Iran-Israel War|ಕತಾರ್‌ನ ವಿಶ್ವದ ಅತಿದೊಡ್ಡ ಗ್ಯಾಸ್ ಪ್ಲಾಂಟ್ ಮೇಲೆ ಇರಾನ್ ಕ್ಷಿಪಣಿ ದಾಳಿ
x
ಕತಾರ್ ಗ್ಯಾಸ್ ಪ್ಲಾಂಟ್ ಮೇಲೆ ದಾಳಿ

Iran-Israel War|ಕತಾರ್‌ನ ವಿಶ್ವದ ಅತಿದೊಡ್ಡ ಗ್ಯಾಸ್ ಪ್ಲಾಂಟ್ ಮೇಲೆ ಇರಾನ್ ಕ್ಷಿಪಣಿ ದಾಳಿ

ಕತಾರ್‌ನ ರಾಸ್ ಲಫ್ಫಾನ್ ಗ್ಯಾಸ್ ಪ್ಲಾಂಟ್ ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ದಾಳಿಗೆ ಪ್ರತೀಕಾರವಾಗಿ ನಡೆದ ಈ ಕೃತ್ಯದಿಂದ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.


ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ನೈಸರ್ಗಿಕ ಅನಿಲ (LNG) ರಫ್ತು ಘಟಕದ ಮೇಲೆ ಇರಾನ್ ಭೀಕರ ಕ್ಷಿಪಣಿ ದಾಳಿ ನಡೆಸಿದೆ. ಕತಾರ್‌ನ 'ರಾಸ್ ಲಫ್ಫಾನ್ ಇಂಡಸ್ಟ್ರಿಯಲ್ ಸಿಟಿ' (Ras Laffan) ಮೇಲೆ ನಡೆದ ಈ ದಾಳಿಯಿಂದಾಗಿ ಘಟಕಕ್ಕೆ ಭಾರಿ ಹಾನಿಯಾಗಿದ್ದು, ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ.

ದಾಳಿಯ ವಿವರ ಮತ್ತು ಹಾನಿ

ಬುಧವಾರ ತಡರಾತ್ರಿ ಇರಾನ್ ಉಡಾಯಿಸಿದ ಐದು ಕ್ಷಿಪಣಿಗಳಲ್ಲಿ ನಾಲ್ಕನ್ನು ತಡೆಯಲಾಯಿತಾದರೂ, ಒಂದು ಕ್ಷಿಪಣಿ ನೇರವಾಗಿ ಎಲ್‌ಎನ್‌ಜಿ ಘಟಕಕ್ಕೆ ಅಪ್ಪಳಿಸಿತು. ಗುರುವಾರ ಮುಂಜಾನೆ ನಡೆದ ಮತ್ತೊಂದು ದಾಳಿಯಿಂದಾಗಿ ರಾಸ್ ಲಫ್ಫಾನ್ ಸಂಕೀರ್ಣದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಕತಾರ್ ಅಧಿಕಾರಿಗಳು ಅದನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ.

ಯುಎಇ ಮತ್ತು ಸೌದಿ ಮೇಲೂ ದಾಳಿ: ಅಬುಧಾಬಿಯ ಹಬ್ಶಾನ್ ಗ್ಯಾಸ್ ಘಟಕದ ಮೇಲೂ ಕ್ಷಿಪಣಿ ಅವಶೇಷಗಳು ಬಿದ್ದಿದ್ದರಿಂದ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಇತ್ತ ಸೌದಿ ಅರೇಬಿಯಾ ಕೂಡ ತನ್ನ ಇಂಧನ ಘಟಕಗಳ ಮೇಲೆ ನಡೆದ ಡ್ರೋನ್ ದಾಳಿಯನ್ನು ಯಶಸ್ವಿಯಾಗಿ ತಡೆದಿದೆ ಎಂದು ಹೇಳಿಕೊಂಡಿದೆ.

ಇರಾನ್ ಎಚ್ಚರಿಕೆ ಮತ್ತು ಸೇಡಿನ ದಾಳಿ

ಇತ್ತೀಚೆಗಷ್ಟೇ ಇಸ್ರೇಲ್ ಇರಾನ್‌ನ ದೈತ್ಯ 'ಸೌತ್ ಪಾರ್ಸ್' ಅನಿಲ ಘಟಕದ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್, "ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳಲ್ಲಿರುವ ಇಂಧನ ತಾಣಗಳು ಈಗ ನಮ್ಮ ಕಾನೂನುಬದ್ಧ ಗುರಿಗಳಾಗಿವೆ" ಎಂದು ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಈ ಸರಣಿ ದಾಳಿಗಳು ನಡೆದಿವೆ.

ಗಗನಕ್ಕೇರಿದ ಇಂಧನ ದರಗಳು

ದಾಳಿಯ ಸುದ್ದಿ ಹರಡುತ್ತಿದ್ದಂತೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಬೆಲೆಯು ಬುಧವಾರ ಶೇ.8ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 111.90 ಡಾಲರ್‌ಗೆ ತಲುಪಿದೆ. ಜಗತ್ತಿನ ಪ್ರಮುಖ ಭಾಗಗಳಿಗೆ ಅನಿಲ ಪೂರೈಸುವ ಕತಾರ್‌ನ ಘಟಕಕ್ಕೆ ಹಾನಿಯಾಗಿರುವುದರಿಂದ, ಏಷ್ಯಾ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ವಿದ್ಯುತ್ ಉತ್ಪಾದನೆಗೆ ಅಗತ್ಯವಿರುವ ಅನಿಲದ ಕೊರತೆ ಉಂಟಾಗುವ ಆತಂಕ ಎದುರಾಗಿದೆ. ತಜ್ಞರ ಪ್ರಕಾರ, ಈ ಘಟಕವು ಪೂರ್ಣ ಪ್ರಮಾಣದ ಉತ್ಪಾದನೆಗೆ ಮರಳಲು ಕನಿಷ್ಠ ವರ್ಷದ ಮಧ್ಯಭಾಗದವರೆಗೆ ಕಾಯಬೇಕಾಗಬಹುದು.

ಕತಾರ್‌ನ ಕಠಿಣ ರಾಜತಾಂತ್ರಿಕ ಹೆಜ್ಜೆ

ತನ್ನ ಸಾರ್ವಭೌಮತ್ವದ ಮೇಲೆ ನಡೆದ ಈ ದಾಳಿಯನ್ನು ಕತಾರ್ ತೀವ್ರವಾಗಿ ಖಂಡಿಸಿದೆ. ಇದನ್ನು "ರಾಷ್ಟ್ರೀಯ ಭದ್ರತೆಗೆ ನೇರ ಬೆದರಿಕೆ" ಎಂದು ಕರೆದಿರುವ ಕತಾರ್ ವಿದೇಶಾಂಗ ಸಚಿವಾಲಯ, ದೇಶದಲ್ಲಿರುವ ಇರಾನ್‌ನ ಮಿಲಿಟರಿ ಮತ್ತು ಭದ್ರತಾ ಅಧಿಕಾರಿಗಳು 24 ಗಂಟೆಗಳ ಒಳಗಾಗಿ ದೇಶ ಬಿಟ್ಟು ತೆರಳುವಂತೆ ಆದೇಶಿಸಿದೆ. ಹೊರ್ಮುಜ್ ಜಲಸಂಧಿಯ ಮೂಲಕ ಸರಕು ಸಾಗಣೆ ಈಗಾಗಲೇ ಸ್ಥಗಿತಗೊಂಡಿರುವುದರಿಂದ, ಈ ದಾಳಿಯು ಪರ್ಷಿಯನ್ ಕೊಲ್ಲಿಯ ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.



Read More
Next Story