ಓ ನಲ್ಲ, ಕರಿಮಣಿ ಮಾಲೀಕ ನೀನಲ್ಲ, ನೀ... ನಲ್ಲ| ಧೂಳೆಬ್ಬಿಸುತ್ತಿರುವ ಹಾಡಿನ ʼಲಘು-ಗುರುʼ
ಕರಿಮಣಿ ಧರಿಸದೆಯೂ ಪ್ರೀತಿಯಿಂದ ಪರಸ್ಪರ ಅರ್ಥಮಾಡಿಕೊಂಡು ಬದುಕುವವರಿಗೆ ಕರಿಮಣಿ ಮಾಲೀಕತ್ವ ಬೇಕೇ?
ಈಗ ಏನಿದ್ರೂ ಸೋಶಿಯಲ್ ಮೀಡಿಯಾಗಳ ಜಮಾನ. ಕುಂತ್ರು ನಿಂತ್ರೂ ರೀಲ್ಸ್‌ಗಳದ್ದೇ ಸದ್ದು. ಇದೀಗ ಸಕತ್ ಟ್ರೆಂಡ್‌ನಲ್ಲಿರುವ ರೀಲ್ಸ್ ಅಂದ್ರೆ ಅದು ಉಪೇಂದ್ರ ನಟನೆಯ 1999ರಲ್ಲಿ ತರೆಕಂಡಿದ್ದ ʼಉಪೇಂದ್ರʼ ಸಿನಿಮಾದ ಕರಿಮಣಿ ಮಾಲೀಕ ನೀನಲ್ಲ ಸಾಂಗ್.
ಈ ಹಾಡು 25 ವರ್ಷಗಳ ಬಳಿಕ ವೈರಲ್ ಪಟ್ಟ ಪಡೆದುಕೊಂಡಿದೆ. ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ. ಈಗ ಸೋಶಿಯಲ್ ಮೀಡಿಯಾ ಓಪನ್ ಮಾಡಿದ್ರೆ ಸಾಕು ʻಕರಿಮಣಿ ಮಾಲೀಕ ನೀನಲ್ಲ’ ಹಾಡಿನದ್ದೇ ಗುಂಗು. ಎಲ್ಲೆಲ್ಲೂ ಅದರದ್ದೇ ರೀಲ್ಸ್.
ಅಷ್ಟಕ್ಕೂ ಉಪೇಂದ್ರ’ ಸಿನಿಮಾದ “ಓ ನಲ್ಲ..” ಹಾಡು ಇಷ್ಟೊಂದು ಟ್ರೆಂಡಿಂಗ್‌ನಲ್ಲಿ ಇರಲು ಕಾರಣ ಉತ್ತರ ಕರ್ನಾಟಕ ಭಾಗದ ಕನಕ ಅವರು. ಕನಕ ತಮ್ಮ ಇನ್‌ಸ್ಟಾದಲ್ಲಿ ಪ್ರೀತಿಸಿದ ಹುಡುಗಿ ಕೈ ಕೊಟ್ಟು ಹೋದಾಗ ಆಕೆ ಹೇಳಿದ ಮಾತುಗಳು ಎಂದು ಹೇಳಿ ಈ ಹಾಡಿನ ಸಾಲುಗಳನ್ನು ಪೋಸ್ಟ್ ಮಾಡಿದ್ದರು. ಇದು ಸಖತ್ ವೈರಲ್ ಆಗಿತ್ತು. ಅಲ್ಲಿಂದ ಹಲವಾರು ಕ್ರಿಯೇಟರ್ಸ್‌ಗಳು ತಮಗೆ ಅನಿಸಿದ ರೀತಿಯಲ್ಲಿ ಈ ಹಾಡಿಗೆ ರೀಲ್ಸ್ ಮಾಡಿದ್ದಾರೆ.
ಕರಿಮಣಿ ಮಾಲೀಕ ನೀನಲ್ಲ, ಮತ್ಯಾರು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿ ಕ್ರಿಯೇಟಿವ್ಸ್‌ಗೆ ತಕ್ಕಂತೆ ರೀಲ್ಸ್‌ಗಳನ್ನು ಅಪ್ಲೋಡ್ ಮಾಡ್ತಾ ಇದ್ರೆ, ಕೆಲವರಿಗೆ ಇದು ಮನೋರಂಜನೆ. ಆದ್ರೆ ಕರಿಮಣಿ ಮಾಲೀಕ ನೀನಲ್ಲ ಹಾಡು ಕೆಲವು ಗಂಡಸರ ನಿದ್ದೆ ಗೆಡಿಸುವಂತಿದೆ. ಎಂದೂ ಹೆಂಡತಿಯ ಕತ್ತಲ್ಲಿ ತಾಳಿ ಇದೆಯೋ ಇಲ್ಲವೋ ಎಂದು ಗಮನಿಸದ ಗಂಡ ಹೆಂಡತಿಯ ಕತ್ತಲ್ಲಿ ತಾಳಿ ಇದೆಯೇ ಇಲ್ಲವೇ ಎಂದು ಪರೀಕ್ಷಿಸುವಂತಾಗಿದೆ.
ಈ ರೀಲ್ಸ್‌ಗಳು ಹಾಗೆ ಇರಲಿ, ಕರಿಮಣಿ ಮಾಲೀಕತ್ವದ ಬಗ್ಗೆ ಚರ್ಚೆಗೆ ಬರೋಣ. ಅಷ್ಟಕ್ಕೂ ಈ ಕರಿಮಣಿ ಮತ್ತು ಕರಿಮಣಿ ಕಟ್ಟಿದವರ ಮಾಲೀಕತ್ವ ನಮ್ಮನ್ನು ಯಾಕೆ ಇಷ್ಟೊಂದು ಕಾಡುತ್ತದೆ? ಭಾರತೀಯ ಸಂಪ್ರದಾಯದಲ್ಲಿ ಕರಿಮಣಿಗೆ ಯಾಕೆ ಅಷ್ಟೊಂದು ಮಹತ್ವ? ಮದುವೆಯಾದ ಹೆಣ್ಣು ಮಕ್ಕಳಿಗೆ ಕರಿಮಣಿ ಎಂಬುದು ಸೌಭಾಗ್ಯದ ಸಂಕೇತ ಹೇಗೆ? ಹೆಣ್ಣಿನ ಪಾವಿತ್ರ್ಯ, ಗಂಡಿನ ಆಯಸ್ಸನ್ನು ಕರಿಮಣಿಯಲ್ಲಿ ಕಟ್ಟಿಹಾಕಿದ ಸಂಪ್ರದಾಯ ಇವತ್ತಿಗೆ ಎಷ್ಟು ಪ್ರಸ್ತುತ? ಎಂಬ ಚರ್ಚೆಗಳು ಕೂಡ ಈ ಕರಿಮಣಿ ಹಾಡಿನ ವೈರಲ್ ಪ್ರಸಂಗದ ಬಳಿಕ ಆರಂಭವಾಗಿವೆ.
ಕರಿಮಣಿ ಪುರುಷ ದಾಸ್ಯದ ಸಂಕೇತವೇ?
ಕರಿಮಣಿ ಅನ್ನೋದು ನಂಬಿಕೆಯಾಗಿ, ಸಂಪ್ರದಾಯ, ಆಚಾರ, ಆಡಂಬರ ಮತ್ತು ಆಭರಣವಾಗಿ ಕಾಲಕಾಲಕ್ಕೆ ರೂಪಾಂತರಗೊಂಡು ತನ್ನ ಅರ್ಥ, ಮೌಲ್ಯಗಳನ್ನು ಬದಲಾಯಿಸುತ್ತಾ ಬಂದಿದೆ.
ಅನಾದಿ ಕಾಲದಿಂದ ಹೆಣ್ಣಿನ ಮನಸ್ಸು ಘನತೆ ಹಾಗೂ ಗಂಡನ ಆಯಸ್ಸು, ಶ್ರೇಯಸ್ಸು ಆರೋಗ್ಯ ಸಂಬಂಧವನ್ನು ಕರಿಮಣಿ ಮೂಲಕ ಬೆಸೆಯುತ್ತಾ ಬಂದಿದ್ದೇವೆ. ಮದುವೆಯಾದ ಮಹಿಳೆ ಮಾಂಗಲ್ಯ ಧರಿಸಲೇಬೇಕು. ಇಲ್ಲದಿದ್ದರೆ ಗಂಡನ ಆಯಸ್ಸು ಕಡಿಮೆ ಅನ್ನುವ ಹಿರಿಯರ ಮಾತನ್ನು ಅನಾದಿಕಾಲದಿಂದಲೂ ಕೇಳುತ್ತಾ ಬಂದಿದ್ದೇವೆ.
ಆದರೆ ಈಗ ಕಾಲ ಬದಲಾಗಿದೆ. ಈಗಿನ ಆಧುನಿಕ ಯುಗದಲ್ಲಿ ಟ್ರೆಂಡ್‌ಗಳಿಗೆ ತಕ್ಕಂತೆ ಬದಲಾಗುವ ಪರಿಸ್ಥಿತಿ ಬಂದಿದೆ. ಮುಂಜಾನೆ ಕರಿಮಣಿ ಕಣ್ಣಿಗೊತ್ತಿಕೊಂಡು ಮೇಲೇಳುವ ಮಹಿಳೆಯರೂ ಇದ್ದಾರೆ. ತಾಳಿ ಎಂದರೆ ದಾಸ್ಯದ ಸಂಕೇತ ಎನ್ನುತ್ತಾ ತಾಳಿಯನ್ನು ಧಿಕ್ಕರಿಸುವವರೂ ಇದ್ದಾರೆ. ಇನ್ನು ಕೆಲವರು ಸಂಪ್ರದಾಯಸ್ಥರ ಕಣ್ಣಿಗೆ ಕಾಣುವಂತಹ ತಮಗೆ ಬೇಕಾದ ಆಭರಣದ ಶೈಲಿಯಲ್ಲಿ ಕರಿಮಣಿಯನ್ನು ಧರಿಸುವವರು. ಬೇಡವೆನಿಸಿದಾಗ ಬಿಚ್ಚಿಡುವ ಮಹಿಳೆಯರೂ ಇದ್ದಾರೆ.
ಮನಸ್ಸಿನ ಭಾವನೆಗೂ ಕರಿಮಣಿಗೂ ಇದೆಯೇ ಸಂಬಂಧ?
ಗಂಡು ಕಟ್ಟಿದ ತಾಳಿಗೂ, ಹೆಣ್ಣಿನ ಮನಸ್ಸಿನ ಭಾವನೆಗಳಿಗೂ ಏನಿದೆ ಸಂಬಂಧ? ಕರಿಮಣಿ ಹೆಣ್ಣನ್ನು ತನ್ನ ಅಧೀನದಲ್ಲಿ ಇಟ್ಟುಕೊಳ್ಳಲು ಗಂಡಸು, ಆಕೆ ತನಗೆ ಸಂಬಂಧಿಸಿದವಳು ಎನ್ನುವ ಹಕ್ಕು ಸಾಧಿಸಲು ಕರಿಮಣಿ ಸಂಕೇತವೇ? ಕರಿಮಣಿ ಧರಿಸಿದರೆ ಮನಸ್ಸಿನಲ್ಲಿ ಬೇರೆಯವರ ಬಗ್ಗೆ ಮೋಹ ಹುಟ್ಟುವುದೇ ಇಲ್ಲವೆ? ಅಥವಾ ಗಂಡ ಹೆಂಡತಿಯನ್ನು ಅನೋನ್ಯವಾಗಿರಲೂ ಕರಿಮಣಿ ಸರವೇ ಮುಖ್ಯವೇ? ಅದೆಷ್ಟೋ ಹೆಣ್ಣು ಮಕ್ಕಳು ಕರಿಮಣಿ ಕಟ್ಟಿಕೊಂಡವನಿಂದಲೇ ಕಣ್ಣೀರು ಹಾಕುತ್ತಿಲ್ಲವೇ? ಕರಿಮಣಿ ಕಟ್ಟಿದಾತನ ಬದುಕಿನಲ್ಲಿಯೇ ಹೆಣ್ಣೊಬ್ಬಳು ಬದುಕಬೇಕೇ? ಖಡಿಂತ ಇಲ್ಲಾ.
ಆಕೆಗೂ ಒಂದು ಸ್ವಾತಂತ್ರ್ಯವಿದೆ. ಎಲ್ಲ ವಿಷಯಗಳಿಗೂ ಕರಿಮಣಿ ಮಾಲೀಕನ ಅನುಮತಿ ಪಡೆಯಬೇಕಾಗಿಲ್ಲ. ಕೆಲವೊಮ್ಮೆ ಕಟ್ಟಿಸಿಕೊಂಡ ಕರಿಮಣಿ ಮಾಲಿಕನಿಂದಲೇ ನೋವು ಅನುಭವಿಸುವಾಗ ಆಕೆಗೆ ಸಮಾಧಾನ ಪಡಿಸುವ ಕರಿಮಣಿ ಹಂಗಿಲ್ಲದ ಗೆಳೆತನ ಆಕೆಗೆ ಅವಶ್ಯಕತೆ ಇರುತ್ತದೆ. ಅದನ್ನು ನಾವು ಆ ತರಹ ಅರ್ಥ ಮಾಡಿಕೊಳ್ಳುವುದು ತಪ್ಪು. ಆಕೆಗೆ ಬೇಕಾಗಿರುವುದು ಕಣ್ಣೀರು ಒರೆಸುವ ಒಂದು ಬೆರಳೇ ಹೊರತು ಇನ್ನೊಂದು ದೇಹವಲ್ಲ. ಕರಿಮಣಿ ಮಾಲಿಕತ್ವದ ಆಚೆಗೂ ಒಂದು ಗೆಳತನ ಆಕೆಗೆ ಬೇಕು. ಅದರಲ್ಲಿ ತಪ್ಪೇನಿದೇ?
ಪರಸ್ಪರ ಅರ್ಥಮಾಡಿಕೊಂಡರೆ ಕರಿಮಣಿ ʼಮಾಲೀಕತ್ವʼ ಬೇಕೇ?
ಎಲ್ಲಾ ತೊರೆದು ಕರಿಮಣಿ ಕಟ್ಟಿದವನ ಆಶ್ರಯಕ್ಕೆ ಬರುವ ಹೆಣ್ಣೊಬ್ಬಳು ಆತ ತಾಳಿ ಕಟ್ಟಿದ್ದಾನೆ ಎಂದು ಆತನ ದಾಸತ್ವಕ್ಕೆ ಒಳಪಡಬೇಕಾಗಿಲ್ಲ. ಕರಿಮಣಿ ನೆರಳಲ್ಲಿ ಎಲ್ಲವೂ ದಕ್ಕಿಬಿಡುವುದಿಲ್ಲ. ಮದುವೆ, ಭದ್ರತೆ, ಕುಟುಂಬವನ್ನು ಕರಿಮಣಿ ಅನ್ನೋ ದಾರ ಉಳಿಸುತ್ತದೆಯೇ ಹೊರತು ನಾನು ಅವಳಿಗೆ ಕರಿಮಣಿ ಕಟ್ಟಿದ್ದೇನೆ. ಅವಳಿಗೆ ನಾನೇ ಮಾಲೀಕ ಎಂಬ ಗಂಡಿನ ಅಹಮ್ಮಿನಲ್ಲೂ ಅಲ್ಲ; ಅವನು ಕೊಡುವ ಬದುಕಿನಲ್ಲೇ ಜೀವಿಸಬೇಕು, ಅವನು ಹೇಳಿದಂತೆಯೇ ಬದುಕಬೇಕು, ಅವನು ತಾಳಿ ಕಟ್ಟಿದವನು ಎಂಬ ದಾಸ್ಯದ ಮನಸ್ಥಿತಿಯಲ್ಲೂ ಅಲ್ಲ. ತಾನು ತಾಳಿ ಕಟ್ಟಿದ ಮಾತ್ರಕ್ಕೆ ಆಕೆಯೊಂದಿಗೆ ಹೇಗಾದರೂ ವರ್ತಿಸಬಹುದು ಎಂಬುವುದು ಎನ್ನುವುದು ತಪ್ಪು. ಕರಿಮಣಿ ಧರಿಸಿಯೂ, ಧರಿಸದೆಯೂ ಪ್ರೀತಿಯಿಂದ ಪರಸ್ಪರ ಅರ್ಥಮಾಡಿಕೊಂಡು ಬದುಕುವವರಿಗೆ ಕರಿಮಣಿ ಮಾಲೀಕತ್ವ ಬೇಕೇ? ಎಂಬ ಪ್ರಶ್ನೆಯೂ ಎದ್ದಿದೆ.
ಹಾಡಿನ ಸಾಲುಗಳಲ್ಲಿ ಕರಿಮಣಿ ಮಾಲೀಕ ನೀನಲ್ಲ,, ನೀ ನಲ್ಲ.. ಎಂಬುದನ್ನೇ ಮುಖ್ಯವಾಗಿ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಭಿನ್ನ- ವಿಭಿನ್ನ ಚರ್ಚೆಗಳು ನಡೆಯುತ್ತಿವೆ. ಕರಿಮಣಿ ಮಾಲೀಕನೇ ನಲ್ಲನಾಗಬೇಕಿಲ್ಲ ಎಂಬ ಧೋರಣೆಯೂ ಒಂದು ಕಡೆ ಇದ್ದರೆ, ಮತ್ತೊಂದು ಕಡೆ ಕರಿಮಣಿ ಮಾಲೀಕನಲ್ಲದವನು ನಲ್ಲನಾಗಬಾರದು ಎಂಬ ಸಾಂಪ್ರದಾಯಿಕ ಧೋರಣೆಯೂ ಇದೆ. ಈ ಎರಡೂ ಧೋರಣೆಗಳ ನಡುವೆ ಈಗ ದಾಂಪತ್ಯ, ಸಾಂಗತ್ಯದ ಗಂಭೀರ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಕೇವಲ ಹಾಡಿನ ಮೋಜಿಗಾಗಿ ಇದನ್ನು ಇಷ್ಟಪಟ್ಟು ರೀಲ್ಸ್ ಮಾಡುವ ಹುಡುಗ- ಹುಡುಗಿಯರ ದಂಡೂ ಇದೆ.
ಒಟ್ಟಾರೆ ಸದ್ಯಕ್ಕೆ ಡಿಜಿಟಲ್ ಜಗತ್ತಿನಲ್ಲಿ ಗುರುಕಿರಣ್ ಅವರ ಕರಿಮಣಿ ಮಾಲೀಕ.. ಧೂಳೆಬ್ಬಿಸುತ್ತಿದೆ.