Rishab Shetty| ಸ್ಯಾಂಡಲ್‌ವುಡ್‌ನ ‘ಶೆಟ್ಟಿ ಗ್ಯಾಂಗ್‌’ನಲ್ಲಿ ಬಿರುಕು? ಆಪ್ತ ಸ್ನೇಹಿತರನ್ನೇ ಅನ್‌ಫಾಲೋ ಮಾಡಿದ ರಿಷಬ್
x

ರಿಷಬ್ ಶೆಟ್ಟಿ ತಮ್ಮ ಆಪ್ತ ಸ್ನೇಹಿತರಾದ ರಕ್ಷಿತ್, ರಾಜ್ ಬಿ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿಯನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ.

Rishab Shetty| ಸ್ಯಾಂಡಲ್‌ವುಡ್‌ನ ‘ಶೆಟ್ಟಿ ಗ್ಯಾಂಗ್‌’ನಲ್ಲಿ ಬಿರುಕು? ಆಪ್ತ ಸ್ನೇಹಿತರನ್ನೇ ಅನ್‌ಫಾಲೋ ಮಾಡಿದ ರಿಷಬ್

ರಿಷಬ್ ಶೆಟ್ಟಿ ತಮ್ಮ ಆಪ್ತ ಸ್ನೇಹಿತರಾದ ರಕ್ಷಿತ್, ರಾಜ್ ಬಿ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿಯವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ.


Click the Play button to hear this message in audio format

ಸ್ಯಾಂಡಲ್‌ವುಡ್‌ನ ‘ಶೆಟ್ಟಿ ಗ್ಯಾಂಗ್‌’ನಲ್ಲಿ ಎಲ್ಲವೂ ಸರಿಯಿಲ್ಲವೇ ಎಂಬ ಅನುಮಾನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಅವರು ತಮ್ಮ ಅತ್ಯಾಪ್ತ ಸ್ನೇಹಿತರಾದ ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ಶೀತಲ್ ಶೆಟ್ಟಿ ಅವರನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಈ ಹಿಂದೆ ಹೊಂಬಾಳೆ ಫಿಲ್ಮ್ಸ್ ಮತ್ತು ನಟಿ ರುಕ್ಮಿಣಿ ವಸಂತ್ ಅವರನ್ನು ಅನ್‌ಫಾಲೋ ಮಾಡಿದ್ದ ರಿಷಬ್‌ ಶೆಟ್ಟಿ, ಈಗ ಇಡೀ ‘ಶೆಟ್ಟಿ ಗ್ಯಾಂಗ್‌’ ಸದಸ್ಯರನ್ನೇ ಅವರು ತಮ್ಮ ಫಾಲೋಯಿಂಗ್ ಲಿಸ್ಟ್‌ನಿಂದ ಕೈಬಿಟ್ಟಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಅವರ ಖಾತೆಯಲ್ಲಿ ಕೇವಲ ಮೂರು ಅಕೌಂಟ್‌ಗಳು ಮಾತ್ರ ಕಾಣಿಸುತ್ತಿದ್ದು, ಅವುಗಳೆಂದರೆ ಅವರ ಪತ್ನಿ ಪ್ರಗತಿ ಶೆಟ್ಟಿ, ರಿಷಬ್ ಶೆಟ್ಟಿ ಫಿಲ್ಮ್ಸ್ ಮತ್ತು ರಿಷಬ್ ಶೆಟ್ಟಿ ಫೌಂಡೇಶನ್ ಮಾತ್ರ.

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಹೊಸ ಅಲೆಯನ್ನ ಸೃಷ್ಟಿಸಿದ ಈ ಗೆಳೆಯರ ನಡುವೆ ನಿಜಕ್ಕೂ ಬಿರುಕು ಮೂಡಿದೆಯೇ ಅಥವಾ ಇದು ಯಾವುದಾದರೂ ಹೊಸ ಸಿನಿಮಾದ ಪ್ರಚಾರದ ತಂತ್ರವೇ ಎಂಬ ಚರ್ಚೆ ಶುರುವಾಗಿದೆ. ಕೆಲವರು ಇದು ಅವರ ಸೋಷಿಯಲ್ ಮೀಡಿಯಾ ತಂಡದ ನಿರ್ಧಾರ ಇರಬಹುದು ಎಂದು ಅಂದಾಜಿಸಿದರೆ, ಇನ್ನು ಕೆಲವರು ‘ಕಾಂತಾರ ಚಾಪ್ಟರ್ 1’ ಕೆಲಸದ ಒತ್ತಡದಲ್ಲಿ ಇಂತಹ ಬದಲಾವಣೆ ಆಗಿರಬಹುದು ಎನ್ನುತ್ತಿದ್ದಾರೆ. ಆದರೆ ಇದುವರೆಗೆ ಈ ಬಗ್ಗೆ ಯಾರೂ ಕೂಡ ಸ್ಪಷ್ಟನೆ ನೀಡಿಲ್ಲ.

ಕನ್ನಡ ಚಿತ್ರರಂಗದಲ್ಲಿ ‘ಶೆಟ್ಟಿ ಗ್ಯಾಂಗ್’ ಅಥವಾ ‘RRR’ (ರಕ್ಷಿತ್, ರಿಷಬ್, ರಾಜ್) ಎಂದೇ ಖ್ಯಾತಿ ಪಡೆದಿರುವ ಈ ತಂಡ, ಕರಾವಳಿ ಸೊಗಡಿನ ಕಥೆಗಳ ಮೂಲಕ ಸ್ಯಾಂಡಲ್‌ವುಡ್‌ನ ದಿಕ್ಕನ್ನೇ ಬದಲಿಸಿತ್ತು. ರಕ್ಷಿತ್ ಶೆಟ್ಟಿ ಅವರು ‘ಉಳಿದವರು ಕಂಡಂತೆ’ ಚಿತ್ರದ ಮೂಲಕ ಈ ಕರಾವಳಿ ಶೈಲಿಯ ಸಿನಿಮಾಗಳಿಗೆ ಅಡಿಪಾಯ ಹಾಕಿದರು. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ನಂತರ ರಿಷಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಚಿತ್ರವು ಕನ್ನಡ ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿ ಹೊರಹೊಮ್ಮಿತು. ಈ ಸಿನಿಮಾದ ಯಶಸ್ಸು ರಕ್ಷಿತ್ ಶೆಟ್ಟಿ ಅವರನ್ನ ಸ್ಟಾರ್ ನಟನನ್ನಾಗಿ ಮಾಡಿದರೆ, ರಿಷಬ್ ಅವರನ್ನ ಯಶಸ್ವಿ ನಿರ್ದೇಶಕನಾಗಿ ಮಾಡಿತ್ತು. ಇದಾದ ನಂತರ ರಿಷಬ್ ಶೆಟ್ಟಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು' ಚಿತ್ರದ ಮೂಲಕ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ತಮ್ಮ ನಿರ್ದೇಶನದ ಚಾತುರ್ಯವನ್ನು ಸಾಬೀತುಪಡಿಸಿದರು.

ರಾಜ್ ಬಿ. ಶೆಟ್ಟಿ ಅವರ ಎಂಟ್ರಿ

‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಜ್ ಬಿ. ಶೆಟ್ಟಿ ಅವರು ಈ ತಂಡಕ್ಕೆ ಹೊಸ ಆಯಾಮ ನೀಡಿದರು. ಇವರು ರಕ್ಷಿತ್ ಅವರ ‘ಪರಂವಃ ಸ್ಟುಡಿಯೋಸ್’ ಅಡಿಯಲ್ಲಿ ಹಲವು ಪ್ರಯೋಗಾತ್ಮಕ ಸಿನಿಮಾಗಳಿಗೆ ಕೈಜೋಡಿಸಿದರು. 'ಒಂದು ಮೊಟ್ಟೆಯ ಕಥೆ' ಚಿತ್ರದ ಮೂಲಕ ಸರಳ ಮತ್ತು ನೈಜ ಕಥೆಗಳಿಗೂ ಪ್ರೇಕ್ಷಕರು ಮಾರುಹೋಗುತ್ತಾರೆ ಎಂದು ತೋರಿಸಿಕೊಟ್ಟವರು ರಾಜ್ ಬಿ. ಶೆಟ್ಟಿ. ನಂತರ ಬಂದ 'ಗರುಡ ಗಮನ ವೃಷಭ ವಾಹನ' ಚಿತ್ರವು ಈ ಗ್ಯಾಂಗ್‌ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ಇದರಲ್ಲಿ ರಾಜ್ ಮತ್ತು ರಿಷಬ್ ಅವರ ನಟನೆ ಹಾಗೂ ಮಂಗಳೂರಿನ ರೌಡಿಸಂ ಹಿನ್ನೆಲೆಯ ಕಥೆ ಪ್ರೇಕ್ಷಕರನ್ನು ಬೆರಗುಗೊಳಿಸಿತು. ಈ ಚಿತ್ರವು ಕೇವಲ ಆಕ್ಷನ್ ಮಾತ್ರವಲ್ಲದೆ ಪುರಾಣದ ಕಥೆಗಳನ್ನು ಆಧುನಿಕ ಜಗತ್ತಿಗೆ ಅನ್ವಯಿಸಿದ ರೀತಿಗೆ ವಿಮರ್ಶಕರಿಂದ ಭಾರಿ ಪ್ರಶಂಸೆ ವ್ಯಕ್ತವಾಯಿತು.

Read More
Next Story