ಟಾಲಿವುಡ್‌ ಸಿನಿಮಾಗೆ 80 ಕೋಟಿ ಸಂಭಾವನೆ: ರಿಷಬ್ ಶೆಟ್ಟಿ  ಡಿಮ್ಯಾಂಡ್?
x

ಕಾಂತಾರ ಚಾಪ್ಟರ್ 1' ಕಳೆದ ವರ್ಷದ ದಸರಾ ಸಂದರ್ಭದಲ್ಲಿ ಬಿಡುಗಡೆಯಾಗಿ ಜಾಗತಿಕವಾಗಿ ಸುಮಾರು 800 ಕೋಟಿ ರೂಪಾಯಿ ಗಳಿಸುವ ಮೂಲಕ ರಿಷಬ್ ಅವರ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸಿದೆ.

ಟಾಲಿವುಡ್‌ ಸಿನಿಮಾಗೆ 80 ಕೋಟಿ ಸಂಭಾವನೆ: ರಿಷಬ್ ಶೆಟ್ಟಿ ಡಿಮ್ಯಾಂಡ್?

'ಕಾಂತಾರ' ಮತ್ತು 'ಕಾಂತಾರ ಚಾಪ್ಟರ್ 1' ಚಿತ್ರಗಳ ಭಾರಿ ಯಶಸ್ಸಿನ ನಂತರ, ನಟ-ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಸಂಭಾವನೆಯನ್ನು ಪ್ರತಿ ಸಿನಿಮಾಗೆ 80 ಕೋಟಿ ರೂಪಾಯಿಗೆ ಏರಿಸಿದ್ದಾರೆ ಎಂದು ವರದಿಯಾಗಿದೆ.


Click the Play button to hear this message in audio format

ಒಂದು ಕಾಲದಲ್ಲಿ ಕೇವಲ ಕಡಿಮೆ ಬಜೆಟ್ ಮತ್ತು ಮರುನಿರ್ಮಾಣ ಚಿತ್ರಗಳಿಗೆ ಸೀಮಿತವಾಗಿದ್ದ ಕನ್ನಡ ಚಿತ್ರರಂಗದ ಇಮೇಜ್ ಇಂದು ಜಾಗತಿಕ ಮಟ್ಟದಲ್ಲಿ ಬದಲಾಗಿದೆ.

'ಕೆಜಿಎಫ್' ಮತ್ತು 'ಕಾಂತಾರ' ಚಿತ್ರಗಳು ಸೃಷ್ಟಿಸಿದ ಸಂಚಲನದಿಂದಾಗಿ ಚಂದನವನದ ಮಾರುಕಟ್ಟೆ ಮೌಲ್ಯ ಈಗ ಗಗನಕ್ಕೇರಿದೆ. ಈ ಬದಲಾವಣೆಯ ಅಲೆಯಲ್ಲಿ ಈಗ ರಿಷಬ್ ಶೆಟ್ಟಿ ಟಾಲಿವುಡ್ ನಿರ್ಮಾಪಕರ ನಿದ್ದೆಗೆಡಿಸುತ್ತಿದ್ದಾರೆ. ರಿಷಬ್‌ ಶೆಟ್ಟಿ ತಮ್ಮ ಮುಂದಿನ ಸಿನಿಮಾಗೆ 80 ಕೋಟಿ ರೂ. ಬೇಡಿಕೆಯಿಟ್ಟಿದ್ದಾರೆ ಎಂದು ಸುದ್ದಿ ವೈರಲ್‌ ಆಗಿದೆ.

'ಕೆಜಿಎಫ್' ನಂತರ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಬೆಳೆದ ಯಶ್, ತಮ್ಮ ಮುಂಬರುವ 'ಟಾಕ್ಸಿಕ್' ಚಿತ್ರಕ್ಕಾಗಿ ಸುಮಾರು 75 ರಿಂದ 100 ಕೋಟಿ ರೂಪಾಯಿಗಳಿಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವರದಿಗಳಿವೆ. ಯಶ್ ಸೃಷ್ಟಿಸಿದ ಈ ಹಾದಿಯಲ್ಲಿ ಈಗ ರಿಷಬ್ ಶೆಟ್ಟಿ ಕೂಡ ಸಾಗುತ್ತಿದ್ದು, ಇತ್ತೀಚಿನ ವರದಿಗಳ ಪ್ರಕಾರ ರಿಷಬ್ ತಮ್ಮ ಮುಂದಿನ ತೆಲುಗು ಸಿನಿಮಾಗಳಿಗಾಗಿ ಬರೋಬ್ಬರಿ 80 ಕೋಟಿ ರೂಪಾಯಿ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಪ್ರಶಾಂತ್ ವರ್ಮಾ ನಿರ್ದೇಶನದ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ಈ ಚಿತ್ರದ ಬಜೆಟ್ 200 ಕೋಟಿ ರೂಪಾಯಿ ದಾಟುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ತೆಲುಗಿನ ಖ್ಯಾತ ಬ್ಯಾನರ್ ಅಡಿಯಲ್ಲಿ ಅಶ್ವಿನ್ ಗಂಗರಾಜು ನಿರ್ದೇಶನದ ಮತ್ತೊಂದು ಚಿತ್ರಕ್ಕೂ ರಿಷಬ್ ಸಹಿ ಹಾಕಿದ್ದು, ಈ ಎರಡೂ ಚಿತ್ರಗಳಿಗೆ ಅವರು ತಲಾ 80 ಕೋಟಿ ರೂ. ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿ ಸಂಚಲನ ಮೂಡಿಸಿದೆ.

ತೆಲುಗು ಸ್ಟಾರ್‌ಗಳಿಗೆ ಪೈಪೋಟಿ

ಸಾಮಾನ್ಯವಾಗಿ ಟಾಲಿವುಡ್‌ನ ಸ್ಟಾರ್ ನಟರು ಪಡೆಯುತ್ತಿದ್ದ ದೊಡ್ಡ ಮೊತ್ತದ ಸಂಭಾವನೆಯನ್ನು ಈಗ ಕನ್ನಡದ ನಟನೊಬ್ಬ ಕೇಳುತ್ತಿರುವುದು ಅಲ್ಲಿನ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ರಿಷಬ್ ಅವರ ನ್ಯಾಚುರಲ್‌ ನಟನೆ ಮತ್ತು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರಿಗಿರುವ ಕ್ರೇಜ್ ಕಂಡ ತೆಲುಗು ನಿರ್ಮಾಪಕರು, ಅವರು ಕೇಳಿದ ಮೊತ್ತವನ್ನು ನೀಡಲು ಸಿದ್ದರಾಗಿದ್ದಾರೆ. ರಿಷಬ್ ಶೆಟ್ಟಿ ಅವರ ಈ ಮುಂದಿನ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದರೆ, ಅವರು 100 ಕೋಟಿ ಸಂಭಾವನೆ ಪಡೆಯುವ ಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿದ್ದ ರಿಷಬ್ ಶೆಟ್ಟಿ ಅವರ ಖ್ಯಾತಿ ಇಂದು ವಿಶ್ವದಾದ್ಯಂತ ಹರಡಿದೆ. ಕೇವಲ ನಟನಾಗಿ ಮಾತ್ರವಲ್ಲದೆ ನಿರ್ದೇಶಕರಾಗಿಯೂ ತಮ್ಮ ಚಾಕಚಕ್ಯತೆ ಮೆರೆದಿರುವ ರಿಷಬ್, 2022ರಲ್ಲಿ ತೆರೆಕಂಡ 'ಕಾಂತಾರ' ಚಿತ್ರದ ಮೂಲಕ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದರು. ಕನ್ನಡದಲ್ಲಿ ಸದ್ದು ಮಾಡಿದ ಈ ಸಿನಿಮಾ ನಂತರ ತೆಲುಗು, ಹಿಂದಿ ಮತ್ತು ತಮಿಳು ಭಾಷೆಗಳಿಗೂ ಡಬ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿತು.

ಈ ಯಶಸ್ಸು ರಿಷಬ್ ಶೆಟ್ಟಿಯವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿತು. ಆದರೆ ಅಸಲಿ ಮ್ಯಾಜಿಕ್ ಶುರುವಾಗಿದ್ದೇ ಕಳೆದ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ 'ಕಾಂತಾರ ಚಾಪ್ಟರ್ 1' ಚಿತ್ರದಿಂದ. ಮೊದಲ ಭಾಗಕ್ಕಿಂತಲೂ ಅದ್ದೂರಿಯಾಗಿ ಮೂಡಿಬಂದ ಈ ಪ್ರಿಕ್ವೆಲ್ ಜಾಗತಿಕ ಮಟ್ಟದಲ್ಲಿ ಬರೋಬ್ಬರಿ 800 ಕೋಟಿ ರೂಪಾಯಿಗೂ ಅಧಿಕ ಹಣ ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತು. ವಿಶೇಷವಾಗಿ ಉತ್ತರ ಭಾರತದ ಮಾರುಕಟ್ಟೆಯಲ್ಲಿ ರಿಷಬ್ ಅವರಿಗೆ ಅಭೂತಪೂರ್ವ ಜನಪ್ರಿಯತೆ ತಂದುಕೊಟ್ಟಿತು. ದಕ್ಷಿಣದ ನಟನೊಬ್ಬ ಹಿಂದಿ ಬೆಲ್ಟ್‌ನಲ್ಲಿ ಈ ಮಟ್ಟದ ಪ್ರಭಾವ ಬೀರುವುದು ನಿಜಕ್ಕೂ ಅಪರೂಪದ ಸಾಧನೆ ಎನ್ನಲಾಗಿದೆ.

ಸದ್ಯ ರಿಷಬ್ ಶೆಟ್ಟಿ ಕೈಯಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿವೆ. ತೆಲುಗಿನ ಖ್ಯಾತ ನಿರ್ದೇಶಕ ಪ್ರಶಾಂತ್ ವರ್ಮ ಅವರ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಸಿತಾರ ಎಂಟರ್ಟೈನ್‌ಮೆಂಟ್ ಅಡಿಯಲ್ಲಿ ಒಂದು ಬಿಗ್ ಬಜೆಟ್ ಸಿನಿಮಾ ಹಾಗೂ ಹಿಂದಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಆಧಾರಿತ ಐತಿಹಾಸಿಕ ಸಿನಿಮಾದಲ್ಲೂ ಅವರು ನಟಿಸಲಿದ್ದಾರೆ ಎಂಬ ವರದಿಗಳಿವೆ. ಈ ಎಲ್ಲಾ ಸಿನಿಮಾಗಳು ಪೂರ್ಣಗೊಂಡ ನಂತರ ರಿಷಬ್ ಮತ್ತೆ 'ಕಾಂತಾರ' ಸರಣಿಗೆ ಮರಳುವ ಸಾಧ್ಯತೆಗಳೂ ದಟ್ಟವಾಗಿವೆ.

Read More
Next Story