ಅಮೆರಿಕ-ಇಸ್ರೇಲ್ ಭೀಕರ ದಾಳಿಗೆ ಇರಾನ್ ರಕ್ಷಣಾ ಸಚಿವ ಬಲಿ ಶಂಕೆ: 51 ಶಾಲಾ ಮಕ್ಕಳ ದಾರುಣ ಸಾವು, ಭುಗಿಲೆದ್ದ ಮಹಾಯುದ್ಧ
x

ಅಮೆರಿಕ-ಇಸ್ರೇಲ್ ಭೀಕರ ದಾಳಿಗೆ ಇರಾನ್ ರಕ್ಷಣಾ ಸಚಿವ ಬಲಿ ಶಂಕೆ: 51 ಶಾಲಾ ಮಕ್ಕಳ ದಾರುಣ ಸಾವು, ಭುಗಿಲೆದ್ದ ಮಹಾಯುದ್ಧ

ಟೆಹ್ರಾನ್ ನಗರದ ಮಧ್ಯಭಾಗದಲ್ಲಿರುವ ಇರಾನ್‌ನ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಕಚೇರಿಯನ್ನೇ ಗುರಿಯಾಗಿಸಿ ದಾಳಿ ನಡೆಸಲಾಗಿತ್ತು.


Click the Play button to hear this message in audio format

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದ್ದು, ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯು ಇಡೀ ಗಲ್ಫ್ ಪ್ರದೇಶವನ್ನು ಅಗ್ನಿಕುಂಡವಾಗಿಸಿದೆ. ಈ ದಾಳಿಯಲ್ಲಿ ಇರಾನ್‌ನ ರಕ್ಷಣಾ ಸಚಿವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ದಕ್ಷಿಣ ಇರಾನ್‌ನಲ್ಲಿ ಶಾಲೆಯೊಂದರ ಮೇಲೆ ನಡೆದ ಬಾಂಬ್ ದಾಳಿಗೆ 51 ಮುಗ್ಧ ಮಕ್ಕಳು ಬಲಿಯಾಗಿದ್ದಾರೆ. ಇತ್ತ, ಅಮೆರಿಕ-ಇಸ್ರೇಲ್ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಗಲ್ಫ್ ರಾಷ್ಟ್ರಗಳಲ್ಲಿನ ಶತ್ರು ಪಾಳಯದ ಸೇನಾ ನೆಲೆಗಳ ಮೇಲೆ ಕ್ಷಿಪಣಿಗಳ ಮಳೆಗರೆದಿದ್ದು, ಭದ್ರತಾ ಹಿತದೃಷ್ಟಿಯಿಂದ ಆರು ರಾಷ್ಟ್ರಗಳು ತಮ್ಮ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿವೆ.

ಇರಾನ್ ರಕ್ಷಣಾ ಸಚಿವ ಸಾವು ಶಂಕೆ, 51 ಮಕ್ಕಳ ಬಲಿ

ರಾಯಿಟರ್ಸ್ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ನಡೆಸಿದ ಭಾರಿ ವಾಯುದಾಳಿಯಲ್ಲಿ ಇರಾನ್‌ನ ರಕ್ಷಣಾ ಸಚಿವ ಅಮೀರ್ ನಸಿರ್ಜಾದೆಹ್ ಹಾಗೂ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್ ಮೊಹಮ್ಮದ್ ಪಾಕ್‌ಪೌರ್ ಅವರು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ದಕ್ಷಿಣ ಇರಾನ್‌ನಲ್ಲಿರುವ ಬಾಲಕಿಯರ ಪ್ರಾಥಮಿಕ ಶಾಲೆಯೊಂದರ ಮೇಲೆ ನಡೆದ ಭೀಕರ ಬಾಂಬ್ ದಾಳಿಯಲ್ಲಿ 51 ಬಾಲಕಿಯರು ಪ್ರಾಣ ಕಳೆದುಕೊಂಡಿರುವುದು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಮಾತೃಭೂಮಿಯನ್ನು ರಕ್ಷಿಸಿಕೊಳ್ಳಲು ನಾವು ಯಾವುದೇ ಕಾರಣಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಕಠಿಣ ಎಚ್ಚರಿಕೆ ರವಾನಿಸಿದೆ.

ಖಮೇನಿ ಕಚೇರಿ ಟಾರ್ಗೆಟ್, ಆಡಳಿತ ಬದಲಾವಣೆಗೆ ಟ್ರಂಪ್ ಕರೆ

ಟೆಹ್ರಾನ್ ನಗರದ ಮಧ್ಯಭಾಗದಲ್ಲಿರುವ ಇರಾನ್‌ನ 86 ವರ್ಷದ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಕಚೇರಿ ಮತ್ತು ನಿವಾಸದ ಆವರಣವನ್ನೇ ಗುರಿಯಾಗಿಸಿಕೊಂಡು ಶನಿವಾರ ಮುಂಜಾನೆ ಈ ಭಾರಿ ದಾಳಿಯನ್ನು ಸಂಘಟಿಸಲಾಗಿತ್ತು. ಆ ಸಮಯದಲ್ಲಿ ಖಮೇನಿ ಅವರು ಅಲ್ಲಿಯೇ ಇದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ದಾಳಿಯ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಜನತೆ ತಮ್ಮ ಸರ್ಕಾರದ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ. ದಶಕಗಳ ಕಾಲದ ಇರಾನ್‌ನ ಪ್ರಭುತ್ವವನ್ನು ಅಂತ್ಯಗೊಳಿಸುವ ಉದ್ದೇಶವನ್ನು ಈ ಹೇಳಿಕೆ ಸ್ಪಷ್ಟಪಡಿಸಿದೆ. ಆದರೆ, ಇರಾನ್‌ನ ಆಡಳಿತ ಬದಲಾವಣೆ ಎಂಬುದು 'ಅಸಾಧ್ಯದ ಮಿಷನ್' ಎಂದು ಇರಾನ್ ಪ್ರತಿಕ್ರಿಯಿಸಿ ತಿರುಗೇಟು ನೀಡಿದೆ.

ಇರಾನ್‌ನಿಂದ ಭಾರಿ ಪ್ರತಿದಾಳಿ, 6 ರಾಷ್ಟ್ರಗಳ ವಾಯುಪ್ರದೇಶ ಬಂದ್

ತನ್ನ ನೆಲದ ಮೇಲಾದ ದಾಳಿಯಿಂದ ರೊಚ್ಚಿಗೆದ್ದಿರುವ ಇರಾನ್‌ನ ಅರೆಸೇನಾ ಪಡೆ 'ರೆವಲ್ಯೂಷನರಿ ಗಾರ್ಡ್', ಇಸ್ರೇಲ್ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳ 'ಮೊದಲ ಅಲೆ'ಯ ದಾಳಿಯನ್ನು ಆರಂಭಿಸುವ ಮೂಲಕ ಯುದ್ಧದ ತೀವ್ರತೆಯನ್ನು ಹೆಚ್ಚಿಸಿದೆ. ಕತಾರ್, ಯುಎಇ, ಬಹ್ರೇನ್ ಮತ್ತು ಕುವೈತ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೂ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಬಹ್ರೇನ್‌ನಲ್ಲಿರುವ ಅಮೆರಿಕ ನೌಕಾಪಡೆಯ ಐದನೇ ಫ್ಲೀಟ್ ಪ್ರಧಾನ ಕಚೇರಿ ಹಾಗೂ ಕುವೈತ್‌ನಲ್ಲಿರುವ ಆರ್ಮಿ ಸೆಂಟ್ರಲ್ ನೆಲೆಗಳ ಮೇಲೂ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ಯುದ್ಧದ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ ಇರಾನ್, ಇಸ್ರೇಲ್, ಯುಎಇ, ಕತಾರ್, ಬಹ್ರೇನ್ ಮತ್ತು ಇರಾಕ್ ಸೇರಿ ಒಟ್ಟು ಆರು ರಾಷ್ಟ್ರಗಳು ತಮ್ಮ ವಾಯುಪ್ರದೇಶವನ್ನು ಸಂಪೂರ್ಣವಾಗಿ ಮುಚ್ಚಿವೆ. ಜೋರ್ಡಾನ್‌ನಲ್ಲೂ ಎಚ್ಚರಿಕೆಯ ಸೈರನ್‌ಗಳು ಮೊಳಗಿವೆ.

ಭಾರತೀಯರಿಗೆ ರಾಯಭಾರ ಕಚೇರಿಯಿಂದ ಕಟ್ಟೆಚ್ಚರ

ಇರಾನ್‌ನಲ್ಲಿ ದಿಢೀರನೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ತನ್ನ ನಾಗರಿಕರಿಗೆ ತುರ್ತು ಮಾರ್ಗಸೂಚಿಯನ್ನು ಪ್ರಕಟಿಸಿದೆ. ಪ್ರತಿಯೊಬ್ಬರೂ ಅತ್ಯಂತ ಎಚ್ಚರಿಕೆಯಿಂದಿರಬೇಕು ಮತ್ತು ಆದಷ್ಟು ಮಟ್ಟಿಗೆ ಮನೆಯೊಳಗೆ ಅಥವಾ ಸುರಕ್ಷಿತ ಸ್ಥಳಗಳಲ್ಲಿಯೇ ಇರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಿರಂತರವಾಗಿ ಸುದ್ದಿಗಳನ್ನು ಗಮನಿಸುತ್ತಾ, ರಾಯಭಾರ ಕಚೇರಿಯ ಮುಂದಿನ ಮಾರ್ಗಸೂಚಿಗಳಿಗಾಗಿ ಕಾಯುವಂತೆ ತಿಳಿಸಿದೆ. ಸಂಘರ್ಷದಲ್ಲಿ ತೊಡಗಿರುವ ರಾಷ್ಟ್ರಗಳು ಶಾಂತಿ ಮತ್ತು ಸಂಯಮ ಕಾಪಾಡಿಕೊಳ್ಳುವಂತೆ ಭಾರತ ಸರ್ಕಾರವು ಮನವಿ ಮಾಡಿದೆ.

Read More
Next Story