Vishnuvardhan Birthday | ಸಾಹಸ ಸಿಂಹ 74ನೇ ಜನ್ಮದಿನ: ಅಭಿಮಾನಿಗಳಿಂದ ನೆಚ್ಚಿನ ನಟನ ಸ್ಮರಣೆ
x
ಡಾ.ವಿಷ್ಣುವರ್ಧನ್‌

Vishnuvardhan Birthday | ಸಾಹಸ ಸಿಂಹ 74ನೇ ಜನ್ಮದಿನ: ಅಭಿಮಾನಿಗಳಿಂದ ನೆಚ್ಚಿನ ನಟನ ಸ್ಮರಣೆ


ಖ್ಯಾತ ನಟ, 'ಸಾಹಸ ಸಿಂಹ' ದಿವಂಗತ ಡಾ. ವಿಷ್ಣುವರ್ಧನ್‌ ಅವರ 74ನೇ ಜನ್ಮದಿನವನ್ನು ಬುಧವಾರ (ಸೆ.18) ಅವರ ಅಭಿಮಾನಿಗಳು ರಾಜಧಾನಿ ಬೆಂಗಳೂರು ಸೇರಿದಂತೆ ನಾಡಿನಾದ್ಯಂತ ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಅನ್ನದಾನ, ಆಸ್ಪತ್ರೆಗಳಲ್ಲಿ ಹಣ್ಣು ವಿತರಣೆ, ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ವಿಷ್ಣು ಹುಟ್ಟುಹಬ್ಬವನ್ನು ಆಚರಿಸಲಾಗುತ್ತಿದೆ. ಚಂದನವನದ ತಾರೆಯರು, ಅಭಿಮಾನಿಗಳು ಹಾಗೂ ರಾಜಕೀಯ ನಾಯಕರು, ಸಂಘ ಸಂಸ್ಥೆಗಳ ಗಣ್ಯರು ಸಾಮಾಜಿಕ ಜಾಲತಾಣಗಳ ಮೂಲಕ ನೆಚ್ಚಿನ ನಟನನ್ನು ಸ್ಮರಿಸಿಸುತ್ತಿದ್ದಾರೆ.

ಕಾಮನ್​ ಡಿಪಿ ರಿಲೀಸ್​ ಮಾಡಿದ ಕಿಚ್ಚ ಸುದೀಪ್​

ವಿಷ್ಣುವರ್ಧನ್​ ಅವರ ಹುಟ್ಟುಹಬ್ಬದ ಕಾಮನ್​ ಡಿಪಿಯನ್ನು ಕಿಚ್ಚ ಸುದೀಪ್​ ರಿಲೀಸ್​ ಮಾಡಿದ್ದಾರೆ. ಜೊತೆಗೆ "ಅವರನ್ನು ಭೇಟಿ ಮಾಡಲು ಸಮಯದ ಆಶೀರ್ವಾದವಿತ್ತು. ಅವರೊಂದಿಗೆ ಕೆಲಸ ಮಾಡಲು ಸಿನಿಮಾದ ಆಶೀರ್ವಾದವಿತ್ತು. ಎಲ್ಲಕ್ಕಿಂತ ದೊಡ್ಡ ಆಶೀರ್ವಾದ ಅವರು ನನ್ನನ್ನು ನನ್ನ ಹೆಸರಿಂದ ಗುರುತಿಸುತ್ತಿದ್ದರು. ನನ್ನ IDOನ CDP ಬಿಡುಗಡೆ ನನಗೆ ಸಿಕ್ಕ ಭಾಗ್ಯ. ಎಂದಿಗೂ ಅವರ ಅಭಿಮಾನಿ.." ಎಂದು ಟ್ವೀಟ್‌ ಮಾಡಿದ್ದಾರೆ.

200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ವಿಷ್ಣುವರ್ಧನ್ ಅವರ ನಿಜವಾದ ಹೆಸರು ಸಂಪತ್ ಕುಮಾರ್. ನಾಗರಹಾವು ಚಿತ್ರೀಕರಣದ ವೇಳೆ ನಿರ್ದೇಶಕ ಪುಟ್ಟಣ್ಣ ಕಣಗಲ್ ಅವರು ಅವರಿಗೆ ವಿಷ್ಣುವರ್ಧನ್ ಎಂದು ನಾಮಕರಣ ಮಾಡಿದ್ದರು. ಕನ್ನಡ ಚಿತ್ರರಂಗದ ಚಿತ್ರಬ್ರಹ್ಮ ಅಂತಾ ಕರೆಯಿಸಿಕೊಂಡಿದ್ದ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾ ಸೂಪರ್ ಹಿಟ್ ಆಗಿತ್ತು. 5 ಜಿಲ್ಲೆಗಳಲ್ಲಿ ಈ ಸಿನಿಮಾದ ಶತ ದಿನ ಪೂರೈಸಿತ್ತು. ಬಳಿಕ ಬಂಧನ, ಸಿಂಹಾದ್ರಿಯ ಸಿಂಹ, ಹೃದಯವಂತ, ಕದಂಬ, ಈ ಬಂಧನ, ಆಪ್ತರಕ್ಷಕ, ಆಪ್ತಮಿತ್ರ, ಮಾತಾಡ್​ ಮಾತಾಡ್ ಮಲ್ಲಿಗೆ, ಸಾಹುಕಾರ, ಕೋಟಿಗೊಬ್ಬ, ಯಜಮಾನ, ಸೂರ್ಯವಂಶ, ಪರ್ವ, ಚಿನ್ನದಂತ ಮಗ, ಹಾಲುಂಡ ತವರು, ಇನ್ನು ತೆಲುಗಿನಲ್ಲಿ ಒಕ್ಕಡು ಚಾಲು, ಸರ್ದಾರ್ ಧರ್ಮನ್ನ, ಲಕ್ಷ್ಮಿ ನಿರ್ದೋಷಿ ಹೀಗೆ ಸುಮಾರು 220 ಸಿನಿಮಾಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.ವಿಷ್ಣುವರ್ಧನ್ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲೂ ನಟಿಸಿದ್ದಾರೆ.

ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕರು, ನಟರು ವಿಷ್ಣುವರ್ಧನ್​ ಅವರಿಗೆ ಹಟ್ಟುಹಬ್ಬದ ಶುಭಕೋರುವ ಮೂಲಕ ಸ್ಮರಿಸಿದ್ದಾರೆ. ನಿರ್ದೇಶಕರಾದ ಸಂತೋಷ್​ ಆನಂದ್​ ರಾಮ್​, ರಿಷಭ್​ ಶೆಟ್ಟಿ, ಪವನ್​ ಒಡೆಯರ್​ ತಮ್ಮ ಟ್ವಿಟರ್​ನ ಡಿಪಿ ಬದಲಿಸುವ ಮೂಲಕ ಅಭಿನಯ ಭಾರ್ಗವನಿಗೆ ಗೌರವ ಸಲ್ಲಿಸಿದ್ದಾರೆ.

Read More
Next Story