ಒಮಾನ್‌ನಲ್ಲಿ ಭೀಕರ ದಿಢೀರ್ ಪ್ರವಾಹ: ವಾಹನ ಕೊಚ್ಚಿಹೋಗಿ ಕೇರಳ ಮೂಲದ ಇಬ್ಬರ ದುರ್ಮರಣ
x
ಒಮನ್​ನಲ್ಲಿ ತುರ್ತು ಸಂರಕ್ಷಣಾ ಕಾರ್ಯಾಚರಣೆ.

ಒಮಾನ್‌ನಲ್ಲಿ ಭೀಕರ ದಿಢೀರ್ ಪ್ರವಾಹ: ವಾಹನ ಕೊಚ್ಚಿಹೋಗಿ ಕೇರಳ ಮೂಲದ ಇಬ್ಬರ ದುರ್ಮರಣ

ಈ ಘಟನೆಯಲ್ಲಿ ಒಟ್ಟು ನಾಲ್ಕು ಮಂದಿ ಮೃತಪಟ್ಟಿರುವ ಶಂಕೆಯಿದ್ದು, ಶನಿವಾರ ರಾತ್ರಿಯ ಕಾರ್ಯಾಚರಣೆಯಲ್ಲಿ 40ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.


Click the Play button to hear this message in audio format

ಗಲ್ಫ್ ರಾಷ್ಟ್ರ ಒಮಾನ್‌ನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾದ ಭೀಕರ ದಿಢೀರ್ ಪ್ರವಾಹಕ್ಕೆ ಸಿಲುಕಿ ಇಬ್ಬರು ಭಾರತೀಯರು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಶನಿವಾರ ಸಂಭವಿಸಿದೆ. ಒಮಾನ್‌ನ ದಕ್ಷಿಣ ಅಲ್ ಬತಿನಾ ತ್ಯದ ವಾಡಿ ಅಲ್ ಮಾವಿಲ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಪ್ರವಾಹದ ನೀರಿನಲ್ಲಿ ಮೂರು ವಾಹನಗಳು ಕೊಚ್ಚಿಹೋಗಿವೆ.

ಮೃತಪಟ್ಟವರನ್ನು ಕೇರಳದ ಪಾಲಕ್ಕಾಡ್ ಜಿಲ್ಲೆಯ ತೃಥಲ ಮೂಲದ ಯೂಸುಫ್ ಮತ್ತು ಶಮ್ಲಾ ಎಂದು ಗುರುತಿಸಲಾಗಿದೆ. ಇದೇ ಪ್ರವಾಹದಲ್ಲಿ ಸಿಲುಕಿ ತೃಥಲ ಮೂಲದವರೇ ಆದ ರಮ್ಲಾ ಎಂಬ ಮತ್ತೋರ್ವ ಮಹಿಳೆ ನಾಪತ್ತೆಯಾಗಿದ್ದು, ಅವರಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ. ಈ ಘಟನೆಯಲ್ಲಿ ಒಟ್ಟು ನಾಲ್ಕು ಮಂದಿ ಮೃತಪಟ್ಟಿರುವ ಶಂಕೆಯಿದ್ದು, ಶನಿವಾರ ರಾತ್ರಿಯ ಕಾರ್ಯಾಚರಣೆಯಲ್ಲಿ 40ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.

ಪ್ರಧಾನಿ ಮೋದಿಗೆ ಪತ್ರ ಬರೆದ ವಿ.ಡಿ. ಸತೀಶನ್

ಒಮಾನ್‌ನಲ್ಲಿ ಸಂಭವಿಸಿರುವ ಈ ದುರಂತದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಅವರು, ತುರ್ತು ಮಧ್ಯಪ್ರವೇಶ ಕೋರಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಒಮಾನ್‌ನಲ್ಲಿ ಪ್ರತಿಕೂಲ ಹವಾಮಾನ ಹಾಗೂ ಭಾರಿ ಮಳೆಯ ಭೀತಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ನಾಪತ್ತೆಯಾಗಿರುವ ಮಹಿಳೆಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಭಾರತ ಸರ್ಕಾರವು ಒಮಾನ್ ಅಧಿಕಾರಿಗಳೊಂದಿಗೆ ತಕ್ಷಣವೇ ಸಮನ್ವಯ ಸಾಧಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದರ ಜೊತೆಗೆ ಪ್ರವಾಹ ಸಂತ್ರಸ್ತರಿಗೆ ಹಾಗೂ ಮೃತಪಟ್ಟವರ ಕುಟುಂಬಗಳಿಗೆ ಎಲ್ಲ ರೀತಿಯ ಅಗತ್ಯ ನೆರವು ಒದಗಿಸುವಂತೆ ಪ್ರಧಾನಿಯವರನ್ನು ಆಗ್ರಹಿಸಿದ್ದಾರೆ.

ಹವಾಮಾನ ಇಲಾಖೆಯಿಂದ ಕಟ್ಟೆಚ್ಚರ

ಒಮಾನ್‌ನ ಹವಾಮಾನ ಇಲಾಖೆಯು ಭಾನುವಾರವೂ ದೇಶದ ನಾನಾ ಭಾಗಗಳಲ್ಲಿ ಭಾರಿ ಗುಡುಗು-ಸಿಡಿಲು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಮಸ್ಕತ್, ಉತ್ತರ ಮತ್ತು ದಕ್ಷಿಣ ಅಲ್ ಶರ್ಕಿಯಾ, ಅಲ್ ವುಸ್ತಾ, ಅಲ್ ದಖಿಲಿಯಾ, ಅಲ್ ಧಾಹಿರಾ ಹಾಗೂ ದಕ್ಷಿಣ ಅಲ್ ಬತಿನಾ ಪ್ರಾಂತ್ಯಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ ಮತ್ತು ಬಿರುಗಾಳಿ ಬೀಸುವ ಸಾಧ್ಯತೆಯಿರುವುದರಿಂದ ನಾಗರಿಕರು ಕಟ್ಟೆಚ್ಚರ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.

Read More
Next Story