ಅಮೆರಿಕ, ಇಸ್ರೇಲ್ ದಾಳಿಗೆ ಇರಾನ್ ತಿರುಗೇಟು: ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮಳೆ
x

ಇಸ್ರೇಲ್ ತನ್ನ ದಾಳಿಯ ನಂತರ ರಾಷ್ಟ್ರವ್ಯಾಪಿ ಎಚ್ಚರಿಕೆಯನ್ನು ನೀಡುತ್ತಿದ್ದಂತೆ ಒಳಬರುವ ಉತ್ಕ್ಷೇಪಕವು ನೀರಿನ ಮೇಲೆ ಸ್ಫೋಟಗೊಳ್ಳುತ್ತದೆ.

ಅಮೆರಿಕ, ಇಸ್ರೇಲ್ ದಾಳಿಗೆ ಇರಾನ್ ತಿರುಗೇಟು: ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮಳೆ

ಈ ಸೇನಾ ಕಾರ್ಯಾಚರಣೆಗಳ ನಡುವೆಯೇ ಇರಾನ್ ವಿದೇಶಾಂಗ ಸಚಿವಾಲಯವು ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದು, ಶತ್ರುಗಳ ಸೇನಾ ದಾಳಿಯನ್ನು ಎದುರಿಸಲು ಮತ್ತು ಮಾತೃಭೂಮಿಯನ್ನು ರಕ್ಷಿಸಿಕೊಳ್ಳಲು ಕಾಲ ಕೂಡಿಬಂದಿದೆ ಎಂದು ಘೋಷಿಸಿದೆ.


Click the Play button to hear this message in audio format

ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದ್ದು, ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿದಂತಿದೆ. ಶನಿವಾರ ಮುಂಜಾನೆ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಜಂಟಿಯಾಗಿ ನಡೆಸಿದ ಭೀಕರ ಬಾಂಬ್ ದಾಳಿಗೆ ಇರಾನ್ ತಕ್ಕ ತಿರುಗೇಟು ನೀಡಿದೆ. ಕತಾರ್, ಯುಎಇ, ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಪ್ರಮುಖ ಸೇನಾ ನೆಲೆಗಳು ಹಾಗೂ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸುವ ಮೂಲಕ ಇಡೀ ಮಧ್ಯಪ್ರಾಚ್ಯವನ್ನು ಯುದ್ಧದ ಭೀತಿಗೆ ತಳ್ಳಿದೆ.

ಟೆಹ್ರಾನ್ ನಗರದ ಮಧ್ಯಭಾಗದಲ್ಲಿರುವ ಇರಾನ್‌ನ ಪರಮೋಚ್ಛ ನಾಯಕ ೮೬ ವರ್ಷದ ಆಯತೊಲ್ಲಾ ಅಲಿ ಖಮೇನಿ ಅವರ ಕಚೇರಿ ಹಾಗೂ ನಿವಾಸದ ಆವರಣವನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಮೊದಲ ಹಂತದ ಭಾರಿ ದಾಳಿಯನ್ನು ಸಂಘಟಿಸಿದ್ದವು. ಈ ದಾಳಿಯ ವೇಳೆ ಖಮೇನಿ ಅವರು ಅಲ್ಲಿಯೇ ಇದ್ದರೆಂಬ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಈ ಹಠಾತ್ ಬೆಳವಣಿಗೆಯಿಂದ ಟೆಹ್ರಾನ್ ನಗರದಾದ್ಯಂತ ದಟ್ಟ ಹೊಗೆ ಆವರಿಸಿತ್ತು. ಈ ದಾಳಿಗೆ ತಕ್ಷಣವೇ ಎಚ್ಚೆತ್ತುಕೊಂಡ ಇರಾನ್‌ನ ಅರೆಸೇನಾ ಪಡೆ ರೆವಲ್ಯೂಷನರಿ ಗಾರ್ಡ್, ಇಸ್ರೇಲ್ ಮೇಲೆ ಡ್ರೋನ್ ಹಾಗೂ ಕ್ಷಿಪಣಿಗಳ ಮೊದಲ ಅಲೆಯ ದಾಳಿಯನ್ನು ಆರಂಭಿಸುವ ಮೂಲಕ ಭಾರಿ ಪ್ರತೀಕಾರ ತೀರಿಸಿಕೊಂಡಿದೆ. ಇದರಿಂದಾಗಿ ಇಸ್ರೇಲ್‌ನಾದ್ಯಂತ ವಿಪತ್ತಿನ ರಾಷ್ಟ್ರೀಯ ಎಚ್ಚರಿಕೆಯನ್ನು ರವಾನಿಸಲಾಗಿದೆ.

ಗಲ್ಫ್ ರಾಷ್ಟ್ರಗಳಾದ್ಯಂತ ವಿಸ್ತರಿಸಿದ ಯುದ್ಧದ ಕಾವು

ಈ ಸಂಘರ್ಷ ಕೇವಲ ಇರಾನ್ ಮತ್ತು ಇಸ್ರೇಲ್‌ಗೆ ಮಾತ್ರ ಸೀಮಿತವಾಗಿರದೆ ಇಡೀ ಗಲ್ಫ್ ಪ್ರದೇಶಕ್ಕೆ ವ್ಯಾಪಿಸಿದೆ. ಬಹ್ರೇನ್‌ನಲ್ಲಿರುವ ಅಮೆರಿಕ ನೌಕಾಪಡೆಯ ಐದನೇ ಫ್ಲೀಟ್ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಬಹ್ರೇನ್ ದೃಢಪಡಿಸಿದೆ. ಇದೇ ವೇಳೆ ಕುವೈತ್‌ನಲ್ಲಿರುವ ಅಮೆರಿಕನ್ ಆರ್ಮಿ ಸೆಂಟ್ರಲ್ ನೆಲೆ ಹಾಗೂ ಕತಾರ್‌ನಲ್ಲಿಯೂ ಭಾರಿ ಸ್ಫೋಟಗಳ ಸದ್ದು ಮತ್ತು ಸೈರನ್‌ಗಳ ಮೊರೆತ ಕೇಳಿಬಂದಿದೆ. ಯುದ್ಧದ ಭೀತಿಯಿಂದಾಗಿ ಇರಾಕ್ ಮತ್ತು ಸಂಯುಕ್ತ ಅರಬ್ ಸಂಸ್ಥಾನ (ಯುಎಇ) ತಮ್ಮ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿವೆ. ಜೋರ್ಡಾನ್‌ನಲ್ಲೂ ಎಚ್ಚರಿಕೆಯ ಸೈರನ್‌ಗಳು ಮೊಳಗಿವೆ. ಇದರ ಬೆನ್ನಲ್ಲೇ ಯೆಮನ್‌ನ ಹೌತಿ ಬಂಡುಕೋರರು ಕೆಂಪು ಸಮುದ್ರದ ವಾಣಿಜ್ಯ ಹಡಗು ಮಾರ್ಗಗಳು ಮತ್ತು ಇಸ್ರೇಲ್ ಮೇಲೆ ಮರಳಿ ದಾಳಿ ಆರಂಭಿಸುವುದಾಗಿ ಎಚ್ಚರಿಕೆ ರವಾನಿಸಿದ್ದಾರೆ.

ಇರಾನ್ ವಿದೇಶಾಂಗ ಸಚಿವಾಲಯದ ಎಚ್ಚರಿಕೆ

ಈ ಸೇನಾ ಕಾರ್ಯಾಚರಣೆಗಳ ನಡುವೆಯೇ ಇರಾನ್ ವಿದೇಶಾಂಗ ಸಚಿವಾಲಯವು ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದು, ಶತ್ರುಗಳ ಸೇನಾ ದಾಳಿಯನ್ನು ಎದುರಿಸಲು ಮತ್ತು ಮಾತೃಭೂಮಿಯನ್ನು ರಕ್ಷಿಸಿಕೊಳ್ಳಲು ಕಾಲ ಕೂಡಿಬಂದಿದೆ ಎಂದು ಘೋಷಿಸಿದೆ. ಶತ್ರುಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಇರಾನ್ ಎಂದಿಗೂ ಹಿಂದೇಟು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮತ್ತೊಂದೆಡೆ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜನತೆಯನ್ನು ಉದ್ದೇಶಿಸಿ, ನಿಮ್ಮ ಸರ್ಕಾರದ ಆಡಳಿತವನ್ನು ನಿಮ್ಮ ಕೈಗೆ ತೆಗೆದುಕೊಳ್ಳಿ ಎಂದು ಅಸಾಮಾನ್ಯ ಕರೆಯೊಂದನ್ನು ನೀಡಿದ್ದಾರೆ. ದಶಕಗಳ ಕಾಲದ ಇರಾನ್‌ನ ಪ್ರಭುತ್ವವನ್ನು ಅಂತ್ಯಗೊಳಿಸುವ ಮಿತ್ರರಾಷ್ಟ್ರಗಳ ಉದ್ದೇಶವನ್ನು ಈ ಹೇಳಿಕೆಯು ಪರೋಕ್ಷವಾಗಿ ಬಿಂಬಿಸಿದೆ.

ಭಾರತೀಯರಿಗೆ ರಾಯಭಾರ ಕಚೇರಿಯಿಂದ ಕಟ್ಟೆಚ್ಚರ

ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಈ ಯುದ್ಧದ ಕಾರ್ಮೋಡದ ನಡುವೆ ಇರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ತುರ್ತು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಪ್ರತಿಯೊಬ್ಬರೂ ಅತ್ಯಂತ ಎಚ್ಚರಿಕೆಯಿಂದಿರಬೇಕು ಮತ್ತು ಆದಷ್ಟು ಮಟ್ಟಿಗೆ ಮನೆಯೊಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿಯೇ ಇರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಿರಂತರವಾಗಿ ಸುದ್ದಿಗಳನ್ನು ಗಮನಿಸುತ್ತಾ, ರಾಯಭಾರ ಕಚೇರಿಯ ಮುಂದಿನ ಮಾರ್ಗಸೂಚಿಗಳಿಗಾಗಿ ಕಾಯುವಂತೆ ತಿಳಿಸಿದೆ. ಇದೇ ವೇಳೆ, ಇಸ್ರೇಲ್‌ನ ಟೆಲ್ ಅವಿವ್ ವಿಮಾನ ನಿಲ್ದಾಣದಿಂದ ನವದೆಹಲಿಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನದ (ಎಐ 140) ಪ್ರಯಾಣಿಕರು ಜೀವಭಯದಿಂದ ವಿಮಾನ ನಿಲ್ದಾಣದ ಬಾಂಬ್ ಶೆಲ್ಟರ್‌ಗಳತ್ತ ಓಡಿ ಸುರಕ್ಷಿತ ತಾಣಗಳನ್ನು ಸೇರಿಕೊಂಡಿರುವ ಆತಂಕಕಾರಿ ಘಟನೆಗಳು ವರದಿಯಾಗಿವೆ.

Read More
Next Story