ್ಕಾರಕ್ಕೆ ಸಂಘ ಒತ್ತಾಯಿಸಿದೆ” ಎಂದು ವರಲಕ್ಷಿ ಅವರು ಮಾಹಿತಿ ನೀಡಿದರು.

ಬಾಯಿ ಬಿಟ್ಟರೆ ಜೋಕೆ: ಮಿನಿಸ್ಟ್ರು ಮೇಡಂ ಹುಕುಂ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಒಂದು ಕಡೆ ವೇತನವನ್ನೂ ನೀಡದೆ, ಮತ್ತೊಂದು ಕಡೆ ಮೊಟ್ಟೆ ಮತ್ತಿತರ ವಸ್ತುಗಳನ್ನು ತಪ್ಪದೇ ಸರಬರಾಜು ಮಾಡಬೇಕು ಎಂದೂ ಹೇಳುವ ಇಲಾಖೆ, ಎಲ್ಲಾ ಸೌಲಭ್ಯ, ಸೌಕರ್ಯಗಳನ್ನು ಕಡಿತ ಮಾಡಿ ಅಂಗನವಾಡಿ ಸಿಬ್ಬಂದಿಯ ಮೇಲೆ ದಬ್ಬಾಳಿಕೆ ನಡೆಸುತ್ತಿದೆ.

ಇಂತಹ ಅನ್ಯಾಯ, ಅವ್ಯವಸ್ಥೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ, ಯಾವುದೇ ವಿಷಯನ್ನು ಬಾಯಿ ಬಿಡದಂತೆ ಸಚಿವರು ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ ಎಂಬ ಸಂಗತಿಯೂ ಬಯಲಾಗಿದೆ.

ವೇತನ ಬಾಕಿ ಮತ್ತು ಆಹಾರ ವೆಚ್ಚ ಬಿಡುಗಡೆಯಾಗದೇ ಇರುವ ಬಗ್ಗೆ ʼದ ಫೆಡರಲ್ ಕರ್ನಾಟಕʼ ಪ್ರಶ್ನಿಸಿದಾಗ, “ಏನೋ ಆಗಿದೆ ಬಿಡಿ ಸರ್. ಅದರ ಬಗ್ಗೆ ಯಾರಿಗೆ ಹೇಳೋಣ. ನಮ್ಮ ನೋವು ಹೇಳಿಕೊಂಡರೆ ನಾಳೆ ನೀವು ಅದನ್ನೇ ಬರೀತೀರಿ. ಆ ಮ್ಯಾಗೆ ನಮಗೆ ಇರೋ ಕೆಲಸವೂ ಹೋದರೆ ಯಾರ್ ಬಂದು ನೋಡ್ತಾರೆ.. “ ಎಂದು ಕಾರ್ಯಕರ್ತೆಯೊಬ್ಬರು ಮಾಹಿತಿ ನೀಡಲು ಹಿಂಜರಿದರು.

ಬಳಿಕ ಯಾಕೆ ಆ ಹಿಂಜರಿಕೆ ಎಂಬುದನ್ನು ಕೆದಕಿದಾಗ, “ಇಲ್ಲ,.. ಮಿನಿಸ್ಟ್ರು ಮೇಡಂನವರು ಈಗಾಗಲೇ ಎಚ್ಚರಿಕೆ ಕೊಟ್ಟಿದಾರೆ. ಯಾವುದೇ ಸಮಸ್ಯೆ ಬಗ್ಗೆ ಮಾಧ್ಯಮದವರಿಗೆ ಏನೂ ಹೇಳಬೇಡಿ, ಯಾರಾದರೂ ಬಾಯಿ ಬಿಟ್ಟರೆ ಹುಷಾರ್.. ಅಂತ ವಾರ್ನಿಂಗ್ ಮಾಡಿದಾರೆ..” ಎಂದು ಅಸಲೀ ಸಂಗತಿ ಬಾಯಿಬಿಟ್ಟರು!

ಒಟ್ಟಾರೆ, ಅತ್ತ ಗೌರವ ಧನವೂ ಸಕಾಲಕ್ಕೆ ಕೈಸೇರಿ ಗೌರವ ಕಾಯುತ್ತಿಲ್ಲ; ಇತ್ತ ಮೊಟ್ಟೆ, ಕಾಳು ಕಡಿಯ ಕಾಸೂ ಸಿಗುತ್ತಿಲ್ಲ, ಹೋಗಲಿ ಮಾಡೋ ಕೆಲಸದ ಮಾಹಿತಿ ಕೊಡೋಣ ಎಂದರೂ ಅದಕ್ಕೆ ಮೊಬೈಲ್ ಕರೆನ್ಸಿಯೂ ಇಲ್ಲ! ಹೀಗಿದೆ ಭವಿಷ್ಯದ ಮಕ್ಕಳ ಭವಿಷ್ಯಕ್ಕೆ ಬುನಾದಿ ಹಾಕುವ ಅಂಗನವಾಡಿ ತಾಯಂದಿರ ಸ್ಥಿತಿ! ಇಂತಹ ದಾರುಣ ಸ್ಥಿತಿಯ ಹಿನ್ನೆಲೆಯಲ್ಲಿ ಅಂಗನವಾಡಿಗಳ ಅಸ್ತಿತ್ವ ಉಳಿಸಿಕೊಂಡು ಇನ್ನಷ್ಟು ಸಬಲೀಕರಣ ಮಾಡುವ ಮಾತನಾಡಿದ್ದ ಸರ್ಕಾರ, ಇದೀಗ ಯೂ ಟರ್ನ್‌ ಹೊಡೆದಿದೆಯೇ? ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ ಆರಂಭಿಸುವ ಮೂಲಕ ಸರ್ಕಾರ, ಅಂಗನವಾಡಿಗಳಿಗೆ ಸಂಚಕಾರ ತರಲಿದೆ ಎಂಬ ಸಿಬ್ಬಂದಿಯ ಆತಂಕ ನಿಜವಾಗಲಿದೆಯೇ? ಎಂಬ ಅನುಮಾನಗಳು ಗಟ್ಟಿಯಾಗತೊಡಗಿವೆ.

Read More
Next Story