
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮಲಯಾಳಂ, ಕನ್ನಡ ಸಿನಿಮಾಗಳ ಅಬ್ಬರ
ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ʼತೀರ್ಥರೂಪ ತಂದೆಯವರಿಗೆʼ ಚಿತ್ರ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡು ನೋಡುಗರ ಮೆಚ್ಚುಗೆ ಪಡೆಯಿತು.
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಲಯಾಳಂನ ‘ಎ ಪ್ರೆಗ್ನೆಂಟ್ ವಿಡೋ’ ಚಲನಚಿತ್ರ ಪ್ರದರ್ಶನಗೊಳ್ಳುವ ಮೂಲಕ ಚಿತ್ರತಂಡಕ್ಕೆ ಮಹತ್ವದ ಮೈಲಿಗಲ್ಲನ್ನು ತಂದುಕೊಟ್ಟಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಚಿತ್ರವನ್ನು ಪ್ರಸ್ತುತಪಡಿಸಲು ಅವಕಾಶ ನೀಡಿದ್ದಕ್ಕಾಗಿ ಚಿತ್ರತಂಡ ಕೃತಜ್ಞತೆ ಸಲ್ಲಿಸಿದೆ.
ಉನ್ನಿ ಕೆ.ಆರ್. ನಿರ್ದೇಶನದ ಈ ಚಿತ್ರವು ಸಾಮಾಜಿಕ ಕಾಳಜಿಯ ಕಥಾವಸ್ತುವನ್ನು ಹೊಂದಿದ್ದು, ಚಿತ್ರದ ಬಗ್ಗೆ, ʼತನ್ನ ಪತಿಯ ಮರಣದ ನಂತರ ವ್ಯವಸ್ಥಿತ ಅನ್ಯಾಯದ ವಿರುದ್ಧ ಹೋರಾಡುವ ಏಳು ತಿಂಗಳ ಗರ್ಭಿಣಿಯ ಪ್ರಯಾಣವನ್ನು ಈ ಸಿನಿಮಾ ಚಿತ್ರಿಸುತ್ತದೆ. ಚಲನಚಿತ್ರೋತ್ಸವದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಉನ್ನಿ ಕೆ.ಆರ್., ಸರ್ಕಾರಿ ಉದ್ಯೋಗಿಯಾಗಿದ್ದ ಪತಿ ಬಣ್ಣ, ಜಾತಿ ಮತ್ತು ಸಾಮಾಜಿಕ ಗುರುತಿನ ಕಾರಣದಿಂದ ನಿರಂತರ ತಾರತಮ್ಯ ಎದುರಿಸಿ ಮೃತಪಡುತ್ತಾನೆ. ನಂತರ ಒಬ್ಬಂಟಿಯಾಗುವ ಗರ್ಭಿಣಿ , ಸರ್ಕಾರಿ ಸೌಲಭ್ಯಗಳು ಮತ್ತು ಉದ್ಯೋಗವನ್ನು ಪಡೆಯಲು ತನ್ನ ವೈವಾಹಿಕ ಸ್ಥಿತಿಯನ್ನು ಅಧಿಕೃತ ದಾಖಲೆಗಳ ಮೂಲಕ ಸಾಬೀತುಪಡಿಸಲು ನಡೆಸುವ ಹೋರಾಟವೇ ಈ ಚಿತ್ರದ ಕಥೆಯಾಗಿದೆ. ಈ ಚಿತ್ರವು ಸರ್ಕಾರದ ವಿರುದ್ಧವಲ್ಲ, ಬದಲಿಗೆ ದುರ್ಬಲ ವ್ಯಕ್ತಿಗಳನ್ನು ಕಡೆಗಣಿಸುವ ಕಠಿಣ ವ್ಯವಸ್ಥೆಯ ವಿರುದ್ಧದ ಪ್ರಶ್ನೆʼ ಎಂದು ಹೇಳಿದರು.
ಚಿತ್ರದ ನಾಯಕಿ ಟ್ವಿಂಕಲ್ ಜೋಬಿ ಮಾತನಾಡಿ, ಬೆಂಗಳೂರಿನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವದಕ್ಕೆ ಹೆಮ್ಮೆ ಆಗುತ್ತಿದೆ. ಇದು ನಾನು ನಿರ್ವಹಿಸಿದ ಅತ್ಯಂತ ಶಕ್ತಿಯುತ ಪಾತ್ರಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಈ ಚಿತ್ರವು ಈಗಾಗಲೇ ಕೋಲ್ಕತ್ತಾ, ಪುಣೆ, ಚೆನ್ನೈ ಮತ್ತು ಶ್ರೀಲಂಕಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಂಸೆ ಗಳಿಸಿದೆ.
ಚಿತ್ರೋತ್ಸವದಲ್ಲಿ ʼತೀರ್ಥರೂಪ ತಂದೆಯವರಿಗೆʼ ಪ್ರದರ್ಶನ
ಜೈಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ʼಹೊಂದಿಸಿ ಬರೆಯಿರಿʼ ಖ್ಯಾತಿಯ ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ʼತೀರ್ಥರೂಪ ತಂದೆಯವರಿಗೆʼ ಚಿತ್ರ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಂಡು ನೋಡುಗರ ಮೆಚ್ಚುಗೆ ಪಡೆಯಿತು. ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್, ಹೊಸವರ್ಷದ ಆರಂಭದ ದಿನ ಬಿಡುಗಡೆಯಾದ ʼತೀರ್ಥರೂಪ ತಂದೆಯವರಿಗೆʼ ಚಿತ್ರ ಜನರಿಂದ ಹಾಗೂ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿದೆ. ನಿಹಾರ್ ನಾಯಕನಾಗಿ, ರಚನಾ ಇಂದರ್ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಬಹಳ ವರ್ಷಗಳ ನಂತರ ಹಿರಿಯ ನಟಿ ಸಿತಾರಾ ಅವರು ಅಭಿನಯಿಸಿದ್ದಾರೆ. ಅಜಿತ್ ಹಂದೆ, ರಾಜೇಶ್ ನಟರಂಗ ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರ ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಗಿರುವುದು ಬಹಳ ಸಂತೋಷವಾಗಿದೆ. ಚಿತ್ರೋತ್ಸವದಲ್ಲಿ ನಮ್ಮ ಚಿತ್ರವನ್ನು ನೋಡಿದವರಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಬಹಳ ದಿನಗಳ ನಂತರ ಉತ್ತಮ ಕೌಟುಂಬಿಕ ಚಿತ್ರವೊಂದನ್ನು ನೋಡಿದ್ದು ಖುಷಿಯಾಗಿದೆ ಎಂಬುದಾಗಿ ಹಲವರು ಹೇಳಿದ್ದು ಕೇಳಿ ಮನ ತುಂಬಿ ಬಂದಿದೆʼ ಎಂದರು.
ನಾಯಕ ನಿಹಾರ್ ಮುಖೇಶ್ ಮಾತನಾಡಿ, ʼನನ್ನ ಅಭಿನಯದ ಮೊದಲ ಕನ್ನಡ ಚಿತ್ರ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿರುವುದು ಬಹಳ ಸಂತೋಷವಾಗಿದೆʼ ಎಂದು ಹೇಳಿದರು.
ನಾಯಕಿ ರಚನ ಇಂದರ್, ʼಈ ಬಾರಿ ನನ್ನ ಅಭಿನಯದ ಎರಡು ಚಿತ್ರಗಳು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುತ್ತಿದೆ. ತೀರ್ಥರೂಪ ತಂದೆಯವರಿಗೆ ಚಿತ್ರಕ್ಕೆ ಎಲ್ಲಾ ಕಡೆಯಿಂದಲೂ ಸಿಗುತ್ತಿರುವ ಉತ್ತಮ ಪ್ರಶಂಸೆಗೆ ಖುಷಿಯಾಗಿದೆ ಎಂದು ತಿಳಿಸಿದರು.
ನಟ ಅಜಿತ್ ಹಂದೆ ಮಾತನಾಡಿ, ಚಿತ್ರೋತ್ಸವಗಳಲ್ಲಿ ಒಳ್ಳೆಯ ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಹಾಗಾಗಿ ನಮ್ಮ ಚಿತ್ರ ಕೂಡ ಒಂದು ಒಳ್ಳೆಯ ಚಿತ್ರ. ಕೌಟುಂಬಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅಭಿನಯಿಸಿರುವುದು ಸಂತೋಷವಾಗಿದೆ ಎಂದರು

